Childhood Anxiety: ಪುಟ್ಟ ಮಕ್ಕಳಿಗೇಕೆ ಬೆಟ್ಟದಂಥಾ ಚಿಂತೆ; ಬಾಲ್ಯದ ಆತಂಕ ನಿವಾರಿಸಲು ಪೋಷಕರಿಗೆ ಕಿವಿಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  Childhood Anxiety: ಪುಟ್ಟ ಮಕ್ಕಳಿಗೇಕೆ ಬೆಟ್ಟದಂಥಾ ಚಿಂತೆ; ಬಾಲ್ಯದ ಆತಂಕ ನಿವಾರಿಸಲು ಪೋಷಕರಿಗೆ ಕಿವಿಮಾತು

Childhood Anxiety: ಪುಟ್ಟ ಮಕ್ಕಳಿಗೇಕೆ ಬೆಟ್ಟದಂಥಾ ಚಿಂತೆ; ಬಾಲ್ಯದ ಆತಂಕ ನಿವಾರಿಸಲು ಪೋಷಕರಿಗೆ ಕಿವಿಮಾತು

ನಿಮ್ಮ ಮಗು ಒತ್ತಡದಲ್ಲಿ ಇದ್ದಂತೆ ನಿಮಗೆ ಕಾಣಿಸಿದರೆ, ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಮಕ್ಕಳಲ್ಲಿ ಬಾಲ್ಯದ ಆತಂಕವನ್ನು ಹೆಚ್ಚಾಗಲು ಕೆಲವೊಂದು ಗುಪ್ತ ಕಾರಣಗಳು ಇರಬಹುದು. ಅದನ್ನು ಕಂಡುಹಿಡಿದು ನಿವಾರಿಸಲು ಮಕ್ಕಳಿಗೆ ಸಹಾಯ ಮಾಡಿ. ಇಲ್ಲವಾದಲ್ಲಿ ಮಕ್ಕಳ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.

ಪುಟ್ಟ ಮಕ್ಕಳಿಗೇಕೆ ಬೆಟ್ಟದಂಥಾ ಚಿಂತೆ; ಬಾಲ್ಯದ ಆತಂಕ ನಿವಾರಿಸಲು ಪೋಷಕರಿಗೆ ಕಿವಿಮಾತು
ಪುಟ್ಟ ಮಕ್ಕಳಿಗೇಕೆ ಬೆಟ್ಟದಂಥಾ ಚಿಂತೆ; ಬಾಲ್ಯದ ಆತಂಕ ನಿವಾರಿಸಲು ಪೋಷಕರಿಗೆ ಕಿವಿಮಾತು

ಮಕ್ಕಳಲ್ಲಿ ಬಾಲ್ಯದಲ್ಲೇ ಹಲವು ಕಾರಣಗಳಿಂದ ಆತಂಕ ಮನೆ ಮಾಡಬಹುದು. ಇದಕ್ಕೆ ಕಾರಣಗಳು ಹಲವು. ಆತಂಕ ಎನ್ನುವುದು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಭಿನ್ನವಾಗಿರುತ್ತವೆ. ಆದರೆ, ಅವೆಲ್ಲವೂ ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿವೆ. ಹೀಗಾಗಿ ಮಕ್ಕಳ ಆತಂಕವನ್ನು ನಿವಾರಿಸುವಲ್ಲಿ ಪೋಷಕರ ಪಾತ್ರ ತುಂಬಾ ಪ್ರಮುಖವಾದುದು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯು ಸಾಮಾನ್ಯವಾಗುತ್ತಿದ್ದು, ಅದನ್ನು ಹೆತ್ತವರು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಮಕ್ಕಳಲ್ಲಿ ಶೈಕ್ಷಣಿಕ ಒತ್ತಡಗಳು, ಸಾಮಾಜಿಕ ಸವಾಲುಗಳು ಮತ್ತು ಕೆಲವೊಂದು ಕೌಟುಂಬಿಕ ಅಂಶಗಳಿಂದ ಒತ್ತಡ ಸೃಷ್ಟಿಯಾಗಬಹುದು. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮಾನಸಿಕ ಆರೋಗ್ಯದತ್ತ ಗಮನ ಹರಿಸಬೇಕು.

ಮಕ್ಕಳಲ್ಲಿ ಬಾಲ್ಯದ ಆತಂಕಕ್ಕೆ ಸಾಮಾನ್ಯ ಕಾರಣಗಳು

ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫ್ಯಾಮಿಲಿ ಥೆರಪಿಸ್ಟ್ ಮತ್ತು ದೆಹಲಿಯ ಮೈಂಡ್ವೆಲ್ ಕೌನ್ಸೆಲ್ ಸಂಸ್ಥಾಪಕಿ ಅರ್ಚನಾ ಸಿಂಘಾಲ್, ಬಾಲ್ಯದ ಆತಂಕಕ್ಕೆ ಕಾರಣಗಳನ್ನು ವಿವರಿಸಿದ್ದಾರೆ. ಅವುಗಳು ಹೀಗಿವೆ.

  • ಆನುವಂಶಿಕ ಅಂಶ: ಆತಂಕದ ಸಮಸ್ಯೆಗೆ ಕುಟುಂಬದ ಇತಿಹಾಸ ಕಾರಣವಾಗಿರಬಹುದು.
  • ಪರಿಸರದ ಅಂಶ: ಪರಿಸರದ ಅಂಶಗಳು ಮಕ್ಕಳ ಆತಂಕದಲ್ಲಿ ಪಾತ್ರ ವಹಿಸುತ್ತವೆ. ಪೋಷಕರ ನಡುವೆ ಸಮಸ್ಯೆ, ಕುಟುಂಬದಲ್ಲಿ ಜಗಳ ಅಥವಾ ಪ್ರೀತಿಪಾತ್ರರ ನಷ್ಟವು ಆತಂಕವನ್ನು ಉಂಟುಮಾಡಬಹುದು. ಅತೃಪ್ತ ಕುಟುಂಬವು ಆತಂಕದ ಭಾವನೆಗಳಿಗೆ ಕಾರಣವಾಗುತ್ತದೆ.
  • ಸಾಮಾಜಿಕ ಪ್ರಭಾವ: ಸಮಾನ ಮನಸ್ಕ ಒತ್ತಡ, ಬೆದರಿಸುವಿಕೆ ಮತ್ತು ಸಾಮಾಜಿಕ ಸಂವಹನವೂ ಆತಂಕಕ್ಕೆ ಕಾರಣವಾಗುತ್ತದೆ. ಫಿಟ್ ಆಗಿರಲು ಒತ್ತಡ ಬಿದ್ದರೆ ಆತಂಕವನ್ನು ಹೆಚ್ಚಿಸುತ್ತದೆ.
  • ಶೈಕ್ಷಣಿಕ ಒತ್ತಡ: ಇಂದಿನ ಸನ್ನಿವೇಶದಲ್ಲಿ ಮಕ್ಕಳಿಗೆ ಹೆಚ್ಚು ಅಂಕಗಳನ್ನು ಪಡೆಯಲು ಸಾಕಷ್ಟು ಒತ್ತಡವಿದೆ. ಪರೀಕ್ಷೆ ಮತ್ತು ಅದರಲ್ಲಿ ವೈಫಲ್ಯದ ಭಯವೂ ಮಕ್ಕಳಲ್ಲಿ ಆತಂಕವನ್ನು ಸೃಷ್ಟಿಸುತ್ತದೆ.

ಪೋಷಕರು ಮಕ್ಕಳನ್ನು ನಿಭಾಯಿಸಲು ತಂತ್ರಗಳು

ಮುಕ್ತ ಸಂವಹನ

ಮಕ್ಕಳು ಅವರ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸಿ. ಮಕ್ಕಳ ಮಾತುಗಳನ್ನು ಬಹಳ ತಾಳ್ಮೆಯಿಂದ, ಎಚ್ಚರಿಕೆಯಿಂದ ಆಲಿಸಿ. ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಪ್ರೀತಿಯಿಂದ ಸಂಭಾಷಣೆ ನಡೆಸಿದ ನಂತರ, ಅವರು ತುಂಬಾ ಹಗುರವಾಗಿರುತ್ತಾರೆ.

ದಿನಚರಿ ಪಾಲಿಸಿ

ಮಕ್ಕಳಿಗೆ ಆರೋಗ್ಯಕರ ದಿನಚರಿಯನ್ನು ರಚಿಸಲು ಮತ್ತು ಅನುಸರಿಸಲು ಹೇಳಿಕೊಡಿ. ಸ್ಥಿರವಾದ ದೈನಂದಿನ ದಿನಚರಿಗಳು ಮಕ್ಕಳಿಗೆ ತಮ್ಮ ಮೇಲೆ ಹೆಚ್ಚು ನಿಯಂತ್ರಣ ಅನುಭವಿಸಲು ನೆರವಾಗುತ್ತದೆ. ಅದು ಆತಂಕದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿಶ್ರಾಂತಿ ತಂತ್ರಗಳನ್ನು ಕಲಿಸಿ

ಮಕ್ಕಳಿಗೆ ಧ್ಯಾನ, ಯೋಗ ಮತ್ತು ಕೆಲವು ದೈಹಿಕ ವ್ಯಾಯಾಮಗಳನ್ನು ಪರಿಚಯಿಸಿ. ಆತಂಕವನ್ನು ನಿರ್ವಹಿಸಲು ಮತ್ತು ಕಡಿಮೆ ಮಾಡಲು ಇವು ನಿಮಗೆ ತುಂಬಾ ಸಹಾಯ ಮಾಡುತ್ತವೆ. ಮೋಜಿನ ಚಟುವಟಿಕೆಗಳಲ್ಲಿ ಮಕ್ಕಳೊಂದಿಗೆ ನೀವೂ ಭಾಗಿಯಾಗಿ.

ವೃತ್ತಿಪರ ಸಹಾಯವನ್ನು ಪಡೆಯಿರಿ

ಮಗುವಿನ ನಡವಳಿಕೆಯಲ್ಲಿ ಆತಂಕದ ಗಮನಾರ್ಹ ಪರಿಣಾಮ ಕಂಡರೆ, ಅವರೊಂದಿಗೆ ಮಾತನಾಡಿ ಬಗೆಹರಿಸಿ. ಆದರೂ, ಅವರಲ್ಲಿ ಬದಲಾವಣೆ ಕಾಣದಿದ್ದರೆ, ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

ಒತ್ತಡಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ

ಮಕ್ಕಳಿಗೆ ಯಾವ ವಿಷಯ ಆತಂಕವನ್ನು ಉಂಟುಮಾಡುತ್ತಿದೆ ಎಂಬುದನ್ನು ಕಂಡುಕೊಳ್ಳಿ. ಆ ನಂತರ ವಿಷಯದಿಂದ ಮಕ್ಕಳನ್ನು ದೂರವಿರಿಸಲು ಪ್ರಯತ್ನಿಸಿ. ಶೈಕ್ಷಣಿಕ ಒತ್ತಡ ಅಥವಾ ಸಾಮಾಜಿಕ ಸಂವಹನದಿಂದ ಸೃಷ್ಟಿಯಾಗಿದ್ದರೂ ಅವರ ಆತಂಕವನ್ನು ನಿರ್ವಹಿಸಲು ನೆರವಾಗಿ.

ಮಕ್ಕಳಲ್ಲಿ ನಿತ್ಯ ಮುಕ್ತ ಸಂವಹನ ಮಾಡುತ್ತಿದ್ದರೆ, ಅವರಲ್ಲಿ ಆತಂಕ ಅಥವಾ ಒತ್ತಡದ ಸಮಸ್ಯೆ ಬರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರ ಜೀವನಶೈಲಿ ಮಕ್ಕಳ ಮೇಲೆ ಗಾಢ ಪ್ರಭಾವ ಬೀರುತ್ತವೆ. ಹೀಗಾಗಿ ಮಕ್ಕಳ ಆತಂಕದ ಈ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅದನ್ನು ನಿಭಾಯಿಸುವ ತಂತ್ರಗಳನ್ನು ಕಂಡುಕೊಳ್ಳಿ. ಮಕ್ಕಳ ಭಾವನಾತ್ಮಕ ಯೋಗಕ್ಷೇಮವನ್ನು ಕಾಪಾಡುವುದು ಪೋಷಕರ ಕರ್ತವ್ಯ. ಅದಕ್ಕೆ ಪೋಷಕರ ಭಾವನಾತ್ಮಕ ಆರೋಗ್ಯವೂ ಉತ್ತಮವಾಗಿರಬೇಕು.

Whats_app_banner