ಅತಿಯಾಗಿ ಸಿಹಿ ತಿನ್ನೋದ್ರಿಂದ ಸಕ್ಕರೆ ಕಾಯಿಲೆ ಶುರು ಆಗುತ್ತಾ; ಮಧುಮೇಹದ ಕುರಿತು ನಂಬಲೇಬಾರದಂತಹ 5 ಮಿಥ್ಯಗಳಿವು
ಸಕ್ಕರೆ ಕಾಯಿಲೆ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೂ ಮಧುಮೇಹ ರೋಗದಿಂದ ಬಳಲುತ್ತಿರುತ್ತಾರೆ. ಹೆಚ್ಚು ಸಿಹಿ ತಿನ್ನೋದು ಸಕ್ಕರೆ ಕಾಯಿಲೆ ಬರಲು ಕಾರಣ ಅಂತ ಕೆಲವರು ಹೇಳುತ್ತಾರೆ. ಹಾಗಾದರೆ ನಿಜಕ್ಕೂ ಮಧುಮೇಹಕ್ಕೆ ಸಿಹಿ ತಿನ್ನೋದೇ ಕಾರಣನಾ? ಈ ಕುರಿತು ಇರುವ 5 ತಪ್ಪುಕಲ್ಪನೆಗಳೇನು ಎಂಬ ವಿವರ ಇಲ್ಲಿದೆ.
ಜಗತ್ತಿನಾದ್ಯಂತ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಧುಮೇಹವು ಒಂದು. ಇದು ದೀರ್ಘಕಾಲದ ಕಾಯಿಲೆಯಾಗಿ ಕಾಡುತ್ತದೆ. ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯುತ್ತಾರೆ. ಅಷ್ಟೊಂದು ಜನ ಭಾರತದಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗುವುದು ಹಾಗೂ ದೇಹವು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡಲು ಸಾಧ್ಯವಾಗದೇ ಇರುವುದು ಮಧುಮೇಹದ ಸ್ಥಿತಿಯಾಗಿದೆ. ಮಧುಮೇಹವು ಒಂದು ಅಪಾಯಕಾರಿ ಸಮಸ್ಯೆ ಎನ್ನುವುದು ಸುಳ್ಳಲ್ಲ.
ಅತಿಯಾದ ಸಿಹಿ ಸೇವನೆಯು ಮಧುಮೇಹಕ್ಕೆ ಕಾರಣ ಎನ್ನುತ್ತಾರೆ, ಹಾಗಾದರೆ ಇದು ನಿಜವೇ, ಮಧುಮೇಹದ ಸುತ್ತಲಿನ ಸತ್ಯಾಸತ್ಯಗಳೇನು ಎಂಬ ಬಗ್ಗೆ ತಜ್ಞರು ನೀಡಿದ ಉತ್ತರ ಇಲ್ಲಿದೆ. ಮಧುಮೇಹದ ಬಗ್ಗೆ ಸ್ವಷ್ಟನೆ ಬೇಕು ಎನ್ನುವವರು ಈ ಕೆಳಗಿನ ವಿಚಾರಗಳನ್ನು ತಿಳಿದುಕೊಳ್ಳಿ.
ಮಿಥ್ಯ: ಅತಿಯಾದ ಸಿಹಿ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುತ್ತೆ
ಸತ್ಯ: ಡಯಾಬಿಟಿಸ್ ಎನ್ನುವುದು ಆಹಾರ ಮತ್ತು ಜೀವನಶೈಲಿಯ ಆಯ್ಕೆಗಳಿಂದ ಬರುವಂಥದಲ್ಲ. ಆದರೆ ಅಧಿಕ ತೂಕ ಹಾಗೂ ಸ್ಥೂಲಕಾಯವು ಮಧುಮೇಹದ ಅಪಾಯ ಹೆಚ್ಚುವಂತೆ ಮಾಡಬಹುದು. ಹೆಚ್ಚು ಸಿಹಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲೊರಿ ಸಂಗ್ರಹವಾಗುತ್ತದೆ. ಕ್ಯಾಲೊರಿ ಹೆಚ್ಚಾದರೆ ತೂಕ ಏರಿಕೆಗೆ ಕಾರಣವಾಗುತ್ತದೆ. ಆ ಕಾರಣಕ್ಕೆ ಸಿಹಿ ತಿನ್ನುವುದನ್ನು ಕಡಿಮೆ ಮಾಡಬೇಕು ಎಂದು ಹೇಳಲಾಗುತ್ತದೆ.
ಮಿಥ್ಯ: ಡಯಾಬಿಟಿಸ್ ಗುಣಪಡಿಸಬಹುದು
ಸತ್ಯ: ಮಧುಮೇಹವು ದೀರ್ಘಕಾಲಿನ ಆರೋಗ್ಯ ಸ್ಥಿತಿಯಾಗಿದೆ. ದುರಾದೃಷ್ಟವಶಾತ್ ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ತೂಕ ನಿರ್ವಹಣೆಯ ಉಪಶಮನದ ಹಂತಕ್ಕೆ ತೆಗೆದುಕೊಂಡು ಹೋಗಬಹುದು. ಆದರೆ ನಿರಂತರ ನಿರ್ವಹಣೆ ಬಹಳ ಮುಖ್ಯವಾಗುತ್ತದೆ. ಟೈಪ್ 1 ಮಧುಮೇಹಕ್ಕೆ ಜೀವನ ಪರ್ಯಂತ ಇನ್ಸುಲಿನ್ ಚಿಕಿತ್ಸೆ ಮತ್ತು ಎಚ್ಚರಿಕೆಯಿಂದ ಮೇಲ್ವಿಚಾರಣೆ ಅಗತ್ಯವಿರುತ್ತದೆ. ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ವ್ಯಕ್ತಿಗಳು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಮತ್ತು ಪರಿಣಾಮಕಾರಿ, ದೀರ್ಘಕಾಲೀನ ನಿರ್ವಹಣೆಗೆ ವೈದ್ಯಕೀಯ ಮಾರ್ಗದರ್ಶನ, ಜೀವನಶೈಲಿ ಹೊಂದಾಣಿಕೆಗಳು ಮತ್ತು ತೊಡಕುಗಳನ್ನು ತಡೆಗಟ್ಟಲು ನಿಯಮಿತ ಆರೋಗ್ಯ ತಪಾಸಣೆ ಅಗತ್ಯವಿರುತ್ತದೆ.
ಮಿಥ್ಯ: ಮಧುಮೇಹ ಇರುವವರು ಹಣ್ಣು, ಸಿಹಿತಿನಿಸು ತಿನ್ನಬಾರದು
ಸತ್ಯ: ಟೈಪ್ 2 ಡಯಾಬಿಟಿಸ್ ಇರುವವರಲ್ಲಿ, ಬಹಳಷ್ಟು ಸಕ್ಕರೆ ಅಂಶವಿರುವ ಆಹಾರಗಳು, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ತೂಕವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಎಲ್ಲಾ ಸಿಹಿ ತಿನಿಸುಗಳನ್ನು ಆಹಾರದಿಂದ ಹೊರಗಿಡಬೇಕು ಎಂದು ಇದರ ಅರ್ಥವಲ್ಲ. ಮಧುಮೇಹಿಗಳು ಕೆಲವು ಹಣ್ಣುಗಳನ್ನು ಪ್ರತಿದಿನ ತಿನ್ನಬಹುದು. ಆದರೆ ವೈದ್ಯರ ಸಲಹೆ ಪಡೆದು ಸೂಕ್ತ ಔಷಧಿ ಸೇವನೆಯ ಜೊತೆಗೆ ಕೆಲವು ಹಣ್ಣು ಹಾಗೂ ತಿನಿಸುಗಳನ್ನು ತಿನ್ನಬಹುದಾಗಿದೆ.
ಮಿಥ್ಯ: ಮಧುಮೇಹ ಸಾಂಕ್ರಮಿಕ
ಸತ್ಯ: ಮಧುಮೇಹವು ಖಂಡಿತ ಸಾಂಕ್ರಾಮಿಕವಲ್ಲ. ಇದು ಕೆಲವರಿಗೆ ಯಾಕೆ ಬರುತ್ತದೆ, ಕೆಲವರಿಗೆ ಯಾಕೆ ಬರುತ್ತಿಲ್ಲ ಎಂಬುದಕ್ಕೆ ಉತ್ತರವಿಲ್ಲ. ಸಂಶೋಧನೆಯ ಪ್ರಕಾರ ಇದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಆನುವಂಶಿಕ ಕಾರಣಗಳಿಂದಲೂ ಮಧುಮೇಹ ಬರಬಹುದು.
ಮಿಥ್ಯ: ಮಧುಮೇಹ ಗಂಭೀರ ಸಮಸ್ಯೆಯಲ್ಲ
ಸತ್ಯ: ಸ್ತನ ಕ್ಯಾನ್ಸರ್ ಹಾಗೂ ಏಡ್ಸ್‌ನಂತಹ ಕಾಯಿಲೆ ಇರುವವರು ಮಧುಮೇಹವು ಸಾವಿಗೆ ಕಾರಣವಾಗುತ್ತದೆ. ಮಧುಮೇಹದ ಉಪಸ್ಥಿತಿಯು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಮಧುಮೇಹವನ್ನು ಸೂಕ್ತವಾಗಿ ನಿರ್ವಹಿಸುವುದರಿಂದ ಮಧುಮೇಹಕ್ಕೆ ಸಂಬಂಧಿಸಿದ ತೊಡಕುಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಬಹುದು.
ಈ ಎಲ್ಲವೂ ಮಧುಮೇಹದ ಬಗ್ಗೆ ಜನರಲ್ಲಿ ಇರುವ ತಪ್ಪುಕಲ್ಪನೆಗಳಾಗಿವೆ. ಅತಿಯಾದ ಒತ್ತಡವು ಮಧುಮೇಹಕ್ಕೆ ಕಾರಣವಾಗಬಹುದು. ಆದರೆ ಮಧುಮೇಹ ಇರುವವರು ವೈದ್ಯರ ಸಲಹೆ ಇಲ್ಲದೇ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಿಂದ ದೊರೆತ ಅಂಶಗಳನ್ನು ಒಳಗೊಂಡಿದೆ. ಮಾಹಿತಿ ನೀಡುವ ಉದ್ದೇಶದಿಂದ ಈ ಲೇಖನವನ್ನು ಪ್ರಕಟಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)