Kidney Cancer Day: ಸದ್ದಿಲ್ಲದೇ ಕಾಡಬಹುದು ಮೂತ್ರಪಿಂಡದ ಕ್ಯಾನ್ಸರ್; ಕಿಡ್ನಿ ಕ್ಯಾನ್ಸರ್ ತಡೆಯಲು ಜೀವನಶೈಲಿಯ ಮೇಲೂ ಇರಲಿ ಗಮನ
Kidney Cancer Day: ಕಿಡ್ನಿ ಕ್ಯಾನ್ಸರ್ ಅಥವಾ ಮೂತ್ರಪಿಂಡದ ಕ್ಯಾನ್ಸರ್ ಸಮಸ್ಯೆಯು ಇಂದು ಸದ್ದಿಲ್ಲದೆ ಜನರನ್ನು ಕಾಡುತ್ತಿದೆ. ಕಿಡ್ನಿ ಕ್ಯಾನ್ಸರ್ ತಡೆಗಟ್ಟವುದು, ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 15 ರಂದು ವಿಶ್ವ ಕಿಡ್ನಿ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.
ಪ್ರತಿವರ್ಷ ಜೂನ್ 15 ರಂದು ವಿಶ್ವ ಕಿಡ್ನಿ ಕ್ಯಾನ್ಸರ್ ದಿನ (World Kidney Cancer Day) ವನ್ನು ಆಚರಿಸಲಾಗುತ್ತದೆ. ಕಿಡ್ನಿ ಕ್ಯಾನ್ಸರ್ ತಡೆಗಟ್ಟವುದು, ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಕಿಡ್ನಿ ಕ್ಯಾನ್ಸರ್ ಅನ್ನು ಮೂತ್ರಪಿಂಡದ ಜೀವಕೋಶದ ಕರ್ಸಿನೋಮಾ (RCC) ಎಂದೂ ಕರೆಯಲಾಗುತ್ತದೆ. ಇದು ಮೂತ್ರಪಿಂಡಕ್ಕೆ ಸಂಬಂಧಿಸಿದ ಕ್ಯಾನ್ಸರ್‌ನ ವಿಧವಾಗಿದೆ.
ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯಗಳನ್ನು ಫಿಲ್ಟರ್ ಮಾಡಲು ಮತ್ತು ಮೂತ್ರವನ್ನು ಉತ್ಪಾದಿಸುವ ದೇಹದ ಪ್ರಮುಖ ಅಂಗಗಳಾಗಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೂತ್ರಪಿಂಡದಲ್ಲಿ ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ, ಇದು ಮೂತ್ರಪಿಂಡದ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ. ಮೂತ್ರಪಿಂಡದ ಕ್ಯಾನ್ಸರ್ ಪುರುಷರು ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ.
ʼಮೂತ್ರಪಿಂಡ ಕ್ಯಾನ್ಸರ್‌ನ ರೋಗಲಕ್ಷಣಗಳು, ಅಪಾಯಕಾರಿ ಅಂಶಗಳು ಮತ್ತು ಸೂಚಕಗಳ ಪತ್ತೆಯ ಬಗ್ಗೆ ಜನರಿಗೆ ತಿಳಿಸುವುದು ಹಾಗೂ ಇದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚಲು ನಿಯಮಿತ ಸ್ಕ್ರೀನಿಂಗ್‌ಗಳಿಗೆ ಒತ್ತು ನೀಡಬೇಕು. ಇದರಿಂದ ಚಿಕಿತ್ಸೆಯ ಆಯ್ಕೆಗಳ ಅರಿವು ಹೆಚ್ಚುತ್ತದೆʼ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ ಪ್ರಿಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಮೂತ್ರಶಾಸ್ತ್ರ ತಜ್ಞ ಡಾ. ಇಂದ್ರನಾಥ್ ವರ್ಮಾ.
ಮೂತ್ರಪಿಂಡ ಅಥವಾ ಕಿಡ್ನಿ ಕ್ಯಾನ್ಸರ್‌ಗೆ ಕಾರಣ
ಕಿಡ್ನಿ ಕ್ಯಾನ್ಸರ್‌ಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ʼಧೂಮಪಾನ, ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಡಯಾಲಿಸಿಸ್ ಮತ್ತು ಮೂತ್ರಪಿಂಡದ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಹೊಂದಿರುವವರಲ್ಲಿ ಈ ಕ್ಯಾನ್ಸರ್‌ನ ಲಕ್ಷಣಗಳು ಉಲ್ಬಣಿಸುವ ಸಾಧ್ಯತೆ ಇದೆ ಎಂದು ಡಾ. ವರ್ಮಾ ಹೇಳಿದ್ದಾರೆ.
ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳು
ಡಾ. ವರ್ಮಾ ಅವರ ಪ್ರಕಾರ ಮೂತ್ರಪಿಂಡದ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಗೋಚರವಾಗುವುದಿಲ್ಲ. ಅದಾಗ್ಯೂ ಕಾಲಾನಂತರದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ.
* ಬೆನ್ನುನೋವು, ವಾಸಿಯಾಗದ ಸಂಧಿನೋವು
* ತೂಕ ಇಳಿಕೆ ಮತ್ತು ಆಯಾಸ, ಜ್ವರ
* ಹಸಿವಾಗದೇ ಇರುವುದು
* ಮೂತ್ರದಲ್ಲಿ ರಕ್ತ. ಮೂತ್ರದ ಬಣ್ಣ ಗುಲಾಬಿ ಅಥವಾ ಕೆಂಪಾಗುವುದು.
ರೋಗನಿರ್ಣಯ
ಮೂತ್ರಪಿಂಡದ ಕ್ಯಾನ್ಸರ್ ರೋಗನಿರ್ಣಯವು ಸಾಮಾನ್ಯವಾಗಿ ವೈದ್ಯಕೀಯ ಇತಿಹಾಸದ ಮೌಲ್ಯಮಾಪನ, ದೈಹಿಕ ಪರೀಕ್ಷೆ, ಇಮೇಜಿಂಗ್ ಪರೀಕ್ಷೆಗಳು (ಉದಾಹರಣೆಗೆ CT ಸ್ಕ್ಯಾನ್‌ಗಳು ಅಥವಾ MRIಗಳು) ಮತ್ತು ಕ್ಯಾನ್ಸರ್ ಕೋಶಗಳು ಉಪಸ್ಥಿತಿಯನ್ನು ಖಚಿತಪಡಿಸಲು ಬಯಾಪ್ಸಿ ಸಂಯೋಜನೆಯನ್ನು ಒಳಗೊಂಡಿರುತ್ತದೆʼ ಎಂದು ಡಾ. ವರ್ಮಾ ಹೇಳುತ್ತಾರೆ.
ಚಿಕಿತ್ಸೆ
ಮೂತ್ರಪಿಂಡದ ಕ್ಯಾನ್ಸರ್‌ಗೆ ಚಿಕಿತ್ಸೆಯ ಆಯ್ಕೆಗಳು ರೋಗದ ಹಂತ ಮತ್ತು ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಆದರೆ ಶಸ್ತ್ರಚಿಕಿತ್ಸೆ (ಮೂತ್ರಪಿಂಡದ ಭಾಗಶಃ ಅಥವಾ ಸಂಪೂರ್ಣ ತೆಗೆಯುವಿಕೆ), ಟಾರ್ಗೆಟೆಡ್ ಥೆರಪಿ, ಇಮ್ಯುನೊಥೆರಪಿ, ವಿಕರಣ ಚಿಕಿತ್ಸೆ ಸೇರಿದಂತೆ ಈ ವಿಧಾನಗಳ ಸಂಯೋಜನೆಯು ಒಳಗೊಂಡಿರಬಹುದು.
ಕ್ಯಾನ್ಸರ್‌ನ ಹಂತ, ರೋಗಿಯ ಸಾಮಾನ್ಯ ಸ್ಥಿತಿ ಮತ್ತು ಗಡ್ಡೆ ಸ್ಥಿತಿಯನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆʼ ಎನ್ನುತ್ತಾರೆ ಡಾ. ವರ್ಮಾ.
ʼಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವು ಆಸ್ಪತ್ರೆಗೆ ಅನುಗುಣವಾಗಿ ಬದಲಾಗಿರುತ್ತದೆ. ಬೆಲೆ ನಿಯಂತ್ರಣ ಜಾರಿಗೊಳಿಸುವ ಮೂಲಕ, ಕಡಿಮೆ ಆದಾಯವಿರುವ ಜನರಿಗೆ ವಿಮೆ ರಕ್ಷಣೆ, ಸಬ್ಸಿಡಿಗಳನ್ನು ನೀಡುವುದು, ಜೆನೆರಿಕ್ ಔಷಧಿಗಳನ್ನು ಉತ್ತೇಜಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಕ್ಯಾನ್ಸರ್ ಚಿಕಿತ್ಸೆಗಳನ್ನು ಪ್ರೋತ್ಸಾಹಿಸುವ ಮೂಲಕ ಸರ್ಕಾರವು ಕ್ಯಾನ್ಸರ್ ರೋಗಿಗಳಿಗೆ ಅನುವಾಗಬಹುದು. ವೈದ್ಯಕೀಯ ಚಿಕಿತ್ಸೆಗಾಗಿ ವೆಚ್ಚ-ಉಳಿತಾಯ ಕ್ರಮಗಳು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ವಿಸ್ತರಿಸುವುದನ್ನು ಒಳಗೊಂಡಿವೆʼ ಎಂದು ಅವರು ಹೇಳುತ್ತಾರೆ.
ಮೂತ್ರಪಿಂಡದ ಕ್ಯಾನ್ಸರ್ ತಡೆಗಟ್ಟುವ ವಿಧಾನಗಳು
* ಧೂಮಪಾನ ನಿಷೇಧ
* ಆರೋಗ್ಯಕರ ಡಯೆಟ್ ಕ್ರಮ ಪಾಲಿಸುವುದು ಹಾಗೂ ತೂಕ ನಿರ್ವಹಣೆ
* ರಕ್ತದೊತ್ತಡ ನಿಯಂತ್ರಣ
* ಮಧುಮೇಹಿಗಳಾಗಿದ್ದರೆ ಸಕ್ಕರೆಯಲ್ಲಿನ ರಕ್ತದ ಮಟ್ಟವನ್ನು ನಿಯಂತ್ರಿಸುವುದು.
ವಿಭಾಗ