ವಿದೇಶದಲ್ಲಿ ಓದುವ ಕನಸಿದ್ದರೂ ದುಡ್ಡಿಲ್ವಾ; ಹಾಗಿದ್ರೆ ಈ ದೇಶಗಳಲ್ಲಿ ಭಾರತೀಯರಿಗೆ ಉಚಿತ ಶಿಕ್ಷಣ ಸಿಗುತ್ತೆ ನೋಡಿ
Free Education Countries: ಎಲ್ಲರಿಗೂ ವಿದೇಶದಲ್ಲಿ ಓದಬೇಕು ಎನ್ನುವ ಆಸೆ ಮತ್ತು ಕನಸಿರುತ್ತದೆ. ಆದರೆ, ದುಡ್ಡಿನ ಸಮಸ್ಯೆ ಎದುರಾಗುವ ಭೀತಿಗೆ ನಿಮಗೂ ಇದೆ ಅಲ್ವಾ? ಇಲ್ಲಿದೆ ನೋಡಿ ನಿಮಗೊಂದು ಸಿಹಿ ಸುದ್ದಿ. ಈ ದೇಶಗಳಲ್ಲಿ ಭಾರತೀಯರಿಗೆ ಉಚಿತ ಶಿಕ್ಷಣ ಸಿಗುತ್ತದೆ ನೋಡಿ.
Free Education Countries: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದು ಅದೆಷ್ಟೋ ವಿದ್ಯಾರ್ಥಿಗಳ ಕನಸು ಮತ್ತು ಆಸೆ. ಆದರೆ, ಇದು ಕೆಲವರಿಗೆ ಸಾಧ್ಯ, ಇನ್ನೂ ಕೆಲವರಿಗೆ ಅಸಾಧ್ಯ ಎನ್ನುವುದೂ ತಿಳಿದಿದೆ. ಏಕೆಂದರೆ, ಹಣ. ಉಳಿದುಕೊಳ್ಳಲು ವ್ಯವಸ್ಥೆ, ಫೀಸ್.. ಹೀಗೆ ಪ್ರತಿಯೊಂದಕ್ಕೂ ಹಣ ಬೇಕೇ ಬೇಕು. ಶ್ರೀಮಂತ ವರ್ಗದ ಜನರ ಮಕ್ಕಳು ಎಷ್ಟೇ ಖರ್ಚಾದರೂ ತಮ್ಮ ಮಕ್ಕಳಿಗೆ ವಿದೇಶದಲ್ಲೇ ಕೊಡಿಸುತ್ತಾರೆ. ಆದರೆ, ಮಧ್ಯಮ ವರ್ಗ ಮತ್ತು ಬಡತನದ ಜನರಿಗೆ ಇನ್ನೂ ಗಗನ ಕುಸುಮ. ಆದರೀಗ ಮಿಡಲ್ ಕ್ಲಾಸ್ ಮತ್ತು ಬಡವರಿಗೆ ಗುಡ್ನ್ಯೂಸ್ ಸಿಕ್ಕಿದೆ.
ಹೌದು, ಈ 15 ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸಿಗಲಿದೆ. ಈ ಪೈಕಿ ನೀವು ಸಹ ಒಬ್ಬರಾಗಿ ಪ್ರಯತ್ನಿಸಬಹುದು. ಉನ್ನತ ಶಿಕ್ಷಣಕ್ಕೆ ವಿದೇಶಗಳನ್ನೇ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಈ ರಾಷ್ಟ್ರಗಳು ಬೋಧನಾ ಶುಲ್ಕದ ಹೊರೆಯಿಲ್ಲದೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೀಡುತ್ತವೆ. ವಿದ್ಯಾರ್ಥಿಗಳಿಗೆ ಆಕರ್ಷಕ ಆಯ್ಕೆಯಾಗಿದೆ. ಜರ್ಮನಿ ಮತ್ತು ನಾರ್ವೆಯಿಂದ ಆಸ್ಟ್ರಿಯಾ ಮತ್ತು ಸ್ವೀಡನ್ವರೆಗೆ ಈ ದೇಶಗಳು ವಿದ್ಯಾರ್ಥಿಗಳಿಗೆ ಆರ್ಥಿಕ ಒತ್ತಡ ಇಲ್ಲದೆ ತಮ್ಮ ಶೈಕ್ಷಣಿಕ ಕನಸುಗಳನ್ನು ಮುಂದುವರಿಸಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ. ಅವುಗಳ ಪಟ್ಟಿ ಇಂತಿದೆ ನೋಡಿ.
1. ಡೆನ್ಮಾರ್ಕ್
ಉಚಿತ ಶಿಕ್ಷಣ ದೊರಕಿಸಿಕೊಡುವ ದೇಶಗಳ ಪೈಕಿ ಡೆನ್ಮಾರ್ಕ್ ಮೊದಲ ಸ್ಥಾನ ಸ್ಥಾನವಾಗಿ ಎದ್ದು ಕಾಣುತ್ತದೆ. ಇದು ಯುರೋಪ್‌ನಲ್ಲಿರುವ ಒಂದು ದೇಶವಾಗಿದೆ. 1973 ರಿಂದ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್, ಪಠ್ಯಕ್ರಮ ಯೋಜನೆ ಮತ್ತು ಶಿಕ್ಷಕರ ತರಬೇತಿಯಂತಹ ವಿಷಯಗಳಲ್ಲಿ ಸಚಿವಾಲಯವು ಪ್ರತ್ಯೇಕ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ವಿಶ್ವವಿದ್ಯಾನಿಲಯಕ್ಕೆ ಹಾಜರಾಗಲು ಬಯಸುವ ಆದರೆ ಬೋಧನಾ ಶುಲ್ಕ ನೀಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತದೆ.
2. ಫಿನ್‌ಲ್ಯಾಂಡ್
ಭಾರತದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ದೇಶಗಳ ಪೈಕಿ ಫಿನ್‌ಲ್ಯಾಂಡ್ ಅತ್ಯುತ್ತಮ ರಾಷ್ಟ್ರಗಳಲ್ಲಿ ಒಂದು. ಫ್ರಾನ್ಸ್ ಅಥವಾ ಜರ್ಮನಿಯಂತಹ ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುವ ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಫಿನ್‌ಲ್ಯಾಂಡ್ ಯುರೋಪ್‌ನಲ್ಲಿ ಹೆಚ್ಚು ಸಾಕ್ಷರತೆಯನ್ನು ಹೊಂದಿದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಯುರೋಪ್‌ನಲ್ಲಿ ಫಿನ್‌ಲ್ಯಾಂಡ್ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿದೆ.
3. ಜರ್ಮನಿ
ಭಾರತದ ವಿದ್ಯಾರ್ಥಿಗಳಿಗೆ ಫ್ರೀ ಎಜುಕೇಶನ್ ನೀಡುವ ರಾಷ್ಟ್ರಗಳಲ್ಲಿ ಜರ್ಮನಿಯೂ ಒಂದು. ವಿದ್ಯಾರ್ಥಿಗಳು ಮಾನ್ಯವಾದ ವಿದ್ಯಾರ್ಥಿ ವೀಸಾ ಹೊಂದಿದ್ದರೆ ಜರ್ಮನಿಯಲ್ಲಿ ಉಚಿತ ಶಿಕ್ಷಣಕ್ಕೆ ಅರ್ಹರಾಗಿರುತ್ತಾರೆ. ಅವರು ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಪದವಿಗೆ ದಾಖಲಾದರೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಉಚಿತ ಶಿಕ್ಷಣ ಮತ್ತು ಹಲವಾರು ಆಯ್ಕೆಗಳ ಪ್ರಯೋಜನವನ್ನು ಆನಂದಿಸಬಹುದು.
4. ನೆದರ್ಲೆಂಡ್ಸ್
ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ದೇಶಗಳಲ್ಲಿ ನೆದರ್ಲೆಂಡ್ಸ್ ಅತ್ಯುತ್ತಮ ದೇಶಗಳಲ್ಲಿ ಒಂದಾಗಿದೆ. ಇದು ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಶಿಕ್ಷಣದ ವ್ಯವಸ್ಥೆ ಹೊಂದಿದೆ. ಎಲ್ಲಾ ನಾಗರಿಕರಿಗೆ ಉಚಿತ ಸಾರ್ವಜನಿಕ ಶಿಕ್ಷಣವನ್ನು ಒದಗಿಸುತ್ತದೆ. ಯೂನಿವರ್ಸಲಿಸಂ, ಹೊಣೆಗಾರಿಕೆ, ವೈವಿಧ್ಯತೆ - ಈ ಮೂರು ಸ್ಥಂಭಗಳ ಮೇಲೆ ನೆದರ್ಲೆಂಡ್ಸ್ನ ಶೈಕ್ಷಣಿಕ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
5. ನಾರ್ವೆ
ನಾರ್ವೆ ಉತ್ತರ ಯುರೋಪ್‌ನಲ್ಲಿರುವ ಒಂದು ದೇಶ ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ದೇಶಗಳಲ್ಲಿ ಒಂದಾಗಿದೆ. ಇಂದು ವಿಶ್ವದ ಶ್ರೀಮಂತ ರಾಷ್ಟ್ರವಾಗಿರುವ ನಾರ್ವೆಯ ಕೆಲವು ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ಬೋಧನಾ ಶುಲ್ಕ ಇಲ್ಲ. ಆದಾಗ್ಯೂ, ಸಣ್ಣ ನೋಂದಣಿ ಶುಲ್ಕ ಮಾತ್ರ ಪಾವತಿಸಬೇಕು. ಪದವಿಪೂರ್ವ ಶಿಕ್ಷಣ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಮಟ್ಟದ ಪದವಿಗೆ ಉಚಿತ ಶಿಕ್ಷಣ ನೀಡುತ್ತದೆ. ಆದರೆ ನೀವು ನಾರ್ವೇಜಿಯನ್ ಭಾಷೆಯಲ್ಲಿ ಪ್ರವೀಣರಾಗಿರಬೇಕು.
6. ಸ್ವೀಡನ್
ಸ್ವೀಡನ್ ಉಚಿತ ಶಿಕ್ಷಣ ಒದಗಿಸುವ ಅತ್ಯುತ್ತಮ ದೇಶಗಳಲ್ಲಿ ಒಂದು. ಕೈಗೆಟುಕುವ ಗುಣಮಟ್ಟದ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಾಲೆಗಳು ಇಲ್ಲಿವೆ. ತನ್ನ ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಹೆಸರುವಾಸಿಯಾದ ಸ್ವೀಡನ್ನಲ್ಲಿ ಬೋಧನಾ ಶುಲ್ಕ ಪಾವತಿಸಬೇಕು. ಆದರೆ ಎಲ್ಲರೂ ಅಲ್ಲ. ಆದಾಗ್ಯೂ, ಭಾರತೀಯ ವಿದ್ಯಾರ್ಥಿಗಳು ಯಾವುದೇ ಬೋಧನಾ ಶುಲ್ಕವಿಲ್ಲದೆ ಪಿಎಚ್‌ಡಿ ಪಡೆಯುವ ಪ್ರಯೋಜನ ಹೊಂದಿದ್ದು, ವಿದ್ಯಾರ್ಥಿಗಳ ಸಂಶೋಧನೆಗೆ ಸಂಬಂಧಿಸಿ ಆಯಾ ಸರ್ಕಾರವೇ ಆರ್ಥಿಕ ಬೆಂಬಲ ನೀಡುತ್ತದೆ.
7. ಯುನೈಟೆಡ್ ಕಿಂಗ್‌ಡಮ್
ಯುನೈಟೆಡ್ ಕಿಂಗ್‌ಡಮ್ ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದೆ . ವಿದೇಶದಲ್ಲಿ ಅಧ್ಯಯನ ಮಾಡುವ ಮೂಲಕ ತಮ್ಮ ಕನಸುಗಳನ್ನು ಮುಂದುವರಿಸಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಇದು ಪ್ರಮುಖ ಸ್ಥಳವೂ ಹೌದು. ಯುಕೆಯಲ್ಲಿ ಯಾವುದೇ ಬೋಧನಾ-ಮುಕ್ತ ವಿಶ್ವವಿದ್ಯಾಲಯಗಳಿಲ್ಲದಿದ್ದರೂ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೆರವಾಗಲು ಖಾಸಗಿ ಮತ್ತು ಸರ್ಕಾರಿ ವಿದ್ಯಾರ್ಥಿವೇತನ ಲಭ್ಯವಿದೆ. ನೀವು ಬೋಧನಾ ಶುಲ್ಕ ಕಟ್ಟಿದರೂ ಅದು ವಿದ್ಯಾರ್ಥಿ ವೇತನದ ಮೂಲಕ ವಾಪಸ್ ಪಡೆಯಬಹುದು.
8. ಫ್ರಾನ್ಸ್
ಉಚಿತ ಶಿಕ್ಷಣ ಹೊಂದಿರುವ ದೇಶಗಳಿಗೆ ಬಂದರೆ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಬೇಡಿಕೆಯ ತಾಣವಾಗಿದೆ. ಇದು ಭಾರತೀಯ ವಿದ್ಯಾರ್ಥಿಗಳಿಗೆ ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಅಪಾರ ಅವಕಾಶಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ಪಡೆಯಬಹುದು. ಫ್ರಾನ್ಸ್ ತನ್ನ ನಾಗರಿಕರಿಗೆ (NRI ಆಗಬೇಕು) ಉಚಿತ ಶಿಕ್ಷಣ ನೀಡುವ ದೀರ್ಘ ಸಂಪ್ರದಾಯ ಹೊಂದಿದೆ.
9. ರಷ್ಯಾ
ರಷ್ಯಾ ಜನಪ್ರಿಯ ತಾಣದ ಜೊತೆಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯುರೋಪಿಯನ್ ರಾಷ್ಟ್ರಗಳಲ್ಲಿ ಒಂದು. ವಿಶ್ವ ದರ್ಜೆಯ ಶಿಕ್ಷಣ, ಆಯಾ ಕ್ಷೇತ್ರದಲ್ಲಿ ಉನ್ನತ ಶ್ರೇಣಿಯ ವಿಶ್ವವಿದ್ಯಾನಿಲಯಗಳ ಕಾರಣದಿಂದ ರಷ್ಯಾವನ್ನು ಉಚಿತ ಶಿಕ್ಷಣಕ್ಕಾಗಿ ಅತ್ಯುತ್ತಮ ದೇಶವೆಂದು ಪರಿಗಣಿಸಲಾಗಿದೆ. ಭಾರತ ಸರ್ಕಾರವು ರಷ್ಯಾದೊಂದಿಗೆ ಹಲವು ಯೋಜನೆಗಳ ಒಪ್ಪಂದಗಳಿಗೆ ಸಹಿ ಹಾಕಿದ್ದರೆ, ನಿಮ್ಮ ಬೋಧನಾ ವೆಚ್ಚವನ್ನು ನಿಮ್ಮ ತಾಯ್ನಾಡಿನ ಸರ್ಕಾರವು ರಷ್ಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಭರಿಸುತ್ತದೆ. ಆ ಮೂಲಕ ಉಚಿತ ವಿದ್ಯಾಭ್ಯಾಸ ದೊರೆಯುತ್ತದೆ.
10. ಸ್ವಿಟ್ಜರ್ಲೆಂಡ್
ಯುರೋಪ್‌ನಲ್ಲಿ ಅಧ್ಯಯನ ಮಾಡಲು ಸ್ವಿಟ್ಜರ್ಲೆಂಡ್ ಅತ್ಯುತ್ತಮ ದೇಶಗಳಲ್ಲಿ ಒಂದು ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಿಲ್ಲ. ಸ್ವಿಟ್ಜರ್ಲೆಂಡ್‌ನ ಬಹುಪಾಲು ಸಾರ್ವಜನಿಕ ವಿಶ್ವವಿದ್ಯಾಲಯಗಳು ಉಚಿತ ಶಿಕ್ಷಣ ನೀಡುತ್ತವೆ. ಇಲ್ಲಿನ ಸರ್ಕಾರದಿಂದ ಅನುದಾನ ಅಥವಾ ವಿದ್ಯಾರ್ಥಿವೇತನವನ್ನೂ ಪಡೆಯಬಹುದು. ಆದರೆ ಖಾಸಗಿ ಕಾಲೇಜುಗಳಲ್ಲಿ ಆಯಾ ಶಿಕ್ಷಣಕ್ಕೆ ಸಂಬಂಧಿಸಿ ಶುಲ್ಕ ಪಾವತಿಸಬೇಕಾಗುತ್ತದೆ.
ಇವಿಷ್ಟು ಮಾತ್ರವಲ್ಲ, ಸ್ಪೇನ್, ಜೆಕ್ ರಿಪಬ್ಲಿಕ್, ಇಟಲಿ, ಬೆಲ್ಜಿಯಂ ಮತ್ತು ಆಸ್ಟ್ರೀಯಾ ದೇಶಗಳಲ್ಲೂ ಉಚಿತ ಶಿಕ್ಷಣ ವ್ಯವಸ್ಥೆ ಸಿಗಲಿದೆ. ಆದರೆ ಈ ಮೇಲಿನ 15 ದೇಶಗಳಲ್ಲೂ ಖಾಸಗಿ ಕಾಲೇಜುಗಳಲ್ಲಿ ಶುಲ್ಕ ಪಾವತಿಸಿಯೇ ಶಿಕ್ಷಣ ಪಡೆಯಬೇಕಾಗುತ್ತದೆ. ಆದರೆ ಸರ್ಕಾರಿ ಅಥವಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಉಚಿತ ಶಿಕ್ಷಣ ದೊರೆಯಲಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಕೆಲವೊಂದು ದೇಶಗಳಲ್ಲಿ ಹಾಸ್ಟೆಲ್ ವ್ಯವಸ್ಥೆಯೂ ಇದೆ. ಇನ್ನೊಂದಿಷ್ಟು ದೇಶಗಳಲ್ಲಿ ವಸತಿ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ.