Forest Tales: ಕರ್ನಾಟಕದ ಆನೆಗಳಿಗೆ ಅರ್ಥವಾಗೋದು ಯಾವ ಭಾಷೆ: ಸಂವಹನದ ಹಿಂದಿನ ಶತಮಾನದ ಹಾದಿ
ಕನ್ನಡ ಸುದ್ದಿ  /  ಜೀವನಶೈಲಿ  /  Forest Tales: ಕರ್ನಾಟಕದ ಆನೆಗಳಿಗೆ ಅರ್ಥವಾಗೋದು ಯಾವ ಭಾಷೆ: ಸಂವಹನದ ಹಿಂದಿನ ಶತಮಾನದ ಹಾದಿ

Forest Tales: ಕರ್ನಾಟಕದ ಆನೆಗಳಿಗೆ ಅರ್ಥವಾಗೋದು ಯಾವ ಭಾಷೆ: ಸಂವಹನದ ಹಿಂದಿನ ಶತಮಾನದ ಹಾದಿ

Elephants communication ಆನೆಗಳಿಗೂ ಸಂವಹನ ಭಾಷೆಯಿದೆ. ಅವುಗಳಿಗೆ ನೀಡುವ ಸಂಜ್ಞೆಗಳಿಂದಲೇ ಪ್ರತಿಕ್ರಿಯೆ ನೀಡಿ ಅದನ್ನು ಪಾಲಿಸುತ್ತವೆ. ಕರ್ನಾಟಕದ ಅರಣ್ಯ ಇಲಾಖೆಯ( Karnataka Forest Department) ಶಿಬಿರಗಳಲ್ಲಿರುವ ಆನೆಗಳ ಭಾಷೆಯ ಕುರಿತೂ ಆಸಕ್ತಿದಾಯಕ ಮಾಹಿತಿಯೇ ಇದೆ.

ಕರ್ನಾಟಕದ ಅರಣ್ಯ ಇಲಾಖೆ ಶಿಬಿರಗಳಲ್ಲಿರುವ ಆನೆಗಳ ಭಾಷೆಯ ಹಿನ್ನೆಲೆಯೂ ಆಸಕ್ತಿದಾಯಕವೇ ಆಗಿದೆ.
ಕರ್ನಾಟಕದ ಅರಣ್ಯ ಇಲಾಖೆ ಶಿಬಿರಗಳಲ್ಲಿರುವ ಆನೆಗಳ ಭಾಷೆಯ ಹಿನ್ನೆಲೆಯೂ ಆಸಕ್ತಿದಾಯಕವೇ ಆಗಿದೆ.

ಮತ್‌, ಜುಗ್‌, ಸರಕ್‌, ದತ್‌ ದತ್‌, ದಾ ದಾ.. ಎನ್ನುವ ಮಾತುಗಳನ್ನು ಹೇಳುತ್ತಿದ್ದರೆ ಆ ದೈತ್ಯ ಪ್ರಾಣಿಗೆ ಇದು ನನಗೆ ನೀಡಿದ ಸೂಚನೆಯೇ ಎನ್ನುವುದು ತಿಳಿದು ಬಿಡುತ್ತದೆ. ಆನಂತರವೂ ಸ್ಪಂದಿಸದೇ ಇದ್ದಾಗ ಎಂತ ನಿನ್ನದು, ಬಾ ಇತ್ತ ಎಂದು ಕೂಗಿದಾಗ ಅದು ಮಾವುತ ಇಲ್ಲವೇ ಕವಾಡಿ ನೀಡುವ ಕಮಾಂಡ್‌ ಎನ್ನುವುದು ಗೊತ್ತಾಗುತ್ತದೆ.

ಆನೆ ಶಿಬಿರವೇ ಇರಬಹುದು. ಆನೆಗಳು ದಸರಾ ಸೇರಿ ಯಾವುದೇ ಉತ್ಸವ, ಮೆರವಣಿಗೆಯಲ್ಲಿ ಭಾಗವಹಿಸುವುದೇ ಆಗಬಹುದು. ಹುಲಿ ಸಹಿತ ವನ್ಯಜೀವಿಗಳ ಕಾರ್ಯಾಚರಣೆಯೇ ಆಗಿರಬಹುದು. ಅಲ್ಲಿ ಆನೆಗಳು ಸುಮ್ಮನೇ ಸ್ಪಂದಿಸುವುದಿಲ್ಲ. ಮಾವುತ ನೀಡಿದ ಮಾತಿಗೆ ಓಗೊಟ್ಟು ಅದಕ್ಕೆ ತಕ್ಕಂತೆ ಸೂಚನೆ ಪಾಲಿಸುತ್ತವೆ.

ಈ ರೀತಿ ಸೂಚನೆಯನ್ನು ಪಾಲಿಸುವ ಆನೆಗಳ ಸಂವಹನ ಭಾಷೆ ಯಾವುದು. ಕರ್ನಾಟಕದ 15ಕ್ಕೂ ಹೆಚ್ಚು ಆನೆ ಶಿಬಿರಗಳಲ್ಲಿರುವ 200 ಕ್ಕೂ ಅಧಿಕ ಆನೆಗಳು ಯಾವ ಭಾಷೆಯಲ್ಲಿ ಮಾತನಾಡಿದರೆ ಅರ್ಥ ಮಾಡಿಕೊಳ್ಳುತ್ತವೆ ಎನ್ನುವ ಕುತೂಹಲ ಇದ್ದೇ ಇದೆ.

ಸಂವಹನದ ಹಾದಿ

ಸಾಮಾನ್ಯವಾಗಿ ಆನೆಗಳು ಶಿಬಿರದಲ್ಲಿದ್ದರೂ ಅವುಗಳು ಮಾವುತ ಹಾಗೂ ಕವಾಡಿನ ಮಾತಿಗೆ ಸ್ಪಂದಿಸುವಂತವು.ಆತ ನೀಡುವ ಕಮಾಂಡ್‌ ಕ್ರಿಯೆ ಆಧರಿಸಿಯೇ ಪ್ರತಿಕ್ರಿಯೆ ನೀಡುವಂತದ್ದು. ಅಂದರೆ ಮಾವುತ ನೀಡುವ ಸೂಚನೆಗಳನ್ನು ಪಾಲಿಸುವುದು ಮೊದಲಿನಿಂದನೂ ಬಂದಿದೆ.

ಐವತ್ತರ ದಶಕದ ಖೆಡ್ಡಾ ಕಾರ್ಯಾಚರಣೆ, ಆನಂತರ ಎಂಬತ್ತರ ದಶಕದಲ್ಲಿ ಸೆರೆ ಹಿಡಿದ ಆನೆಗಳು, ಇದಾದ ಬಳಿಕ ದಶಕದ ಹಿಂದೆ ಕಾರ್ಯಾಚರಣೆ ನಡೆಸಿ ಹಿಡಿಯಲಾದ ಆನೆಗಳು. ಹೀಗೆ ಭಿನ್ನ ತಲೆಮಾರಿನ ಆನೆಗಳಿವು. ಅವುಗಳಲ್ಲಿ ಈಗ ಎರಡು- ಮೂರು ತಲೆಮಾರಿನ ಆನೆಗಳು ಶಿಬಿರದಲ್ಲಿ ನೆಲೆಸಿವೆ. ಅವುಗಳಿಗೆ ಹಿಂದೆ ಇದ್ದಂತಹ ಕಠಿಣ ತರಬೇತಿ ಇರೋಲ್ಲ, ಆಗೆಲ್ಲಾ ಖೆಡ್ಡಾಕ್ಕೆ ಬೀಳಿಸಿ ಪಳಗಿಸಿದರೆ ಈಗ ಕ್ರಾಲಿಂಗ್‌ ಮೂಲಕ ಪಳಗಿಸಲಾಗುತ್ತದೆ. ಆಗಲೇ ಅವುಗಳಿಗೆ ಈ ಸಂವಹನವೂ ಆಗುತ್ತದೆ. ಮಾವುತ/ ಕವಾಡಿ ನೀಡುವ ಕಮಾಂಡ್‌ಗೆ ಸ್ಪಂದಿಸುತ್ತವೆ. ಹೆಚ್ಚಿನ ಪಾಲು ಹಿಂದಿನಿಂದಲೂ ಬಂದಿರುವ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲೇ ಆಗುತ್ತದೆ.

ಹಿಂದೆ ಖೆಡ್ಡಾ ಕಾರ್ಯಾಚರಣೆ ನಡೆದಿದ್ದು ನಾಗರಹೊಳೆಯ ಕಾಕನಕೋಟೆಯಲ್ಲಿ. ಡಿಬಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲೆ ಬಳ್ಳೆ ಆನೆ ಶಿಬಿರವೂ ಇತ್ತು. ಅಲ್ಲಿ ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಾವುತ ಹಾಗೂ ಕವಾಡಿಗಳು ಅನೆಗಳಿಗೆ ಉರ್ದು ಮಿಶ್ರಿತ ಉರ್ದುವಿನಲ್ಲೇ ಸೂಚನೆ ನೀಡುತ್ತಿದ್ದರು. ಹೆಚ್ಚಿನ ಪಾಲು ಇದೇ ಈಗಲೂ ಇದೆ. ಕನ್ನಡ ಕಲಿಸುವ ಪ್ರಯತ್ನವೂ ಆಗುತ್ತಲೇ ಇದೆ ಎಂದು ನಾಗರಹೊಳೆಯ ಅಂತರಸಂತೆ ಹಾಗೂ ಡಿಬಿಕುಪ್ಪೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ಎ.ವಿ.ಸತೀಶ್‌ ಹಿಂದಿನ- ಇಂದಿನ ಆನೆ ಭಾಷೆಯ ಇತಿಹಾಸವನ್ನು ತೆರೆದಿಡುತ್ತಾ ಹೋಗುತ್ತಾರೆ.

ಆನೆ ಶಿಬಿರದ ಹಾಡುಪಾಡು

ಆನೆ ಖೆಡ್ಡಾ ಕಾರ್ಯಾಚರಣೆಗೆ ಕರ್ನಾಟಕವೇ ಇಡೀ ಭಾರತದಲ್ಲಿ ಮಾತ್ರವಲ್ಲ. ವಿಶ್ವದಲ್ಲೇ ಹೆಸರು ವಾಸಿ. ನಾಗರಹೊಳೆ ಕಾಕನಕೋಟೆ ಖೆಡ್ಡಾ ಅದರಲ್ಲಿ ಒಂದು.

ಶತಮಾನದಿಂದಲೂ ಅತಿ ಹೆಚ್ಚು ಆನೆಗಳನ್ನು ಹೊಂದಿರುವುದು ಮೈಸೂರು ಕಾಡು. ಇಲ್ಲಿನ ಆನೆಗಳನ್ನು ಖೆಡ್ಡಾದಲ್ಲಿ ಬೀಳಿಸಿ ಸೆರೆ ಹಿಡಿಯಲಾಗುತ್ತಿತ್ತು. ನಂತರ ಅಲ್ಲಿಯೇ ಅವುಗಳಿಗೆ ತಾಲೀಮು, ಕಲಿಕೆ ಎಲ್ಲಾ.

ಆಗೆಲ್ಲಾ ಆನೆಗಳ ಉಸ್ತುವಾರಿ ನೋಡುಕೊಳ್ಳುತ್ತಿದ್ದವರು ಬಾಂಗ್ಲಾ ಕಡೆಯಿಂದ ಬಂದ ಮುಸ್ಲಿಂ ಸಮುದಾಯದ ಮಾವುತರೇ. ಅವರು ನಾಗರಹೊಳೆ ಮಾತ್ರವಲ್ಲದೇ ಆನೆ ಶಿಬಿರಗಳಿಗೆ ಬಂದರು. ಮೈಸೂರು ಮಹಾರಾಜರ ಕಾಲದಲ್ಲಿ, ಬ್ರಿಟೀಷರ ಆಡಳಿತವಿದ್ಧಾಗ, ಆನಂತರ ಪ್ರಜಾಪ್ರಭುತ್ವ ಆಡಳಿತ ಬಂದ ನಂತರವೂ ಬಾಂಗ್ಲಾದೇಶ ಭಾಗದವರೇ ಹೆಚ್ಚು ಆನೆ ಪರಿಚಾರಕರಾಗಿ ಬಂದಿದ್ದಾರೆ. ಅನೆಗಳನ್ನು ಪಳಗಿಸುವುದು ಎಂದರೆ ಸುಲಭದ ಮಾತಲ್ಲ. ಅದಕ್ಕೆ ಧೈರ್ಯ ಬೇಕು. ಆನೆಯನ್ನು ಅರಿತು ಅದಕ್ಕೆ ತಕ್ಕುನಾಗಿ ಸ್ಪಂದಿಸುವ ಚಾಣಾಕ್ಷತೆಯೂ ಬೇಕು. ದೈತ್ಯ ಜೀವಿಯನ್ನು ಪಳಗಿಸುವ ಮಾತೃಹೃದಯವೂ ಬೇಕು. ಅದೆಲ್ಲವೂ ಅವರಲ್ಲಿತ್ತು. ಹಾಗೆ ಬಂದವರು ತಮ್ಮದೇ ಬಾಂಗ್ಲಾಭಾಷೆಯನ್ನು ಆನೆಗಳಿಗೆ ಕಲಿಸುತ್ತಿದ್ದರು. ಇದಕ್ಕೆ ಉರ್ದು ಭಾಷೆಯ ಪ್ರಭಾವವೇ ಹೆಚ್ಚಾಗಿತ್ತು. ಹಿಂದಿಯೂ ಅದಕ್ಕೆ ಸೇರುತ್ತಿತ್ತು. ಇದರಿಂದ ಆನೆಗಳು ಉರ್ದು ಮಿಶ್ರಿತ ಸಂಜ್ಞೆಗಳಿಗೆ ಸ್ಪಂದಿಸುತ್ತಿದ್ದವು. ಅದೇ ಹೆಚ್ಚಿನ ಪಾಲು ಆನೆ ಶಿಬಿರಗಳಲ್ಲಿ ಬಳಕೆಯಲ್ಲಿದೆ.

ಇವರೊಟ್ಟಿಗೆ ಆನೆಗಳ ಸೇವೆಯಲ್ಲಿ ಕರ್ನಾಟಕ ಮೂಲದ ಗಿರಿಜನ ಯುವಕರೂ ಸೇರಿಕೊಂಡರು. ಅವರು ತಮ್ಮ ಗಿರಿಜನ ಭಾಷೆಯ ಜತೆಗೆ ಕನ್ನಡದಲ್ಲಿಯೇ ಸೂಚನೆಗಳನ್ನು ನೀಡುತ್ತಾ ಬಂದರು. ಕನ್ನಡದ ಜತೆ ಜತೆಯಲ್ಲಿ ಆನೆಗಳಿಗೆ ಉರ್ದು ಮಿಶ್ರಿತ ಭಾಷೆಯೇ ಕರಗತವಾಗಿದೆ. ಗಿರಿಜನರೂ ಇದೇ ಭಾಷೆಯನ್ನೂ ಕಲಿತುಕೊಂಡು ಕನ್ನಡದ ಜತೆಯಲ್ಲಿಯೇ ಸುಲಭವಾಗಿ ಅರ್ಥವಾಗಬಲ್ಲ ಉರ್ದು ಮಿಶ್ರಿತ ಹಿಂದಿ ಪದಗಳನ್ನೂ ಬಳಸುತ್ತಾರೆ. ಕರ್ನಾಟಕದಲ್ಲೂ ಇದು ಈಗಲೂ ನಡೆದುಕೊಂಡು ಬಂದಿದೆ.

ನಮ್ಮ ಮೂರು ತಲೆಮಾರು ಆನೆಗಳೊಂದಿಗೆ ಬೆಸೆದುಕೊಂಡಿದೆ. ಆನೆಗಳು ಹೆಚ್ಚು ಉರ್ದು ಮಿಶ್ರಿತ ಹಿಂದಿ ಪದಗಳಿಗೆ ಒಗ್ಗಿಕೊಂಡಿವೆ. ದತ್‌ ಎಂದರೆ ಪಕ್ಕಕ್ಕೆ ಸರಿ, ಮತ್‌ ಎಂದರೆ ಮುಂದೆ ಹೋಗು, ಬೈಟ್‌ ಎಂದರೆ ಕುಳಿತುಕೋ, ಉಟ್‌ ಎಂದರೆ ಏಳು, ಹಲಾ ಎಂದರೆ ಕಾಲೆತ್ತು, ಜುಗ್‌ ಎಂದರೆ ತಲೆ ಬಗ್ಗಿಸು.. ಹೀಗೆ ಹಲವು ಪದಗಳು ಅವುಗಳೊಂದಿಗೆ ಬೆರೆತಿವೆ. ಕನ್ನಡದಲ್ಲಿಯೂ ಮಾತನಾಡುವುದರಿಂದ ಅದಕ್ಕೂ ಆನೆಗಳು ಸ್ಪಂದಿಸುತ್ತವೆ. ಏನೇ ಹೇಳಿಕೊಟ್ಟರೂ ಎಷ್ಟು ವರ್ಷವಾದರೂ ಮರೆಯೋಲ್ಲ. ಮಾವುತನೇ ಅವುಗಳಿಗೆ ಮಾಸ್ಟರ್‌. ಆತ ಹೇಳಿದಂತೆ ಕೇಳುತ್ತವೆ ಎಂದು ಈಗಲೂ ಆನೆ ಉಸ್ತುವಾರಿ ನೋಡಿಕೊಳ್ಳುವ ಅಕ್ರಂಖಾನ್‌ ಹೇಳುತ್ತಾರೆ.

ಆನೆ ಮಾವುತರಿಗೆ ತರಬೇತಿ

ಹಿಂದೆ ಹತ್ತಕ್ಕೂ ಹೆಚ್ಚು ಆನೆಗಳನ್ನು ಉತ್ತರ ಪ್ರದೇಶಕ್ಕೆ ಕರ್ನಾಟಕದಿಂದ ಕಳುಹಿಸಿ ಕೊಡಲಾಯಿತು. ಕೊಡಗು, ಹಾಸನ ಸೇರಿದಂತ ಹಲವು ಕಡೆ ಪುಂಡಾಟ ಮಾಡುವಾಗ ಸೆರೆ ಸಿಕ್ಕಿ ಆನೆಗಳಿವು. ಅವುಗಳಿಗೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿಯೇ ತರಬೇತಿ ನೀಡಲಾಗುತ್ತಿತ್ತು. ಆನೆಗಳಿಗೆ ಹಿಂದಿ ಮಿಶ್ರಿತ ಉರ್ದುವಿನ ಜತೆಗೆ ಕನ್ನಡದಲ್ಲಿಯೂ ತರಬೇತಿ ನೀಡಲಾಗಿತ್ತು. ಕನ್ನಡದಲ್ಲಿ ತಿಳಿಸುವ ಪದಗಳಿಗೆ ಆನೆಗಳು ಸ್ಪಂದಿಸುತ್ತಿದ್ದವು. ಮಾವುತನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು. ಉತ್ತರ ಪ್ರದೇಶಕ್ಕೆ ಹೋದಾಗಲೂ ಅಲ್ಲಿ ಆನೆಗಳಿಗೆ ಭಾಷೆ ಸಮಸ್ಯೆಯಾಯಿತು. ಆಗ ಮಾವುತರು ಅಲ್ಲಿಯೇ ಇದ್ದು ಉತ್ತರ ಪ್ರದೇಶದ ಆನೆಗಳ ಮಾವುತರಿಗೆ ಸಂವಹನ ಭಾಷೆಯನ್ನು ಹೇಳಿಕೊಟ್ಟು ಬಂದರು. ಏಳೆಂಟು ವರ್ಷವೇ ಆಗಿದೆ. ಇದೀಗ ಆನೆಗಳು ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿವೆ ಎಂದು ಆನೆ ವೈದ್ಯರಾಗಿ ಹಲವು ವರ್ಷ ಕೆಲಸ ಮಾಡಿದ ಡಾ.ಡಿ.ಎನ್.ನಾಗರಾಜು ನೆನಪಿಸಿಕೊಳ್ಳುತ್ತಾರೆ.

ಗಂಗೆಯ ಕನ್ನಡ ಪ್ರೇಮ

ಹದಿನೈದು ವರ್ಷದ ಗಂಗೆ ಎಂಬ ಪುಟ್ಟ ಆನೆ ಅಮ್ಮ ವರಲಕ್ಷ್ಮಿ ಜತೆಗೆ ದಸರಾಗೂ ಬಂದಿತ್ತು. ಗಂಗೆಗೆ ಮಾವುತ ನಂಜುಂಡ ನೀಡುತ್ತಿದ್ದ ಕನ್ನಡದ ಮಾತುಗಳೇ ಅದಕ್ಕೆ ಆದೇಶ. ಅದನ್ನು ಕೇಳಿ ಪಾಲಿಸುತ್ತಿದ್ದಳು ಗಂಗೆ. ಆದರೆ ಜಂಬೂಸವಾರಿಯ ತಾಲೀಮಿನಲ್ಲಿ ಭಾಗಿಯಾಗಲು ಹೆದರುತ್ತಿದ್ದಳು. ಇದರಿಂದ ಮರು ವರ್ಷ ದಸರೆಗೆ ಗಂಗೆಯನ್ನು ಕರೆ ತರಲಿಲ್ಲ. ಆನೆ ಶಿಬಿರದಲ್ಲಿದ್ದ ಗಂಗೆಯೂ ಅಮ್ಮನಾಗಿ ಬಡ್ತಿ ಪಡೆದಳು. ಇದಾದ ಎರಡು ವರ್ಷಕ್ಕೆ ಹಲವು ಆನೆಗಳನ್ನು ಛತ್ತೀಸಗಡಕ್ಕೆ ನೀಡುವ ಒಪ್ಪಂದವಾಗಿತ್ತು. ಅದರಲ್ಲಿ ಗಂಗೆ ಆನೆಯೂ ಒಂದು. ಛತ್ತೀಸಗಡಕ್ಕೆ ಆನೆ ಹೊರಟಿತು. ಮಾವುತನೂ ಅದನ್ನು ಬಿಟ್ಟು ಬರಬೇಕಾಯಿತು. ಆಗ ಅದಕ್ಕೆ ಸಂವಹನ ನೀಡುವ ಭಾಷೆ ಕನ್ನಡವೇ ಆಗಿದ್ದರಿಂದ ಅಲ್ಲಿ ಗಂಗೆಯ ಜವಾಬ್ದಾರಿ ಹೊತ್ತ ಮಾವುತ ಹಾಗೂ ಕವಾಡಿಗೆ ಕನ್ನಡದ ಪದಗಳನ್ನು ಕಲಿಸಬೇಕಾಯಿತು ನಮ್ಮ ಮಾವುತ ನಂಜುಂಡ. ಕೆಲ ದಿನಗಳ ಅಲ್ಲಿಯೇ ಇದ್ದು ಗಂಗೆಯ ಜತೆಗೆ ಮಾವುತನಿಗೆ ಕನ್ನಡದ ಸಂವಹನ ಭಾಷೆಯನ್ನು ಕಲಿಸಿಕೊಟ್ಟಿದ್ದರು. ಇದಾಗಿ ಐದು ವರ್ಷವಾಗಿದೆ ಗಂಗೆ ಛತ್ತೀಸ್‌ಗಡದಲ್ಲಿ ಅಲ್ಲಿನ ಸಂವಹನ ಭಾಷೆಗೆ ಒಗ್ಗಿಕೊಂಡಿರಬೇಕು. ಆದರೆ ಆಕೆಯ ಮಗಳು ಲಕ್ಷ್ಮಿ ಇಲ್ಲಿನ ಶಿಬಿರದಲ್ಲಿ ಕನ್ನಡದ ಸಂವಹನ ಭಾಷೆಯನ್ನೂ ಕಲಿತಿದ್ದಾಳೆ.

ಕೇರಳ- ತಮಿಳುನಾಡಲ್ಲಿ

ನೆರೆಯ ಕೇರಳ, ತಮಿಳುನಾಡುಗಳಲ್ಲೂ ಆನೆ ಶಿಬಿರಗಳಿವೆ. ಅಲ್ಲಿಯೂ ಸ್ಥಳೀಯರೇ ಹೆಚ್ಚು ಮಂದಿ ಮಾವುತರಾಗಿದ್ದಾರೆ. ಅಲ್ಲಿಯೂ ಉರ್ದು ಮಿಶ್ರಿತ ಹಿಂದಿ ಪದಗಳ ಬಳಕೆಯಿದ್ದರೂ ಕೇರಳದಲ್ಲಿ ಮಲೆಯಾಳ, ತಮಿಳುನಾಡು ಆನೆ ಶಿಬಿರದಲ್ಲಿ ತಮಿಳು ಭಾಷೆ ಪ್ರಮಾಣವೇ ಹೆಚ್ಚಿದೆ. ಕರ್ನಾಟಕದ ಆನೆ ಶಿಬಿರಗಳಲ್ಲಿ ಕನ್ನಡ ಬಳಕೆ ಇದ್ದರೂ ಅದು ಕಡಿಮೆಯೇ.

ಆದರೆ ಕರ್ನಾಟಕದ ಆನೆ ಶಿಬಿರಗಳಲ್ಲಿ ಸಂಪೂರ್ಣ ಕನ್ನಡ ಕಲಿಸುವ ಪ್ರಯತ್ನ ಆಗಾಗ ಆದರೂ ಅದು ಸಂಪೂರ್ಣವಾಗಿಲ್ಲ. ಏಕೆಂದರೆ ಆನೆಗಳು ಈ ಪದಗಳಿಗೆ ಒಗ್ಗಿಕೊಂಡಿವೆ. ಅವುಗಳನ್ನು ಬದಲಿಸಿದರೆ ಹೇಗೆ ಎನ್ನುವುದು ಒಂದು ಕಡೆಯಾದರೂ ಸಹಜವಾಗಿ ನಡೆದುಕೊಂಡು ಹೋದರೆ ಸಾಕು ಎನ್ನುವ ಭಾವನೆಯೂ ಇದೆ. ಇದರಿಂದ ಆನೆ ಶಿಬಿರಗಳಲ್ಲಿ ಈಗಲೂ ಉರ್ದುಮಿಶ್ರಿತ ಹಿಂದಿ ಪದಗಳ ಬಳಕೆಯೇ ಹೆಚ್ಚಾಗಿದೆ. ಯಾವುದೇ ಸಮಸ್ಯೆಯಿಲ್ಲದೇ ಆನೆಗಳ ನಿರ್ವಹಣೆ ಮೈಸೂರು, ಚಾಮರಾಜನಗರ, ಕೊಡಗು, ಬೆಂಗಳೂರು, ಶಿವಮೊಗ್ಗದಲ್ಲಿರುವ ಆನೆ ಶಿಬಿರಗಳಲ್ಲಿ ನಡೆದಿದೆ.

ಇದರೊಟ್ಟಿಗೆ ಮಠಗಳು, ದೇವಸ್ಥಾನಗಳು, ಮೈಸೂರು ಅರಮನೆ, ಸರ್ಕಸ್‌ನಲ್ಲೂ ಆನೆಗಳಿದ್ದವು. ಅವುಗಳಿಗೂ ಇದೇ ರೀತಿ ಉರ್ದು ಮಿಶ್ರಿತ ಹಿಂದಿಯೇ ಅವುಗಳ ಕಲಿಕಾ ಭಾಷೆ. ಈಗ ಆ ಆನೆಗಳೆಲ್ಲಾ ಅರಣ್ಯ ಇಲಾಖೆ ಶಿಬಿರಗಳಿಗೆ ಸ್ಥಳಾಂತರಗೊಂಡಾಗಿವೆ. ಅದೇ ರೀತಿ ಮೃಗಾಲಯಗಳಲ್ಲೂ ಆನೆಗಳಿವೆ. ಅವುಗಳಿಗೂ ಮಾವುತರೇ ಕನ್ನಡ ಇಲ್ಲವೇ ತಾವು ಕಲಿತು ಬಳಸಿಕೊಂಡು ಬಂದ ಭಾಷೆಯಲ್ಲಿಯೇ ಸಂವಹನ ನಡೆಸುತ್ತಾರೆ.

ಆದರೂ ಕರುನಾಡಲ್ಲಿ ಕನ್ನಡ ಭಾಷೆ ಕಲಿಕೆ ಹೊರ ರಾಜ್ಯಗಳಿಂದ ಬರುವ ಅಧಿಕಾರಿಗಳಿಗೆ ಕಡ್ಡಾಯವೇ. ಕರ್ನಾಟಕದ ಆನೆ ಶಿಬಿರದಲ್ಲೂ

ಕನ್ನಡದಲ್ಲೇ ಸಂವಹನ ಆಗಬೇಕು ಎನ್ನುವ ಆದೇಶವನ್ನೇನೂ ಜಾರಿ ಮಾಡಿಲ್ಲ. ಕುವೆಂಪು ಅವರ ಆಶಯದಂತೆ ನಮ್ಮದು ಸರ್ವಜನಾಂಗದ ತೋಟ. ಅದು ಆನೆಗಳ ಶಿಬಿರಕ್ಕೂ ಅನ್ವಯಿಸಿದೆ !.

-ಕುಂದೂರು ಉಮೇಶಭಟ್ಟ

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

Whats_app_banner