Healthy Recipes: ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತ ದೋಸೆ...ತಯಾರಿಸೋದು ಹೇಗೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Recipes: ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತ ದೋಸೆ...ತಯಾರಿಸೋದು ಹೇಗೆ ನೋಡಿ

Healthy Recipes: ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತ ದೋಸೆ...ತಯಾರಿಸೋದು ಹೇಗೆ ನೋಡಿ

ನಿಮ್ಮ ಆಹಾರದಲ್ಲಿ ಪೋಷಕಾಂಶಗಳು ಸಮೃದ್ಧಿಯಾಗಿರಬೇಕು ಎಂದು ನೀವು ಬಯಸಿದರೆ ಮುಂದಿನ ಬಾರಿ ಬ್ರೇಕ್​​ಫಾಸ್ಟ್​​ಗಾಗಿ ಫೈಬರ್​​ಯುಕ್ತ ಹೆಸರುಕಾಳಿನ ದೋಸೆ ಮಾಡಿ ಸೇವಿಸಿ.

<p>ಹೆಸರುಕಾಳಿನ ದೋಸೆ</p>
ಹೆಸರುಕಾಳಿನ ದೋಸೆ

ಮಧುಮೇಹಿಗಳು, ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಸದಾ ಆರೋಗ್ಯಕರ ರೆಸಿಪಿಗಳನ್ನು ಮಾಡಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ತಿಂದದ್ದೇ ತಿನ್ನಲು ಬೇಸರವಾಗುತ್ತದೆ. ಆರೋಗ್ಯಕರ, ರುಚಿಕರ ಹಾಗೂ ತಯಾರಿಸಲು ಸುಲಭವಾದಂತ ರೆಸಿಪಿಗಳು ಸಾಕಷ್ಟಿವೆ. ಅದರಲ್ಲಿ ಹೆಸರುಕಾಳಿನ ದೋಸೆ ಕೂಡಾ ಒಂದು.

ಹೆಸರು ಕಾಳು ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ನಿಮ್ಮ ಆಹಾರದಲ್ಲಿ ಪೋಷಕಾಂಶಗಳು ಸಮೃದ್ಧಿಯಾಗಿರಬೇಕು ಎಂದು ನೀವು ಬಯಸಿದರೆ ಇದು ಆರೋಗ್ಯಕರ ಆಯ್ಕೆಯಾಗಿದೆ. ಬ್ರೇಕ್​​ ಫಾಸ್ಟ್​​​ಗೆ ನೀವು ಹೆಸರು ಕಾಳಿನ ದೋಸೆಯನ್ನು ತಯಾರಿಸಬಹುದು. ಹೆಸರುಕಾಳಿನ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆಂದು ನೋಡೋಣ.

ಬೇಕಾಗುವ ಪದಾರ್ಥಗಳು

ಹೆಸರು ಕಾಳು- 200 ಗ್ರಾಂ

ಈರುಳ್ಳಿ - 1

ಟೊಮ್ಯಾಟೋ - 1

ಹಸಿ/ಒಣಮೆಣಸಿನಕಾಯಿ - 4

ಕ್ಯಾಪ್ಸಿಕಮ್ - 1

ಕೊತ್ತಂಬರಿ ಸೊಪ್ಪು - 1 ಕಟ್ಟು

ತುಪ್ಪ - ಅಗತ್ಯವಿರುವಷ್ಟು

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಹೆಸರುಕಾಳನ್ನು ತೊಳೆದು 1 ಗಂಟೆಗಳ ಕಾಲ ನೆನೆಯಲು ಬಿಡಿ

ನಂತರ ಹೆಚ್ಚುವರಿ ನೀರನ್ನು ತೆಗೆದು ಮತ್ತೊಮ್ಮೆ ತೊಳೆಯಿರಿ

ಹೆಸರುಕಾಳು, ಉಪ್ಪು, ಮೆಣಸಿನಕಾಯಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ

ಈರುಳ್ಳಿ, ಟೊಮ್ಯಾಟೋ ಹಾಗೂ ಕ್ಯಾಪ್ಸಿಕಮ್​​​​ ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ

ತವಾ ಬಿಸಿ ಮಾಡಿಕೊಂಡು ಸ್ವಲ್ಪ ತುಪ್ಪ ಸವರಿ ದೋಸೆ ಹಿಟ್ಟನ್ನು ಹರಡಿ

ಇದರ ಮೇಲೆ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಕ್ಯಾಪ್ಸಿಕಮ್ ಹಾಗೂ ಕೊತ್ತಂಬರಿ ಹರಡಿ

ಬೇಕಿದ್ದರೆ ಮೇಲೆ ಸ್ವಲ್ಪ ತುಪ್ಪ ಸವರಿ, ಎರಡೂ ಕಡೆ ಬೇಯಿಸಿಕೊಳ್ಳಿ

ರುಚಿಯಾದ, ಆರೋಗ್ಯಕರ ಹೆಸರುಕಾಳು ದೊಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಎಂಜಾಯ್ ಮಾಡಿ

ಪೋಷಕಾಂಶಭರಿತ ಹೆಸರುಕಾಳು

ಹೆಸರುಕಾಳು ದೇಹಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಬಿ2, ಬಿ5, ಬಿ6, ಪೊಟ್ಯಾಶಿಯಂ, ಪ್ರೋಟೀನ್ ಸೇರಿದಂತೆ ನಾನಾ ಅಂಶಗಳಿವೆ. ಪ್ರತಿದಿನ ನಿಮ್ಮ ಆಹಾರದಲ್ಲಿ ಹೆಸರುಕಾಳು ಬಳಸಿದರೆ ತೂಕ ಕಡಿಮೆಯಾಗುತ್ತದೆ. ಇದು ರಕ್ತದೊತ್ತಡ ನಿಯಂತ್ರಿಸಲು ಕೂಡಾ ಸಹಾಯ ಮಾಡುತ್ತದೆ. ದೇಹವನ್ನು ಫ್ರೀ ರಾಡಿಕಲ್​​​​ಗಳಿಂದ ರಕ್ಷಿಸಲು ಹೆಸರುಕಾಳು ಸಹಾಯ ಮಾಡುತ್ತದೆ. ಅಲ್ಲದೆ ಇದು ಹೃದಯದ ಆರೋಗ್ಯಕ್ಕೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರವಾಗಿದೆ. ಹೆಸರುಕಾಳನ್ನು ಮೊಳಕೆ ಬರಿಸಿ ಕೂಡಾ ತಿನ್ನಬಹುದು. ಹಸಿಯಾಗಿ ತಿನ್ನಲು ಇಷ್ಟವಿಲ್ಲದಿದ್ದರೆ ಈ ರೀತಿ ದೋಸೆ ತಯಾರಿಸಿ ಕೂಡಾ ತಿನ್ನಬಹುದು. ಮಕ್ಕಳು ಕೂಡಾ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

Whats_app_banner