ಡಿಜಿಟಲ್ ಕ್ಷೇತ್ರದಲ್ಲಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಗೂಗಲ್‌ನಲ್ಲಿ ಉಚಿತ ಕೋರ್ಸ್‌ಗಳು; ಪ್ರಮಾಣಪತ್ರವೂ ಸಿಗುತ್ತೆ
ಗೂಗಲ್‌ನಲ್ಲಿ ನಮಗೆ ಬೇಕಾದ ಎಲ್ಲಾ ಮಾಹಿತಿಗಳೂ ಸಿಗುತ್ತವೆ. ಇದೇ ವೇಳೆ, ಗೂಗಲ್ ಉಚಿತವಾಗಿ ಹಲವು ಕೋರ್ಸ್‌ಗಳನ್ನೂ ಆಫರ್ ಮಾಡುತ್ತದೆ. ನಿಮ್ಮ ವೃತ್ತಿಪರ ಕೌಶಲ್ಯ ಹೆಚ್ಚಿಸಿಕೊಳ್ಳಲು ಉಚಿತ ಕೋರ್ಸ್ ಮಾಡಿ, ಪ್ರಮಾಣಪತ್ರವನ್ನು ಪಡೆಯಬಹುದು.
ಇದು ಕೃತಕ ಬುದ್ಧಿಮತ್ತೆ (AI) ಯುಗ. ಮನುಷ್ಯ ಮಾಡುವ ಕೆಲಸಗಳನ್ನು ತಂತ್ರಜ್ಞಾನಗಳೇ ಮಾಡತೊಡಗಿವೆ. ದಿನಕಳೆದಂತೆ ಉದ್ಯೋಗ ಸೃಷ್ಟಿ ಕಡಿಮೆಯಾಗುತ್ತಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನದ ಜೊತೆಗೆ ಕೌಶಲ್ಯ, ಚುರುಕುತನ, ಸೃಜನಶೀಲತೆ ಇದ್ದರಷ್ಟೇ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯ ಎಂಬಂತಾಗಿದೆ. ಸಾಫ್ಟ್‌ವೇರ್, ತಂತ್ರಜ್ಞಾನ ಅಥವಾ ಡಿಜಿಟಲ್ ಕ್ಷೇತ್ರಗಳಲ್ಲಿ ಎಷ್ಟೇ ಜ್ಞಾನಭಂಡಾರವಿದ್ದರೂ ಕಡಿಮೆಯೇ. ಹೀಗಾಗಿ ಇಂಥಾ ಕ್ಷೇತ್ರಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ನಿಮ್ಮ ಜ್ಞಾನದ ಜೊತೆಗೆ ಕೌಶಲ್ಯ ಹೆಚ್ಚಿಸಿಕೊಳ್ಳುವುದು ಮುಖ್ಯ. ಉತ್ತಮ ಸಂಭಾವನೆ ಪಡೆಯಬೇಕೆಂದರೆ, ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಅನುಭವಗಳು ಸಾಕಾಗುವುದಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ವೃತ್ತಿ ಪ್ರೊಫೈಲ್ ತೂಕ ಹೆಚ್ಚಾಗಲು ಹೆಚ್ಚುವರಿ ಕೌಶಲ್ಯಗಳು ಬೇಕೇ ಬೇಕು.
ಸೆರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ ಬೇಕಾದ ಎಲ್ಲಾ ಮಾಹಿತಿಗಳೂ ಸಿಗುತ್ತವೆ. ಇದೇ ಗೂಗಲ್‌ನಲ್ಲಿ ನಿಮ್ಮ ವೃತ್ತಿಪರ ಕೌಶಲ್ಯ ಹೆಚ್ಚಿಸಿಕೊಳ್ಳಲು ಹಲವು ಕೋರ್ಸ್‌ಗಳಿವೆ. ಗೂಗಲ್‌ನಲ್ಲಿ ಲಭ್ಯವಿರುವ ಉಚಿತ ಹಾಗೂ ಪ್ರಮಾಣಪತ್ರವೂ ಸಿಗುವ ಕೋರ್ಸ್‌ಗಳ ವಿವರ ಇಲ್ಲಿದೆ.
ಸೆರ್ಚ್ ಎಂಜಿನ್ ಆಪ್ಟಿಮೈಸೇಶನ್ (SEO)
ವೆಬ್ ಕಂಟೆಂಟ್ ಬರಹಗಾರರು ನೀವಾಗಿದ್ದರೆ ಎಸ್‌ಇಒ ಜ್ಞಾನ ನಿಮಗೆ ಅತ್ಯಗತ್ಯ. ನಿಮ್ಮ ಕಂಟೆಂಟ್ ಅಥವಾ ವಿಷಯವು ಹೆಚ್ಚು ಹಾಗೂ ಸರಿಯಾದ ಪ್ರೇಕ್ಷಕರನ್ನು ತಲುಪಲು ಮತ್ತು ಹೆಚ್ಚು ಹೆಚ್ಚು ಪೇಜ್‌ವಿವ್ಸ್ ಪಡೆಯಲು ಏಸ್‌ಇಒ ಅಥವಾ ಸರ್ಚ್ ಇಂಜಿನ್ ಆಪ್ಟಿಮೈಸೇಶನ್‌ನ ಜ್ಞಾನ ಅತ್ಯಗತ್ಯವಾಗಿರುತ್ತದೆ. ಗೂಗಲ್ ಇದಕ್ಕಾಗಿ ಕೋರ್ಸ್ ಮಾಡುತ್ತಿದೆ. ಒಂದು ಗಂಟೆ ಅವಧಿಯ ಕೋರ್ಸ್ ಇದಾಗಿದೆ.
ಗೂಗಲ್ ಅನಾಲಿಟಿಕ್ಸ್ (Google Analytics)
ಡಿಜಿಟಲ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರಿಗೆ ಜಿಎ ಅಥವಾ ಗೂಗಲ್ ಅನಾಲಿಟಿಕ್ಸ್ ಕುರಿತು ತಿಳಿದಿರುತ್ತದೆ. ಇದು ವೆಬ್‌ಸೈಟ್‌ಗಳ ಕಾರ್ಯಕ್ಷಮತೆ ಟ್ರ್ಯಾಕಿಂಗ್ ಮಾಡಲು ಗೂಗಲ್‌ನದ್ದೇ ಸಾಧನವಾಗಿದೆ. ಈ ಕೋರ್ಸ್ ಕಲಿತು ನಿಮ್ಮ ವೆಬ್‌ಸೈಟ್ ಪರ್ಫಾರ್ಮೆನ್ಸ್ ಟ್ರ್ಯಾಕ್ ಮಾಡಬಹುದು. ನಿರ್ದಿಷ್ಟ ಸಂಖ್ಯೆಗಳನ್ನು ವೀಕ್ಷಿಸಲು, ಡೇಟಾವನ್ನು ವಿಶ್ಲೇಷಿಸುವುದು ಹೇಗೆ ಎಂಬುದನ್ನು ಈ ಕೋರ್ಸ್ ಮೂಲಕ ಕಲಿಯಬಹುದು. ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ಹೆಚ್ಚಿಸುವುದು ಹೇಗೆ? ವೆಬ್‌ಸೈಟ್ ಎಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದೆ? ಇಂಥಾ ವಿಸ್ತೃತ ವಿವರಗಳನ್ನು ಇಲ್ಲಿ ನೋಡಬಹುದು. ಇದು ಒಂದು ಗಂಟೆ ಅವಧಿಯ ಕೋರ್ಸ್ ಆಗಿದೆ.
ಡಿಜಿಟಲ್ ಮಾರ್ಕೆಟಿಂಗ್ ಪರಿಚಯ
ಬಾಹ್ಯ ಜಗತ್ತಿನಲ್ಲಿ ಉತ್ಪನ್ನವೊಂದಕ್ಕೆ ಮಾರ್ಕೆಂಟಿಂಗ್ ಎಷ್ಟು ಮುಖ್ಯವೋ, ಡಿಜಿಟಲ್ ಕ್ಷೇತ್ರದಲ್ಲೂ ಮಾರ್ಕೆಂಟಿಂಗ್ ತುಂಬಾ ಮುಖ್ಯ. ನಿಮ್ಮ ಕಂಟೆಂಟ್ ಎಷ್ಟೇ ಚೆನ್ನಾಗಿರಲಿ, ಸೂಕ್ತ ಮಾರ್ಕೆಟಿಂಗ್ ಇಲ್ಲದಿದ್ದರೆ ಅದು ಸಫಲವಾಗುವ ಸಾಧ್ಯತೆ ಕಡಿಮೆ. ಯಶಸ್ವಿ ಡಿಜಿಟಲ್ ಮಾರ್ಕೆಂಟ್‌ಗಾಗಿ ಗೂಗಲ್ ತರಬೇತಿ ನೀಡುತ್ತದೆ. ಕೋರ್ಸ್ ಅವಧಿ ಎರಡು ಗಂಟೆ. ಉಚಿತವಾಗಿ ಗೂಗಲ್ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ನೀವು ಪೂರ್ಣಗೊಳಿಸಬಹುದು. ಈ ಕೋರ್ಸ್‌ನಲ್ಲಿ SEO ಮತ್ತು SEM, ಕಂಟೆಂಟ್ ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ಆಟೊಮೇಟೆಡ್ ಮಾರ್ಕೆಟಿಂಗ್ ಕೂಡಾ ಇವೆ.
ಡೇಟಾ ಸೈನ್ಸ್ ಫೌಂಡೇಶನ್ಸ್
ಡೇಟಾ ವಿಜ್ಞಾನವು ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಲ್ಲಿ ಒಂದು. ಇದನ್ನು ಕೂಡಾ ಗೂಗಲ್ ಉಚಿತವಾಗಿ ನೀಡುತ್ತಿದೆ. ಎರಡು ಗಂಟೆಗಳ ಅವಧಿಯ ಈ ಕೋರ್ಸ್‌ಗೆ ಭಾರಿ ಬೇಡಿಕೆಯಿದೆ. ಡೇಟಾ ಸೈನ್ಸ್ ಫೌಂಡೇಶನ್ಸ್ ಕೋರ್ಸ್ ಮೂಲಕ ವಿಶ್ಲೇಷಣೆ, ಮೂಲ ಪ್ರೋಗ್ರಾಮಿಂಗ್ ಭಾಷೆಗಳು ಮತ್ತು ಲೈಫ್ ಸೈಕಲ್ ಫಂಡಮೆಂಟಲ್ಸ್ ಕುರಿತು ನಿಮಗೆ ತಿಳಿಸುತ್ತದೆ.