Dry Prawns Chutney: ರುಚಿಕರ ಒಣ ಸಿಗಡಿ ಚಟ್ನಿ ರೆಸಿಪಿ; ನುಂಗೆಲ್ ಎಟ್ಟಿ ಚಟ್ನಿ ಜತೆಗಿದ್ದರೆ ಪಾತ್ರೆಯ ಅನ್ನ ಗಂಜಿ ಕ್ಷಣಾರ್ಧದಲ್ಲಿ ಖಾಲಿ
Dry Prawns Chutney: ಮೀನು ಪ್ರಿಯರಿಗೆ ವಿಶೇಷವಾಗಿ ಒಣಮೀನು ಪ್ರಿಯರಿಗೆ ಒಣ ಸಿಗಡಿ ರೆಸಿಪಿ ಅಚ್ಚುಮೆಚ್ಚು. ರುಚಿಕರ ಒಣ ಸಿಗಡಿ ಚಟ್ನಿ ಮಾಡುವುದು ಹೇಗೆ ಎಂದು ತಿಳಿಯೋಣ. ಮಂಗಳೂರು, ಉಡುಪಿಯಲ್ಲಿ ಇದಕ್ಕೆ ಎಟ್ಟಿ ಚಟ್ನಿ ಅಥವಾ ನುಂಗೆಲ್ ಎಟ್ಟಿದ ಚಟ್ನಿ ಎನ್ನುತ್ತಾರೆ. ಮಳೆನಾಡಿನಲ್ಲಿ ಸಿಗಡಿ ಚಟ್ನಿ ಎಂದು ಹೇಳುತ್ತಾರೆ.
Dry Prawns Chutney: ಒಣ ಮೀನು ಕರ್ನಾಟಕದ ಕೆಲವು ಕಡೆಯ ಜನರಿಗೆ ಅಚ್ಚುಮೆಚ್ಚು. ಹೆಚ್ಚಾಗಿ ಸಮುದ್ರದ ಜತೆ ನಂಟು ಹೊಂದಿರುವವರಿಗೆ ಒಣ ಮೀನಿನ ನಂಟೂ ಇರುತ್ತದೆ. ಕರಾವಳಿ ಭಾಗದ ಜನರು ಒಣ ಮೀನಿದ್ದರೆ ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಮೊದಲೆಲ್ಲ ಒಣಮೀನು ಸುಟ್ಟು ತಿನ್ನುತ್ತಿದ್ದರು. ಈಗ ಆಯಿಲ್ ಹಾಕಿ ಫ್ರೈ ಮಾಡುತ್ತಾರೆ. ಈ ಕಾಲದಲ್ಲಿ ಒಣ ಮೀನಿನಿಂದ ಅದ್ಭುತವಾದ ರೆಸಿಪಿ ಮಾಡುತ್ತಾರೆ. ಮಂಗಳೂರು, ಉಡುಪಿ, ಉತ್ತರ ಕನ್ನಡ, ಕುಂದಾಪುರ, ಸುಳ್ಯ, ಪುತ್ತೂರು, ಮಡಿಕೇರಿಯ ಜನರಿಗೆ ಒಣ ಮೀನು ಇಷ್ಟ. ಕೇರಳಿಗರಿಗೂ ಇದು ಅಚ್ಚುಮೆಚ್ಚು. ಅದೇ ರೀತಿ ಮಲೆನಾಡಿನಲ್ಲೂ ಒಣಮೀನಿಗೆ ಬೇಡಿಕೆಯಿದೆ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಒಣ ಮೀನಿಗಿಂತ ಹಸಿಮೀನಿಗೆ ಬೇಡಿಕೆ ಹೆಚ್ಚು. ಒಣ ಮೀನು ಮನೆಯಲ್ಲಿಟ್ಟರೆ ವಾಸನೆ ಬರುತ್ತದೆ ಎಂದು ಸಾಕಷ್ಟು ಜನರು ಒಣಮೀನಿನ ಸಹವಾಸಕ್ಕೆ ಹೋಗುವುದಿಲ್ಲ. ಆದರೆ, ಒಣ ಮೀನಿನ ಖಾದ್ಯಗಳು ತುಂಬಾ ರುಚಿಕರವಾಗಿರುತ್ತವೆ. ಇಂದು ಒಣ ಸಿಗಡಿ ಮೀನಿನಿಂದ ಸುಲಭವಾಗಿ ಹೇಗೆ ಚಟ್ನಿ ಮಾಡುವುದೆಂದು ತಿಳಿಯೋಣ. ಇದೇ ರೆಸಿಪಿಯನ್ನು ಎರಡು ರೀತಿ ಮಾಡಬಹುದು. ಇವತ್ತಿನ ಬಳಕೆಗೆ ಮಾತ್ರ ಚಟ್ನಿ ಬೇಕಿದ್ದರೆ ಹಸಿ ಚಟ್ನಿಯನ್ನೇ ಬಳಸಿ, ಒಂದು ತಿಂಗಳಾದರೂ ಮನೆಯಲ್ಲಿಟ್ಟುಕೊಂಡು ತಿನ್ನುತ್ತಿರಬೇಕಂದ್ರೆ ಅದನ್ನು ಬಾಣಲೆಯಲ್ಲಿ ಫ್ರೈ ಮಾಡಬೇಕು. ಕರಾವಳಿಯವರು ಕುಚ್ಚಲಕ್ಕಿ ಜತೆಗೆ ಸಿಗಡಿ ಚಟ್ನಿ ತಿನ್ನುತ್ತಾರೆ. ಇದಕ್ಕೆ ಎಟ್ಟಿ ಚಟ್ನಿ, ಇಟ್ಟಿ ಚಟ್ನಿ ಎಂದೂ ಹೇಳುತ್ತಾರೆ.
ಒಣಸಿಗಡಿ ಚಟ್ನಿ ಮಾಡಲು ಬೇಕಾದ ಸಾಮಾಗ್ರಿಗಳು
ಒಣಸಿಗಡಿ ಒಂದು ಕಪ್. ಗಾತ್ರ ಚಿಕ್ಕದಿದ್ದರೂ ಓಕೆ, ಸ್ವಲ್ಪ ದೊಡ್ಡದಾಗಿದ್ದರೂ ಓಕೆ. ಒಣ ಸಿಗಡಿ ವಿವಿಧ ಗಾತ್ರಗಳಲ್ಲಿ ದೊರಕುತ್ತದೆ. ಒಂದು ತೆಂಗಿನಕಾಯಿ, ಈರುಳ್ಳಿ ಒಂದು, ಒಂದು ಹತ್ತು ಎಸಲು ಬೆಳ್ಳಳ್ಳಿ ಮತ್ತು ಲವಂಗ ಇರಲಿ. ಕೆಂಪು ಮೆಣಸಿನ ಕಾಯಿ ಎರಡು, ತುಸು ಅರಸಿನಪುಡಿ ಇರಲಿ. ಫ್ರೈ ಮಾಡಲು ತುಸು ಎಣ್ಣೆ ಬೇಕು. ಜತೆಗೆ, ಕರಿಬೇವಿನ ಸೊಪ್ಪು ಸ್ವಲ್ಪ ಇರಲಿ.
ಒಣ ಸಿಗಡಿ ಚಟ್ನಿ ಮಾಡುವ ವಿಧಾನ
- ಮೊದಲಿಗೆ ಸಿಗಡಿಯನ್ನು ಸ್ವಚ್ಛಗೊಳಿಸಿ, ವಾಶ್ ಮಾಡಿ. ಸಿಗಡಿಯ ತಲೆ, ಕೈಕಾಲು ಹೋಗುವಂತೆ ಕ್ಲೀನ್ ಮಾಡಿ.
- ತವಾದಲ್ಲಿ ಈ ಸಿಗಡಿಯನ್ನು ಡ್ರೈ ಆಗಿ ಎರಡು ಮೂರು ನಿಮಿಷ ಹುರಿಯಿರಿ. ಬಿಸಿಬಿಸಿ ಸಿಗಡಿಯನ್ನು ತೆಗೆದುಪಕ್ಕಕ್ಕಿಡಿ.
- ಒಂದು ತವಾಕ್ಕೆ ಎರಡು ಚಮಚ ಎಣ್ಣೆ ಹಾಕಿ. ಅದಕ್ಕೆ ಕೊಂಚ ಕರಿಬೇವಿನ ಎಲೆಗಳು, ಕಟ್ ಮಾಡಿರುವ ಈರುಳ್ಳಿ, ಬೆಳ್ಳುಳ್ಳಿ ಎಸಲುಗಳು, ಕೆಂಪು ಮೆಣಸಿನ ಕಾಯಿ ಹಾಕಿ ಹುರಿಯಿರಿ. ಈರುಳ್ಳಿ ತುಸು ಮೆತ್ತಗೆ ಆದಾಗ ಸ್ಟವ್ ಆಫ್ ಮಾಡಿ ಪಕ್ಕಕ್ಕಿಡಿ.
ಒಂದು ದಿನದ ಬಳಕೆಗೆ ಚಟ್ನಿ: ಮಿಕ್ಸರ್ ಜಾರ್‌ನಲ್ಲಿ ಈ ಪದಾರ್ಥಗಳನ್ನು ಹಾಕಿ. ತೆಂಗಿನಕಾಯಿ ಹಾಕಿ. ಗಮನಿಸಿ, ಒಂದು ದಿನದ ಬಳಕೆಗೆ ಒಂದು ತೆಂಗಿನಕಾಯಿ ಅಗತ್ಯವಿಲ್ಲ. ಅರ್ಧ ಭಾಗ ಸಾಕು. ಒಂದೆರಡು ಚಮಚ ನೀರು ಹಾಕಿ, ಹೆಚ್ಚು ಹಾಕಬೇಡಿ. ಒರಟಾದ ಚಟ್ನಿ ಮಾಡಿ. ತುಂಬಾ ನುಣ್ಣಗೆ ರುಬ್ಬಬೇಡಿ. ಗಮನಿಸಿ, ನೀವು ಒಂದು ದಿನದಲ್ಲಿ ಖಾಲಿ ಮಾಡುವ ಚಟ್ನಿಯಾಗಿದ್ದರೆ ಇದಕ್ಕೆ ಕೊಂಚ ಹುಣಸೆ ಹಾಕಿ, ಮಿಕ್ಸಿ ಮಾಡಿ. ಬಳಿಕ ಇದಕ್ಕೆ ಮೀನು, ಸ್ವಲ್ಪ ಈರುಳ್ಳಿ ಸಣ್ಣಗೆ ಕಟ್ ಮಾಡಿರುವುದು ಹಾಕಿ ಮಿಕ್ಸ್ ಮಾಡಿ. ಊಟದೊಂದಿಗೆ ಸವಿಯಿರಿ. ಗರಿಗರಿ ಚಟ್ನಿ ಬಯಸುವವರಾದರೆ ಮಿಕ್ಸಿಗೆ ಹುಣಸೆ ಹಾಕಬೇಡಿ.
ಹಲವು ದಿನ ಬಳಸಲು ಸಿಗಡಿ ಚಟ್ನಿ: ಮೇಲೆ ಹೇಳಿದಂತೆ ಎಲ್ಲಾ ಪದಾರ್ಥಗಳನ್ನು ಹುಣಸೆ ಮತ್ತು ತೆಂಗಿನಕಾಯಿ ತುರಿ ಹಾಕದೆ ಒರಟಾಗಿ ರುಬ್ಬಿಕೊಳ್ಳಿ. ಇದಾದ ಬಳಿಕ ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ. ಅದಕ್ಕೆ ತೆಂಗಿನ ತುರಿ ಸೇರಿಸಿ. ಕಂದು ಬಣ್ಣ ಬರುವ ತನಕ ಹುರಿಯಿರಿ. ಇದಕ್ಕೆ ಹುಣಸೆ ರಸ ಹಾಕಿ. ಮಿಕ್ಸಿಯಲ್ಲಿ ರುಬ್ಬಿದ್ದ ಮಿಶ್ರಣ ಹಾಕಿ. ಇದಾದ ಬಳಿಕ ಸಿಗಡಿ ಹಾಕಿ. ತೇವಾಂಶ ಆರುವ ತನಕ ಫ್ರೈ ಮಾಡಿ. ಪ್ರತಿದಿನ ಸ್ವಲ್ಪ ಸ್ವಲ್ಪ ಬಳಸಿ, ಸುಮಾರು ಹತ್ತು ಹದಿನೈದು ದಿನ ಊಟದ ಜತೆ ಉಪ್ಪಿನಕಾಯಿ ಎಂಬಂತೆ ಊಟದ ಜತೆ ಸಿಗಡಿ ಚಟ್ನಿ ಬಳಸಬಹುದು.
ವಿಭಾಗ