Mackerel Fish Recipe: ಬಂಗುಡೆ ಮೀನು ಸಾರು, ಬಂಗುಡೆ ಪುಳಿ ಪುಂಚಿ ಮಾಡುವ ವಿಧಾನ, ಮೀನು ಪ್ರಿಯರಿಗೆ ಬಾಯಲ್ಲಿ ನೀರು ಬರಿಸೋ ರೆಸಿಪಿ
Mackerel Fish Pulimunchi: ಬಕ್ರೀದ್ ಹಬ್ಬ ಮಾತ್ರವಲ್ಲದೆ ಮೀನು ಪ್ರಿಯರ ನಿತ್ಯದ ಮೀನೂಟಕ್ಕೆ ಬಂಗುಡೆ ಸೂಕ್ತ. ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿಯಲ್ಲಿ ಜನಪ್ರಿಯವಾಗಿರುವ ಬಂಗುಡೆ ಪುಳಿಪುಂಚಿ ಮತ್ತು ಬಂಗುಡೆ ಮೀನು ಸಾರು ಮಾಡುವ ರೆಸಿಪಿ ಇಲ್ಲಿದೆ.
Mackerel Fish Recipe: ಮುಸ್ಲಿಂ ಬಾಂಧವರ ಹಬ್ಬ ಬಕ್ರೀದ್ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ. ಮನೆ ಮನೆಗಳಲ್ಲಿ ಬಗೆ ಬಗೆಯ ಖಾದ್ಯಗಳ ಪರಿಮಳ ಅಚೀಚೆ ಮನೆಯವರಿಗೂ ಘಮಿಸುವುದು ಸತ್ಯ. ಅದರಲ್ಲೂ ಮೀನಿನ ಖಾದ್ಯಗಳು ಪರಿಮಳ ಹೆಚ್ಚೆ ಬೀರುತ್ತದೆ. ಇಂಡಿಯನ್ ಮ್ಯಾಕೆರೆಲ್ ಎಂದು ಕರೆಯಲ್ಪಡುವ ಬಂಗುಡೆ ಮೀನು ಬಕ್ರಿದ್ ಹಬ್ಬ ಮಾಡೋ ಮುಸ್ಲಿಮರು ಮಾತ್ರವಲ್ಲದೆ ಎಲ್ಲರಿಗೂ ಅಚ್ಚುಮೆಚ್ಚು.
ಹಲವಾರು ದೇಶಗಳಲ್ಲಿ ಈ ಬಗೆಯ ಮೀನನ್ನು ಅದರಲ್ಲೂ ಏಷ್ಯಾದಲ್ಲಿ ಬಳಸಲಾಗುತ್ತದೆ. ಇಂಡೋನೇಷ್ಯಾದಲ್ಲಿ ಕೆಂಬಂಗ, ಗುಜರಾತಿನಲ್ಲು ಬಂಗ್ಡಿ, ಮರಾಠಿಯಲ್ಲಿ ಬಂಗ್ಡಾ, ತುಳು, ಕೊಂಕಣಿ ಮತ್ತು ಕನ್ನಡದಲ್ಲಿ ಬಂಗುಡೆ ಎಂದು ಕರೆಯಲಾಗುತ್ತದೆ. ಈ ಮೀನಿನಿಂದ ಫ್ರೈ, ಸಾರು ಮಾಡಬಹುದು. ಈಗ ನಾವು ಸರಳವಾಗಿ, ಸುಲಭವಾಗಿ ಸಾರು ಮಾಡುವ ವಿಧಾನವನ್ನು ಕಲಿಯೋಣ.
ಬಂಗುಡೆ ಮೀನಲ್ಲಿರುವ ಆರೋಗ್ಯಾಂಶಗಳು
ಇನ್ನೂ ಆರೋಗ್ಯಕ್ಕಂತು ಹೇಳೀ ಮಾಡಿಸಿದ ಆಹಾರ. ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳ ಪ್ರಮಾಣವಿದೆ. ಬಿ12 ನಿಂದ ಬಳಲುವವರಿಗೆ ಮುಖ್ಯ ಆಹಾರ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು ಕೊಬ್ಬಿನ ಅಂಶ ಇಲ್ಲದಿರುವ ಇದನ್ನು ಸೇವಿಸಬಹುದು. ಮಧಮೇಹ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಮೂಳೆಗಳ ಸಾಂದ್ರತೆ ಹಾಗೂ ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಹೀಗಾಗಿ, ಬಂಗುಡೆ ಮೀನು ರುಚಿ ಹಾಗೂ ಆರೋಗ್ಯಕ್ಕೂ ಹಿತ.
ಬಂಗುಡೆ ಸಾರು ಮಾಡುವುದು ಹೇಗೆ?
ಮೀನು ಸಾರು ಮಾಡಲು ಬೇಕಾಗುವ ಸಾಮಗ್ರಿಗಳು
ಬಂಗುಡೆ -4, ಬ್ಯಾಡಗಿ ಮೆಣಸು -10 ರಿಂದ 12, ಗುಂಟೂರು ಮೆಣಸು 8 ರಿಂದ 9, ಅರ್ಧ ಹೋಳು ತೆಂಗಿನಕಾಯಿ, ನಿಂಬೆ ಹಣ್ಣು ಗಾತ್ರದ ಹುಣಸೆ ಹುಳಿ, 4-5 ಎಸಳು ಬೆಳ್ಳುಳ್ಳಿ ಒಂದು ಟೀ ಸ್ಪೂನ್ ಕೊತ್ತಂಬರಿ ಬೀಜ, ಹರಶಿನ ಪುಡಿ, ಮೆಂತ್ಯೆ, ಕರಿಮೆಣಸು, ಈರುಳ್ಳಿ 1, ಹಸಿ ಮೆಣಸು 2, ಸಣ್ಣ ಗಾತ್ರದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬಂಗುಡೆ ಮೀನನ್ನು ಕತ್ತರಿಸಿ ಚೆನ್ನಾಗಿ ತೊಳೆದಿಡಿ. ಮೇಲೆ ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಸಾಲೆಗೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಹೆಚ್ಚಿದ ಶುಂಠಿಯನ್ನು ಸೇರಿಸಿ. ಬಳಿಕ ಮಣ್ಣಿನ ಪಾತ್ರೆ ಅಥವಾ ಕಡಾಯಿಯಲ್ಲಿ ಮಸಾಲೆಯನ್ನು ಚೆನ್ನಾಗಿ ಕುದಿಸಿ. ಈ ವೇಳೆ ಉಪ್ಪು ಹಾಕಿ. ಹೀಗೆ ಕುದಿಯುತ್ತಿರುವಾಗ ಕತ್ತರಿಸಿದ ಮೀನನ್ನು ಹಾಕಿ. ಮತ್ತೆ ಮುಚ್ಚಳ ಮುಚ್ಚಿ ಚೆನ್ನಾಗಿ ಕುದಿಸಿ, ಮೀನು ಬೆಂದ ಬಳಿಕ ಕೆಳಗಿಳಿಸಿದರೆ ಮೀನು ಸಾರು ರೆಡಿ.
ಬಂಗುಡೆ ಪುಳಿ ಮುಂಚಿ ಮಾಡುವುದು ಹೇಗೆ?
ಪುಳಿಮುಂಚಿ ಎನ್ನುವುದು ಕರಾವಳಿಯಲ್ಲಿ ಹೆಚ್ಚು ಜನಪ್ರಿಯ ಅಡುಗೆ. ಇದೀಗ ಕರಾವಳಿ ಮಾತ್ರವಲ್ಲದೆ ದಕ್ಷಿಣ ಭಾರತೀಯರು ಪುಳಿಮುಂಚಿ ಖಾದ್ಯ ತಯಾರಿಸುತ್ತಾರೆ. ಬಂಗುಡೆ ಪುಳಿಮುಂಚಿ ಮಾಡಲು ಬೇಕಾಗುವ ಸಾಮಗ್ರಿಗಳು
ಬಂಗುಡೆ 4ರಿಂದ 5, ಬ್ಯಾಡಗಿ ಮೆಣಸು 10-12, ಗುಂಟೂರು ಮೆಣಸು 8-9 , ನಿಂಬೆಹಣ್ಣು ಗಾತ್ರದ ಹುಣಸೆ ಹುಳಿ, ಮೆಂತ್ಯೆ 1 ಟೀ ಸ್ಪೂನ್ , ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಮೀನನ್ನು ಕತ್ತರಿಸಿ ಚೆನ್ನಾಗಿ ತೊಳೆದಿಡಿ. ಮೇಲ್ ಹೇಳಿದ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿ. ಮಣ್ಣಿನ ಪಾತ್ರೆ ಅಥವಾ ಅಗಲ ಬಾಯಿಯ ಪಾತ್ರೆ ಇದ್ದರೆ ಅದರಲ್ಲಿ ಮಸಾಲೆ ಜತೆಗೆ ಉಪ್ಪು ಬೆರೆಸಿ ಕುದಿಸುತ್ತಿರಿ. ಈ ವೇಳೆ ಕತ್ತರಿಸಿ ಮೀನನ್ನು ಮಸಾಲೆ ಜತೆ ಸೇರಿಸಿ. ನೀರು ಹಾಕಬೇಡಿ. ಗ್ಯಾಸ್ ಸಿಮ್‌ನಲಿಟ್ಟು ಚೆನ್ನಾಗಿ ಬೇಯಲು ಬಿಡಿ.
ನಂತರ ಚಪಾತಿ, ದೋಸೆ, ಅನ್ನದೊಂದಿಗೆ ತಿಂದರೆ ವಾವ್ ಎನ್ನುವುದು ಖಚಿತ.
- ಅಕ್ಷರ ಕಿರಣ್
ವಿಭಾಗ