ಗೋಕುಲಾಷ್ಟಮಿಗೆ ಕೃಷ್ಣನಿಗೆ ಪ್ರಿಯವಾದ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿ ನೈವೇದ್ಯ ಮಾಡಿ; ಗೋಪಿಲೋಲನ ಮನ ಸಂತುಷ್ಟಿಗೊಳಿಸಿ
ಇಂದು ಶ್ರೀ ಕೃಷ್ಣ ಹುಟ್ಟಿದ ದಿನ. ಉಡುಪಿ ಸೇರಿದಂತೆ ನಾಡಿದ ಹಲವೆಡೆ ಸಂಭ್ರಮ, ಸಡಗರ ಜೋರು. ವೇಣುಗೋಪಾಲನು ಶ್ರಾವಣ ಮಾಸದ ಅಷ್ಟಮಿಯಂದು ಜನಿಸಿದ್ದನು. ಈ ದಿನ ಕೃಷ್ಣನಿಗೆ ಪ್ರಿಯವಾದ ಉಂಡೆಗಳು, ಚಕ್ಕುಲಿ, ನಿಪ್ಪಟ್ಟು ಇಂತಹ ತಿನಿಸುಗಳನ್ನು ತಯಾರಿಸಿ ನೈವೇದ್ಯ ಮಾಡುವುದು ವಾಡಿಕೆ. ಕೃಷ್ಣನಿಗೆ ಪ್ರಿಯವಾದ ಕೆಲವು ಖಾದ್ಯಗಳನ್ನು ತಯಾರಿಸುವ ವಿಧಾನ ಇಲ್ಲಿದೆ.
ಇಂದು ನಾಡಿನಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭಮ್ರ. ಕೃಷ್ಣನ ಹುಟ್ಟುಹಬ್ಬ ಎಂದಾಕ್ಷಣ ನೆನಪಾಗುವುದು ಶ್ರೀ ಕೃಷ್ಣ, ಯಶೋದೆಯರ ವೇಷಧಾರಿಗಳು, ಮೊಸರು ಕುಡಿಕೆ, ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ, ಸಡಗರ. ಇದರೊಂದಿಗೆ ಶ್ರೀ ಕೃಷ್ಣ ಹುಟ್ಟಿದ ದಿನವಾದ ಅಷ್ಟಮಿಯಂದು ವಿಶೇಷ ಖಾದ್ಯಗಳನ್ನು ತಯಾರಿಸುವುದು ವಾಡಿಕೆ.
ಗೋಕುಲಾಷ್ಟಮಿಯಂದು ಕೃಷ್ಣನಿಗೆ ಇಷ್ಟವಾಗುವ ಕುರುಕಲು ತಿಂಡಿಗಳ ಜೊತೆ ಜೊತೆಗೆ ಉಂಡೆ, ಕುಡುಬಿನಂತಹ ಸಿಹಿ ತಿನಿಸುಗಳನ್ನೂ ತಯಾರಿಸುತ್ತಾರೆ.
ಅಂಟಿನ ಉಂಡೆ
ಒಣ ಹಣ್ಣುಗಳಿಂದ ತಯಾರಿಸುವ ಅಂಟುಂಡೆ ಅಥವಾ ಅಂಟಿನ ಉಂಡೆ ಕೃಷ್ಣನ ಇಷ್ಟದ ಖಾದ್ಯ. ಕೃಷ್ಣ ಜನ್ಮಾಷ್ಟಮಿಯಂದು ಶ್ರೀ ಕೃಷ್ಣನಿಗೆ ನೈವೇದ್ಯ ಮಾಡುವುದು ವಾಡಿಕೆ
ಬೇಕಾಗುವ ಸಾಮಗ್ರಿಗಳು: ಒಣ ಖರ್ಜೂರ - ಕಾಲು ಕೆಜಿ, ಒಣ ಕೊಬ್ಬರಿ - ಅರ್ಧ ಕೆಜಿ, ಗೋಡಂಬಿ - 100 ಗ್ರಾಂ, ಬೆಲ್ಲ - ಅರ್ಧ ಕೆಜಿ, ತುಪ್ಪು - ಅರ್ಧ ಕೆಜಿ, ಲವಂಗ, ಗಸಗಸೆ - ಸ್ವಲ್ಪ, ಅಂಟು - 100 ಗ್ರಾಂ
ತಯಾರಿಸುವ ವಿಧಾನ: ಕೊಬ್ಬರಿಯನ್ನು ತುರಿದುಕೊಂಡು ಬಿಸಿಲಿನಲ್ಲಿ ಒಣಗಿಸಿಕೊಳ್ಳಿ. ಅಂಟನ್ನು ತುಪ್ಪದಲ್ಲಿ ಹುರಿದು ಇರಿಸಿಕೊಳ್ಳಿ. ಖರ್ಜೂರವನ್ನು ಬೀಜ ತೆಗೆದು ತುಪ್ಪದಲ್ಲಿ ಹುರಿದುಕೊಳ್ಳಿ. ನಂತರ ಕೊಬ್ಬರಿ ತುರಿ, ಗೋಡಂಬಿ, ಏಲಕ್ಕಿ, ಲವಂಗ, ಗಸೆಗಸೆ ಎಲ್ಲವನ್ನೂ ತುಪ್ಪದಲ್ಲಿ ಹುರಿದುಕೊಂಡು ಕುಟ್ಟಿ ಪುಡಿ ಮಾಡಿಟ್ಟುಕೊಂಡಿರಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಬೆಲ್ಲ ಕರಗಿಸಿ ಪಾಕ ಮಾಡಿಕೊಳ್ಳಿ. ಅದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ, ಉಂಡೆ ಕಟ್ಟಿ.
ಕರ್ಜಿಕಾಯಿ
ಸಾಮಗ್ರಿಗಳು: ಪುಠಾಣಿ ಹಿಟ್ಟು - ಕಾಲು ಕೆಜಿ, ಸಕ್ಕರೆ ಪುಡಿ - ಅರ್ಧ ಕೆಜಿ, ಎಳ್ಳು - ನೂರು ಗ್ರಾಂ, ಒಣಕೊಬ್ಬರಿ - 100 ಗ್ರಾಂ, ಏಲಕ್ಕಿ ಪುಡಿ - ಸ್ವಲ್ಪ, ಗಸೆಗಸೆ, ಮೈದಾಹಿಟ್ಟು - ಅರ್ಧ ಕೆಜಿ, ಕರಿಯಲು ಎಣ್ಣೆ
ತಯಾರಿಸುವ ವಿಧಾನ: ಪುಠಾಣಿಹುಡಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರಣ ಮಾಡಿ. ಇದಕ್ಕೆ ಏಲಕ್ಕಿ, ಗಸೆಗಸೆ, ಕೊಬ್ಬರಿ ತುರಿ ಸೇರಿಸಿ. ಮೈದಾಹಿಟ್ಟನ್ನು ನೀರು ಹಾಕಿ ಕಣಕವನ್ನು ತಯಾರಿಸಿ. ಇದರಿಂದ ಸಣ್ಣ-ಸಣ್ಣ ಪೂರಿಗಳನ್ನು ತಯಾರಿಸಿ. ಅದರೊಳಗೆ ಮಿಶ್ರಣ ಮಾಡಿದ ಪುಡಿಯನ್ನು ಸೇರಿಸಿ. ಅಂಚುಗಳಿಗೆ ನೀರು ಸವರಿ ಕರ್ಜಿಕಾಯಿ ಆಕಾರಕ್ಕೆ ಅಂಟಿಸಿ. ನಂತರ ಇದನ್ನು ಎಣ್ಣೆಯಲ್ಲಿ ಕರಿಯಿರಿ.
ಬೆಣ್ಣೆ ಚಕ್ಕುಲಿ
ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು - 1 ಕೆಜಿ, ಮೈದಾಹಿಟ್ಟು - ಕಾಲು ಕೆಜಿ, ಅಕ್ಕಿಹಿಟ್ಟು - 100 ಗ್ರಾಂ, ಬೆಣ್ಣೆ - 200 ಗ್ರಾಂ, ಉಪ್ಪು - ರುಚಿಗೆ, ಸೋಡಾಪುಡಿ - ಸ್ವಲ್ಪ, ಎಣ್ಣೆ - ಕರಿಯಲು
ತಯಾರಿಸುವ ವಿಧಾನ: ಮೈದಾ, ಕಡಲೆ, ಅಕ್ಕಿಹಿಟ್ಟನ್ನು ಪಾತ್ರೆಯೊಂದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಉಪ್ಪು, ಕರಗಿಸಿದ ಬೆಣ್ಣೆ, ಸೋಡಾಪುಡಿ ಸೇರಿಸಿ. ಹದಕ್ಕೆ ತಕ್ಕಂತೆ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿ, ಚೆನ್ನಾಗಿ ನಾದಿ. ಈ ಹಿಟ್ಟನ್ನು ಚಕ್ಕುಲಿ ಅಚ್ಚಿನಲ್ಲಿ ತುಂಬಿ ಕಾದ ಎಣ್ಣೆಗೆ ಬಿಡಿ. ಈಗ ನಿಮ್ಮ ಮುಂದೆ ರುಚಿಯಾದ, ಕೃಷ್ಣನಿಗೆ ಇಷ್ಟವಾದ ಬೆಣ್ಣೆ ಚಕ್ಕುಲಿ ಸವಿಯಲು ಸಿದ್ಧ.
ಅರಳು ಉಂಡೆ
ಅರಳು ಶ್ರೀ ಕೃಷ್ಣನಿಗೆ ಬಹಳ ಪ್ರಿಯ. ಕೃಷ್ಟ ಜನ್ಮಾಷ್ಟಮಿಯಂದು ಅರಳು ಉಂಡೆ ತಯಾರಿಸುವುದು ಸಾಮಾನ್ಯ.
ಬೇಕಾಗುವ ಸಾಮಗ್ರಿಗಳು: ಅರಳು - ಅರ್ಧ ಕೆಜಿ, ಎಳ್ಳು - 100ಗ್ರಾಂ, ಬೆಲ್ಲ.
ತಯಾರಿಸುವ ವಿಧಾನ: ಮೊದಲಿಗೆ 2 ಚಮಚ ಎಳ್ಳನ್ನು ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಎಳ್ಳನ್ನು ಒಂದು ತಟ್ಟೆಗೆ ಹಾಕಿಡಿ, ನಂತರ ಅದೇ ಪಾತ್ರೆಯಲ್ಲಿ 2 ಚಮಚ ಶೇಂಗಾ ಹುರಿದುಕೊಳ್ಳಿ. ಶೇಂಗಾ ಸ್ವಲ್ಪ ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಚಿಕ್ಕ ಪಾತ್ರೆಯೊಂದಕ್ಕೆ 1 ಚಮಚ ತುಪ್ಪ ಹಾಕಿ ಅದಕ್ಕೆ ಸ್ವಲ್ಪ ಗೋಡಂಬಿ ಹಾಕಿ ಹುರಿದುಕೊಳ್ಳಿ. ದಪ್ಪ ತಳದ ಪಾತ್ರೆಯೊಂದಕ್ಕೆ ಒಂದೂವರೆ ಕಪ್ ಬೆಲ್ಲ ಹಾಕಿ, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ. ಬೆಲ್ಲ ಚೆನ್ನಾಗಿ ಕರಗಿಸಿ, ನಂತರ ಇದನ್ನು ಸೋಸಿಕೊಳ್ಳಿ. ನಂತರ ಮತ್ತೆ ಬಿಸಿ ಮಾಡಿ ಪಾಕವಾಗಲು ಬಿಡಿ. ಅದಕ್ಕೆ ಅರಳು, ಹುರಿದುಕೊಂಡ ಗೋಡಂಬಿ, ಎಳ್ಳು, ಏಲಕ್ಕಿ ಪುಡಿ, ಗೋಡಂಬಿ ಪುಡಿ ಎಲ್ಲವನ್ನೂ ಹಾಕಿ ಮಿಶ್ರಣ ಮಾಡಿ. ಬೇಕಿದ್ದರೆ ಒಂದೆರಡು ಚಮಚ ತುಪ್ಪ ಸೇರಿಸಿ ಈ ಎಲ್ಲವನ್ನು ಮಿಶ್ರಣ ಮಾಡಿ ಉಂಡೆ ಮಾಡಿ.
ಅವಲಕ್ಕಿ ಉಂಡೆ
ಬೇಕಾಗುವ ಸಾಮಗ್ರಿಗಳು: ಅವಲಕ್ಕಿ - ಅರ್ಧ ಕೆಜಿ, ಒಣಕೊಬ್ಬರಿ ತುರಿ - 2ಚಮಚ, ಗೋಡಂಬಿ - ಸ್ವಲ್ಪ, ಗಸೆಗಸೆ - ಸ್ವಲ್ಪ, ಎಳ್ಳು - ಸ್ವಲ್ಪ, ಬೆಲ್ಲ - ಕಾಲು ಕೆಜಿ (ಪುಡಿ ಮಾಡಿದ್ದು), ತುಪ್ಪ- ಕಾಲು ಕೆಜಿ
ತಯಾರಿಸುವ ವಿಧಾನ: ಅವಲಕ್ಕಿಯನ್ನು ತುಪ್ಪದಲ್ಲಿ ಕರಿದಿಟ್ಟುಕೊಳ್ಳಬೇಕು. ಕೊಬ್ಬರಿತುರಿ, ಗೋಡಂಬಿ, ಗಸೆಗಸೆ, ಎಳ್ಳನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಬೆಲ್ಲ ಕರಗುವಷ್ಟು ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಂಡು ಉಳಿದೆಲ್ಲಾ ಪದಾರ್ಥಗಳನ್ನು ಸೇರಿಸಿ ಉಂಡೆ ಕಟ್ಟಿ.