ಮೊಸರು ಮಿಕ್ಕಿದೆ ಅಂತ ಎಸಿಬೇಡಿ; ಮೊಸರನ್ನದಿಂದ ದಹಿವಡಾವರೆಗೆ ಇದ್ರಿಂದ ಎಷ್ಟೆಲ್ಲಾ ಖಾದ್ಯ ತಯಾರಿಸಬಹುದು ನೋಡಿ-food recipes try these delicious curd recipes 6 ways to use leftover curd in cooking curd recipes in kannada arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮೊಸರು ಮಿಕ್ಕಿದೆ ಅಂತ ಎಸಿಬೇಡಿ; ಮೊಸರನ್ನದಿಂದ ದಹಿವಡಾವರೆಗೆ ಇದ್ರಿಂದ ಎಷ್ಟೆಲ್ಲಾ ಖಾದ್ಯ ತಯಾರಿಸಬಹುದು ನೋಡಿ

ಮೊಸರು ಮಿಕ್ಕಿದೆ ಅಂತ ಎಸಿಬೇಡಿ; ಮೊಸರನ್ನದಿಂದ ದಹಿವಡಾವರೆಗೆ ಇದ್ರಿಂದ ಎಷ್ಟೆಲ್ಲಾ ಖಾದ್ಯ ತಯಾರಿಸಬಹುದು ನೋಡಿ

Leftover Curd Recipes: ಕೆಲವೊಮ್ಮೆ ಮನೆಯಲ್ಲಿ ಮೊಸರು ಮಿಕ್ಕಬಹುದು. ಅದನ್ನು ಎಸಿಯೋಣ ಅಂದ್ರೆ ಮೊಸರು ವೇಸ್ಟ್‌ ಆಗುತ್ತಲ್ಲ ಎಂಬ ಚಿಂತೆ ಕಾಡಬಹುದು. ಅದಕ್ಕೆ ಮೊಸರಿನಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಮೊಸರನ್ನ ಅಥವಾ ಮೊಸರು ಬಜ್ಜಿ ಅಷ್ಟೇ ಅಲ್ಲ ಇದ್ರಿಂದ ಇನ್ನೂ ಏನೆಲ್ಲಾ ಮಾಡ್ಬಬಹುದು ನೋಡಿ.

ಮೊಸರು ಮಿಕ್ಕಿದೆ ಅಂತ ಎಸಿಬೇಡಿ; ಇದ್ರಿಂದ ಎಷ್ಟೆಲ್ಲಾ ಖಾದ್ಯ ತಯಾರಿಸಬಹುದು ನೋಡಿ
ಮೊಸರು ಮಿಕ್ಕಿದೆ ಅಂತ ಎಸಿಬೇಡಿ; ಇದ್ರಿಂದ ಎಷ್ಟೆಲ್ಲಾ ಖಾದ್ಯ ತಯಾರಿಸಬಹುದು ನೋಡಿ

ಮೊಸರು ಇಲ್ಲದ ಮನೆಯೇ ಇಲ್ಲ ಎನ್ನಬಹುದು. ನಮ್ಮ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಇರುವ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ಬೇಸಿಗೆಯಲ್ಲಂತೂ ಮೊಸರು, ಮಜ್ಜಿಗೆಯಿಲ್ಲದೇ ದಿನ ಕಳೆಯುವುದೇ ಕಷ್ಟ. ದೇಹವನ್ನು ತಂಪಾಗಿರಿಸುವುದರ ಜೊತೆಗೆ ಅಗತ್ಯ ಪೋಷಕಾಂಶಗಳನ್ನು ಸಹ ನೀಡುತ್ತದೆ. ಕೆಲವೊಮ್ಮೆ ಮನೆಯಲ್ಲಿ ಮೊಸರು ಮಿಕ್ಕಬಹುದು. ಅದನ್ನು ಎಸಿಯೋಣ ಅಂದ್ರೆ ಮೊಸರು ವೇಸ್ಟ್‌ ಆಗುತ್ತಲ್ಲ ಎಂಬ ಬೇಸರ ಕಾಡುತ್ತೆ, ಹಾಗಂತ ಚಿಂತಿಸುವ ಅಗತ್ಯವಿಲ್ಲ, ಮೊಸರಿನಿಂದ ವಿಧ ವಿಧದ ಅಡುಗೆಗಳನ್ನು ತಯಾರಿಸಬಹುದು. ಮಿಕ್ಕಿದ ಮೊಸರಿನಿಂದ ಮೊಸರನ್ನ ಅಥವಾ ಮೊಸರು ಬಜ್ಜಿ ಮಾತ್ರ ತಯಾರಿಸಲಾಗುತ್ತದೆ ಎಂದು ನೀವಂದುಕೊಂಡಿದ್ದರೆ ಖಂಡಿತ ಅಲ್ಲ. ಇಲ್ಲಿದೆ ನೋಡಿ ಮೊಸರಿನಿಂದ ತಯಾರಿಸಬಹುದಾದ ಅಡುಗೆ ಐಡಿಯಾಗಳು. ಮೊಸರಿನ ಪ್ರಯೋಜನಗಳನ್ನು ತಿಳಿದವರು ಯಾರೂ ಅದನ್ನು ವೇಸ್ಟ್‌ ಮಾಡಲು ಇಷ್ಟ ಪಡುವುದಿಲ್ಲ. ಬದಲಿಗೆ ಅದರಿಂದ ಹೊಸ ರುಚಿ ತಯಾರಿಸಿ ಆಸ್ವಾದಿಸಬಹುದು.

ಹಾಲಿನಿಂದ ಮೊಸರು ತಯಾರಾಗುವ ಪ್ರಕ್ರಿಯೆಗೆ ಪ್ರಮುಖ ಕಾರಣ ಲ್ಯಾಕ್ಟಿಕ್‌ ಆಸಿಡ್‌ ಎಂಬ ಬ್ಯಾಕ್ಟೀರಿಯ. ಇದು ಹಾಲನ್ನು ಮೊಸರಾಗಿ ಪರಿವರ್ತಿಸುತ್ತದೆ. ಪ್ರೋಬಯಾಟಿಕ್‌ನಿಂದ ಸಮೃದ್ಧವಾಗಿರುವ ಮೊಸರನ್ನು ಕೆಲವೆಡೆ ಯೊಗರ್ಟ್‌ ಎಂದೂ ಕರೆಯುತ್ತಾರೆ. ಇದು ಕರುಳಿನ ಆರೋಗ್ಯಕ್ಕೆ, ಜೀರ್ಣಕ್ರಿಯೆ ವೃದ್ಧಿಸಲು ಹೀಗೆ ಒಟ್ಟಾರೆ ದೇಹಕ್ಕೆ ಉತ್ತಮ ಆರೋಗ್ಯ ನೀಡುತ್ತದೆ. ಇಷ್ಟೆಲ್ಲಾ ಪ್ರಯೋಜನವಿರುವ ಮೊಸರು ಮಿಕ್ಕಿದ್ದರೆ ವೇಸ್ಟ್‌ ಮಾಡಬೇಡಿ, ಈ ಅಡುಗೆಗಳನ್ನು ತಯಾರಿಸಿ.

ಮೊಸರನ್ನ

ಮೊಸರನ್ನ ದಕ್ಷಿಣ ಭಾರತದ ಜನಪ್ರಿಯ ಅಡುಗೆಗಳಲ್ಲಿ ಒಂದು. ಕೆನೆಭರಿತ ಮೊಸರು ಮತ್ತು ಅನ್ನ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಅದಕ್ಕೆ ಸಾಸಿವೆ, ಕರಿಬೇವಿನ ಎಲೆ, ಕೆಂಪು ಮೆಣಸಿನಕಾಯಿಯ ಒಗ್ಗರಣೆ ಮಾಡಿ ಸವಿದರೆ ಆಹಾ ಸ್ವರ್ಗಸುಖ. ಮಸಾಲೆಯ ಪರಿಮಳದಿಂದ ಕೂಡಿದ ಮೊಸರನ್ನ ಬಹಳ ರುಚಿಕಟ್ಟಾಗಿರುತ್ತದೆ. ಇದಕ್ಕೆ ಈರುಳ್ಳಿ, ಶುಂಠಿ, ಕೊತ್ತೊಂಬರಿ ಸೊಪ್ಪು, ದಾಳಿಂಬೆ ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಸಹ ಸೇರಿಸಬಹುದು. ಈ ಮೊಸರನ್ನ ನಿಮ್ಮ ಹಸಿವನ್ನು ತಣಿಸುತ್ತದೆ. ಬೇಸಿಗೆಯಲ್ಲಿ ಮೊಸರನ್ನ ದೇಹವನ್ನು ತಂಪಾಗಿರಿಸುವುದರಲ್ಲಿ ಎರಡು ಮಾತಿಲ್ಲ.

ಶ್ರೀಖಂಡ

ಮೊಸರು ಉಳಿದರೆ ಚಿಂತಿಸಬೇಡಿ. ಅದರಿಂದ ಸಿಹಿಯನ್ನು ತಯಾರಿಸಬಹುದು. ಭಾರತದ ಸಿಹಿತಿಂಡಿಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದಿರುವ ಶ್ರೀಖಂಡವನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಕೆನೆಭರಿತ ಮೊಸರಿನಿಂದ ಶ್ರೀಖಂಡ ತಯಾರಿಸಿದರೆ ಎಲ್ಲರಿಗೂ ಇಷ್ಟವಾಗುವುದು ಖಂಡಿತ. ಮೊಸರನ್ನು ಒಂದು ಬಟ್ಟೆಯಲ್ಲಿ ಹಾಕಿ ನೀರನ್ನು ಸಂಪೂರ್ಣವಾಗಿ ಸೋಸಿ, ಅದಕ್ಕೆ ಸಕ್ಕರೆ, ಏಲಕ್ಕಿ, ಕೇಸರಿ ದಳಗಳು ಮತ್ತು ಚಿಕ್ಕದಾಗಿ ಕತ್ತರಿಸಿದ ಗೋಡಂಬಿ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಕ್ರೀಮಿ ಟೆಕ್ಸ್ಚರ್‌ ಇರುವ ಶ್ರೀಖಂಡವನ್ನು ಫ್ರಿಜ್‌ನಲ್ಲಿಟ್ಟು ತಂಪಾಗಿಸಿ ತಿಂದರೆ ನಿಜಕ್ಕೂ ಅದ್ಭುತ.

ಮೊಸರಿನ ಪರಾಠ

ಮಸಾಲೆಗಳ ವಿಶಿಷ್ಟ ಸುವಾಸನೆ ಇರುವ ಪರಾಠ ಭಾರತೀಯರು ಇಷ್ಟ ಪಡುವ ತಿಂಡಿಗಳಲ್ಲಿ ಒಂದು. ಗೊಧಿಹಿಟ್ಟಿಗೆ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ, ಕೊತ್ತೊಂಬರಿಸೊಪ್ಪು, ಗರಂಮಸಾಲ ಪುಡಿ ಮತ್ತು ಉಪ್ಪು ಸೇರಿಸಿ. ಅದಕ್ಕೆ ನೀರು ತೆಗೆದ ಮೊಸರು ಹಾಕಿ ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. ಚಿಕ್ಕ ಚಿಕ್ಕ ಉಂಡೆಗಳನ್ನು ತೆಗೆದುಕೊಂಡು ಲಟ್ಟಿಸಿ. ಎಣ್ಣೆ ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ಉಪ್ಪಿನಕಾಯಿ ಇದಕ್ಕೆ ಬೆಸ್ಟ್‌ ಕಾಂಬಿನೇಷನ್‌.‌

ದಹಿ ವಡಾ

ದಹಿ ವಡಾ ಅಥವಾ ಮೊಸರು ವಡೆ ಮಾಡಲು ಮೊದಲಿಗೆ ನೆನೆಸಿದ ಉದ್ದಿನ ಬೇಳೆಗೆ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಗಟ್ಟಿಯಾಗಿ ಹಿಟ್ಟನ್ನು ರುಬ್ಬಿಕೊಳ್ಳಬೇಕು. ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಬೇಕು. ವಡೆಗೆ ಮೇಲೆ ಮೊಸರು ಹಾಕಿ, ಅದಕ್ಕೆ ಚಾಟ್‌ ಮಸಾಲ, ಸ್ವೀಟ್‌ ಚಟ್ನಿ ಸೇರಿಸಿದರೆ ದಹಿ ವಡಾ ರೆಡಿಯಾಗುತ್ತದೆ. ಮೃದುವಾಗಿರುವ ಮತ್ತು ಹುಳಿ, ಖಾರ ಮತ್ತು ಸಿಹಿಯ ಮಿಶ್ರಣದ ವಡೆ ನಾಲಿಗೆಯ ಚಪಲವನ್ನು ತೀರಿಸಿಕೊಳ್ಳಲು ಬೆಸ್ಟ್‌.

ಕರ್ಡ್ ಸ್ಮೂಥಿ

ಇನ್ನು ಬೇಸಿಗೆ ಆರಂಭವಾಗುತ್ತದೆ. ಈ ಕಾಲಕ್ಕೆ ಯಾವುದಾದರೂ ತಂಪಾಗಿರುವ ಅಷ್ಟೇ ದೇಹಕ್ಕೆ ಹಿತವೆನಿಸುವ ಆಹಾರ ಹುಡುಕುತ್ತಿದ್ದರೆ ಕರ್ಡ್‌ ಸ್ಮೂಥಿ ಬೆಸ್ಟ್‌. ಕೆನೆಭರಿತ ಮೊಸರಿಗೆ ಹಣ್ಣುಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಊಟಕ್ಕೆ ಸಂಪೂರ್ಣ ಮುಕ್ತಾಯ ನೀಡುತ್ತದೆ ಕರ್ಡ್‌ ಸ್ಮೂಥಿ. ಬೇಸಿಗೆಯಲ್ಲಿ ಇದು ದೇಹವನ್ನು ರಿಫ್ರೆಶ್‌ ಮಾಡುವುದರ ಜೊತೆಗೆ ಆರೋಗ್ಯಕರ ಪಾನೀಯವೂ ಹೌದು.

ಮಜ್ಜಿಗೆ ಹುಳಿ

ಮನೆಯಲ್ಲಿ ಮೊಸರು ಜಾಸ್ತಿಯಿದ್ದರೆ ಅದರಿಂದ ಮಜ್ಜಿಗೆ ಹುಳಿ ತಯಾರಿಸಿ. ಮೊಸರಿಗೆ ನೀರು ಸೇರಿಸಿ ಗಟ್ಟಿ ಮಜ್ಜಿಗೆ ತಯಾರಿಸಿಕೊಳ್ಳಿ. ಅದಕ್ಕೆ ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ, ಕರಿಬೇವು, ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಗ್ಯಾಸ್‌ ಆಫ್‌ ಮಾಡಿ, ಅದಕ್ಕೆ ಮಜ್ಜಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಸೇರಿಸಿ. ಅನ್ನ ಮತ್ತು ಮಜ್ಜಿಗೆ ಹುಳಿ ಸವಿಯಲು ಬಹಳ ರುಚಿಯಾಗಿರುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point