Kalburgi News: ಉತ್ತರ ಕರ್ನಾಟಕದಲ್ಲಿ ಬರದ ನಡುವೆ ಸಂಭ್ರಮದ ಎಳ್ಳಮಾವಾಸ್ಯೆ, ಭೂಮಿ ತಾಯಿ ಹಬ್ಬ ಆಚರಣೆ
ಕನ್ನಡ ಸುದ್ದಿ  /  ಜೀವನಶೈಲಿ  /  Kalburgi News: ಉತ್ತರ ಕರ್ನಾಟಕದಲ್ಲಿ ಬರದ ನಡುವೆ ಸಂಭ್ರಮದ ಎಳ್ಳಮಾವಾಸ್ಯೆ, ಭೂಮಿ ತಾಯಿ ಹಬ್ಬ ಆಚರಣೆ

Kalburgi News: ಉತ್ತರ ಕರ್ನಾಟಕದಲ್ಲಿ ಬರದ ನಡುವೆ ಸಂಭ್ರಮದ ಎಳ್ಳಮಾವಾಸ್ಯೆ, ಭೂಮಿ ತಾಯಿ ಹಬ್ಬ ಆಚರಣೆ

Karnataka Rural Culture ಉತ್ತರ ಕರ್ನಾಟಕ ಭಾಗದಲ್ಲಿ ಚರಗ ಚಲ್ಲುವ ಸಂಸ್ಕೃತಿ ಗಟ್ಟಿಯಾಗಿದೆ. ಎಳ್ಳಮಾವಾಸ್ಯೆಗೆ ಕುಟುಂಬದವರು, ಹಿತೈಷಿಗಳು ಸೇರಿ ಖುಷಿ ಪಡುವ ಹಬ್ಬ. ಇದರ ವಿಶೇಷ ಇಲ್ಲಿದೆ.ವರದಿ: ಎಸ್‌.ಬಿ.ರೆಡ್ಡಿ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಎಳ್ಳು ಅವಮಾಸ್ಯೆಯ ಸಡಗರದ ಕ್ಷಣ.
ಕಲಬುರಗಿ ಜಿಲ್ಲೆಯಲ್ಲಿ ಎಳ್ಳು ಅವಮಾಸ್ಯೆಯ ಸಡಗರದ ಕ್ಷಣ.

ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಎಳ್ಳಮಾವಾಸ್ಯೆಯನ್ನು ಗುರುವಾರ ವಿಶಿಷ್ಟವಾಗಿ ಆಚರಿಸಲಾಯಿತು. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್‌, ವಿಜಯನಗರ, ರಾಯಚೂರು, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ, ಯಾದಗಿರಿಗಳಲ್ಲಿ ರೈತರು, ಸಾರ್ವಜನಿಕರು ಸಂಭ್ರಮದಿಂದ ಎಳ್ಳಮಾವಾಸ್ಯೆ ಆಚರಣೆ ಮಾಡಿರುವುದು ಕಂಡು ಬಂತು.

ಭೂಮಿ ತಾಯಿ ಹಬ್ಬವೆಂದೇ ಕರೆಯುವ ಎಳ್ಳಮಾವಾಸ್ಯೆಯನ್ನು ಬೆಲೆ ಏರಿಕೆ ಹಾಗೂ ಬರದ ನಡುವೆಯೂ ರೈತರು ಮತ್ತು ಸಾರ್ವಜನಿಕರು ಹೊಲದಲ್ಲಿ ಚರಗ ಚೆಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿದರು.

ಕಲಬುರಗಿ ನಗರದ ಹೊರವಲಯ ಸೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೆಳ್ಳಂ ಬೆಳಗ್ಗೆ ರೈತರು ಅಡುಗೆ ಮಾಡಿಕೊಂಡು ಕುಟುಂಬ ಸಮೇತ ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದರು. ರೈತರು ಸಸ್ಯ ಮತ್ತು ಭೂತಾಯಿಯನ್ನು ಆರಾಧಿಸುವ, ಗೌರವಿಸುವ ವಿಶೇಷ ಹಬ್ಬಗಳಲ್ಲಿ ಎಳ್ಳಮಾವಾಸ್ಯೆ ಕೂಡ ಒಂದು. ಈ ಹಬ್ಬ ಸ್ನೇಹ ಹಾಗೂ ಸೌಹಾರ್ದ ಮತ್ತು ಸಂಸ್ಕೃತಿಯ ಸಂಕೇತವಾಗಿದೆ.

ರೈತರು ತಮ್ಮ ತಮ್ಮ ಹೊಲಗಳಿಗೆ ಹೋಗಿ ಹೊಲದ ಕೊಂಪಿಯಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಪಾಂಡವರಿಗೆ ಮತ್ತು ಲಕ್ಷ್ಮಿಗೆ ತರಹೇವಾರಿ ಭಕ್ಷ್ಯಗಳ ನೈವೇದ್ಯವನ್ನು ದೇವರಿಗೆ ಅರ್ಪಿಸಿದರು. ಹಬ್ಬದ ಮುನ್ನಾ ದಿನವೇ ಮಹಿಳೆಯರು ಮಾಗಿ ಚಳಿಗೆ ತಕ್ಕುದಾದ ಮತ್ತು ವೈಜ್ಞಾನಿಕ ಹಿನ್ನಲೆಯ ಪರಂಪರಾಗತ ಹಬ್ಬದೂಟವನ್ನು ಸಿದ್ದಪಡಿಸುತ್ತಾರೆ. ವಿವಿಧ ಬಗೆಯ ಸೊಪ್ಪು, ಕಾಳುಗಳಿಂದ ತಯಾರಿಸಿದ ಬಜ್ಜಿ, ಸಜ್ಜೆ, ಜೋಳದ ರೊಟ್ಟಿ ಮತ್ತು ಹಸಿ ಈರುಳ್ಳಿ, ಶೇಂಗಾ, ಅಗಸಿ, ಚಟ್ನಿಗಳು, ಎಣ್ಣೆಗಾಯಿ, ಜೋಳದ ಅನ್ನ, ಅಂಬಲಿ, ಬೆಲ್ಲದ ಕರಚಿಕಾಯಿ, ಸಜ್ಜೆ, ಜೋಳದ ಕಡುಬು, ಶೇಂಗಾ ಹೂರಣ ಹೋಳಿಗೆಗಳನ್ನು ಸಿದ್ಧಪಡಿಸಿಕೊಂಡು ಗುರುವಾರದ ಎಳ್ಳು ಅಮಾವಾಸ್ಯೆಯಂದು ಕುಟುಂಬ ಮತ್ತು ಸ್ನೇಹರೊಂದಿಗೆ ಜಮೀನುಗಳಿಗೆ ತೆಗೆದುಕೊಂಡು ಹೋಗಿ ಸಹ ಭೋಜನ ಸವಿದರು.

ಗ್ರಾಮೀಣ ಭಾಗದ ಜನ ಹೊಲಗಳಿಗೆ ಹೋಗಿ ಚರಗ ಚೆಲ್ಲಿ ಎಳ್ಳಮಾವಾಸ್ಯೆ ಆಚರಿಸಿದರೆ, ನಗರ ನಿವಾಸಿಗಳು ಕುಟುಂಬ ಸಮೇತರಾಗಿ ಉದ್ಯಾನವನಗಳಿಗೆ ತೆರಳಿ ಹಬ್ಬವನ್ನು ಸಂಭ್ರಮಿಸಿದರು. ಉದ್ಯಾನವನಗಳಲ್ಲಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಸವಿದರು.

ರೈತಾಪಿ ವರ್ಗಕ್ಕೆ ಬಿಡುವು

ಈ ಎಳ್ಳಮಾವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ. ನಾಡಿನ ಎಲ್ಲೆಡೆ ‘ಚೆರಗ ಚೆಲ್ಲುವ’ ಸಂಭ್ರಮ ಮನೆ ಮಾಡಿರುತ್ತದೆ. ಈ ದಿನ ಭೂತಾಯಿಯನ್ನು ಪೂಜಿಸಿ, ಕುಟುಂಬದವರು ಸಹಭೋಜನ ಮಾಡಿ ಸಂಭ್ರಮಿಸಿದರು. ಈ ಅಮಾವಾಸ್ಯೆಯನ್ನು ಕೆಲವರು ಮಾರ್ಗಶಿರ ಅಮಾವಾಸ್ಯೆ ಎನ್ನತ್ತಾರೆ. ಎನ್ನು ಕೆಲವು ಭಾಗದಲ್ಲಿ ಎಳ್ಳಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಕರ್ನಾಟಕದಲ್ಲಿ ಎಳ್ಳಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅವರು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸಲಾಗುತ್ತದೆ. ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ -ಸಾಂಬಾರು ಅನ್ನು ಮುದ್ದೆ ಅಥವಾ ಉಂಡೆ ಉಂಡೆ ಮಾಡಿ ಹೊಲದ ತುಂಬಾ ಚೆರಗ ಚೆಲ್ಲಲಾಗುತ್ತದೆ.ಹೀಗಾಗಿ ಗುರುವಾರ ಎಳ್ಳು ಅಮಾವಾಸ್ಯೆ ಆಗಿರುವುದರಿಂದ ಈ ಹಬ್ಬದ ಎಲ್ಲಡೆ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿತ್ತು.

ಎಳ್ಳಮಾವಾಸ್ಯೆ ಆಚರಣೆ ಬಂದಿದ್ದು ಹೇಗೆ ?

ಸಾಮಾನ್ಯವಾಗಿ ರೈತರು ಈ ಸಮಯದಲ್ಲಿ ಜೋಳವನ್ನು ಬೆಳೆಯುತ್ತಾರೆ. ಇದು ಅವರಿಗೆ ಕಡಿಮೆ ಖರ್ಚಿನಲ್ಲಿಯೇ ಒಳ್ಳೆಯ ಫಸಲನ್ನು ನೀಡುತ್ತದೆ. ಹಾಗಾಗಿ ಇದು ರೈತರ ಆಪ್ತಮಿತ್ರನಾಗಿರುತ್ತದೆ. ಹಾಗಾಗಿ ಇದೊಂದು ರೀತಿಯ ಗೌರವ ಸೂಚಿಸುವ ಹಬ್ಬವೂ ಆಗಿದೆ. ಕೆಲವು ಪುರಾಣಗಳಲ್ಲಿ ಪಾಂಡವರು- ಕೌರವರು ಕೂಡ ಜೋಳದ ಬೆಳೆಯನ್ನು ಬಿತ್ತಿದ್ದರು ಎಂಬ ಉಲ್ಲೇಖವಿದೆ. ಇನ್ನು ಕೆಲವು ಭಾಗದಲ್ಲಿ ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಈ ಆಹಾರಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ. ಇನ್ನು ಅಮಾವಾಸ್ಯೆ ದಿನವು ಲಕ್ಷ್ಮೀ ದೇವಿ ಮತ್ತು ಶಿವನ ಆರಾಧನೆಗೆ ಮತ್ತು ಪೂರ್ವಜರ ಶಾಂತಿಗಾಗಿ ಬಹಳ ಫಲಪ್ರದವಾಗಿದೆ ಎನ್ನಲಾಗುತ್ತದೆ. ಜೀವನದಲ್ಲಿ ಸಂಪತ್ತು ಮತ್ತು ಸಂತೋಷ ಬಯಸುವವರು ಮಹಾಲಕ್ಷ್ಮೀಯನ್ನು ಈ ದಿನ ಆರಾಧಿಸಬಹುದು.

ಚರಗ ಚೆಲ್ಲುವುದು ಎಂದರೆ ಏನು ?

ಈ ಹಬ್ಬದ ಹಿಂದೆ ಮಹದಾದ ವೈಜ್ಞಾನಿಕ ಕಾರಣವಿದೆ. ಎಳ್ಳು ಅಮವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಎಂಬ ಹುಳ ಬಿದ್ದು ಹಾನಿ ಮಾಡುತ್ತದೆ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಜೋಳ, ಕಡಲೆಯನ್ನು ಹಿಂಗಾರು ಬೆಳೆಯಾಗಿ ರೈತರು ಬೆಳೆಯುತ್ತಾರೆ. ಈ ಹೊತ್ತಲ್ಲಿ “ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ” ಎಂದು ಚರಗ ಚೆಲ್ಲುವಾಗ ಖಾದ್ಯ ತಿನ್ನಲು ಹಕ್ಕಿಗಳು ಬರುತ್ತವೆ. ಅವು ಜೋಳದ ಮಧ್ಯೆ ಆಹಾರ ತಿನ್ನಲು ಇಳಿಯುತ್ತವೆ. ಆಗ ಖಾದ್ಯದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳವನ್ನು ಕೂಡ ತಿನ್ನುತ್ತವೆ. ಇದರಿಂದ ಈ ಹುಳುಗಳ ನಿಯಂತ್ರಣವಾಗುತ್ತದೆ. ಪೈರು ಸೊಂಪಾಗಿ ಬೆಳೆಯುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ತಲಾಂತರದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಪ್ರತೀತಿ ಇದೆ.

( ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner