ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ವಾದಿಸೋದೇಕೆ? ಆತ್ಮವಿಶ್ವಾಸದ ಹಿಂದಿನ ಕಾರಣ ಅಧ್ಯಯನದಲ್ಲಿ ಬಹಿರಂಗ
ಕನ್ನಡ ಸುದ್ದಿ  /  ಜೀವನಶೈಲಿ  /  ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ವಾದಿಸೋದೇಕೆ? ಆತ್ಮವಿಶ್ವಾಸದ ಹಿಂದಿನ ಕಾರಣ ಅಧ್ಯಯನದಲ್ಲಿ ಬಹಿರಂಗ

ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ವಾದಿಸೋದೇಕೆ? ಆತ್ಮವಿಶ್ವಾಸದ ಹಿಂದಿನ ಕಾರಣ ಅಧ್ಯಯನದಲ್ಲಿ ಬಹಿರಂಗ

ಕೆಲವೊಂದು ಮಾನಸಿಕ ಕಾರಣದಿಂದಾಗಿ ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ವಾದಿಸೋದೇಕೆ? ಅಧ್ಯಯನದಲ್ಲಿ ಕಾರಣ ಬಹಿರಂಗ
ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ವಾದಿಸೋದೇಕೆ? ಅಧ್ಯಯನದಲ್ಲಿ ಕಾರಣ ಬಹಿರಂಗ (Freepik)

ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು ತಿದ್ದಿ ನಡೆಯುವುದು ಮುಖ್ಯ. ಆದರೆ, ಕೆಲವು ಜನರ ಸ್ವಭಾವವೇ ಭಿನ್ನ. ಅವರು ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅವರು ತಪ್ಪು ಮಾಡಿದ್ದಾರೆಂದು ನಿಮಗೆ ತಿಳಿದ ನಂತರವೂ, ಅವರು ಮಾತ್ರ ತಾವು ಮಾಡಿದ್ದು ಸರಿ ಎಂದು ಆತ್ಮವಿಶ್ವಾಸದಿಂದ ನುಡಿದರೆ ನಿರಾಶೆ ಆಗದೆ ಇರದು. ಅಧ್ಯಯನವೊಂದರ ಪ್ರಕಾರ, ಜನರು ತಪ್ಪಿದ್ದುಕೊಂಡೂ ಆತ್ಮವಿಶ್ವಾಸದಿಂದ ವಾದ ಮಾಡುವುದರ ಹಿಂದೆ ಮಾನಸಿಕ ಕಾರಣಗಳೂ (psychological reason) ಇವೆಯಂತೆ.

ಪ್ಲೋಸ್ ಒನ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು, ಜನರು ತಪ್ಪು ಮಾಡಿದಾಗಲೂ ಏಕೆ ಆತ್ಮವಿಶ್ವಾಸದಿಂದ ಇರುತ್ತಾರೆ ಎಂಬುದನ್ನು ವಿವರಿಸಿದೆ. ಒಬ್ಬರ ಬಳಿ ಎಲ್ಲಾ ಮಾಹಿತಿ ಇದೆ ಎಂದು ಅಂದುಕೊಂಡು, ತಮಗೆ ಏನೂ ತಿಳಿದಿಲ್ಲವಾದರೂ, ಒಂದು ಅಭಿಪ್ರಾಯ ರೂಪಿಸಲು ಅವರು ಬಯಸುತ್ತಾರೆ. ಜನರು ತಮ್ಮ ಬಳಿ ಇರುವ ಮಾಹಿತಿಯ ಮೇಲಿನ ವಿಶ್ವಾಸದ ಆಧಾರದಲ್ಲಿ ಸಂದರ್ಭಗಳು ಅಥವಾ ಜನರ ಬಗ್ಗೆ ಹೇಗೆ ತೀರ್ಪು ನೀಡುತ್ತಾರೆ ಎಂಬುದನ್ನು ಅವರು ಅಳೆಯುತ್ತಾರೆ. ಇದೇ ವೇಳೆ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ ಸಹ, ಇದೆ ಎಂದು ಭಾಸವಾಗುವಂತೆ ಮಾತನಾಡುತ್ತಾರೆ.

ಅಧ್ಯಯನದ ಸಹ-ಲೇಖಕರಾದ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಇಂಗ್ಲಿಷ್ ಪ್ರಾಧ್ಯಾಪಕ ಆಂಗಸ್ ಫ್ಲೆಚರ್, “ನಮ್ಮ ಮಿದುಳು ಬಹಳ ಕಡಿಮೆ ಮಾಹಿತಿ ಇದ್ದರೂ ಸಮಂಜಸವಾದ ತೀರ್ಮಾನಕ್ಕೆ ಬರಬಹುದು ಎಂಬ ಆತ್ಮವಿಶ್ವಾಸವನ್ನು ಹೊಂದಿವೆ” ಎಂದು ಹೇಳಿದರು. “ಜನರು ಬಹಳ ಬೇಗನೆ ತೀರ್ಪು ನೀಡಲು ಮುಂದಾಗುತ್ತಾರೆ” ಎಂದು ಅವರು ಹೇಳುತ್ತಾರೆ.

ಅಧ್ಯಯನ ನಡೆಸಿದ್ದು ಹೀಗೆ

ಈ ಅಧ್ಯಯನಕ್ಕೆ ಸರಾಸರಿ 40 ವರ್ಷ ವಯಸ್ಸಿನ 1300 ಜನರನ್ನು ಬಳಸಿಕೊಳ್ಳಲಾಗಿದೆ. ಅವರಿಗೆ ಕಾಲ್ಪನಿಕ ಕಥೆಯೊಂದನ್ನು ನೀಡಲಾಯಿತು. ಸುಮಾರು 500 ಜನರಿಗೆ ಪೂರಕವಾಗಿ ಮೂರು ವಾದಗಳನ್ನು ಮತ್ತು ಒಂದು ತಟಸ್ಥ ಅಂಶವನ್ನು ನೀಡಲಾಯಿತು. 500 ಜನರ ಮತ್ತೊಂದು ಗುಂಪಿಗೆ ಕಥೆಯ ಪರವಾಗಿಲ್ಲದ ಮೂರು ವಾದಗಳನ್ನು ನೀಡಲಾಯಿತು. ಜೊತೆಗೆ ಮೊದಲ ಗುಂಪಿಗೆ ನೀಡಿದ ಅದೇ ತಟಸ್ಥ ಅಂಶವನ್ನು ಕೂಡಾ ನೀಡಲಾಯಿತು. ಅಂತಿಮ 300 ಜನರ ಗುಂಪನ್ನು ನಿಯಂತ್ರಣ ಗುಂಪು ಎಂದು ಗುರುತಿಸಲಾಯಿತು. ಇವರಿಗೆ ಮೂರು ಸಕಾರಾತ್ಮಕ, ಮೂರು ಋಣಾತ್ಮಕ ಮತ್ತು ಒಂದು ತಟಸ್ಥ ಸೇರಿದಂತೆ ಎಲ್ಲಾ ಏಳು ವಾದಗಳನ್ನು ನೀಡಲಾಯ್ತು.

ಸಂಶೋಧಕರು ತಮ್ಮ ಅಭಿಪ್ರಾಯಗಳ ಬಗ್ಗೆ ಗುಂಪುಗಳಲ್ಲಿ ಕೇಳಿದರು. ಹೆಚ್ಚಿನ ಜನರು ತಾವು ಓದಿದ ವಾದವನ್ನು ಒಪ್ಪಿದ ಸಂದರ್ಭ ಹೆಚ್ಚು ಮತ್ತು ಆ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಕಷ್ಟು ಮಾಹಿತಿ ಇದೆ ಎಂದು ವಿಶ್ವಾಸ ಹೊಂದಿದ್ದಾರೆ ಎಂದು ಬಹಿರಂಗಪಡಿಸಿತು. ಕೊನೆಯ 300 ಮಂದಿಯ ನಿಯಂತ್ರಣ ಗುಂಪಿನಲ್ಲಿರುವವರಿಗೆ ಹೋಲಿಸಿದರೆ, ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಓದುವ ಜನರು ತಮ್ಮ ಅಭಿಪ್ರಾಯದಲ್ಲಿ ಹೆಚ್ಚು ವಿಶ್ವಾಸ ಹೊಂದಿರುವುದು ಗೊತ್ತಾಗಿದೆ. ಉಳಿದ ಅಂಶಗಳನ್ನು ಓದದಿದ್ದರೂ, ಓದಿದ ಒಂದು ಅಂಶವನ್ನು ಸಮರ್ಥನೆ ಮಾಡಿದ್ದಾರೆ.

ಅಭಿಪ್ರಾಯದಲ್ಲಿ ಬದಲಾವಣೆ

ಎದುರಾಳಿ ತಂಡದ ಮಾಹಿತಿಯನ್ನು ಒದಗಿಸಿದಾಗ, ಅವರು ತಮ್ಮ ಮನಸ್ಸನ್ನು ಬದಲಾಯಿಸಲು ಸಿದ್ಧರಿದ್ದರು. ಈ ಕುರಿತು ವಿವರಿಸಿದ ಫ್ಲೆಚರ್, “ಜನರು ತಮ್ಮ ತೀರ್ಪುಗಳಿಗೆ ವಿರುದ್ಧವಾದ ಮಾಹಿತಿಯನ್ನು ಪಡೆದಾಗಲೂ ತಮ್ಮ ಮೂಲ ತೀರ್ಪುಗಳಿಗೆ ನಿಜವಾಗಿಯೂ ಅಂಟಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಅವರಿಗೆ ನಂಬಲರ್ಹವೆಂದು ತೋರುವ ಏನನ್ನಾದರೂ ಹೇಳಿದರೆ, ಅವರು ತಮ್ಮ ಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಲು ಸಿದ್ಧರಿದ್ದರು,” ಎಂದರು.

“ಜನರು ತುಂಬಾ ಮುಕ್ತ ಮನಸ್ಸಿನವರು. ನಾವು ಊಹಿಸುವುದಕ್ಕಿಂತಲೂ ಹೆಚ್ಚಾಗಿ ಅವರು ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಲು ಸಿದ್ಧರಿದ್ದಾರೆ,” ಎಂದು ಸಂಶೋಧಕರು ವಿವರಿಸಿದ್ದಾರೆ.

Whats_app_banner