ದೀಪಾವಳಿಗೆ ಸ್ಪೆಷಲ್ ಸ್ಪೀಟ್ ಮಾಡ್ಬೇಕು ಅಂತಿದ್ರೆ ಕ್ಯಾರೆಟ್ ಬಾದಾಮ್ ಹಲ್ವಾ ಮಾಡಿ; ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುವ ರೆಸಿಪಿ ಇದು
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿ ತಿನಿಸುಗಳನ್ನು ಮಾಡುವ ಪದ್ಧತಿ ಕೆಲವೆಡೆ ಇದೆ. ಈ ದೀಪಾವಳಿಗೆ ನೀವು ವಿಶೇಷವಾಗಿರುವ ತಿಂಡಿ ಮಾಡ್ಬೇಕು ಅಂತಿದ್ರೆ ಕ್ಯಾರೆಟ್ ಬಾದಾಮ್ ಹಲ್ವಾ ಮಾಡಿ. ಹೆಸರು ಕೇಳಿದ್ರೆ ಬಾಯಲ್ಲಿ ನೀರೂರಿಸುವ ಈ ರೆಸಿಪಿಯನ್ನು ಸಿಂಪಲ್ ಆಗಿ ಮನೆಯಲ್ಲೇ ಮಾಡಬಹುದು.
ದೀಪಾವಳಿ ಹಬ್ಬ ಸಮೀಪದಲ್ಲಿದೆ. ಎಲ್ಲೆಲ್ಲೋ ಬೆಳಕಿನ ಹಬ್ಬದ ಸಂಭ್ರಮ ಜೋರಾಗಿದೆ. ದೀಪಾವಳಿ ಹಬ್ಬ ಎಂದರೆ ಪಟಾಕಿ ಮಾತ್ರವಲ್ಲ, ಸಿಹಿ ತಿನಿಸುಗಳು ಕೂಡ ಹಬ್ಬದ ಸಂಭ್ರಮ ಹೆಚ್ಚಿಸುತ್ತವೆ. ಈ ವರ್ಷದ ಹಬ್ಬಕ್ಕೆ ನೀವು ವಿಶೇಷವಾದ ತಿನಿಸು ಮಾಡಬೇಕು ಎಂದರೆ ಸಿಂಪಲ್ ಆಗಿರುವ ಕ್ಯಾರೆಟ್ ಬಾದಾಮಿ ಹಲ್ವಾ ಮಾಡಲು ಪ್ರಯತ್ನಿಸಿ. ಈ ಹಲ್ವಾ ಸಾಮಾನ್ಯ ಕ್ಯಾರೆಟ್ ಹಲ್ವಾಕ್ಕಿಂತ ಭಿನ್ನವಾಗಿದ್ದು ರುಚಿಯು ಸಖತ್ ಆಗಿರುತ್ತೆ. ಇದನ್ನು ಮಾಡೋದು ಹೇಗೆ ನೋಡಿ.
ಕ್ಯಾರೆಟ್ ಬಾದಾಮ್ ಹಲ್ವಾ
ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ – ಅರ್ಧ ಕೆಜಿ, ಬಾದಾಮಿ – ಅರ್ಧ ಕಪ್, ಹಾಲು – 1ಕಪ್, ತುಪ್ಪ – ಕಾಲು ಕಪ್, ಸಕ್ಕರೆ – ಅರ್ಧ ಕಪ್, ಕೇಸರಿ – ಚಿಟಿಕೆ
ಕ್ಯಾರೆಟ್ ಬಾದಾಮ್ ಹಲ್ವಾ ಮಾಡುವ ವಿಧಾನ
ಮೊದಲು ಕ್ಯಾರೆಟ್‌ಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಕುಕ್ಕರ್‌ನಲ್ಲಿ ಹಾಕಿ. ಅದಕ್ಕೆ ಒಂದು ಕಪ್ ಹಾಲು ಸೇರಿಸಿ. ಇದಕ್ಕೆ ಚಿಟಿಕೆ ಕೇಸರಿ ದಳ ಹಾಕಿ. ಒಂದೆರಡು ವಿಶಲ್ ಕೂಗಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ಮೇಲೆ ಇದನ್ನು ಮಿಕ್ಸಿನಲ್ಲಿ ರುಬ್ಬಿಕೊಳ್ಳಿ. ನಂತರ ಮೊದಲೇ ನೆನೆಸಿಟ್ಟುಕೊಂಡ ಬಾದಾಮಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿಟ್ಟುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಇದಕ್ಕೆ ಪೇಸ್ಟ್ ಮಾಡಿಟ್ಟುಕೊಂಡ ಬಾದಾಮಿ ಹಾಗೂ ರುಬ್ಬಿಕೊಂಡ ಕ್ಯಾರೆಟ್ ಮಿಶ್ರಣ ಸೇರಿಸಿ. ಇದನ್ನ ತುಪ್ಪದ ಜೊತೆ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬಾದಾಮಿ, ಕ್ಯಾರೆಟ್ ಪೇಸ್ಟ್ ತಳ ಬಿಡಲು ಆರಂಭಿಸಿದಾಗ ಮೇಲ್ಗಡೆಯಿಂದ ಸಕ್ಕರೆ ಸುರಿಯಿರಿ. ಸಕ್ಕರೆ ಚೆನ್ನಾಗಿ ಕರಗಿದ ಮೇಲೆ ಪಾಕವನ್ನ ಚೆನ್ನಾಗಿ ತಿರುಗಿಸಿ. ಈ ನಿಮ್ಮ ಮುಂದೆ ರುಚಿಯಾದ ಕ್ಯಾರೆಟ್ ಬಾದಾಮ್ ಹಲ್ವಾ ಸವಿಯಲು ಸಿದ್ಧ.
ನೋಡಿದ್ರಲ್ಲ ಕ್ಯಾರೆಟ್ ಬಾದಾಮ್ ಹಲ್ವಾ ಮಾಡೋದು ತುಂಬಾನೇ ಸುಲಭ. 20 ನಿಮಿಷಗಳಲ್ಲಿ ಈ ಸ್ವೀಟ್ ರೆಡಿಯಾಗುತ್ತೆ. ಕಡಿಮೆ ಸಾಮಾಗ್ರಿ ಬಳಸಿ ಮಾಡುವ ಈ ರೆಸಿಪಿ ರುಚಿಯ ಮಟ್ಟಿಗೆ ಮಾತಿಲ್ಲ. ಸಖತ್ ಟೇಸ್ಟಿ ಆಗಿರುತ್ತದೆ. ನೋಡಿದ್ರಲ್ಲ, ಕ್ಯಾರೆಟ್ ಬಾದಾಮ್ ಹಲ್ವಾ ಹೇಗೆ ಮಾಡೋದು ಅಂತ ಈ ದೀಪಾವಳಿಗೆ ಈ ರೆಸಿಪಿ ಮಾಡೋದು ಮಿಸ್ ಮಾಡ್ಬೇಡಿ.