ಏನಾದರೂ ಸಿಹಿ ಖಾದ್ಯ ಬೇಕು ತಿನ್ನಬೇಕು ಅನಿಸಿದರೆ ಗೋಧಿ ಹಲ್ವಾ ಮಾಡಿ ನೋಡಿ: ತಿನ್ನಲೂ ರುಚಿ, ಆರೋಗ್ಯಕ್ಕೂ ಹಿತ
ಮನೆಗೆ ಯಾರಾದರೂ ಅತಿಥಿ ಬಂದರೆ ಈ ಗೋಧಿ ಹಲ್ವಾವನ್ನು ಮಾಡಿ ಬಡಿಸಬಹುದು. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಈ ಸಿಹಿ ಭಕ್ಷ್ಯವನ್ನು ಹಬ್ಬಗಳ ಸಮಯದಲ್ಲಿ ನೈವೇದ್ಯವಾಗಿಯೂ ದೇವರಿಗೆ ಇಡಬಹುದು. ಈ ಗೋಧಿ ಹಲ್ವಾ ತಯಾರಿಸುವುದು ಹೇಗೆ, ಎಂಬುದು ಇಲ್ಲಿದೆ.
ಗೋಧಿಯಿಂದ ಮಾಡಿದ ಖಾದ್ಯಗಳು ರುಚಿಯಾಗಿರುವುದು ಮಾತ್ರವಲ್ಲದೆ ಶಕ್ತಿಯನ್ನೂ ನೀಡುತ್ತದೆ. ಸಿಹಿ ಪಾಕವಿಧಾನಗಳನ್ನು ತಯಾರಿಸುವುದು ತುಂಬಾ ಕಷ್ಟ ಎಂದು ಬಹುತೇಕರು ಅಂದುಕೊಳ್ಳುತ್ತಾರೆ. ಆದರೆ, ಕೆಲವು ಸಿಹಿ ಖಾದ್ಯಗಳನ್ನು ಮಾಡುವುದು ತುಂಬಾ ಸುಲಭ. ನಿಮಗೆ ಸಿಹಿ ಖಾದ್ಯಗಳನ್ನು ತಿನ್ನುವ ಬಯಕೆ ಉಂಟಾಗಿದ್ದರೆ, ಈ ಗೋಧಿಯಿಂದ ತಯಾರಿಸಲಾಗುವ ಹಲ್ವಾವನ್ನು ಸವಿಯಬಹುದು. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಮನೆಗೆ ಯಾರಾದರೂ ಅತಿಥಿ ಬಂದರೆ ಈ ಗೋಧಿ ಹಲ್ವಾವನ್ನು ಮಾಡಿ ಬಡಿಸಬಹುದು. ಈ ಸಿಹಿ ಭಕ್ಷ್ಯವನ್ನು ಹಬ್ಬಗಳ ಸಮಯದಲ್ಲಿ ನೈವೇದ್ಯವಾಗಿಯೂ ದೇವರಿಗೆ ಇಡಬಹುದು. ಇದನ್ನು ಮಾಡುವುದು ಹೇಗೆ, ಎಂಬುದು ಇಲ್ಲಿದೆ.
ಗೋಧಿ ಹಲ್ವಾ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು- ಒಂದು ಕಪ್, ತುಪ್ಪ- ಒಂದು ಕಪ್, ನೀರು- ಎರಡು ಕಪ್, ತುರಿದ ಬೆಲ್ಲ- ಒಂದು ಕಪ್, ಏಲಕ್ಕಿ ಪುಡಿ- ಚಿಟಿಕೆ, ಒಣದ್ರಾಕ್ಷಿ ಹಾಗೂ ಗೋಡಂಬಿ- ಸ್ವಲ್ಪ.
ಗೋಧಿ ಹಲ್ವಾ ರೆಸಿಪಿ ಮಾಡುವ ವಿಧಾನ: ಮೊದಲಿಗೆ ಸ್ಟೌವ್ ಮೇಲೆ ಕಡಾಯಿ ಮೇಲಿಟ್ಟು ಸ್ವಲ್ಪ ತುಪ್ಪ ಹಾಕಿ, ಗೋಧಿ ಹಿಟ್ಟು ಹಾಕಿ ಹುರಿಯಿರಿ. ಹೆಚ್ಚಿನ ಉರಿಯಲ್ಲಿ ಇಡಬಾರದು, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಒಂದೇ ಬಾರಿಗೆ ತುಪ್ಪ ಹಾಕದೆ, ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗಂಟಾಗದಂತೆ ತಡೆಯಲು ಮತ್ತು ಸುಟ್ಟು ಹೋಗದಂತೆ ತಡೆಯಲು ನಿರಂತರವಾಗಿ ಬೆರೆಸಿ. ಹೀಗಾಗಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರು ಸೇರಿಸಿದ ನಂತರ ಹಿಟ್ಟು ಮೃದುವಾಗುತ್ತದೆ. ನಂತರ ತುರಿದ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲವು ಶಾಖದಲ್ಲಿ ಕರಗಿ ನೀರಾಗುತ್ತದೆ. ಈ ಮಿಶ್ರಣವು ಬಾಣಲೆಗೆ ಅಂಟಿಕೊಳ್ಳದಂತೆ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಸಂಪೂರ್ಣ ಮಿಶ್ರಣವು ದಪ್ಪವಾಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಾಕಿ ಮಿಶ್ರಣ ಮಾಡಿ, ನಂತರ ಸ್ಟೌವ್ ಆಫ್ ಮಾಡಿ. ನಂತರ ತಟ್ಟೆಗೆ ತುಪ್ಪವನ್ನು ಹರಡಿ ಮಿಶ್ರಣವನ್ನು ಅದಕ್ಕೆ ಹಾಕಿ.
ಗೋಧಿ ಹಲ್ವಾಗೆ ಸಕ್ಕರೆಯನ್ನು ಬಳಸದಿರುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಸಿಹಿತಿಂಡಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಪದಾರ್ಥಗಳನ್ನು ಬಳಸಲಾಗಿದೆ. ಗೋಧಿ ಹಿಟ್ಟು ಕೂಡ ಸ್ವಲ್ಪ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಬೆಲ್ಲದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚಯಾಪಚಯವನ್ನು ನಿಯಂತ್ರಿಸುತ್ತದೆ.
ಬಹುತೇಕ ವೈದ್ಯರು ದಿನವೂ ಬೆಲ್ಲ ತಿನ್ನಿ ಎಂದು ಹೇಳುತ್ತಾರೆ. ಇದು ಹೊಟ್ಟೆಯನ್ನು ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ. ಇದು ಹೊಟ್ಟೆ ಉಬ್ಬರವನ್ನು ತಡೆಯುತ್ತದೆ. ಈ ಗೋಧಿ ಹಲ್ವಾ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಈ ಹಲ್ವಾಗೆ ತುಪ್ಪವನ್ನು ಸೇರಿಸುವುದರಿಂದ ಅಗತ್ಯ ಪೋಷಕಾಂಶಗಳು ಇದರಲ್ಲಿವೆ. ಈ ಗೋಧಿ ಹಲ್ವಾವನ್ನು ಮಕ್ಕಳಿಗೆ ಆಗಾಗ ತಿನ್ನಿಸುವುದರಿಂದ ಅವರು ಬಲಶಾಲಿಯಾಗುತ್ತಾರೆ. ಒಂದು ಬಾರಿ ಮಾಡಿದ ನಂತರ ನಿಮಗೆ ಇದನ್ನು ಮತ್ತೆ ಮತ್ತೆ ಮಾಡಿ ತಿನ್ನಬೇಕು ಅನಿಸುತ್ತೆ ನೋಡಿ. ಇವತ್ತೇ ಟ್ರೈ ಮಾಡಿ, ಮಕ್ಕಳು ಖಂಡಿತಾ ಇಷ್ಟಪಟ್ಟು ತಿಂತಾರೆ.