Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

Iron Box Cleaning: ಜಿಡ್ಡು, ಕಲೆಗಳಿಂದ ಕೂಡಿದ ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

Iron Box Cleaning Tips: ಐರನ್‌ ಬಾಕ್ಸ್‌ನ ಸೋಲ್‌ಪ್ಲೇಟ್‌ ಮೇಲೆ ಅಂಟಿರುವ ಜಿಗುಟಿನಿಂದ ಐರನ್‌ ಬಾಕ್ಸ್‌ ಬೇಗ ಹಾಳಾಗುತ್ತದೆ ಮತ್ತು ಬಟ್ಟೆಗೂ ಹಾನಿಯಾಗುತ್ತದೆ. ಹಾಗಾಗಿ ಅದನ್ನು ಆಗಾಗ ಸರಿಯಾಗಿ ಸ್ವಚ್ಛಗೊಳಿಸುವುದು ಅವಶ್ಯ. ಐರನ್‌ ಬಾಕ್ಸ್‌ ಅನ್ನು ಸುಲಭವಾಗಿ ಸ್ವಚ್ಛಗೊಳಿಸೋದು ಹೇಗೆ ಅನ್ನುವುದಕ್ಕೆ ಇಲ್ಲಿದೆ ಮಾಹಿತಿ. (ಬರಹ: ಅರ್ಚನಾ ವಿ. ಭಟ್‌)

ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ?
ಸ್ಟೀಮ್ ಐರನ್‌ ಬಾಕ್ಸ್‌ ಸ್ವಚ್ಛಗೊಳಿಸುವುದು ಹೇಗೆ?

ಪ್ರತಿದಿನ ಬೆಳಗಾದರೆ ಸಾಕು, ನೀಟಾಗಿ ಗರಿಗರಿಯಾದ ಬಟ್ಟೆಗಳನ್ನು ಧರಿಸಿ ಆಫೀಸಿಗೆ ಹೋಗುವವರನ್ನ, ಶಾಲೆಗೆ ಹೋಗುವ ಮಕ್ಕಳನ್ನು ಕಾಣುತ್ತೇವೆ. ಸುಕ್ಕಾದ ಬಟ್ಟೆ ಧರಿಸಿ ಹೊರಗಡೆ ಹೋಗುವುದು ಯಾರಿಗಾದರೂ ಮುಜುಗರವನ್ನು ತರಿಸುತ್ತದೆ. ನೀಟಾದ ಬಟ್ಟೆಗಳು ಮನಸ್ಸಿಗೆ ಸಂತೋಷ ನೀಡುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಗಾಗಿ ತೊಳೆದು ಒಣಗಿಸಿದ ಬಟ್ಟೆಗಳಿಗೆ ಸುಕ್ಕುಗಳಿಲ್ಲದಂತೆ ಐರನ್‌ ಮಾಡುವದು ದಿನನಿತ್ಯದ ಕೆಲಸಗಳಲ್ಲಿ ಒಂದಾಗಿದೆ. 

ಐರನ್‌ ಬಾಕ್ಸ್‌ (ಇಸ್ತ್ರಿ ಪೆಟ್ಟಿಗೆ) ನಮ್ಮ ಗೃಹೋಪಯೋಗಿ ಉಪಕರಣವಾಗಿ ಶತಮಾನವೇ ಆಗಿದೆ. ಹಿಂದಿನ ಕಾಲದಲ್ಲಿ ಬಟ್ಟೆಗಳಿಗೆ ಐರನ್‌ ಮಾಡಲು ಇದ್ದಿಲು (ಚಾರ್‌ಕೋಲ್‌) ತುಂಬಿದ ಪೆಟ್ಟಿಗೆಗಳನ್ನು ಬಳಸುತ್ತಿದ್ದರು. ಆಧುನಿಕ ಜಗತ್ತಿಗೆ ಕಾಲಿಟ್ಟಾಗ ಅಲ್ಲಿ ಹೊಸ ಹೊಸ ಆವಿಷ್ಕಾರಗಳಾದವು. ಇದ್ದಿಲಿನ ಇಸ್ತ್ರಿ ಪೆಟ್ಟಿಗೆಯಿಂದ ಎಲೆಕ್ಟ್ರಿಕ್‌ ಐರನ್‌ ಬಾಕ್ಸ್‌ವರೆಗೆ ಅದು ಪ್ರಗತಿ ಹೊಂದಿತು. ಈಗೇನಿದ್ದರೂ ಸ್ಟೀಮ್‌ ಐರನ್‌ ಬಾಕ್ಸ್‌ಗಳ ಕಾಲ. ರೇಷ್ಮೆ, ಕಾಟನ್‌, ಲೆನಿನ್, ನೈಲಾನ್‌ ಮುಂತಾದ ಬಟ್ಟೆಗಳು ಸುಕ್ಕುಗಳಿರದಂತೆ ಎಚ್ಚರದಿಂದ ಧರಿಸುವ ನಾವು ಅದನ್ನು ಪ್ರೆಸ್‌ ಮಾಡುವ ಐರನ್‌ ಬಾಕ್ಸ್‌ ಬಗ್ಗೆಯೂ ಕಾಳಜಿ ವಹಿಸಬೇಕು. ಇಲ್ಲವಾದರೆ ಅದು ಹಾಳಾಗುವುದರ ಜೊತೆಗೆ ಬಟ್ಟೆಗೂ ಹಾನಿಯನ್ನುಂಟು ಮಾಡುತ್ತದೆ. ಪ್ರೀತಿಯಿಂದ ಆರಿಸಿ ತಂದ ಬಟ್ಟೆ ಐರನ್‌ ಮಾಡುವಾಗ ಸುಟ್ಟು ಹೋದರೆ ಅಥವಾ ಹಾಳಾದರೆ ಆಗುವ ನೋವು ಹೇಳತೀರದು. ಅದಕ್ಕಾಗಿ ಐರನ್‌ ಬಾಕ್ಸ್‌ ಅನ್ನು ಆಗಾಗ ಸ್ವಚ್ಚಗೊಳಿಸುವುದು ಉತ್ತಮ. ಅದನ್ನು ಸ್ಚಚ್ಛಗೊಳಿಸಲು ಬಹಳ ಸಮಯ ಬೇಕೆಂದಿಲ್ಲ, ಕೆಲವು ಸರಳ ಟಿಪ್ಸ್‌ ಪಾಲಿಸಿದರೆ ಹೊಸತರಂತೆ ಹೊಳೆಯುವ ಐರನ್‌ ಬಾಕ್ಸ್‌ ನಿಮ್ಮದಾಗುತ್ತದೆ.

ಐರನ್‌ ಬಾಕ್ಸ್‌ನ ಸ್ವಚ್ಛ ಮಾಡುವ ವಿಧಾನ 

ಸ್ಟೀಮ್‌ ಐರನ್‌ ಬಾಕ್ಸ್‌ನ ಸೋಲ್‌ಪ್ಲೇಟ್‌ ಸವೆಯಲು ಅಥವಾ ಸುಟ್ಟಂತೆ ಕಾಣಿಸುತ್ತಿದ್ದರೆ ಅದರಿಂದ ನಿಮ್ಮ ಬೆರಳುಗಳು ಸುಡಬಹುದು. ಅದನ್ನು ಸ್ಚಚ್ಛವಾಗಿರಿಸಿಕೊಂಡರೆ ಅಪಾಯ ಕಡಿಮೆ. ಆಗಾಗ ಅದನ್ನು ಕ್ಲೀನ್‌ ಮಾಡುವುದರಿಂದ ಬಾಳಿಕೆಯೂ ಅಧಿಕ. ಐರನ್‌ ಬಾಕ್ಸ್‌ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಈ ಟಿಪ್ಸ್‌ ಅನುಸರಿಸಿ.

* ಸ್ಟೀಮ್‌ ಐರನ್‌ ಬಾಕ್ಸ್‌ ಸ್ವಚ್ಚಗೊಳಿಸಲು ಪ್ರಾರಂಭಿಸುವ ಮೊದಲು ಈ ವಸ್ತುಗಳನ್ನು ತೆಗೆದುಕೊಳ್ಳಿ– ವಿನೆಗರ್‌, ಬೇಕಿಂಗ್‌ ಸೋಡಾ, ಡಿಸ್ಟಿಲ್ಡ್‌ ವಾಟರ್‌, ಹತ್ತಿ ಅಥವಾ ಮೃದುವಾದ ಬಟ್ಟೆ, ಸ್ಪಾಂಜ್‌ ಮತ್ತು ಹಳೆಯ ಟೂತ್‌ ಬ್ರಷ್‌.

* ಒಂದು ಬಟ್ಟೆಯ ಸಹಾಯದಿಂದ ಐರನ್‌ ಬಾಕ್ಸ್‌ ಅನ್ನು ಒರೆಸಿಕೊಳ್ಳಿ. ಕಾಲು ಕಪ್‌ ವಿನೆಗರ್‌ಗೆ ಮುಕ್ಕಾಲು ಕಪ್‌ ನೀರು ಸೇರಿಸಿ. ಅದನ್ನು ಐರನ್‌ ಬಾಕ್ಸ್‌ನ ನೀರು ಹಾಕುವ ಜಾಗ (ವಾಟರ್‌ ಟ್ಯಾಂಕ್‌) ಕ್ಕೆ ಹಾಕಿ. ಈಗ ಐರನ್‌ ಬಾಕ್ಸ್‌ ಸ್ವಿಚ್‌ ಆನ್‌ ಮಾಡಿ ಹೀಟ್‌ ಮಾಡಿ.

* ಸ್ಟೀಮ್‌ ಬಟನ್‌ ಒತ್ತಿ. ಮಿಶ್ರಣ ಹೊರಬರಲು 2–3 ಸಲ ಪುನರಾವರ್ತಿಸಿ. ನೆನಪಿನಿಂದ ಸ್ವಿಚ್‌ನ್ನು ಬಂದ್‌ ಮಾಡಿ.

* ನಂತರ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಸೋಲ್‌ಪ್ಲೇಟ್‌ನ ಮೇಲ್ಭಾಗವನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ. ಅದರ ಮೇಲೆ ಹಿಡಿದಿರುವ ನೀರಿನ ಕಲೆ, ಬಣ್ಣ ಮುಂತಾದವುಗಳನ್ನು ಕರಗಿರುವುದರಿಂದ ಅದನ್ನು ಒರೆಸಿ ತೆಗೆಯಿರಿ. ಕಲೆಗಳು ಹೋಗುತ್ತಿಲ್ಲವಾದರೆ ಬ್ರೆಷ್‌ ಅಥವಾ ಸ್ಪೋಂಜ್‌ ಮೇಲೆ ಸ್ವಲ್ಪ ಬೇಕಿಂಗ್‌ ಸೋಡಾ ಹಾಕಿ ನಿಧಾನವಾಗಿ ಉಜ್ಜಿ.

* ಸೋಲ್‌ಪ್ಲೇಟ್‌ ಅನ್ನು ಸ್ವಚ್ಛವಾಗಿ ಒರೆಸಿ. ಈಗ ಅದು ಹೊಸತರಂತೆ ಹೊಳೆಯಲು ಪ್ರಾರಂಭಿಸುತ್ತದೆ.

ಈ ರೀತಿಯಾಗಿ ಐರನ್‌ ಬಾಕ್ಸ್‌ ಸ್ವಚ್ಛವಾಗಿಟ್ಟುಕೊಂಡರೆ ಬಾಳಿಕೆ ಚೆನ್ನಾಗಿ ಬರುತ್ತದೆ. ಐರನ್‌ ಮಾಡುವಾಗ ಬಟ್ಟೆಗೆ ಹಾನಿಯಾಗಬಹುದು ಎಂಬ ಚಿಂತೆಯೂ ದೂರಾಗುತ್ತದೆ.

Whats_app_banner