Swachh Diwali: ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಅಭಿಯಾನ, ಏನಿದು ಕೇಂದ್ರ ಸರ್ಕಾರದ ಉಪಕ್ರಮ, ಇಲ್ಲಿದೆ 4 ಅಂಶದ ವಿವರಣೆ
ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನ ಶುರುಮಾಡಿದೆ. ಸ್ವಚ್ಛತಾ ಜಾಗೃತಿ ಈ ಅಭಿಯಾನದ ಉದ್ದೇಶವಾಗಿದ್ದು, ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಸರ್ಕಾರ ಹೇಳಿದೆ. ಏನಿದು ಅಭಿಯಾನ ಇಲ್ಲಿದೆ ವಿವರ.
ದೀಪಾವಳಿ ಸಮೀಪಿಸುತ್ತಿದೆ. ಬೆಳಕಿನ ಹಬ್ಬದ ಸಂಭ್ರಮ ನಿಧಾನವಾಗಿ ಭಾರತದಾದ್ಯಂತ ಪಸರಿಸತೊಡಗಿದೆ. ಈ ಬಹುನಿರೀಕ್ಷಿತ ಆಚರಣೆಯ ಮುನ್ನುಡಿ ಎಂಬಂತೆ ಮನೆ ಮತ್ತು ಸುತ್ತಮತ್ತಲಿನ ಪರಿಸರ ಸ್ವಚ್ಛಗೊಳಿಸುವುದು ವಾಡಿಕೆ, ಸಂಪ್ರದಾಯ. ದೀಪಾವಳಿ ಹಬ್ಬದ ಪೂರ್ವಭಾವಿ ಸ್ವಚ್ಛತಾ ಕಾರ್ಯಕ್ರಮ ಮನೆಗಳಿಗಷ್ಟೇ ಸೀಮಿತವಲ್ಲ, ಬೀದಿ, ಮಾರುಕಟ್ಟೆ, ನೆರೆಹೊರೆ ಎಲ್ಲೆಡೆ ಪಸರಿಸುತ್ತದೆ. ಇದನ್ನು ಖಚಿತಪಡಿಸಲು ಸಮುದಾಯ, ಸಮಾಜ ಒಂದಾಗುತ್ತವೆ. ಇದು ಸಂತೋಷವನ್ನು ಹಂಚುವ ಪ್ರಾಚೀನ ಆಚರಣೆ.
ಏನಿದು ಸ್ವಚ್ಛ ದೀಪಾವಳಿ ಶುಭ ದೀಪಾವಳಿ (Swachh Diwali Shubh Diwali) ಅಭಿಯಾನ
ಹಬ್ಬದ ಹಿನ್ನೆಲೆ ಇಟ್ಟುಕೊಂಡು ಕೇಂದ್ರ ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ 2.0ರ ಭಾಗವಾಗಿ "ಸ್ವಚ್ಛ ದೀಪಾವಳಿ, ಶುಭ ದೀಪಾವಳಿ (ಸ್ವಚ್ಛ್ ದಿವಾಲಿ, ಶುಭ್ ದಿವಾಲಿ)' ಅಭಿಯಾನವನ್ನು ಶುರುಮಾಡಿದೆ. ಇದು ನವೆಂಬರ್ 6ಕ್ಕೆ ಶುರುವಾಗಿದ್ದು ನವೆಂಬರ್ 12ಕ್ಕೆ ಮುಕ್ತಾಯವಾಗಲಿದೆ.
ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನದ ಉದ್ದೇಶ
ಈ ಮಹತ್ವಾಕಾಂಕ್ಷೆಯ ಅಭಿಯಾನವು ದೀಪಾವಳಿಯ ಸಾಂಸ್ಕೃತಿಕ ಮಹತ್ವವನ್ನು ಸಾರುತ್ತದೆ. ಅಲ್ಲದೆ, ಸ್ವಚ್ಛ ಭಾರತ ಪ್ರಯಾಣ ಮತ್ತು ಪರಿಸರಕ್ಕಾಗಿ ಜೀವನಶೈಲಿಯ ತತ್ವಗಳೊಂದಿಗೆ ಹಬ್ಬವನ್ನು ಜತೆಗೂಡಿಸಲು ಪ್ರಯತ್ನಿಸುತ್ತದೆ.
- ಹಬ್ಬ ಹರಿದಿನಗಳಲ್ಲಿ ಸ್ವಚ್ಛತೆ ಕಾಪಾಡುವ ಮಹತ್ವವನ್ನು ಕೂಡ ಈ ಅಭಿಯಾನವು ನೆನಪಿಸುತ್ತದೆ.
- ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನವು ಜಾಗೃತಿ ಮೂಡಿಸುವ ಮೂಲಕ ಮತ್ತು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳ ಆಯ್ಕೆಗೆ ಪ್ರೇರೇಪಿಸುತ್ತದೆ.
- ಜಾಗೃತಿ ಅಭಿಯಾನದ ಮೂಲಕ ವ್ಯಕ್ತಿಗಳಲ್ಲಿ ಪರಿಸರ ಮತ್ತು ಸಮುದಾಯದ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಲು ಬಯಸುತ್ತದೆ.
- ಇದು ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ತಪ್ಪಿಸುವ ಮಹತ್ವವನ್ನು ಒತ್ತಿಹೇಳುತ್ತದೆ
- ದೀಪಾವಳಿಯ ಪೂರ್ವ ಮತ್ತು ನಂತರದ ಸ್ವಚ್ಛತೆಯನ್ನು ಉತ್ತೇಜಿಸುತ್ತದೆ.
ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಹೇಗೆ
- ಅಭಿಯಾನದಲ್ಲಿ ಭಾಗವಹಿಸಲು, ವ್ಯಕ್ತಿಗಳು ಆನ್‌ಲೈನ್‌ನಲ್ಲಿ ಸ್ವಚ್ಛ ದೀಪಾವಳಿ ಪ್ರತಿಜ್ಞೆ ಕೈಗೊಳ್ಳಬಹುದು. ಆ ಮೂಲಕ ಸ್ವಚ್ಛ, ಹಸಿರು ದೀಪಾವಳಿಗೆ ಬದ್ಧರಾಗಬಹುದು.
- ಪ್ರತಿಜ್ಞೆ ಸ್ವೀಕರಿಸುವುದಕ್ಕೆ ಇರುವ ಆನ್‌ಲೈನ್ ಕೊಂಡಿ - https://pledge.mygov.in/swachh-diwali-shubh-diwali/
- ಪ್ರತಿಜ್ಞೆ ಸ್ವೀಕರಿಸಿದ ನಂತರ, ಹಬ್ಬದ ಋತುವಿನಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದನ್ನು ತಡೆಯುವ ಮೂಲಕ ಹಸಿರು ದೀಪಾವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.
- ಸ್ವಚ್ಛ ದೀಪಾವಳಿಯ ಸಂದೇಶವನ್ನು ಇನ್ನಷ್ಟು ವರ್ಧಿಸಲು, ಭಾಗವಹಿಸುವವರು ತಮ್ಮ ಸುಸ್ಥಿರ ದೀಪಾವಳಿ ಆಚರಣೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ವಚ್ಛ ದೀಪಾವಳಿ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಶೇರ್ ಮಾಡಲು ಪ್ರೋತ್ಸಾಹಿಸಲಾಗುತ್ತದೆ.
ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನಕ್ಕೆ ಸ್ಪಂದನೆ
ಈ ಅಭಿಯಾನ ಶುರುವಾದಲ್ಲಿಂದ ಇದುವರೆಗೆ (ನ.8ರ ರಾತ್ರಿ 11ರ ತನಕ) 46,854 ಜನ ಈ ವರ್ಷ ಹಸಿರು ಮತ್ತು ಸ್ವಚ್ಛ ದೀಪಾವಳಿ ಆಚರಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ. 23 ಪ್ರತಿಶತದೊಂದಿಗೆ ಮಹಾರಾಷ್ಟ್ರವು ಮುಂಚೂಣಿಯಲ್ಲಿದೆ. ಆಂಧ್ರಪ್ರದೇಶವು 14.4 ಪ್ರತಿಶತ ಮತ್ತು ಉತ್ತರ ಪ್ರದೇಶವು 13.3 ಪ್ರತಿಶತದೊಂದಿಗೆ ಎರಡ ಮತ್ತು ಮೂರನೇ ಸ್ಥಾನದಲ್ಲಿವೆ. ಅಭಿಯಾನಕ್ಕೆ ವೇಗ ಸಿಗುತ್ತಿದ್ದು, ವಿವಿಧ ರಾಜ್ಯಗಳ ನಾಗರಿಕರು ಸಹ ಪ್ರತಿಜ್ಞೆ ಕೈಗೊಳ್ಳುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಪರಿಸರ ಪ್ರಜ್ಞೆಯ ಸಂದೇಶವನ್ನು ಬಲಪಡಿಸುತ್ತಾರೆ.