ನಿನ್ನಂತೆ ನಾನೇಕೆ ಆಗಬೇಕು ಅಪ್ಪಾ, ನನ್ನಂತೆ ನಾನಾಗುವೆ: ಮಕ್ಕಳಿಗೆ ಬೇಡ ನಿಮ್ಮ ಕನಸುಗಳ ಭಾರ -ಮನದ ಮಾತು
ಭವ್ಯಾ ವಿಶ್ವನಾಥ್: ಪೋಷಕರು ಮಕ್ಕಳ ಸಹಜ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹ ನೀಡಬೇಕು. ಆಗ ಮಕ್ಕಳು ಸಹಜವಾಗಿ ಹೂವಿನ ತರಹ ಅರಳುತ್ತಾರೆ. ಪೋಷಕರ ವಿಪರೀತವಾದ ಆಲೋಚನೆಗಳು, ಸಲಹೆಗಳು, ಅಭಿಪ್ರಾಯಗಳಿಂದ ಮಗುವಿನ ಸೃಜನಶೀಲತೆಗೆ ಅಡ್ಡಿ ಆಗುತ್ತದೆ.
'ನನಗೆ ಎಂಜಿನಿಯರ್ ಆಗಬೇಕೆಂಬ ಕನಸಿತ್ತು. ಆದರೆ ಆಗಲಿಲ್ಲ. ಅದಕ್ಕೆ ನನ್ನ ಮಗ ಎಂಜಿನಿಯರ್ ಆಗಬೇಕೆಂದು ನಿರ್ಧರಿಸಿಬಿಟ್ಟಿದ್ದೇನೆ'. 'ನನಗೆ ಟೆನ್ನಿಸ್ ಅಂದರೆ ಬಹಳ ಇಷ್ಟ, ಆದ್ದರಿಂದ ನನ್ನ ಮಗಳು ಟೆನ್ನಿಸ್ ಕ್ರೀಡಾಪಟು ಆಗಲೇಬೇಕೆಂದು ನನ್ನ ಕನಸು'. 'ನಮ್ಮ ಮನೆಯಲ್ಲಿ ಒಬ್ಬ ಡಾಕ್ಟರ್ ಇರಬೇಕೆಂದು ನನ್ನ ಆಸೆ. ಅದಕ್ಕೆ ನನ್ನ ಮಗಳು ಡಾಕ್ಟರ್ ಆಗಲೇಬೇಕು'. 'ನನಗೆ ಸಿನಿಮಾ, ನಟನೆ ಅಂದರೆ ಹುಚ್ಚು. ನನಗಂತೂ ಆಗಲಿಲ್ಲ. ಆದಕ್ಕೆ ನನ್ನ ಮಗ ದೊಡ್ಡ ನಟನಾಗಬೇಕೆಂದು ಕನಸು ಕಟ್ಟಿಕೊಂಡಿದ್ದೇನೆ...' ಹೀಗೆ ಎಷ್ಟೋ ಪೋಷಕರು ಹೇಳುವುದನ್ನು ನಾವು ಕೇಳಿರುತ್ತೇವೆ. ತಮ್ಮ ಅಪೂರ್ಣವಾದ ಆಸೆ ಮತ್ತು ಕನಸುಗಳನ್ನು ಮಕ್ಕಳು ಈಡೇರಿಸಲಿ ಅನ್ನುವ ಬಯಕೆ ಪೋಷಕರಾದವರಿಗೆ ಸ್ವಾಭಾವಿಕ. ಆದರೆ ಇದು ಎಷ್ಟರಮಟ್ಟಿಗೆ ಮಕ್ಕಳಿಗೆ ಸರಿ ಎನ್ನುವುದನ್ನು ಅವಲೋಕಿಸಬೇಕು.
ಅದರಲ್ಲೂ ವಿಶೇಷವಾಗಿ ವೃತ್ತಿಪರ ಶಿಕ್ಷಣದ ವಿಚಾರದಲ್ಲಿ ನಿಮ್ಮ ಆಯ್ಕೆ, ಕನಸುಗಳನ್ನು ನಿಮ್ಮ ಮಗುವಿನ ಮೇಲೆ ಹೇರಿದರೆ ಮಕ್ಕಳಿಗೆ ಬಹಳ ಕಷ್ಟವಾಗಬಹುದು. ಅವರ ಆಸಕ್ತಿಗೆ ವಿರುದ್ಧವಿರಬಹುದು ಅಥವಾ ಇಷ್ಟವಾಗದೇ ಇರಬಹುದು. ಮೊದಲು, ನಿಮ್ಮ ಮಗುವಿನ ಮನಸ್ಸಿನಲ್ಲಿರುವ ಆಸಕ್ತಿಗಳನ್ನು ತಿಳಿದುಕೊಂಡು ಅದಕ್ಕೆ ಪ್ರೋತ್ಸಾಹ ನೀಡಿ. ನಿಮ್ಮ ಆಯ್ಕೆಯನ್ನು ಮಗುವಿನ ಮೇಲೆ ಬಲವಂತವಾಗಿ ಹೇರುವುದರಿಂದ ಪೋಷಕರು ಮತ್ತು ಮಕ್ಕಳ ನಡುವೆ ಮನಸ್ತಾಪಗಳು ಉಂಟಾಗಿ, ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಅವರ ಆಯ್ಕೆಯನ್ನು ಪರಿಗಣಿಸದಿದ್ದರೆ, ಸ್ವಾತಂತ್ರ್ಯ ನೀಡದಿದ್ದರೆ ಮಕ್ಕಳು ಅದನ್ನು ಬಂಧನವೆಂದು ಭಾವಿಸಬಹುದು.
ಒಂದು ವೇಳೆ ನಿಮ್ಮಿಬ್ಬರ (ಪೋಷಕರು ಮತ್ತು ಮಕ್ಕಳ) ಕನಸು, ಆಸಕ್ತಿ ಒಂದೇ ಆದಲ್ಲಿ, ಪ್ರೋತ್ಸಾಹ ನೀಡಿ, ಉತ್ತೇಜಿಸಿ, ಮಗುವಿಗೆ ಗುರಿಯನ್ನು ಮುಟ್ಟುವುದಕ್ಕೆ ಸಹಾಯ ಮಾಡಿ. ಹಾಗೆಯೇ ಮಗುವಿನ ಆಸಕ್ತಿ ನಿಮ್ಮ ಕನಸಿನಿಂದ ಭಿನ್ನವಿದ್ದಾಗೂ ಕೂಡ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಡಿ. ಪೋಷಕರಾದ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರ, ಹತಾಶೆ ಉಂಟಾಗುತ್ತದೆ, ಕಸಿವಿಸಿಯಾಗುತ್ತದೆ. ಆದರೆ ನಿಮ್ಮ ಮಗುವಿನ ಆಸಕ್ತಿ, ಕನಸುಗಳಿಗೆ ಪ್ರಾಮುಖ್ಯ ಕೊಡಿ.
ನಿಮ್ಮ ಮಗು ನಿಮ್ಮಂತೆಯೇ ಇರಬೇಕಿಲ್ಲ
ನಿಮ್ಮ ಮಗು ಕೂಡ ನಿಮ್ಮಂತೆಯೇ ಇರಬೇಕೆಂದು ಅಪೇಕ್ಷಿಸುವುದು ಸರಿಯಲ್ಲ. ನಿಮ್ಮ ಗುರಿ, ಕನಸುಗಳು ಮಕ್ಕಳಿಗಿಂತ ಭಿನ್ನವಾಗಿರಬಹುದು. ಇದನ್ನು ನೀವು ಗೌರವಿಸಿ, ಮನನ ಮಾಡಿಕೊಳ್ಳಬೇಕು. ನೀವು ಜೀವನದಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ಅವುಗಳ ಪ್ರಾಮುಖ್ಯವನ್ನು ಉದಾಹರಣೆಗಳ ಮೂಲಕ ಮಕ್ಕಳಿಗೆ ಅರ್ಥ ಮಾಡಿಸಿಕೊಡಿ. ನೀವು ಅದರಂತೆಯೇ ನಡೆದುಕೊಳ್ಳಿ. ನಿಮ್ಮ ಒಳ್ಳೆಯ ನಡೆ ನುಡಿ ಆಚಾರ ವಿಚಾರ ಸಂಪ್ರದಾಯಗಳನ್ನು ಸಹ ಅವರಿಗೆ ತೋರಿಸಿಕೊಡಿ, ಇವತ್ತಲ್ಲದಿದ್ದರೆ ನಾಳೆ ಅವುಗಳನ್ನು ಪಾಲಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ನಿಮ್ಮ ಆಸೆ, ಕನಸು, ಆಸಕ್ತಿಗಳನ್ನು ಮಾತ್ರ ಬಲವಂತವಾಗಿ ಅಧಿಕಾರಯುತವಾಗಿ ಒಡ್ಡಬೇಡಿ.
ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಕೊಡಿ, ಜವಾಬ್ಧಾರಿ ನಿವ೯ಹಣೆ ಕಲಿಸಿ
ಪರಸ್ಪರ ಪ್ರೀತಿ, ಗೌರವ, ಆರೈಕೆಗಳೆಲ್ಲವೂ ಅಗತ್ಯ ಮತ್ತು ನಿಮ್ಮ ಅಧಿಕಾರವೂ ಕೂಡ, ಒಂದು ಪಕ್ಷ ಇವುಗಳು ಸಿಗದೇ ಇದ್ದಲ್ಲಿ ಅಧಿಕಾರಯುತವಾಗಿ ಪಡೆಯಿರಿ. ಆದರೆ, ಇವುಗಳ ಜೊತೆ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸ, ವೃತ್ತಿ ಮತ್ತು ಒಳ್ಳೆಯ ಹವ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ್ಯವೂ ಕೂಡ ಅಷ್ಟೇ ಮುಖ್ಯ. ಸ್ವಾತಂತ್ರ್ಯವೆಂದರೆ ಆಯ್ಕೆಗಳ ಅವಕಾಶ, ಆದರೆ ಇದರ ಜೊತೆಗೆ ಸರಿಯಾದ ಆಯ್ಕೆ ಮಾಡಬೇಕಾದ ಜವಾಬ್ದಾರಿಯೂ ಇರುತ್ತದೆ ಎಂಬುದನ್ನು ನೆನಪಿಡಬೇಕು. ಈ ಜವಾಬ್ದಾರಿಯ ನಿರ್ವಹಣೆ ಬಹಳ ಮುಖ್ಯ. ಇತ್ತೀಚೆಗೆ, ಮಕ್ಕಳಿಗೆ ಸಾಕಷ್ಟು ಸ್ವಾತಂತ್ರ್ಯ ದೊರಕುತ್ತಿದೆ, ತಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಹೊಸ ಮಾರ್ಗಗಳು ಸಿಗುತ್ತಿವೆ. ಆದರೆ ಅದಕ್ಕೆ ಮೊದಲು ದೃಢವಾದ ನೈತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಗಳನ್ನು ಬೆಳೆಸಿಕೆೊಳ್ಳಲು ಸರಿಯಾದ ಅವಕಾಶಗಳು ದೊರಕುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಪೋಷಕರು ಇಂತಹ ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಿ ಮಕ್ಕಳಿಗೆ ಸರಿಯಾದ ಮಾರ್‌ದರ್ಶನ ನೀಡಬೇಕು.
ಮಗುವಿನ ಆಸಕ್ತಿ ಮತ್ತು ಪ್ರತಿಭೆ
ಪ್ರತಿಯೊಂದು ಮಕ್ಕಳಿಗೆ ಅವರದೇ ಆದ ಪ್ರತಿಭೆ ಮತ್ತು ಆಸಕ್ತಿಯಿರುತ್ತದೆ. ಹಾಗೆಯೇ ಪ್ರತಿಯೊಂದು ಪ್ರತಿಭೆಯಲ್ಲೂ ಅದರದೇ ಆದ ವೈಶಿಷ್ಟ್ಯವಿರುತ್ತದೆ. ಹಾಗಾಗಿ ಯಾವ ಪ್ರತಿಭೆಯನ್ನು ಮೇಲು ಕೀಳೆಂದು ಭಾವಿಸಬಾರದು. ಮಕ್ಕಳಿಗೆ ಯಾವ ವಿಷಯದಲ್ಲಿ ನಿಜವಾದ ಪ್ರತಿಭೆ ಇರುತ್ತದೆಯೋ ಅಂತಹ ವಿಚಾರದಲ್ಲಿ ಸಹಜವಾದ ಆಸಕ್ತಿ ಇರುತ್ತದೆ ಮತ್ತು ಯಾರ ಬಲವಂತವಿಲ್ಲದೆ ತಾವೇ ಆ ವಿಷಯದಲ್ಲಿ ತೊಡಗಿಸಿಕೊಂಡು ಅಭ್ಯಾಸ ಮಾಡುತ್ತಾರೆ. ಹಾಗೆಯೇ ಆಸಕ್ತಿಯಿಲ್ಲದ ವಿಷಯದಲ್ಲಿ ಪ್ರತಿಭೆಯೂ ಇರುವುದಿಲ್ಲ, ಇನ್ನೊಬ್ಬರ ಬಲವಂತಕ್ಕೆ ಮಾಡಬೇಕಷ್ಟೇ.
ಪೋಷಕರು ಮಕ್ಕಳ ಸಹಜ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹ ನೀಜಬೇಕು. ಆಗ ಮಕ್ಕಳು ಸಹಜವಾಗಿ ಹೂವಿನ ತರಹ ಅರಳುತ್ತಾರೆ. ಪೋಷಕರ ವಿಪರೀತವಾದ ಆಲೋಚನೆಗಳು, ಸಲಹೆಗಳು, ಅಭಿಪ್ರಾಯಗಳಿಂದ ಮಗುವಿನ ಸೃಜನಶೀಲತೆಗೆ ಅಡ್ಡಿ ಆಗುತ್ತದೆ. ಆದ್ದರಿಂದ ಮಕ್ಕಳ ಸ್ವಂತ ಸಹಜ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.