ಹೃದಯದ ಆರೋಗ್ಯ ಚೆನ್ನಾಗಿರಲು ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು, ಕೆಲಸದ ಒತ್ತಡದಿಂದ ಹೃದಯದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಉತ್ತರ-health news world heart day how overworking hurt your heart health how work pressure impact on health rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯದ ಆರೋಗ್ಯ ಚೆನ್ನಾಗಿರಲು ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು, ಕೆಲಸದ ಒತ್ತಡದಿಂದ ಹೃದಯದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಉತ್ತರ

ಹೃದಯದ ಆರೋಗ್ಯ ಚೆನ್ನಾಗಿರಲು ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು, ಕೆಲಸದ ಒತ್ತಡದಿಂದ ಹೃದಯದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಉತ್ತರ

ಇತ್ತೀಚಿನ ದಿನಗಳಲ್ಲಿ ಹೃದಯದ ಕಾಳಜಿ ಮಾಡುವುದು ಅನಿವಾರ್ಯವಾಗಿದೆ. ಸದ್ದೇ ಇಲ್ಲದೆ ಹೃದ್ರೋಗ ಸಮಸ್ಯೆಗಳು ನಮ್ಮನ್ನು ಆವರಿಸುತ್ತಿವೆ. ಇದಕ್ಕೆ ಕಾರಣಗಳು ಹಲವು. ಈ ಕಾರಣಗಳಲ್ಲಿ ಅತಿಯಾದ ಕೆಲಸವೂ ಒಂದು. ನಾವು ಕೆಲಸಕ್ಕೂ ಹೃದಯಕ್ಕೂ ಏನೆಲ್ಲಾ ಸಂಬಂಧಗಳಿವೆ, ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು ಎಂಬ ಉತ್ತರ ಇಲ್ಲಿದೆ.

ಹೃದಯ ಚೆನ್ನಾಗಿರಲು ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು?
ಹೃದಯ ಚೆನ್ನಾಗಿರಲು ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು? (PC; Canva)

ಮನುಷ್ಯ ದೇಹದ ಪ್ರಮುಖ ಅಂಗಗಳಲ್ಲಿ ಹೃದಯಕ್ಕೆ ಅಗ್ರಸ್ಥಾನ. ಹೃದಯವು ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ರವಾನಿಸುವ ಕೆಲಸ ಮಾಡುತ್ತದೆ. ಆದರೆ ಒಂದು ಮುಷ್ಟಿಯಷ್ಟು ಗಾತ್ರದ ಹೃದಯವು ಖಂಡಿತ ಅತಿಯಾದ ಒತ್ತಡವನ್ನು ತಡೆದುಕೊಳ್ಳುವುದಿಲ್ಲ. ನಮ್ಮ ಬದುಕಿರುವವರೆಗೆ ಆರೋಗ್ಯವಂತರಾಗಿರಬೇಕು ಅಂದ್ರೆ ನಮ್ಮ ಹೃದಯವನ್ನು ಚೆನ್ನಾಗಿ ಕಾಪಿಟ್ಟುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಸಮಸ್ಯೆ ಹೆಚ್ಚುತ್ತಿರಲು ಅತಿಯಾದ ಕೆಲಸವೂ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಮಿತಿ ಮೀರಿದ ಕೆಲಸವು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅತಿಯಾದ ಕೆಲಸದ ಒತ್ತಡವು ಹೃದಯಕ್ಕೆ ಹಾನಿಯುಂಟು ಮಾಡುವುದು ಸುಳ್ಳಲ್ಲ. ಅಧ್ಯಯನಗಳ ಪ್ರಕಾರ, ಅತಿಯಾದ ಕೆಲಸ ಮತ್ತು ಹೃದಯದ ಆರೋಗ್ಯದ ನಡುವೆ ಸಂಬಂಧವಿದೆ. ಹೆಚ್ಚು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುವುದು ಹೃದಯದ ಆರೋಗ್ಯ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಿ.

ಅತಿಯಾದ ಕೆಲಸವು ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವಾರಕ್ಕೆ 35 ರಿಂದ 40 ಗಂಟೆಗಳ ಗುಣಮಟ್ಟವನ್ನು ಮೀರಿ ಕೆಲಸ ಮಾಡುವುದು ಪಾರ್ಶ್ವವಾಯು ಮತ್ತು ಪರಿಧಮನಿಯ ಹೃದಯ ಕಾಯಿಲೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇತ್ತೀಚಿಗೆ ಅಮೆರಿಕಾ ಹಾಗೂ ಯುರೋಪ್‌ನಲ್ಲಿ ನಡೆದ ಅಧ್ಯಯನಗಳ ಪ್ರಕಾರ ಪ್ರತಿ ವಾರ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಕೆಲಸಕ್ಕೆ ಮೀಸಲಿಡುವುದು ಪಾರ್ಶ್ವವಾಯು ಮತ್ತು ಪರಿಧಮನಿಯ ಕಾಯಿಲೆಯಂತಹ ಹೃದ್ರೋಗದ ಸಮಸ್ಯೆಗಳನ್ನು ಶೇ 13 ರಷ್ಟು ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಂಡಿವೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ನಡೆಸಿದ ಜಾಗತಿಕ ಅಧ್ಯಯನವು ಪ್ರತಿ ವಾರ 55 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುವುದು ಸರಿಸುಮಾರು ಶೇ 35ರಷ್ಟು ಪ್ರಮಾಣದಲ್ಲಿ ಪಾರ್ಶ್ವವಾಯು ಮತ್ತು ಹೃದಯದಲ್ಲಿ ರಕ್ತಕೊರತೆಗೆ ಕಾರಣವಾಗುತ್ತಿದೆ, ಮಾತ್ರವಲ್ಲ ಇದರಿಂದ ಶೇ 17ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ.

ಜಡಜೀವನಶೈಲಿಯಿಂದ ದೂರಾಗುವುದು, ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ, ಧೂಮಪಾನ ಕಡಿಮೆ ಮಾಡುವುದು ಮುಂತಾದ ಅಭ್ಯಾಸಗಳಿಂದ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ದೀರ್ಘಾವಧಿ ಕೆಲಸ ಇರುವವರು ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಒತ್ತಡ ನಿಭಾಯಿಸುವುದನ್ನು ಕಲಿಯಿರಿ: ಬಹುತೇಕರಿಗೆ ಕೆಲಸ ಅನಿವಾರ್ಯವಾದ ಕಾರಣ ಒತ್ತಡವಿದ್ದರೂ ಕೆಲಸ ಬಿಡುವ ಹಾಗಿಲ್ಲ. ಹಾಗಂತ ಒತ್ತಡದ‌ಲ್ಲೇ ನೀವು ಬದುಕನ್ನ ಕಳೆದು ಬಿಡಬೇಕು ಎಂದೇನಿಲ್ಲ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡು ದೀರ್ಘಾವಧಿಯವರೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಒತ್ತಡವು ನಮ್ಮ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಕೆಲವು ಹಾರ್ಮೋನ್‌ಗಳ ಬಿಡುಗಡೆಗೆ ಕಾರಣವಾಗುತ್ತದೆ. ದೀರ್ಘಕಾಲದ ಒತ್ತಡವು ಹೃದ್ರೋಗ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹಾಗಾದರೆ ಕೆಲಸ ಒತ್ತಡವನ್ನು ನಿಭಾಯಿಸಲು ಏನು ಮಾಡಬೇಕು ನೋಡಿ.

ಧನಾತ್ಮಕ ಕೆಲಸದ ವಾತಾವರಣ: ಸುರಕ್ಷಿತ ಕೆಲಸದ ವಾತಾವರಣ ಹುಡುಕುವುದು ಬಹಳ ಮುಖ್ಯ. ನಿಮ್ಮ ಕೆಲಸದ ವಾತಾವರಣವು ನಿಮ್ಮ ಹೃದಯ ಸೇರಿದಂತೆ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲಸದ ವಾತಾವರಣ ಮುಕ್ತ ಸಂವಹನ ನಡೆಸಲು ಸಾಧ್ಯವಾಗುವಂತಿರಬೇಕು. ಮಾತನಾಡವುದು ಅಥವಾ ನಿಮಗಾಗುವ ಒತ್ತಡವನ್ನು ಹೇಳಿಕೊಳ್ಳುವುದರಿಂದ ಕೂಡ ನೆಮ್ಮದಿ ಸಿಗುತ್ತದೆ.

ದೈಹಿಕ ಚಟುವಟಿಕೆ: ಕೆಲಸ ಒತ್ತಡ ಎಷ್ಟೇ ಇದ್ದರೂ ನಿಮಗಾಗಿ ನೀವಯ ಸಮಯ ಕೊಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರತಿ ವಯಸ್ಕನು ವಾರಕ್ಕೆ ಕನಿಷ್ಠ ಎರಡು ಗಂಟೆ 30 ನಿಮಿಷಗಳ ಮಧ್ಯಮ-ತೀವ್ರವಾದ ಏರೋಬಿಕ್ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಹೇಳುತ್ತದೆ. ಈಜಲು ಹೋಗುವುದು, ತೋಟಗಾರಿಕೆ, ನೃತ್ಯ ಮಾಡುವುದು ಅಥವಾ ಚುರುಕಾದ ನಡಿಗೆ (ಬ್ರಿಸ್ಕ್ ವಾಕ್‌) ಈ ಎಲ್ಲವೂ ಇದರಲ್ಲಿ ಸೇರಿದೆ. ನಿಮ್ಮ ಹೃದಯಕ್ಕೆ ತಪ್ಪದೇ ವ್ಯಾಯಾಮ ಮಾಡಬೇಕು ಎಂಬುದನ್ನು ಮರೆಯಬೇಡಿ.

ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳಿ: ನೀವು ಡೆಸ್ಕ್ ವರ್ಕ್ ಮಾಡುತ್ತಿದ್ದರೆ, ನಿರಂತರವಾಗಿ ಕುಳಿತುಕೊಳ್ಳುವುದು ಹೃದಯದ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ. ಆ ಕಾರಣಕ್ಕೆ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳಿ. ಕನಿಷ್ಠ ಅರ್ಧ ಗಂಟೆಗಳಿಗೊಮ್ಮೆ ಓಡಾಡಿ. ದೀರ್ಘಕಾಲ ಕುಳಿತುಕೊಳ್ಳುವ ಸಮಯವು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಟಿವಿ ನೋಡುತ್ತಾ, ಮೊಬೈಲ್ ನೋಡುತ್ತಾ ಓಡಾಡುವುದು, ಮನೆಯ ಅಂಗಳದಲ್ಲೇ ವಾಕಿಂಗ್ ಮಾಡುವುದು ಕೂಡ ಹೃದಯದ ಆರೋಗ್ಯ ಚೆನ್ನಾಗಿರಲು ಸಹಕಾರಿ.

ತಾಜಾ ಆಹಾರ ಸೇವಿಸಿ: ಕೆಲಸದ ಬಿಡುವಿನ ವೇಳೆ ಸಿಹಿ ಪಾನೀಯಗಳು, ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವುದನ್ನ ತಪ್ಪಿಸಿ. ತಂಪು ಪಾನೀಯಗಳು, ಕುಕೀಸ್, ಕೇಕ್‌ಗಳು, ಪ್ಯಾಕ್ ಮಾಡಿದ ಉಪ್ಪಿನಾಂಶ ಇರುವ ತಿಂಡಿಗಳು ಮತ್ತು ಸಂಸ್ಕರಿಸಿದ ಮಾಂಸಗಳನ್ನು ತ್ಯಜಿಸಿ. ಹೃದಯಕ್ಕೆ ಆರೋಗ್ಯಕರ ಎನ್ನಿಸುವ ಆಹಾರವು ಉಪ್ಪು, ಸಕ್ಕರೆ, ಅಲ್ಟ್ರಾ-ಪ್ರೊಸೆಸ್ಡ್ ಫುಡ್‌, ಪೂರ್ಣ-ಕೊಬ್ಬಿನ ಡೈರಿ ಉತ್ಪನ್ನಗಳು, ಕರಿದ ಆಹಾರಗಳು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಇತರ ಮೂಲಗಳನ್ನು ಹೊಂದಿರುವುದಿಲ್ಲ, ಅದು ತೂಕ ಏರಿಕೆ, ಕೊಲೆಸ್ಟ್ರಾಲ್ ಮಟ್ಟದ ಏರಿಕೆ ಮತ್ತು ರಕ್ತದೊತ್ತಡವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ಮೆಡಿಟರೇನಿಯನ್ ಡಯೆಟ್‌: ಮೆಡಿಟರೇನಿಯನ್ ಡಯೆಟ್‌ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ, ಇದು ಅಸಂಖ್ಯಾತ ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಧಾನ್ಯಗಳು, ಬೀಜಗಳು ಮತ್ತು ನೇರ ಪ್ರೊ ಟೀನ್, ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬುಗಳ ಮೇಲೆ ಕೇಂದ್ರೀಕರಿಸುತ್ತದೆ. ನ್ಯೂಟ್ರಿಯೆಂಟ್ಸ್ ಜರ್ನಲ್ ಪ್ರಕಾರ, ಮೆಡಿಟರೇನಿಯನ್ ಆಹಾರಕ್ಕೆ ಅಂಟಿಕೊಳ್ಳುವುದು ನಿಮ್ಮ ಹೃದ್ರೋಗದ ಅಪಾಯವನ್ನು ಶೇ 40 ರಷ್ಟು ತಡೆಯಬಹುದು. ಹೃದಯದ ಆರೋಗ್ಯಕ್ಕೆ ಮನೆಯಲ್ಲಿ ತಯಾರಿಸಿದ ತಾಜಾ ಆಹಾರ ಸೇವಿಸುವುದು ಉತ್ತಮ.

ನಿಯಮಿತ ತಪಾಸಣೆ: ನಿಮ್ಮ ಹೃದಯದ ಆರೋಗ್ಯದ ಗುರುತುಗಳಾದ ರಕ್ತದೊತ್ತಡ, ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ ಮಟ್ಟಗಳು, ಬಾಡಿ ಮಾಸ್ ಇಂಡೆಕ್ಸ್ ಮತ್ತು ಸೊಂಟದ ಸುತ್ತಳತೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇವುಗಳಲ್ಲಿ ಏರಿಳಿತವಾದರೆ ನೀವು ಇದರ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ.

mysore-dasara_Entry_Point