Protein Rich Food: ಮೊಟ್ಟೆ ತಿನ್ನೋದು ಕಷ್ಟನಾ, ಚಿಂತೆ ಬೇಡ; ಈ ಸಸ್ಯಾಹಾರಿ ಪದಾರ್ಥಗಳಲ್ಲಿದೆ ಮೊಟ್ಟೆಗಿಂತ ಹೆಚ್ಚು ಪ್ರೊಟೀನ್‌
ಕನ್ನಡ ಸುದ್ದಿ  /  ಜೀವನಶೈಲಿ  /  Protein Rich Food: ಮೊಟ್ಟೆ ತಿನ್ನೋದು ಕಷ್ಟನಾ, ಚಿಂತೆ ಬೇಡ; ಈ ಸಸ್ಯಾಹಾರಿ ಪದಾರ್ಥಗಳಲ್ಲಿದೆ ಮೊಟ್ಟೆಗಿಂತ ಹೆಚ್ಚು ಪ್ರೊಟೀನ್‌

Protein Rich Food: ಮೊಟ್ಟೆ ತಿನ್ನೋದು ಕಷ್ಟನಾ, ಚಿಂತೆ ಬೇಡ; ಈ ಸಸ್ಯಾಹಾರಿ ಪದಾರ್ಥಗಳಲ್ಲಿದೆ ಮೊಟ್ಟೆಗಿಂತ ಹೆಚ್ಚು ಪ್ರೊಟೀನ್‌

ದೇಹದಲ್ಲಿ ಪ್ರೊಟೀನ್‌ ಅಂಶ ಕಡಿಮೆ ಇದೆ ಎಂದಾಗ ಮೊಟ್ಟೆ ತಿನ್ನಿ ಎನ್ನುವುದು ಸಹಜ. ಆದರೆ ಹಲವರಿಗೆ ಮೊಟ್ಟೆ ಇಷ್ಟವಾಗುವುದಿಲ್ಲ. ಹಾಗಂತ ದೇಹಕ್ಕೆ ಪ್ರೊಟೀನ್‌ ಬೇಕಲ್ಲ; ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಸೋಯಾಬೀನ್‌, ಚಿಯಾ ಸೀಡ್‌, ನವಣೆ ಅಕ್ಕಿಯಂತಹ ಆಹಾರಗಳಲ್ಲಿ ಮೊಟ್ಟೆಗಿಂತಲೂ ಹೆಚ್ಚು ಪ್ರೊಟೀನ್‌ ಅಂಶವಿದ್ದು, ಇವು ತೂಕ ಇಳಿಕೆಗೂ ಸಹಕಾರಿ.

ಪ್ರೊಟೀನ್‌ ಸಮೃದ್ಧ ಆಹಾರ ಪದಾರ್ಥಗಳು
ಪ್ರೊಟೀನ್‌ ಸಮೃದ್ಧ ಆಹಾರ ಪದಾರ್ಥಗಳು

ಕೋವಿಡ್‌ ಕಾಲಘಟ್ಟದ ನಂತರ ಜನರಲ್ಲಿ ಆರೋಗ್ಯ ಹಾಗೂ ಆಹಾರಕ್ರಮಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಇತ್ತೀಚೆಗೆ ಜನರು ಹೆಚ್ಚು ಪ್ರೊಟೀನ್‌, ಕ್ಯಾಲ್ಸಿಯಂ ಅಂಶವಿರುವ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡುತ್ತಿದ್ದಾರೆ. ಇದು ಅವಶ್ಯವೂ ಹೌದು.

ಸಮತೋಲಿತ ಡಯೆಟ್‌ ವಿಚಾರಕ್ಕೆ ಬಂದಾಗ ಪ್ರೊಟೀನ್‌ ಬಹಳ ಮುಖ್ಯವಾಗುತ್ತದೆ. ಮನುಷ್ಯನ ದೇಹ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಇದು ಅವಶ್ಯ. ಇದು ನಮ್ಮ ಸ್ನಾಯು ಹಾಗೂ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರೊಟೀನ್‌ ಸಮೃದ್ಧವಾಗಿರುವ ಆಹಾರಗಳು ತೂಕ ಇಳಿಕೆಗೂ ಸಹಕಾರಿ. ಇವುಗಳ ಸೇವನೆಯಿಂದ ದಿನವಿಡಿ ಹೊಟ್ಟೆ ತುಂಬಿದಂತಿರುತ್ತದೆ.

ಹಲವರು ಪ್ರೊಟೀನ್‌ ವಿಚಾರಕ್ಕೆ ಬಂದಾಗ ಮೊಟ್ಟೆ ತಿನ್ನುವುದು ಬೆಸ್ಟ್‌ ಎನ್ನುತ್ತಾರೆ. ಅಲ್ಲದೆ ಪ್ರೊಟೀನ್‌ನಾಗಿ ಮೊಟ್ಟೆ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಕೆಲವು ಸಸ್ಯಾಹಾರಿ ಪದಾರ್ಥಗಳಲ್ಲಿ ಮೊಟ್ಟೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಅಂಶವಿರುತ್ತದೆ. ಯುನೈಟೆಡ್‌ ಸ್ಟೇಟ್ಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಅಗ್ರಿಕಲ್ಚರ್‌ (ಯುಎಸ್‌ಡಿಎ) ಪ್ರಕಾರ ಒಂದು ಮೊಟ್ಟೆಯಲ್ಲಿ 6 ಗ್ರಾಂನಷ್ಟು ಪ್ರೊಟೀನ್‌ ಇರುತ್ತದೆ. 100 ಗ್ರಾಂ ಮೊಟ್ಟೆಯಲ್ಲಿ 13 ಗ್ರಾಂ ಪ್ರೊಟೀನ್‌ ಅಂಶವಿರುತ್ತದೆ.

ಹಾಗಾದರೆ ಪ್ರೊಟೀನ್‌ ಸಮೃದ್ಧ ಆಹಾರ ಪದಾರ್ಥಗಳ ವಿಷಯಕ್ಕೆ ಬಂದಾಗ ಮೊಟ್ಟೆಗೆ ಸಮನಾಗಿರುವ ಸಸ್ಯಾಹಾರಿ ಪದಾರ್ಥಗಳು ಯಾವುವು ಎಂಬುದಕ್ಕೆ ಇಲ್ಲಿದೆ ಉತ್ತರ.

ಸೋಯಾಬೀನ್‌

ಹಲವರಿಗೆ ಸೋಯಾಬೀನ್‌ ತಿನ್ನುವುದು ಇಷ್ಟವಾಗುವುದಿಲ್ಲ. ಆದರೆ ಸೋಯಾಬೀನ್ ಸಸ್ಯ ಆಧಾರಿತ ಪ್ರೊಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಯುಎಸ್‌ಡಿಎ ಪ್ರಕಾರ 100 ಗ್ರಾಂ ಸೋಯಾಬೀನ್‌ನಲ್ಲಿ 36 ಗ್ರಾಂ ಪ್ರೊಟೀನ್‌ ಅಂಶವಿರುತ್ತದೆ. ಮೊಟ್ಟೆಗೆ ಪರ್ಯಾಯವಾಗಿ ಇದನ್ನು ಸೇವಿಸಬಹುದು. ದೇಹದಲ್ಲಿ ಪ್ರೊಟೀನ್‌ ಸಂಗ್ರಹವಾಗಲು ವಾರಕ್ಕೆ ಒಮ್ಮೆ ಸೋಯಾ ಬೀನ್‌ನಿಂದ ತಯಾರಿಸಿದ ಸಾರು ಅಥವಾ ಸೋಯಾ ಬೀನ್‌ ಹಾಲು ಕುಡಿಯಬಹುದು.

ಕಾಬೂಲ್‌ ಕಡಲೆ

ಕಾಬೂಲ್‌ ಕಡಲೆಯನ್ನು ಪ್ರಪಂಚದಾದ್ಯಂತ ವಿವಿಧ ಖಾದ್ಯಗಳ ತಯಾರಿಕೆಗೆ ಬಳಸುತ್ತಾರೆ. ಪ್ರೊಟೀನ್‌ ಸಮೃದ್ಧ ಕಾಬೂಲ್‌ ಕಡಲೆಯನ್ನು ಕಡಲೆ ಕರಿ, ಹಮ್ಮಸ್‌, ಸೂಪ್‌ ಮುಂತಾದ ಖಾದ್ಯಗಳ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. 100 ಗ್ರಾಂ ಬೇಯಿಸಿದ ಕಡಲೆಯಲ್ಲಿ 19ಗ್ರಾಂ ಪ್ರೊಟೀನ್‌ ಇರುತ್ತದೆ.

ಹುರುಳಿ ಹಿಟ್ಟು

ಹುರುಳಿ ಹಿಟ್ಟು ಅಥವಾ ಬಕ್ವಿಟ್‌ನಲ್ಲಿ ಪ್ರೊಟೀನ್‌ ಸಮೃದ್ಧವಾಗಿದೆ. ಈ ಸೂಪರ್‌ಫುಡ್‌ ಅನ್ನು ರೊಟ್ಟಿ, ಪ್ಯಾನ್‌ಕೇಕ್‌ಗಳ ತಯಾರಿಕೆಗೆ ಬಳಸಲಾಗುತ್ತದೆ. ಯುನೈಟೆಡ್‌ ಸ್ಟೇಟ್ಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಅಗ್ರಿಕಲ್ಚರ್‌ ಪ್ರಕಾರ 100 ಹುರುಳಿಹಿಟ್ಟಿನಲ್ಲಿ 13.2 ಗ್ರಾಂನಷ್ಟು ಪ್ರೊಟೀನ್‌ ಅಂಶವಿರುತ್ತದೆ.

ಚಿಯಾ ಬೀಜಗಳು

ಚಿಯಾ ಬೀಜಗಳು ನೋಡಲು ಕಾಮಕಸ್ತೂರಿ ಬೀಜದಂತೆ ಇರುತ್ತವೆ, ಇವು ಕಪ್ಪಗಿದ್ದು ಚಿಕ್ಕ ಕಾಳುಗಳಂತೆ ಇರುತ್ತವೆ. ಇವು ಉತ್ಕರ್ಷಣ ನಿರೋಧಕಗಳು ಮಾತ್ರವಲ್ಲ ಇದರಲ್ಲಿ ಒಮೆಗಾ-3 ಅಂಶ ಸಮೃದ್ಧವಾಗಿದೆ. ಚಿಯಾ ಬೀಜಗಳು ಪ್ರೊಟೀನ್‌ ಸಮೃದ್ಧವಾಗಿದ್ದು, ಇವುಗಳನ್ನು ಪ್ರತಿದಿನ ಸೇವಿಸುವುದು ಉತ್ತಮ. ಯುಎಸ್‌ಡಿಎ ಪ್ರಕಾರ 100ಗ್ರಾಂ ಚಿಯಾ ಬೀಜಗಳಲ್ಲಿ 17 ಗ್ರಾಂ ಪ್ರೊಟೀನ್‌ ಅಂಶವಿರುತ್ತದೆ.

ನವಣೆ ಅಕ್ಕಿ

ನವಣೆ ಅಕ್ಕಿ ಅಥವಾ ಕ್ವಿನೋವಾವು ತೂಕ ಇಳಿಸಿಕೊಳ್ಳಲು ಉತ್ತಮವಾಗಿದೆ ಎನ್ನುವ ಕಾರಣಕ್ಕೆ ಹಲವರು ಇದನ್ನು ಬಳಸುತ್ತಾರೆ. ಆದರೆ ಇದು ಒಂಭತ್ತು ಅಗತ್ಯ ಅಮೈನೊ ಆಮ್ಲಗಳನ್ನು ಒಳಗೊಂಡಿರುವ ಕಾರಣ ಇದರಲ್ಲಿ ಪ್ರೊಟೀನ್‌ ಸಮೃದ್ಧ ಎಂದು ಪರಿಗಣಿಸಲಾಗುತ್ತದೆ. 100 ಗ್ರಾಂ ನವಣೆ ಅಕ್ಕಿಯಲ್ಲಿ 16 ಗ್ರಾಂ ಪ್ರೊಟೀನ್‌ ಇರುತ್ತದೆ.

ಈ ಸಸ್ಯಹಾರಿ ಆಹಾರಗಳನ್ನು ನೀವು ಮೊಟ್ಟೆಗೆ ಪರ್ಯಾಯವಾಗಿ ಬಳಸಬಹುದು. ಇವು ದೇಹಾರೋಗ್ಯವನ್ನು ಉತ್ತಮಗೊಳಿಸುವ ಜೊತೆಗೆ ತೂಕ ಇಳಿಕೆಗೂ ಸಹಕಾರಿ.

Whats_app_banner