ಗೂಗಲ್ ಕ್ಯೂಆರ್ ಕೋಡ್ ರಂಗೋಲಿ; ದೀಪಾವಳಿಗೆ ಮುಯ್ಯಿ ಸಂಗ್ರಹಿಸಲು ಗೂಗಲ್ ನೀಡಿದ ಮಸ್ತ್ ಐಡಿಯಾ ವೈರಲ್
ದೀಪಾವಳಿ ನಿಮಿತ್ತ ಗೂಗಲ್ ಇಂಡಿಯಾ ಶೇರ್ ಮಾಡಿರುವ ಸೃಜನಶೀಲ ದೀಪಾವಳಿ ರಂಗೋಲಿ, ನೆಟ್ಟಿಗರ ಗಮನ ಸೆಳೆದಿದೆ. ಹಬ್ಬಕ್ಕೆ ಆನ್‌ಲೈನ್ ಪೇಮೆಂಟ್ ಮೂಲಕ ಮುಯ್ಯಿ ಕೊಡುವಂತೆ ನೆಟ್ಟಿಗರಿಗೆ ಕರೆ ನೀಡಿದೆ. ಗೂಗಲ್ ಇಂಡಿಯಾ ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದೆ.
ದೀಪಾವಳಿ ಹಬ್ಬಕ್ಕೆ ರಂಗೋಲಿ ಬಿಡುವ ಕ್ರಮವಿದೆ. ಸೆರ್ಚ್ ಎಂಜಿನ್ ದೈತ್ಯ ಗೂಗಲ್ ಕೂಡಾ ದೀಪಾವಳಿ ನಿಮಿತ್ತ ವಿಭಿನ್ನ ರಂಗೋಲಿ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಗೂಗಲ್ ಇಂಡಿಯಾ ಹಂಚಿಕೊಂಡ ಈ ರಂಗೋಲಿಯಲ್ಲಿ ಬಣ್ಣಬಣ್ಣದ ಕ್ಯೂಆರ್ ಕೋಡ್ ಗಮನಸೆಳೆದಿದೆ. ಕ್ಯೂಆರ್ ಕೋಡ್ ಇರುವ ಸೃಜನಶೀಲ ರಂಗೋಲಿ ದೀಪಾವಳಿಗೂ ಮುನ್ನ ವೈರಲ್ ಆಗಿದೆ. ಆದರೆ, ಗೂಗಲ್ ಈ ರಂಗೋಲಿ ಹಂಚಿಕೊಂಡು ತಮಾಷೆಗಿಳಿದಿದೆ. ಗೂಗಲ್ ಪೇ ಮೂಲಕ ಕಾಣಿಕೆ ಕೊಟ್ಟು ಹಾರೈಸುವಂತೆ ಗೂಗಲ್ ಜನರನ್ನು ಕೇಳಿಕೊಂಡಿದೆ.
ಗೂಗಲ್ ಇಂಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ವಿಶಿಷ್ಟ ರಂಗೋಲಿ ಕಾಣಿಸಿಕೊಂಡಿದೆ. ಗೂಗಲ್ ಲೋಗೋದಲ್ಲಿರುವ ವಿವಿಧ ಬಣ್ಣಗಳನ್ನು ಬಳಸಿಕೊಂಡು ಈ ರಂಗೋಲಿ ರಚಿಸಲಾಗಿದೆ. ಇದರಲ್ಲಿ ಕ್ಯೂಆರ್ ಕೋಡ್ ಕೂಡಾ ಇದ್ದು, ಕಚೇರಿಯ ಪ್ರವೇಶದ್ವಾರದಲ್ಲಿ ಪ್ರದರ್ಶಿಸಲಾಗಿದೆ. ಆದ್ರೆ ಒಳಗೆ ಪ್ರವೇಶಿಸಬೇಕಂದ್ರೆ ಮುಯ್ಯಿ ಕೊಡಬೇಕು ಎಂದು ಗೂಗಲ್ ಹೇಳಿಕೊಂಡಿದೆ. ಇದರೊಂದಿಗೆ ದೀಪಾವಳಿ ಶುಭದಿನದಂದು ಬಳಕೆದಾರರಿಗೆ ಹಣ ಪಾವತಿ ಐಡಿಯಾ ನೀಡಿದೆ.
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಸಾಂಪ್ರದಾಯಿಕ ಉಡುಪನ್ನು ಧರಿಸಿದ ಅತಿಥಿಯೊಬ್ಬರು ಕ್ಯೂಆರ್‌ಕೋಡ್ ಇರುವ ರಂಗೋಲಿ ವಿನ್ಯಾಸವನ್ನು ಮೆಚ್ಚಿಕೊಳ್ಳುತ್ತಾರೆ. ರಂಗೋಲಿಯು ಗೂಗಲ್ ಪೇ ಮೂಲಕ 501 ರೂಪಾಯಿ ಕಾಣಿಕೆ ಪಾವತಿ ಮಾಡುವಂತೆ ಪ್ರೇರೇಪಿಸುತ್ತದೆ. ಅದರಂತೆ ಖುಷಿಯಿಂದ ಮುಯ್ಯಿ ಕೊಡುವ ಅತಿಥಿಯನ್ನು ಒಳಗೆ ಕರೆಸಿಕೊಳ್ಳಲಾಗುತ್ತದೆ. ಈ ನವೀನ ಕಲ್ಪನೆಯು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದೆ. ಅಲ್ಲದೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿದೆ ವಿಡಿಯೋ
ದೀಪಾವಳಿಯ ಶುಭಸಂದರ್ಭದಲ್ಲಿ ಅತಿಥಿಗಳಿಂದ ಪ್ರೀತಿಯ ಕಾಣಿಕೆಯೊಂದಿಗೆ ಆಶೀರ್ವಾದ ಪಡೆಯಲು ಗೂಗಲ್ ವಿಭಿನ್ನವಾಗಿ ಪ್ರೇರೇಪಿಸಿದೆ. ಗೂಗಲ್‌ನ ವೈರಲ್ ರಂಗೋಲಿ ವಿಡಿಯೋ ಇಲ್ಲಿದೆ ನೋಡಿ.
ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು
ಕ್ಯೂಆರ್ ಕೋಡ್ ಇರುವ ದೀಪಾವಳಿ ರಂಗೋಲಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಬಳಕೆದಾರ ಖುಷಿಯಿಂದ ಕಾಮೆಂಟ್ ಮಾಡಿ “ಇದು ಸೃಜನಶೀಲ ಕಲ್ಪನೆ. ಇದು ಭವಿಷ್ಯ” ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ “ನಾನು ನನಗೇ ಮಾಡುತ್ತೇನೆ. ಧನ್ಯವಾದಗಳು!” ಎಂದುಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.
ಗೂಗಲ್‌ನ ಈ ರಂಗೋಲಿ ಅನೇಕ ಬಳಕೆದಾರರನ್ನು ಯೋಚನೆಗೀಡು ಮಾಡಿದೆ. ಈ ಪರಿಕಲ್ಪನೆಯಿಂದ ಪ್ರಭಾವಿತರಾದ ಅನೇಕರು, ದೀಪಾವಳಿಗೆ ಹಣದ ಕಾಣಿಕೆ ಸಂಗ್ರಹಿಸುವ ರಂಗೋಲಿಯನ್ನು ಹೇಗೆ ರಚಿಸಬಹುದು ಎಂದು ಗೂಗಲ್ ಬಳಿ ಕೇಳಿದ್ದಾರೆ. ಬಳಕೆದಾರರೊಬ್ಬರು “ನಾನು ಈ ರಂಗೋಲಿಯನ್ನು ಮನೆಯಲ್ಲಿ ಹೇಗೆ ಬಿಡಿಸಬಹುದು? ಎಂದು ಪ್ರಶ್ನೆ ಹಾಕಿದೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಗೂಗಲ್ ಇಂಡಿಯಾ, ”ಯೇ ಭೀ ಗೂಗಲ್ ಕಾರ್ಲೋ" (ಅದನ್ನು ಕೂಡಾ ಗೂಗಲ್ ಮಾಡಿ) ಎಂದು ಪ್ರತಿಕ್ರಿಯಿಸಿದೆ. “ನಾನು ಕೂಡಾ ಈ ರೀತಿ ಮಾಡಿದರೆ, ನನ್ನ ಮನೆಗೆ ಯಾರೂ ಬರುವುದಿಲ್ಲ” ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಗೂಗಲ್‌ನ ಈ ವಿಡಿಯೋ 13 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.