ನೆಲ ಒರೆಸುವಾಗ ನೀರಿಗೆ ಈ ವಸ್ತುಗಳನ್ನ ಸೇರಿಸಿ, ಮನೆಯೊಳಗೆ ಪರಿಮಳ ಹರಡುವುದು ಮಾತ್ರವಲ್ಲ, ಬ್ಯಾಕ್ಟೀರಿಯಾಗಳು ಇನ್ನಿಲ್ಲದಂತಾಗುತ್ತವೆ
ಮನೆ ಒರೆಸುವ ಮುನ್ನ ಯಾವುದೇ ಲಿಕ್ವಿಡ್ ಬಳಸಿದ್ರೂ ಮನೆಯೊಳಗೆ ಪರಿಮಳ ಬರುತ್ತಿಲ್ಲ, ಬ್ಯಾಕ್ಟೀರಿಯಾಗಳು ಸಾಯುತ್ತಿಲ್ಲ ಎನ್ನುವ ಚಿಂತೆ ಕಾಡುತ್ತಿದ್ದರೆ ಯೋಚಿಸಬೇಡಿ. ಮನೆಯಲ್ಲೇ ಸಿಗುವ ಈ ವಸ್ತುಗಳನ್ನು ನೀರಿಗೆ ಬೆರೆಸಿ. ಇದರಿಂದ ಸುವಾಸನೆ ಹರಡೋದು ಮಾತ್ರವಲ್ಲ ಕ್ರಿಮಿ–ಕೀಟಗಳು ಮನೆಯೊಳಗೆ ಸುಳಿಯೋದು ಇಲ್ಲ. ಬ್ಯಾಕ್ಟೀರಿಯಾಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತವೆ.
ಮನೆ ಸ್ವಚ್ಛವಾಗಿ ಇರಬೇಕು ಅಂದ್ರೆ ಪ್ರತಿದಿನ ಗುಡಿಸಿ, ಒರೆಸಬೇಕು. ನೆಲ ಒರೆಸುವಾಗ ನೆಲದಲ್ಲಿರುವ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ಸಾಯಬೇಕು ಹಾಗೂ ಮೂಲೆ ಮೂಲೆಯು ಸ್ವಚ್ಛವಾಗಿ ಪರಿಮಳ ಬರಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆ ಸಿಗುವ ರಾಸಾಯನಿಕಗಳನ್ನ ಬಳಸುತ್ತೇವೆ. ಆದರೆ ಇದರಿಂದ ಮನೆ ಸ್ವಚ್ಛವಾದ್ರೂ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ.
ನೆಲ ಒರೆಸುವಾಗ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲೇ ಇರುವ ಈ ವಸ್ತುಗಳನ್ನು ನೀರಿಗೆ ಹಾಕಿ. ಇದರಿಂದ ಮನೆಯೊಳಗೆ ಘಮ್ಮೆಂದು ಪರಿಮಳ ಹರಡುವುದು ಮಾತ್ರವಲ್ಲ, ಮನೆ ಪಳಪಳ ಹೊಳೆಯತ್ತದೆ. ಬ್ಯಾಕ್ಟೀರಿಯಾಗಳು ದೂರಾಗುತ್ತವೆ. ಇದರೊಂದಿಗೆ ನೆಲ ಒರೆಸುವಾಗ ತಪ್ಪಿಯೂ ಈ ಕೆಲವು ಕೆಲಸಗಳನ್ನು ಮಾಡಬಾರದು. ಇದರಿಂದ ತೊಂದರೆಯಾಗೋದು ಖಚಿತ.
ಮನೆ ಒರೆಸುವಾಗ ಮಾಡಬಾರದಂತಹ ತಪ್ಪುಗಳು
ಹೆಚ್ಚು ನೀರಿನ ಬಳಕೆ: ಕೆಲವರು ನೆಲ ಒರೆಸುವಾಗ ಹೆಚ್ಚು ಶ್ರಮವಾಗುತ್ತದೆ ಎನ್ನುವ ಕಾರಣಕ್ಕೆ ನೀರನ್ನು ಸರಿಯಾಗಿ ಹಿಂಡದೇ ಒರೆಸುಲು ಆರಂಭಿಸುತ್ತಾರೆ. ಹೀಗೆ ಮಾಡಿದರೆ ನೀರಿನ ಮೂಲಕ ಧೂಳು ಮತ್ತು ಕೊಳೆ ನೆಲಕ್ಕೆ ಅಂಟಿಕೊಳ್ಳುತ್ತದೆ. ಇದರಿಂದ ನೆಲವು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ವಿಶೇಷವಾಗಿ ಮರದ ಮತ್ತು ಲ್ಯಾಮಿನೇಟೆಡ್ ನೆಲಹಾಸು ಹೊಂದಿರುವವರು ಈ ತಪ್ಪನ್ನು ಮಾಡಬಾರದು. ಹೀಗೆ ಮಾಡಿದರೆ ನೀರಿನ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಫ್ಲೋರ್ ಮೇಲೆ ಇನ್ನಷ್ಟು ಧೂಳು ಅಂಟಿಕೊಂಡಂತೆ ಕಾಣುತ್ತದೆ.
ಸ್ವಚ್ಛತೆ ಅತ್ಯಗತ್ಯ: ಮಾಪ್ ಕೂಡ ಒಂದು ರೀತಿಯ ಸ್ಪಾಂಜ್ ಆಗಿದೆ. ಇದರಲ್ಲಿಯೂ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಪ್ರತಿಬಾರಿ ನೆಲ ಒರೆಸಿದ ನಂತರ ಮಾಪ್ ಅನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಪ್ರತಿ ಬಾರಿ ಸ್ವಚ್ಛಗೊಳಿಸಿದ ನಂತರ ಮಾಪ್ ಅನ್ನು ಪುನಃ ಬಳಸಿ. ನೆಲ ಒರೆಸುವ ಮುನ್ನ ತಪ್ಪದೇ ಕಸ ಗುಡಿಸಿ. ಕಸ ಗುಡಿಸಿದೇ ನೆಲ ಒರೆಸಿದರೆ ಧೂಳು ಇನ್ನಷ್ಟು ಅಂಟಿಕೊಳ್ಳುತ್ತದೆ.
ಮನೆ ಒರೆಸುವ ಮುನ್ನ ನೀರಿಗೆ ಸೇರಿಸಬೇಕಾದ ವಸ್ತುಗಳು
ನಿಂಬೆ ರಸ: ನಿಂಬೆ ರಸವು ನೈಸರ್ಗಿಕ ಶುಚಿಗೊಳಿಸುವ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ ಮತ್ತು ನೆಲವನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆ. ಹಾಗೆಯೇ ವಾಸನೆ ಬಂದರೆ ನಿಂಬೆ ರಸ ಬೆರೆಸಿದ ನೀರಿನಿಂದ ಒರೆಸಿದರೆ ತಾಜಾ ವಾಸನೆ ಬರುತ್ತದೆ. ಅರ್ಧ ಬಕೆಟ್ ನೀರಿನಲ್ಲಿ ಎರಡು ನಿಂಬೆಹಣ್ಣುಗಳನ್ನು ಹಿಂಡಿದರೆ ಸಾಕು.
ಅಡಿಗೆ ಸೋಡಾ: ಅಡಿಗೆ ಸೋಡಾ ನೆಲದ ಮೇಲಿನ ಜಿಡ್ಡಿನ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಫ್ಲೋರ್ ಸಹ ಉತ್ತಮ ವಾಸನೆಯನ್ನು ನೀಡುತ್ತದೆ. ತೈಲ ಮತ್ತು ಗ್ರೀಸ್ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಇದನ್ನು ಬಳಸಬಹುದು.
ವಿನೆಗರ್: ವಿನೆಗರ್ ಅನ್ನು ಬಹುತೇಕ ಎಲ್ಲಾ ರೀತಿಯ ನೆಲಹಾಸುಗಳಿಗೆ ಬಳಸಬಹುದು. ಕಾಲು ಕಪ್ ವಿನೆಗರ್ ಅನ್ನು ಬಕೆಟ್ ನೀರಿನಲ್ಲಿ ಬೆರೆಸಿ ನೆಲವನ್ನು ಸ್ವಚ್ಛಗೊಳಿಸಿ. ಮರದ ನೆಲಹಾಸು ಮತ್ತು ಟೈಲ್ಸ್‌ಗಳ ಮೇಲೆ ವಿನೆಗರ್ ಅನ್ನು ಬಳಸುವುದರಿಂದ ಜಿಡ್ಡಿನಾಂಶವು ಸ್ವಚ್ಛಗೊಂಡು ಫ್ಲೋರ್ ಚೆನ್ನಾಗಿ ಹೊಳೆಯುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿ ಶುಚಿಗೊಳಿಸುವ ನೀರಿನಲ್ಲಿ ವಿನೆಗರ್ ಅನ್ನು ಬಳಸುವುದು ಒಳ್ಳೆಯದು. ಮನೆಯಲ್ಲಿ ಕಾರ್ಪೆಟ್‌ಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಅನ್ನು ಬಳಸಬಹುದು.
ಸಾರಭೂತ ತೈಲಗಳು: ಪುದಿನಾ ಮತ್ತು ನಿಂಬೆಯಂತಹ ಸಾರಭೂತ ತೈಲಗಳ 15 ರಿಂದ 20 ಹನಿಗಳನ್ನು ಅರ್ಧ ಬಕೆಟ್ ನೀರಿನಲ್ಲಿ ಬೆರೆಸಬಹುದು. ಇದನ್ನು ನೀರಿಗೆ ಬೆರೆಸಿ ಒರೆಸುವುದರಿಂದ ಬ್ಯಾಕ್ಟೀರಿಯಾಗಳು ಸುಲಭವಾಗಿ ಸಾಯುತ್ತವೆ. ಇದು ಇಡೀ ಮನೆಯೊಳಗೆ ಪರಿಮಳ ಹರಡುವಂತೆ ಮಾಡುತ್ತದೆ.