LIC Jeevan Utsav: ಜೀವನದುದ್ದಕ್ಕೂ ನಿಮಗೆ ಆದಾಯ ನೀಡುತ್ತದೆ ಎಲ್ಐಸಿಯ ಈ ಹೊಸ ಪಾಲಿಸಿ
ಎಲ್ಐಸಿಯು ಹೊಸ ಪಾಲಿಸಿಯೊಂದನ್ನು ಪರಿಚಯಿಸಿದ್ದು ಈ ಯೋಜನೆಯಲ್ಲಿ ನೀವು ಸೇರಿಕೊಳ್ಳುವ ಮೂಲಕ ನಿಮ್ಮ ಜೀವಿತಾವಧಿಯವರೆಗೂ ಆದಾಯವನ್ನು ಪಡೆಯಬಹುದಾಗಿದೆ. ಮರಣದ ಬಳಿಕ ನಾಮಿನಿದಾರರಿಗೆ ಚಕ್ರಬಡ್ಡಿ ಸಮೇತ ಪರಿಹಾರದ ಮೊತ್ತ ಸಿಗುತ್ತದೆ.
ಜೀವನದಲ್ಲಿ ಯಾವಾಗ ಎಂತಹ ಸನ್ನಿವೇಶ ಎದುರಾಗಬಹುದು ಅನ್ನೋದನ್ನು ಊಹಿಸೋಕೂ ಸಾಧ್ಯವಿಲ್ಲ. ಇಂಥಹ ಸಂದರ್ಭಗಳಲ್ಲಿ ಭವಿಷ್ಯದ ಲಾಭಕ್ಕಾಗಿ ಹೂಡಿಕೆ ಮಾಡುವುದು ನಿಜಕ್ಕೂ ಒಂದು ಒಳ್ಳೆಯ ಪ್ಲಾನ್ ಆಗಿದೆ. ಎಲ್ಐಸಿ ಕಂಪನಿಯು ಹೊಸದೊಂದು ಯೋಜನೆಯನ್ನು ಪರಿಚಯಿಸಿದ್ದು ಇದರಲ್ಲಿ ನೀವು ವೈಯಕ್ತಿಕ, ಉಳಿತಾಯ ಹಾಗೂ ಸಂಪೂರ್ಣ ಜೀವ ವಿಮಾ ಪಾಲಿಸಿಯನ್ನು ಹೊಂದಬಹುದಾಗಿದೆ. ಪ್ರೀಮಿಯಂ ಪಾವತಿಯುದ್ದಕ್ಕೂ ನಿಮಗೆ ವಿವಿಧ ಲಾಭಗಳು ಸಿಗಲಿವೆ. ಈ ಹೊಸ ಯೋಜನೆಯನ್ನು ನೀವು ಆಫ್ಲೈನ್ನಲ್ಲಿ ಪರವಾನಗಿ ಪಡೆದ ಏಜೆಂಟ್ಗಳು, ಕಾರ್ಪೋರೇಟ್ ಏಜೆಂಟ್ಗಳು, ಬ್ರೋಕರ್ಗಳು, ವಿಮಾ ಮಾರ್ಕೆಟಿಂಗ್ ಸಂಸ್ಥೆಗಳು ಅಥವಾ ನೇರವಾಗಿ ಎಲ್ಐಸಿಯ ಅಧಿಕೃತ ವೆಬ್ಸೈಟ್ www.licindia.in ನಲ್ಲಿ ನೇರವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಎಲ್ಐಸಿ ಜೀವನ್ ಉತ್ಸವ್ ಯೋಜನೆ
ಎಲ್ಐಸಿ ಜೀವನ್ ಉತ್ಸವ್ ಯೋಜನೆಯನ್ನು 90 ದಿನಗಳ ಮಗುವಿನಿಂದ ಹಿಡಿದು 60 ವರ್ಷದ ಪ್ರಾಯದವರೆಗೂ ಮಾಡಿಸಬಹುದು. ಇದೊಂದು ಜೀವಿತಾವಧಿಯ ಅದಾಯ ಹಾಗೂ ಜೀವಿತಾವಧಿಯ ಎಲ್ಲಾ ಅಪಾಯಗಳಿಗೆ ಭದ್ರತೆ ನೀಡುತ್ತದೆ. ಕನಿಷ್ಟ ಪ್ರೀಮಿಯಂ ಪಾವತಿಗೆ ಐದು ವರ್ಷ ಅವಧಿ ಮೀಸಲಿಡಲಾಗಿದೆ. ಗರಿಷ್ಠ 16 ವರ್ಷಗಳ ಕಾಲ ಪ್ರೀಮಿಯಂ ಪಾವತಿಸಬಹುದಾಗಿದೆ. ಪ್ರೀಮಿಯಂ ಪಾವತಿ ಅವಧಿಯಲ್ಲಿ ಪ್ರತಿ ಪಾಲಿಸಿಗೆ ವರ್ಷದ ಕೊನೆಯಲ್ಲಿ 1000 ರೂಪಾಯಿಗೆ 40 ರೂಪಾಯಿ ಸೇರ್ಪಡೆಯಾಗುತ್ತದೆ.
ಎಲ್ಐಸಿ ಜೀವನ್ ಉತ್ಸವ್ ಯೋಜನೆಯ ಅಡಿಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತವು ಐದು ಲಕ್ಷ ರೂಪಾಯಿ ಆಗಿದ್ದು ಗರಿಷ್ಠ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ಈ ಗರಿಷ್ಠ ಮೂಲ ವಿಮಾ ಮೊತ್ತವನ್ನು ಮಂಡಳಿಯ ಅಂಡರ್ರೈಟಿಂಗ್ ನೀತಿಯನ್ನು ಆಧರಿಸಿ ನೀಡಲಾಗುತ್ತದೆ. ಎಲ್ಐಸಿ ಜೀವನ ಉತ್ಸವ್ ಪಾಲಿಸಿ ಮಾಡಿದ ವ್ಯಕ್ತಿಯು ತನ್ನ ಜೀವಮಾನವಿಡೀ ಈ ಪಾಲಿಸಿಯ ಲಾಭವನ್ನು ಹೊಂದುವ ಅವಕಾಶವನ್ನು ಪಡೆಯುತ್ತಾನೆ. ಈ ಪಾಲಿಸಿಯನ್ನು ಹೊಂದಿರುವ ವ್ಯಕ್ತಿಗೆ ಕಂಪನಿಯು 2 ರೀತಿಯ ಆಯ್ಕೆಯನ್ನು ನೀಡುತ್ತದೆ.
ಮೊದಲನೆಯದಾಗಿ ನೀವು ನಿಯಮಿತ ಆಯ್ಕೆಯನ್ನು ಮಾಡಿಕೊಂಡರೆ ಪ್ರತಿ ವರ್ಷಾಂತ್ಯದಲ್ಲಿ ನಿಮಗೆ ಮೂಲ ಮೊತ್ತದ 10 ಪ್ರತಿಶತ ಆದಾಯ ನಿಮಗೆ ಸಿಗುತ್ತದೆ. ಇನ್ನೊಂದು ಫ್ಲೆಕ್ಸಿ ಎಂಬ ಆಯ್ಕೆ ನಿಮ್ಮದಾಗಿದ್ದರೆ ನೀವು 10 ಪ್ರತಿಶತ ಆದಾಯವನ್ನು ಡ್ರಾ ಮಾಡದೇ ಹಾಗೆಯೇ ಬಿಟ್ಟರೆ 5.5 ಶೇಕಡಾ ಚಕ್ರಬಡ್ಡಿ ಕೂಡ ಸಿಗುತ್ತದೆ.
ವಿಮೆ ಮಾಡಿಸಿದ ವ್ಯಕ್ತಿಯ ಮರಣದ ಸಂದರ್ಭದಲ್ಲಿ ಪಾಲಿಸಿಯು ಜಾರಿಯಲ್ಲಿ ಇದ್ದರೆ ಎಲ್ಐಸಿ ಸಾವಿನ ಮೊತ್ತ ಹಾಗೂ ಗ್ಯಾರಂಟಿಡ್ ಅಡಿಷನ್ಸ್ ಮೊತ್ತ ಪಾವತಿಯಾಗುತ್ತದೆ. ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಹೆಚ್ಚು ಮೊತ್ತ ನಾಮಿನಿಗೆ ಕಂಪನಿಯು ನೀಡುತ್ತದೆ.