Relationship: ಗಂಡ-ಹೆಂಡತಿ ನಡುವಿನ ನಿಂದನೆಯು ವಿಚ್ಛೇದನಕ್ಕೆ ಕಾರಣವಾಗಬಹುದು: ದಂಪತಿಗಳ ನಡುವೆ ಇರಲಿ ಭಾವನಾತ್ಮಕ ಬಂಧ-relationship how to recognize abuse in a relationship signs of emotional abuse prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಗಂಡ-ಹೆಂಡತಿ ನಡುವಿನ ನಿಂದನೆಯು ವಿಚ್ಛೇದನಕ್ಕೆ ಕಾರಣವಾಗಬಹುದು: ದಂಪತಿಗಳ ನಡುವೆ ಇರಲಿ ಭಾವನಾತ್ಮಕ ಬಂಧ

Relationship: ಗಂಡ-ಹೆಂಡತಿ ನಡುವಿನ ನಿಂದನೆಯು ವಿಚ್ಛೇದನಕ್ಕೆ ಕಾರಣವಾಗಬಹುದು: ದಂಪತಿಗಳ ನಡುವೆ ಇರಲಿ ಭಾವನಾತ್ಮಕ ಬಂಧ

ಸಪ್ತಪದಿ ತುಳಿಯುವ ಸಂದರ್ಭ ದಾಂಪತ್ಯ ಜೀವನವನ್ನು ಕೊನೆಗಾಣಿಸಬೇಕು ಎಂದು ಯಾರೂ ಅಂದುಕೊಳ್ಳುವುದಿಲ್ಲ. ಆದರೆ ಸಂಬಂಧದ ದುರುಪಯೋಗ, ನಿಂದನೆ, ಜಗಳ ಇತ್ಯಾದಿ ಕಾರಣಗಳಿಂದ ದಾಂಪತ್ಯ ಜೀವನ ಹಳಸಲು ಆರಂಭವಾಗುತ್ತದೆ. ಕೆಲವೊಮ್ಮೆ ಈ ಕಾರಣದಿಂದಲೇ ಸಂಬಂಧಕ್ಕೆ ಅಂತ್ಯ ಹಾಡಬೇಕಾಗುತ್ತದೆ. ಸದಾ ನಿಂದಿಸುವವರ ಜೊತೆ ದಾಂಪತ್ಯ ಮುಂದುವರೆಸುವುದು ಸುಲಭದ ಮಾತಲ್ಲ.

ಗಂಡ-ಹೆಂಡತಿ ನಡುವಿನ ನಿಂದನೆಯು ವಿಚ್ಛೇದನಕ್ಕೆ ಕಾರಣವಾಗಬಹುದು.
ಗಂಡ-ಹೆಂಡತಿ ನಡುವಿನ ನಿಂದನೆಯು ವಿಚ್ಛೇದನಕ್ಕೆ ಕಾರಣವಾಗಬಹುದು. (freepik)

ಗಂಡ-ಹೆಂಡತಿ ಬಾಂಧವ್ಯ ಅಂದ್ರೆ ಪರಸ್ಪರರನ್ನು ಅರಿತು ಜೊತೆಯಾಗಿ ಹೆಜ್ಜೆ ಹಾಕುವುದು. ಆದರೆ, ಇತ್ತೀಚೆಗೆ ಈ ದಾಂಪತ್ಯ ಕಲಹವು ಹೆಚ್ಚಾಗುತ್ತಿದೆ. ಗಂಡ-ಹೆಂಡತಿ ನಡುವಿನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ, ಅದೆಷ್ಟೋ ಮಕ್ಕಳು ಬೇರ್ಪಟ್ಟ ತಾಯಿ ಅಥವಾ ತಂದೆಯೊಂದಿಗೆ ಇರಬೇಕಾದ ಪರಿಸ್ಥಿತಿ ಬರುತ್ತದೆ. ಹಿಂದೆಲ್ಲಾ ಶ್ರೀಮಂತರು ಮಾತ್ರ ದಾಂಪತ್ಯ ಜೀವನದಿಂದ ದೂರವಾಗುತ್ತಿದ್ದರು. ಆದರೆ, ಇಂದು ಈ ಬೇರ್ಪಡುವಿಕೆ ಎಂಬ ಗಾಳಿ ಮಧ್ಯಮವರ್ಗಕ್ಕೂ ಸೋಂಕಿದೆ. ಹಾಗಂತ ದಾಂಪತ್ಯ ಜೀವನವನ್ನು ಕೊನೆಗಾಣಿಸಲು ಯಾರೂ ಸಪ್ತಪದಿ ತುಳಿಯುವುದಿಲ್ಲ. ಸಂಬಂಧಗಳಲ್ಲಿನ ದುರುಪಯೋಗ, ನಿಂದನೆ, ಜಗಳ ಇತ್ಯಾದಿ ಕಾರಣಗಳಿಂದ ದಾಂಪತ್ಯ ಜೀವನ ಕೊನೆಗೊಳ್ಳಲು ಕಾರಣವಾಗುತ್ತದೆ. ಕೆಲವೊಮ್ಮೆ ಇದು ಅನಿವಾರ್ಯವಾಗಿಬಿಡುತ್ತದೆ. ಯಾಕೆಂದರೆ ಸದಾ ನಿಂದಿಸುವವರ ಜೊತೆ ದಾಂಪತ್ಯ ಮುಂದುವರೆಸುವುದು ಎಂದರೆ ಸುಲಭದ ಮಾತಲ್ಲ.

ನಿಂದನೆ ಎಂದರೇನು?

ಮಾನಸಿಕ ಅಥವಾ ಭಾವನಾತ್ಮಕ ನಿಂದನೆಯು ಸಾಮಾನ್ಯವಾಗಿ ತನ್ನ ಸಂಗಾತಿಯನ್ನು ಅವಮಾನಿಸುವ ಅಥವಾ ಅವರ ಮೇಲೆ ನಿಯಂತ್ರಣವನ್ನು ತರುವುದಾಗಿದೆ. ಮೊದ ಮೊದಲಿಗೆ ಇದರ ಬಗ್ಗೆ ಸಂಗಾತಿಗೆ ಅರಿವಿಲ್ಲದಿದ್ದರೂ, ಬರು ಬರುತ್ತಾ ಮಾನಸಿಕ ತೊಳಲಾಟಕ್ಕೆ ಕಾರಣವಾಗುತ್ತದೆ. ದೈಹಿಕವಾಗಿ ಸಂಗಾತಿ ಮೇಲೆ ಹಲ್ಲೆ ಮಾಡುವುದು, ಬೆದರಿಸುವುದು ಇತ್ಯಾದಿ ಮಾಡುವುದರಿಂದ ಗಂಡ-ಹೆಂಡತಿ ನಡುವಿನ ಸಂಬಂಧ ಒಡೆದು ಚೂರಾಗುತ್ತದೆ. ಆದರೆ, ಕಟುವಾದ ಮಾತು ಎದೆಗೆ ಚೂರಿ ಇರಿದಂತಾಗುತ್ತದೆ. ಅಲ್ಲದೆ, ತನ್ನ ಸಂಗಾತಿಯನ್ನು ನಿರಂತರವಾಗಿ ಟೀಕಿಸುವುದು, ಅಸೂಯೆ, ದ್ವೇಷ ಮಾಡುವುದು, ವ್ಯಂಗ್ಯ ಮಾಡುವುದು, ನೀನು ತನಗೆ ತಕ್ಕದಾದ ಗಂಡ/ಹೆಂಡತಿಯಲ್ಲ ಎಂದು ಹೇಳುವುದರಿಂದ ಸಂಗಾತಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಭಾವನ್ಮಾತಕ ನಿಂದನೆಯು ಸಂಗಾತಿಯನ್ನು ದಿಗ್ಭ್ರಮೆಗೊಳಿಸುತ್ತದೆ. ಇದರಿಂದ ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ.

ನಿಂದನೆಯನ್ನು ಗುರುತಿಸುವುದು ಹೇಗೆ?

ದಂಪತಿ ನಡುವಿನ ಜಗಳ, ಮನಸ್ತಾಪಗಳು ತಿಳಿದು ಬಿಡುತ್ತವೆ. ಆದರೆ, ಸಂಗಾತಿಯ ನಿಂದನೆ ಅಷ್ಟು ಬೇಗ ತಿಳಿಯುವುದಿಲ್ಲ. ನಿಂದಿಸುವ ಸಂಗಾತಿ ಕೆಲವೊಮ್ಮೆ ಪ್ರೀತಿ, ನಿಷ್ಠೆ ತೋರಿಸಬಹುದು. ಹೀಗಾಗಿ ಪತಿ ಅಥವಾ ಪತ್ನಿ ತನಗೆ ನಿಂದಿಸಿದ್ರೂ ಪ್ರೀತಿ ತೋರಿಸಿದಾಗ, ಉಡುಗೊರೆ ಕೊಟ್ಟಾಗ ಇದು ಮರೆತು ಹೋಗಬಹುದು. ಸಂಗಾತಿಯ ಗಮನವನ್ನು ಬದಲಾಯಿಸಲು ಈ ರೀತಿ ಮಾಡುವ ಸಾಧ್ಯತೆಯಿರುತ್ತದೆ. ಪ್ರೀತಿ, ನಿಷ್ಠೆ ತೋರಿದ ಮರುಕ್ಷಣದಲ್ಲೇ ಮತ್ತೆ ಏನಾದರೂ ಹೇಳಿ ನಿಂದಿಸಿದ್ರೆ ಹೃದಯ ಒಡೆದು ಚೂರಾಗಿ ಹೋಗಬಹುದು.

ಸಂಗಾತಿ ಜೊತೆ ಪ್ರೀತಿಯಿಂದ ವರ್ತಿಸಿ ಮರುಕ್ಷಣವೇ ಏನಾದರೂ ನಿಂದಿಸಬಹುದು. ಉದಾಹರಣೆಗೆ ತನ್ನ ಸಂಗಾತಿಗೆ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುವುದು. ಆದರೆ, ತನಗೆ ಅಷ್ಟು ಬೆಲೆಬಾಳುವ ಉಡುಗೊರೆ ಬರದಿದ್ದಲ್ಲಿ ಎಂದಾದರೂ ಒಂದು ದಿನ ಎಲ್ಲರ ಮುಂದೆ ಸಂಗಾತಿಯನ್ನು ನಿಂದಿಸುವುದು. ಸಂಗಾತಿಯ ಕುಟುಂಬ, ಸ್ನೇಹಿತರು ಮುಂತಾದವರ ಬಗ್ಗೆ ಋಣಾತ್ಮಕವಾಗಿ ಮಾತನಾಡಿ ಅವರೆಲ್ಲರ ಜೊತೆಗಿನ ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸಬಹುದು. ಸಂಗಾತಿಯ ಸಾಮಾಜಿಕ ಮಾಧ್ಯಮ ಮತ್ತು ದೈಹಿಕ ಚಟುವಟಿಕೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಬಹುದು. ಹೀಗೆ ಅನೇಕ ರೀತಿಯಲ್ಲಿ ನಿಂದನೆಯನ್ನು ಗುರುತಿಸಬಹುದು.

ನಿಂದನೆಗೊಳಪಟ್ಟಾಗ ಸಂಗಾತಿ ಮನಸ್ಥಿತಿ ಈ ರೀತಿ ಬದಲಾಗಬಹುದು

- ಪತಿ ಅಥವಾ ಪತ್ನಿಯಿಂದ ಪದೇ ಪದೇ ನಿಂದನೆಗೊಳಪಟ್ಟಾಗ ಸಂಗಾತಿಗೆ ಅದು ಅಭ್ಯಾಸವಾಗಿಬಿಡಬಹುದು. ಇದರಿಂದ ಅವರು ತನ್ನ ಸಂಗಾತಿಯನ್ನು ನಿರ್ಲಕ್ಷಿಸಬಹುದು.

- ಪ್ರತಿ ದಿನ ನಿಂದನೆಗೊಳಪಡುತ್ತಿದ್ದರೆ, ತನ್ನ ಸಂಗಾತಿ ಜೊತೆಗಿನ ಆಕರ್ಷಣೆ ಕಡಿಮೆಯಾಗಿ ಬೇರೆಡೆ ಸೆಳೆತ ಉಂಟಾಗಬಹುದು. ಇನ್ನೊಬ್ಬ ವ್ಯಕ್ತಿಯ ಕಡೆಗೆ ಆಕರ್ಷಣೆಗೆ ಕಾರಣವಾಗಬಹುದು.

- ತಾನು ಏಕಾಂಗಿ ಎಂದು ಕೊರಗಬಹುದು. ತನ್ನ ಸಂಗಾತಿ ಜೊತೆ ಇರಲೂ ಆಗದೆ, ಬಿಡಲೂ ಆಗದೆ ಒದ್ದಾಡುವಂತಾಗಬಹುದು.

ದಾಂಪತ್ಯದಲ್ಲಿ ನಿಂದನೆ ಎದುರಿಸುತ್ತಿದ್ದರೆ ಮೌನವಾಗಿ, ತಾಳ್ಮೆಯಿಂದಿದ್ದರೆ ಅದು ಸರಿ ಹೋಗುವುದಿಲ್ಲ. ಹಾಗಂತ ಸಂಗಾತಿಗೆ ವಿಚ್ಛೇದನ ನೀಡಿದ್ರೆ ಸರಿಯಾಗುತ್ತದೆ ಎಂಬ ನಂಬಿಕೆಯೂ ಒಳ್ಳೆಯದಲ್ಲ. ದಾಂಪತ್ಯದಲ್ಲಿ ಈ ರೀತಿ ಇದ್ದರೆ ತಾನೇನು ಮಾಡಬೇಕು ಎಂದು ದೃಢನಿರ್ಧಾರ ತೆಗೆದುಕೊಳ್ಳಿ. ಪತಿಯಿಂದ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪತ್ನಿಯಾದವಳು ಆರ್ಥಿಕವಾಗಿ ಸಬಲರಾಗಬೇಕು. ಹಣ ಇದ್ದರೆ ಸಂಬಂಧ ಸರಿ ಹೋಗುತ್ತದೆ ಎಂದಲ್ಲ, ಆದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ, ಪತಿಗೆ ಪತ್ನಿಯು ಬಿಟ್ಟು ಹೋಗಬಹುದೆಂಬ ಭಯ ಕಾಡಬಹುದು. ಇಲ್ಲದಿದ್ದರೆ ಕುಟುಂಬದೊಂದಿಗೆ ಕೂತು ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಬಹುದು. ಇನ್ನು ಪತ್ನಿ ಈ ರೀತಿ ವರ್ತಿಸಿದ್ರೆ ಕುಟುಂಬದೊಂದಿಗೆ ಕುಳಿತು ಮಾತನಾಡಿ ಆಕೆಗೆ ಬುದ್ಧಿವಾದ ಹೇಳಬೇಕು. ಇಲ್ಲದಿದ್ದರೆ ಕೌನ್ಸಿಲಿಂಗ್ ಸಹ ಮಾಡಬಹುದು.