Rakesh Sharma: ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಈಗ ಎಲ್ಲಿದ್ದಾರೆ, ಸರಳ ಬದುಕಿನ ಮೊರೆಹೋದ ಹೆಮ್ಮೆಯ ಅಂತರಿಕ್ಷಯಾನಿ
First Indian in space Rakesh Sharma: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಚಂದ್ರಯಾನ 3 ಯೋಜನೆಯಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿದೆ. ಈ ಸಂದರ್ಭದಲ್ಲಿ ಭಾರತದ ಮೊದಲ ಅಂತರಿಕ್ಷಯಾನಿ ರಾಕೇಶ್ ಶರ್ಮಾ ಅವರನ್ನು, ಅವರ ಸಾಧನೆಯನ್ನು ಮತ್ತು ಅವರ ಈಗಿನ ಜೀವನಶೈಲಿಯನ್ನು ನೆನಪಿಸಿಕೊಳ್ಳೋಣ.
ಬೆಂಗಳೂರು: ಭಾರತದ ಮೊದಲ ಅಂತರಿಕ್ಷಯಾನಿ ಎಂಬ ಪ್ರಶ್ನೆ ಕೇಳಿದಾಗ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಥಟ್ಟನೇ ಹೇಳುವ ಉತ್ತರ "ರಾಕೇಶ್ ಶರ್ಮಾ". ನಿಜ, ಇವರು ಭಾರತದ ಮೊದಲ ಅಂತರಿಕ್ಷಯಾನಿ. ಕೆಲವು ದಶಕದ ಹಿಂದೆ ಭಾರತದ ಇಸ್ರೋ ಮತ್ತು ಸೋವಿಯತ್ ಒಕ್ಕೂಟದ ಯೋಜನೆಯ ಭಾಗವಾಗಿ ಇವರು ಹಲವು ದಿನಗಳ ಕಾಲ ಅಂತರಿಕ್ಷದಲ್ಲಿ ಕಾಲಕಳೆದಿದ್ದರು. ಇಂತಹ ಸಾಧಕ ಈಗ ತನ್ನ ಊರಿನಲ್ಲಿ ಮಾಧ್ಯಮ, ಜನ ದಟ್ಟಣೆಯಿಂದ ದೂರದಲ್ಲಿದ್ದು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಭಾರತದ ಚಂದ್ರಯಾನ 3 ಯಶಸ್ವಿಯಾದ ಈ ಸಂದರ್ಭದಲ್ಲಿ ಬಹುತೇಕರು ರಾಕೇಶ್ ಶರ್ಮಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆಯೂ ಹಲವರ ಬಳಿ ಇದ್ದಾರೆ. ಈ ಲೇಖನದಲ್ಲಿ ರಾಕೇಶ್ ಶರ್ಮಾ ಅವರ ಜೀವನ, ಸಾಧನೆ ಮತ್ತು ಈಗಿನ ಜೀವನಶೈಲಿ ಕುರಿತು ತಿಳಿದುಕೊಳ್ಳೋಣ.
ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ
1984ರಲ್ಲಿ ರಾಕೇಶ್ ಶರ್ಮಾ ಅವರು ಇಸ್ರೊ ಮತ್ತು ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ಯೋಜನೆಯಲ್ಲಿ ಪಾಲ್ಗೊಂಡಿದ್ದರು. ಸೋವಿಯತ್ ಬಾಹ್ಯಾಕಾಶ ನೌಕೆ ಸೋಯಜ್ ಟಿ 11ರಲ್ಲಿ ಪ್ರಯಾಣಿಸಿ ಏಳು ದಿನ 21 ಗಂಟೆ 40 ನಿಮಿಷ ಅಂತರಿಕ್ಷ ನಿಲ್ದಾಣದಲ್ಲಿದ್ದರು. ಇಷ್ಟು ದಿನ ಅಂತರಿಕ್ಷದಲ್ಲಿ ಕಳೆದು ಭಾರತದ ಮೊದಲ ಗಗನಯಾನ ಮಾಡಿದ ವ್ಯಕ್ತಿಯೆಂಬ ಕೀರ್ತಿಗೆ ಪಾತ್ರರಾಗಿದ್ದರು.
1949ರ ಜನವರಿ 13ರಂದು ಪಂಜಾಬ್‌ನ ಪಟಿಯಾಲಾದಲ್ಲಿ ಜನಿಸಿದ ಇವರು ಭಾರತದ ಏರ್‌ಪೋರ್ಸ್‌ನಲ್ಲಿ ವೈಮಾನಿಕ ಪರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇವರು ಸ್ಕ್ವಾಡರ್ನ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 1982ರ ಸೆಪ್ಟೆಂಬರ್ 20ರಂದು ಬಾಹ್ಯಾಕಾಶಯಾನಿಯಾಗಿ ಆಯ್ಕೆಯಾಗಿದ್ದರು. ಇವರು ಮತ್ತು ವಿಂಗ್ ಕಮಾಂಡರ್ ರವೀಶ್ ಮಲ್ಹೋತ್ರಾ ಆಯ್ಕೆಯಾಗಿದ್ದರು. ರಷ್ಯಾದಲ್ಲಿ ಮತ್ತು ಬೆಂಗಳೂರಿನ ಇಸ್ರೋದಲ್ಲಿ ಇವರಿಗೆ ತರಬೇತಿ ನೀಡಲಾಗಿತ್ತು. ಅಂತಿಮವಾಗಿ ಈ ಯೋಜನೆಗೆ ರಾಕೇಶ್ ಶರ್ಮಾ ಆಯ್ಕೆಯಾಗಿದ್ದರು. 35ನೇ ವಯಸ್ಸಿನಲ್ಲಿ ಇವರು ಅಂತರಿಕ್ಷ ನಿಲ್ದಾಣದಲ್ಲಿ ಏಳು ದಿನ 21 ಗಂಟೆ ಇದ್ದರು. 1984ರ ಏಪ್ರಿಲ್ 11ರಂದು ಅಂತರಿಕ್ಷ ನಿಲ್ದಾಣದಿಂದ ಭೂಮಿಗೆ ವಾಪಸ್ ಬಂದಿದ್ದರು.
ಭಾರತೀಯ ವಾಯುಪಡೆಗೆ ಇವರು 1970ರಲ್ಲಿ ಆಯ್ಕೆಯಾಗಿದ್ದರು. ಟೆಸ್ಟ್ ಪೈಲೆಟ್ ಆಗಿ ವೃತ್ತಿ ಆರಂಭಿಸಿದ ಇವರು ಹಂತಹಂತವಾಗಿ ಮೇಲಿನ ಹುದ್ದೆಗಳಿಗೆ ಬಡ್ತಿಯಾಗಿದ್ದರು. ಬಾಂಗ್ಲಾ ಲಿಬರೇಷನ್ ಯುದ್ಧದಲ್ಲಿ ಮಿಗ್ 21ರ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. 1987ರಲ್ಲಿ ವರಾಕೇಶ್ ಶರ್ಮಾ ರಿಟೈರ್ಡ್ ಆಗಿದ್ದರು. ಬಳಿಕ ಎಚ್‌ಎಎಲ್‌ನಲ್ಲಿ ಚೀಫ್ ಟೆಸ್ಟ್ ಪೈಲಟ್ ಹುದ್ದೆಗೆ ಸೇರಿದ್ದರು.
ಇವರು ಉದ್ಯೋಗ ಕ್ಷೇತ್ರದಿಂದ 2001ರಲ್ಲಿ ಸಂಪೂರ್ಣವಾಗಿ ರಿಟೈರ್ಡ್ ಆಗಿದ್ದರು. ಬಳಿಕ ಇವರು ತಮಿಳುನಾಡಿನ ಕೂನೂರು ಎಂಬಲ್ಲಿ ಪತ್ನಿ ಜತೆ ಸರಳವಾಗಿ ಬದುಕುತ್ತಿದ್ದಾರೆ. ಈ ವಿಶ್ರಾಂತ ಜೀವನದಲ್ಲಿ ಯೋಗ, ಪುಸ್ತಕ ಓದುವುದು, ಪ್ರವಾಸ, ಗಾಲ್ಫ್ ಇತ್ಯಾದಿಗಳಲ್ಲಿ ತೊಡಗಿಕೊಂಡು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಮಾಧ್ಯಮ, ಜನದಟ್ಟಣೆಯಿಂದ ದೂರವಿದ್ದು ಕೂಲ್ ಆಗಿ ಜೀವನ ನಡೆಸುತ್ತಿದ್ದಾರೆ. ಅಂತರಿಕ್ಷ ಯಾನ ಮಾಡಿರುವ ಸಾಧನೆಗೆ ರಷ್ಯಾದ ಬಾಹ್ಯಾಕಾಶ ಸಂಸ್ಥೆಯಿಂದ ಹೀರೋ ಅವಾರ್ಡ್ ಪಡೆದ ಇವರು ಈಗ ಸಿಂಪಲ್ ಆಗಿ ಬದುಕುತ್ತಿದ್ದಾರೆ.
ಚಂದ್ರಯಾನದ ಕುರಿತು ರಾಕೇಶ್ ಶರ್ಮಾ ಪ್ರತಿಕ್ರಿಯೆ
ಭಾರತದ ಚಂದ್ರಯಾನದ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಮೊದಲೇ ಈ ಮಿಷನ್‌ನಲ್ಲಿ ಭಾರತ ಯಶಸ್ಸು ಕಾಣುವುದಾಗಿ ರಾಕೇಶ್ ಶರ್ಮಾ ತಿಳಿಸಿದ್ದರು. "ಕಳೆದ 40 ವರ್ಷಗಳಲ್ಲಿ ಸೀಮಿತ ಸಂಪನ್ಮೂಲಗಳ ನಡುವೆಯೂ ಭಾರತವು ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಭಾರತ ಖಂಡಿತವಾಗಿಯೂ ಈ ಮಿಷನ್‌ನಲ್ಲಿ ಯಶಸ್ಸು ಕಾಣಲಿದೆ" ಎಂದು ಹೇಳಿದ್ದರು. ಇವರ ಮಾತಿನ ಫಲವೋ, ಕೋಟ್ಯಾಂತರ ಭಾರತೀಯರ ಹಾರೈಕೆಯೋ ಎಂಬಂತೆ ಚಂದ್ರಯಾನ 3 ಮಿಷನ್‌ನಡಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದೆ.