ಕೇವಲ ಹಣದಿಂದ ಮಕ್ಕಳ ಭವಿಷ್ಯ ಬರೆಯಲು ಸಾಧ್ಯವಿಲ್ಲ; ಉನ್ನತ ಶಿಕ್ಷಣದ ಬಗ್ಗೆ ಪೋಷಕರಿಗೆ ತಿಳಿದಿರಲೇಬೇಕಾದ ಮಾಹಿತಿ ಇದು -ರಂಗ ನೋಟ ಅಂಕಣ
ರಂಗಸ್ವಾಮಿ ಮೂಕನಹಳ್ಳಿ: ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸುರಿಯುವ ಮುನ್ನ ಸ್ವಲ್ಪ ಎಚ್ಚರವಿರಲಿ. ರಸ್ತೆಯ ಮೇಲೆ ನಿತ್ಯ ಬೇಕಾಗುವ ಟೊಮೊಟೊ ಕೊಳ್ಳುವ ಮುನ್ನ ಪರಿಶೀಲಿಸುವ ಮನೋಭಾವದ ಜನ ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಕೂಡ ಸ್ವಲ್ಪ ಮುತುವರ್ಜಿ ವಹಿಸಲಿ
ತೀರಾ ಇತ್ತೀಚಿಗೆ ಪರಿಚಯಸ್ಥರೊಬ್ಬರು ಅವರ ಮಗನನ್ನು ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿಯಲು ಪ್ರವೇಶ ಒದಗಿಸಿಕೊಟ್ಟರು. ಅವರನ್ನು ಫೀಸ್ ಎಷ್ಟಾಯ್ತು ಎಂದು ಕೇಳಿದೆ. ಇವತ್ತಿನ ದಿನದಲ್ಲಿ ಎಷ್ಟು ಖರ್ಚಾಗುತ್ತದೆ ಎನ್ನುವ ಅಂದಾಜಿನ ಜೊತೆಗೆ ಇನ್ನೊಂದೆರೆಡು ವರ್ಷದಲ್ಲಿ ಮಗಳು ಅನನ್ಯ ಕೂಡ ಕಾಲೇಜಿಗೆ ಬರುತ್ತಾಳೆ ಹೀಗಾಗಿ ಒಂದಷ್ಟು ಮಾಹಿತಿ ತಿಳಿದುಕೊಳ್ಳುವುದು ಉದ್ದೇಶವಾಗಿತ್ತು. ಅವರು ವರ್ಷಕ್ಕೆ ಐದು ಲಕ್ಷ ಖರ್ಚಾಗುತ್ತದೆ ಎಂದರು. ನಾಲ್ಕು ವರ್ಷಕ್ಕೆ 20 ಲಕ್ಷ, ಜೊತೆಗೆ ಮೊದಲ ವರ್ಷದಲ್ಲಿ ಕೊಟ್ಟ ಡೊನೇಶನ್ 6 ಲಕ್ಷ ಸೇರಿಸಿಕೊಂಡರೆ ಒಟ್ಟಾರೆ ಖರ್ಚು 26 ಲಕ್ಷ.
ಕೇವಲ ಎರಡು ದಶಕದ ಹಿಂದೆ ಬೆಂಗಳೂರಿನಲ್ಲಿ ಈ ದುಡ್ಡಿನಲ್ಲಿ ಒಂದು ಸೈಟ್ ಕೊಂಡು ಮನೆ ಕಟ್ಟಬಹುದಿತ್ತು ಎಂದು ಪೇಚಾಡಿಕೊಂಡು ವಾರವೂ ಆಗಿರಲಿಲ್ಲ. ಅನನ್ಯಳ ಶಾಲೆಯಿಂದ ವಿದೇಶಿ ಯೂನಿವೆರ್ಸಿಟಿಗಳ ಸ್ಟಡಿ ಅಬ್ರಾಡ್ ಮೇಳವಿದೆ ಭಾಗವಹಿಸಿ ಎನ್ನುವ ಸಂದೇಶ ಬಂದಿತ್ತು. ಸರಿ ಹೋಗಿ ನೋಡೋಣ ಎಂದು ರಮ್ಯ , ನಾನು ಹೊರಟೆವು. ಅನನ್ಯ ಶಾಲೆಯಲ್ಲಿದ್ದವಳು ನಮ್ಮ ಜೊತೆಯಾದಳು. ಅಲ್ಲಿ ಒಟ್ಟಾರೆ 10 ಯೂನಿವರ್ಸಿಟಿಗಳು ಬಂದಿದ್ದವು. ಅಮೆರಿಕಾ ಮತ್ತು ಯೂರೋಪು ದೇಶಗಳಲ್ಲಿ ಇರುವ ಯೂನಿವರ್ಸಿಟಿಗಳವು. ಆಸ್ಟೇಲಿಯಾ ದೇಶದ ಒಂದು ವಿಶ್ವ ವಿದ್ಯಾಲಯ ಕೂಡ ಇತ್ತು.
ಅದರಲ್ಲಿ ಒಂದೆರೆಡು ಯೂನಿವರ್ಸಿಟಿ ಕೇವಲ ಮತ್ತು ಕೇವಲ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಗೆ ಮಾತ್ರ ಪ್ರವೇಶಾತಿ ನೀಡಲು ಬಯಸಿದ್ದವು. ಉಳಿದವು ಎಲ್ಲಾ ತರಹದ ಪದವಿಗೂ ಪ್ರವೇಶ ನೀಡಲು ಸಿದ್ಧವಿದ್ದವು. ಯೂರೋಪಿನ ಯೂನಿವರ್ಸಿಟಿಗಳಲ್ಲಿ ಓದಬೇಕು ಎಂದರೆ ವಾರ್ಷಿಕ 40 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅದೇ ನಿಮ್ಮ ಮಗ ಅಥವಾ ಮಗಳು ಅಮೆರಿಕಾದಲ್ಲಿ ಓದಬೇಕು ಎಂದರೆ ವಾರ್ಷಿಕ 55 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆಸ್ಟ್ರೇಲಿಯಾ ಕೂಡ ನಾನೇನು ಕಡಿಮೆಯಿಲ್ಲ ಎಂದು ಸುಮಾರು 40 ಲಕ್ಷ ಖರ್ಚು ಬೇಡುತ್ತದೆ.
ನಾಲ್ಕು ವರ್ಷದ ಕೋರ್ಸ್‌ಗೆ 2 ಕೋಟಿ ವೆಚ್ಚ
ಅಂದರೆ ಹೆಚ್ಚು ಕಡಿಮೆ ನಾಲ್ಕು ವರ್ಷದ ಕೋರ್ಸ್ ಮುಗಿಸಲು ನಮಗೆ ತಗಲುವ ಖರ್ಚು ಬರೋಬ್ಬರಿ ಎರಡು ಕೋಟಿ. ಅಮೆರಿಕಾ ಆದರೆ ಅದಕ್ಕಿಂತ ಹೆಚ್ಚು! ಮಗ ಅಥವಾ ಮಗಳನ್ನು ನಾವು ನೋಡಲು ಹೋಗುವುದು ಅಥವಾ ಆ ಮಗು ನಮ್ಮನ್ನು ನೋಡಲು ಬರುವ ಖರ್ಚು ಕೂಡ ಇರುತ್ತದೆ ಅಲ್ಲವೇ? ಇಷ್ಟೆಲ್ಲಾ ದುಡ್ಡಿನ ಮಾತು ಹೇಳಲು ಕಾರಣ, ನಾವು ಅಷ್ಟೊಂದು ದುಡ್ಡು ಕೊಟ್ಟು ಓದಿಸಿದ ಕೋರ್ಸು ಮುಗಿಸಿ ಮುಂದೆ ಮಕ್ಕಳ ಕೆಲಸ ಅಥವಾ ಭವಿಷ್ಯದ ಬಗ್ಗೆ ನಯಾಪೈಸೆ ಗ್ಯಾರೆಂಟಿ ಇಲ್ಲ.
ಮಕ್ಕಳಿಗೆ ನಾಳೆಯ ಭವಿಷ್ಯ ಹೇಗೆ ಬದಲಾಗುತ್ತದೆ? ನಾವು ಹೇಗೆ ಸಿದ್ಧವಿರಬೇಕು ಎನ್ನುವ ಅರಿವು ಮೂಡಿಸುವ ಬದಲು ನಾವು ಅವರನ್ನು ಇಂತಹ ಕಾಲೇಜಿಗೆ ಸೇರಿಸಿ ಭ್ರಮೆಯಲ್ಲಿ ಬದುಕುವಂತೆ ಮಾಡುತ್ತೇವೆ. ಸುಳ್ಳು ವಿಶ್ವಾಸ , ನಂಬಿಕೆ ಸೃಷ್ಟಿಸುತ್ತೇವೆ. ಇದು ಪೋಷಕರಾಗಿ ನಾವು ಮಾಡುವ ತಪ್ಪು. ನಮ್ಮ ಬಳಿ ಮಕ್ಕಳಿಗೆ ಖರ್ಚು ಮಾಡಲು ಅಷ್ಟು ಹಣವಿರುವುದು ಬೇರೆ ವಿಚಾರ. ಕೇವಲ ಹಣದಿಂದ ಮಕ್ಕಳ ಭವಿಷ್ಯವನ್ನು ನಾವ್ಯಾರು ಬರೆಯಲು ಸಾಧ್ಯವಿಲ್ಲ.
ಭವಿಷ್ಯದ ಬದಲಾವಣೆಗಳ ಬಗ್ಗೆ ಮಕ್ಕಳ ಜೊತೆಗೆ ಮಾತನಾಡಿ
ಹಣವಿರುವ ಅಥವಾ ಇಲ್ಲದಿರುವ ಎರಡೂ ತರಹದ ಪೋಷಕರು ಇಂದು ಅತ್ಯಂತ ಅವಶ್ಯಕವಾಗಿ ಮಕ್ಕಳ ಜೊತೆಗೆ ಕುಳಿತು ಮುಂದಿನ ಹತ್ತು ವರ್ಷದಲ್ಲಿ ಆಗುವ ಬದಲಾವಣೆ, ಸದ್ಯದ ಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಚರ್ಚಿಸಬೇಕು. ಯಾವ ವಿಷಯ ಪ್ರಸ್ತುತ ಎನ್ನುವುದು ಬಹಳ ಮುಖ್ಯ. ದಶಕಗಳ ಕಾಲ ಎಲ್ಲರೂ ಕಂಪ್ಯೂಟರ್ ಸೈನ್ಸ್ ತೆಗೆದುಕೊಂಡ ಪರಿಣಾಮ ಏನಾಗಿದೆ ಗೊತ್ತಲ್ಲ. ಪ್ಲಂಬರ್ ಆಗಿರುವುದು ಕಂಪ್ಯೂಟರ್ ಪದವಿ ಪಡೆಯುವುದಕ್ಕಿಂತ ಲೇಸು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡುತ್ತಿದ್ದಾರೆ. ಇಂದಿನ ಈ ಪರಿಸ್ಥಿತಿಗೆ ಯಾರು ಕಾರಣ? ಡಿಮ್ಯಾಂಡ್ ಅಂಡ್ ಸಪ್ಲೈ ರೇಶಿಯೋ ಬಗ್ಗೆ ನಮಗೆ ಅದ್ಯಾಕೆ ಅಷ್ಟೊಂದು ಅಸಡ್ಡೆ?
ಇದರ ಜೊತೆಗೆ ಇನ್ನೊಂದು ಒಳಗಿನ ಕಥೆಯನ್ನು ನಿಮಗೆ ಹೇಳುವೆ. ಯೂರೋಪು ಮತ್ತು ಅಮೆರಿಕಾ ಯೂನಿವರ್ಸಿಟಿಗಳಲ್ಲಿ ಪದವಿ ಓದುವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅಲ್ಲಿನವರಿಗೆ ಇದು ವೃಥಾ ಖರ್ಚು, ಸಮಯ ಪೋಲು ಇದರಿಂದ ಭವಿಷ್ಯದಲ್ಲಿ ಕೆಲಸವೂ ಸಿಗುವುದಿಲ್ಲ. ಜ್ಞಾನಾರ್ಜನೆ ಕೂಡ ಆಗುವುದಿಲ್ಲ ಎನ್ನುವುದು ತಿಳಿದಿದೆ. ಹೀಗಾಗಿ ಅವರೆಲ್ಲರೂ ಸೌತ್ ಏಷ್ಯಾ ಮತ್ತು ಚೀನಾ ಜನರ ಮೇಲೆ ಗಾಳ ಹಾಕಲು ಶುರು ಮಾಡಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಭಾರತ ಮತ್ತು ಚೀನಾ ದೇಶದ ಹುಡುಗರು ಈ ಎಲ್ಲಾ ಯೂನಿವರ್ಸಿಟಿಗಳಿಗೆ ದಾಖಲಾಗುತ್ತಿದ್ದರೆ. ನಾವು ಬುದ್ದಿ ಕಲಿತು ಅಲ್ಲಿಗೆ ಹೋಗುವುದು ನಿಲ್ಲಿಸಿದರೆ ಸಾಕು ಮುಂದಿನ ಐದಾರು ವರ್ಷದಲ್ಲಿ ಅಲ್ಲಿನ ಬಹುತೇಕ ಯೂನಿವರ್ಸಿಟಿಗಳು ಮುಚ್ಚುತ್ತವೆ.
ವಿದ್ಯಾಭ್ಯಾಸಕ್ಕೆ ಹಣ ಸುರಿಯುವ ಮೊದಲು ಇರಲಿ ಎಚ್ಚರ
ಸ್ವದೇಶವಿರಲಿ (ಭಾರತ), ವಿದೇಶವಿರಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸುರಿಯುವ ಮುನ್ನ ಸ್ವಲ್ಪ ಎಚ್ಚರವಿರಲಿ. ರಸ್ತೆಯ ಮೇಲೆ ನಿತ್ಯ ಬೇಕಾಗುವ ಟೊಮೊಟೊ ಕೊಳ್ಳುವ ಮುನ್ನ ಪರಿಶೀಲಿಸುವ ಮನೋಭಾವದ ಜನ ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಕೂಡ ಸ್ವಲ್ಪ ಮುತುವರ್ಜಿ ವಹಿಸಲಿ ಎನ್ನುವುದಷ್ಟೇ ಈ ಬರಹದ ಆಶಯ.
ರಂಗಸ್ವಾಮಿ ಮೂಕನಹಳ್ಳಿ ಪರಿಚಯ
ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.