Mysore Millets Mela: ಮೈಸೂರಿನಲ್ಲಿ ಸಿರಿಧಾನ್ಯ ಮೇಳ: ರಾಗಿ ತೋರಣ, ಬಗೆಬಗೆಯ ಸಿರಿಧಾನ್ಯದ ಅಡುಗೆಗಳ ರಸದೌತಣ
mysore millet mela ಮೈಸೂರಿನಲ್ಲಿ ಸಹಜಸಮೃದ್ದ ಆಯೋಜಿಸಿರುವ ಮೂರು ದಿನಗಳ ಸಿರಿಧಾನ್ಯ ಮೇಳಕ್ಕೆ ಚಾಲನೆ ದೊರೆತಿದೆ. ಇಲ್ಲಿ ಬಗೆಬಗೆಯ ಸಿರಿಧಾನ್ಯಗಳು, ಅವುಗಳ ಬೀಜ, ರೈತರ ಅನುಭವ, ಅಡುಗೆಗಳು ಗಮನ ಸೆಳಯುತ್ತಿವೆ.
ಮೈಸೂರು: ಇದು ಸಿರಿಧಾನ್ಯದ ವರ್ಷ. ಕೇಂದ್ರ ಸರ್ಕಾರ ಸಿರಿಧಾನ್ಯ ಬೆಳೆಗೆ ಹಾಗೂ ಬಳಕೆಗೆ ಇನ್ನಿಲ್ಲದ ಒತ್ತು ನೀಡುತ್ತಿದೆ. ಇದರ ನಡುವೆಯೇ ಕರ್ನಾಟಕದಲ್ಲೂ ಸಿರಿಧಾನ್ಯ ಉತ್ತೇಜಿಸುವ ಚಟುವಟಿಕೆ ನಿರಂತರವಾಗಿ ನಡೆದಿದೆ.
ಮೈಸೂರಿನಲ್ಲೂಈಗ ಸಿರಿಧಾನ್ಯ ಮೇಳದ ಸಡಗರದ ಕ್ಷಣಗಳು. ಅಲ್ಲಿ ಕರ್ನಾಟಕ ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಬೆಳೆಯುವ ಸಿರಿಧಾನ್ಯದ ತಳಿಗಳಿವೆ. ಸಿರಿಧಾನ್ಯ ಬೆಳೆದ್ದು ರೈತರು ಹಾಗೂ ಅವರ ಕಥಾನಕಗಳಿವೆ. ಸಿರಿಧಾನ್ಯಗಳನ್ನು ಬೆಳೆಯುವ ರೀತಿಯನ್ನೂ ತಿಳಿಸಿಕೊಡಲಾಗುತ್ತದೆ. ಸಿರಿಧಾನ್ಯದ ಬೀಜಗಳೂ ಮೇಳದಲ್ಲಿ ನಿಮಗೆ ಸಿಗುತ್ತವೆ.
ಮತ್ತೊಂದು ಕಡೆ ಸಿರಿಧಾನ್ಯದಿಂದ ತಯಾರಿಸಿದ ಬಗೆಬಗೆಯ ಅಡುಗೆಗಳೂ ಸಿಗುತ್ತವೆ. ಸಿರಿಧಾನ್ಯದ ತಿಂಡಿ, ಊಟ, ಪೇಯಗಳ ರುಚಿಯನ್ನೂ ನೀವು ಸವಿಯಬಹುದು.
ಸಿರಿಧಾನ್ಯಗಳ ವಿಚಾರದಲ್ಲಿಯೇ ದಶಕಗಳಿಂದ ಕೆಲಸ ಮಾಡುತ್ತಿರುವ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ಮೈಸೂರಿನ ನಂಜರಾಜ ಬಹದ್ಧೂರ್ ಛತ್ರದಲ್ಲಿ ಆಯೋಜಿಸಿರುವ ಸಿರಿಧಾನ್ಯ ಮೇಳ ಭಿನ್ನ ಲೋಕವನ್ನು ಅನಾವರಣಗೊಳಿಸುತ್ತದೆ. ಬುಧವಾರ ಹಾಗೂ ಗುರುವಾರವೂ ಸಿರಿಧಾನ್ಯ ಸಂಭ್ರಮವನ್ನು ನೀವು ಸವಿಯಲು ಅವಕಾಶವಿದೆ..
40 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಸಿರಿಧಾನ್ಯದ ವೈವಿಧ್ಯ, ಅಕ್ಕಿ, ಮೌಲ್ಯವರ್ಧಿತ ಪದಾರ್ಥಗಳು ಸಿಗುತ್ತವೆ. ಬಾಯಿ ಚಪ್ಪರಿಸಲು ಸಿರಿಧಾನ್ಯದ ಅಡುಗೆಗಳೂ ಇವೆ. ಇವೆಲ್ಲವೂ ಅಪ್ಪಟ ಸಿರಿಧಾನ್ಯದಿಂದಲೇ ಮಾಡಿದ್ದು, ಇವು ರುಚಿಕರ ಮಾತ್ರವಲ್ಲ. ಆರೋಗ್ಯಕರವೂ ಹೌದು ಎನ್ನುವುದನ್ನು ಅಡುಗೆ ಮಾಡುವವರು ವಿವರಿಸುತ್ತಾರೆ.
ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ಕುಂದಗೋಳದ ಮಹಿಳಾ ಸಂಘದ ಸದಸ್ಯರು ಒರಿಸ್ಸಾದ ರೈತರಿಂದ ರಾಗಿ ತೋರಣ ಮಾಡುವುದ ಕಲಿತರು. ಅವರಿಂದ ಸವದತ್ತಿ ಮಹಿಳಾ ಸಂಘದ ಸದಸ್ಯರು ಕಲಿತು, ರಾಗಿತೋರಣ ಮಾಡಿ ಮೈಸೂರಿಗೆ ತಂದಿದ್ದಾರೆ. ಆಸಕ್ತರಿಗೆ ತೋರಣ ಮಾಡುವುದನ್ನು ಹೇಳಿಕೊಡುವ ಆಸಕ್ತಿ ಇವರದು. ಮೇಳಕ್ಕೆ ಬಂದರೆ ಇದನ್ನು ಕಲಿಯಬಹುದು.
ಸಿರಿಧಾನ್ಯ ಸಂರಕ್ಷಕ ಕುಂದಗೋಳ ತಾಲ್ಲೂಕಿನ ರಾಮಾಪುರ ಗ್ರಾಮದ ಎಲ್ಸಿ ಪಾಟೀಲ ಮೈಸೂರಿನ 'ಸಿರಿಧಾನ್ಯ ಸಂಭ್ರಮ' ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇವರು ಅಪರೂಪದ ಕರಿ ನವಣೆ ಬೀಜದ ಸ್ಯಾಂಪಲ್ ಉಚಿತವಾಗಿ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಪೀಟರ್, ಕಳೆದ ಒಂದು ದಶಕದಿಂದ ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾರೆ. ಸಿರಿಧಾನ್ಯ ಸಂಸ್ಕರಣೆಯಲ್ಲಿ ಅಪಾರ ಅನುಭವವಿರುವ ಪೀಟರ್, ರಾಗಿ ಒಕ್ಕಣೆ ಮಾಡುವ ಸಣ್ಣ ಪ್ರಮಾಣದ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ರಾಗಿ, ನವಣೆ, ಊದಲು ಮೊದಲಾದ ಸಿರಿಧಾನ್ಯಗಳ ತೆನೆಗಳನ್ನು ಈ ಯಂತ್ರಕ್ಕೆ ಉಣಿಸಿದರೆ, ಒಕ್ಕಣೆ ಮಾಡಿ ಶುದ್ಧ ಕಾಳುಗಳನ್ನು ನೀಡುತ್ತದೆ.
ರಾಗಿ ಒಕ್ಕಣೆ ಯಂತ್ರವೂ ಸಿರಿಧಾನ್ಯ ಮೇಳದ ಆಕರ್ಷಣೆ. ಇದೇ ರೀತಿ ರೈತರು ಕಂಡುಕೊಂಡ ಹಲವಾರು ಮಾರ್ಗೋಪಾಯಗಳ ಮಾದರಿಗಳೂ ಮೇಳದಲ್ಲಿವೆ.
ಮೇಳಕ್ಕೆ ಚಾಲನೆ
ಜನರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಯ ಜೊತೆಗೆ ರೈತರೂ ಹೆಚ್ಚಿನ ಮಟ್ಟದಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾವಯವ ಕೃಷಿಯ ಸಿರಿಧಾನ್ಯ ಸಹಕಾರಿಯಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ 'ಸಿರಿಧಾನ್ಯ ಸಂಭ್ರಮಕ್ಕೆ' ಚಾಲನೆ ನೀಡಿ ಮಾತನಾಡಿದ ಅವರು, ಭಾರತವು ಮೂಲತಃ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಗ್ರಾಮೀಣ ಭಾಗದ ಜನರ ಮೂಲ ಕಸುಬು ಕೃಷಿಯಾಗಿದೆ. ಅಗತ್ಯಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಆಹಾರ ಉತ್ಪಾದಿಸುವ ಜೊತೆಗೆ ಕೃಷಿಯು ರೈತರ ಕೈಯಲ್ಲೆ ಇರಬೇಕು. ಕೃಷಿ ಕೈಗಾರಿಕೆಯಾಗಿ ಪರಿವರ್ತನೆಯಾಗುತ್ತಿರುವಾಗ ರೈತರಿಗೆ ನೇರವಾಗಿ ಹೆಚ್ಚಿನ ಲಾಭ ದೊರಕಬೇಕು. ಕೈಗಾರಿಕೋದ್ಯಮಿಗಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಕೊಲಂಬಸ್ ಭಾರತಕ್ಕೆ ಬರುವ ಮುನ್ನವೇ ಬಣ್ಣದ ಜೋಳ ಬೆಳೆಯಲಾಗುತ್ತಿತ್ತು ಎಂಬ ಮಾಹಿತಿ ಇದೆ. ರಾಸಯನಿಕ ಗೊಬ್ಬರ ಬಳಸದೇ ಮಣ್ಣಿನ ಫಲವತ್ತತೆ ಕಾಪಾಡುವ ಸಾವಯವ ಕೃಷಿಗೆ ನಾವೆಲ್ಲರೂ ಬೆಂಬಲ ಕೊಡಬೇಕು ಎಂದರು.
ರೈತರು ಸಾವಯವ ಕೃಷಿಯಲ್ಲಿ ತೊಡಗಲು ರಾಜ್ಯ ಸರ್ಕಾರ ಹೆಕ್ಟೇರ್‌ಗೆ ಹತ್ತು ಸಾವಿರ ರೂ. ನೀಡುವ ಮೂಲಕ ಸಿರಿಧಾನ್ಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕೃಷಿ ಸಚಿವರು ನಮ್ಮೆಲ್ಲರನ್ನೂ ಸೇರಿಸಿ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಆಚರಣೆಯನ್ನು ಮಾಡಿದ್ದರು. ಮೈಸೂರು ಹಾಗೂ ಚಾಮರಾಜನಗರ ಭಾಗದ ರೈತರು ಹೆಚ್ಚಾಗಿ ಸಾವಯವ ಕೃಷಿಯಲ್ಲಿ ತೊಡಸಿಕೊಳ್ಳುವಂತಾಗಲಿ ಎಂದು ಹೇಳಿದರು.
ಹಲವು ರಾಜ್ಯಗಳಲ್ಲಿ ಸಿರಿಧಾನ್ಯಕ್ಕೆ ಒತ್ತು ಸಿಕ್ಕಿದೆ. ಕರ್ನಾಟಕದಲ್ಲೂ ಸಿರಿಧಾನ್ಯ ಮಿಷನ್ ಆರಂಭಿಸಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎನ್ನುವುದು ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಸಲಹೆ.
ನಟಿ, ರಂಗಕರ್ಮಿ ಅಕ್ಷತಾ ಪಾಂಡವಪುರ ಅವರು ಪೌಷ್ಠಿಕ ಪಾಕ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಹಾವೇರಿಯ ಸಿರಿಧಾನ್ಯ ಸಂರಕ್ಷಕ ವೀರಭದ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ದೇವಧಾನ್ಯ ರೈತ ಉತ್ಪಾದಕರ ಕಂಪನಿ ನಿರ್ದೇಶಕಿ ಸಾವಿತ್ರಿ ಕೊಡ್ಲಿ ಸಹಿತ ಹಲವರು ಮೇಳಕ್ಕೆ ಬಂದಿದ್ದಾರೆ.
ವಿಭಾಗ