ಕನ್ನಡ ಸುದ್ದಿ  /  ಜೀವನಶೈಲಿ  /  ದೊಡ್ಡ ಮಗು, ಚಿಕ್ಕ ಮಗು; ಮಕ್ಕಳು ಜನಿಸಿದ ಕ್ರಮದ ಆಧಾರದಲ್ಲಿ ವ್ಯಕ್ತಿತ್ವ ಹೀಗಿರುತ್ತೆ? ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿಯ ಸಂಗತಿ

ದೊಡ್ಡ ಮಗು, ಚಿಕ್ಕ ಮಗು; ಮಕ್ಕಳು ಜನಿಸಿದ ಕ್ರಮದ ಆಧಾರದಲ್ಲಿ ವ್ಯಕ್ತಿತ್ವ ಹೀಗಿರುತ್ತೆ? ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿಯ ಸಂಗತಿ

ಮಕ್ಕಳ ಜನನ ಕ್ರಮವು ಅವರ ವ್ಯಕ್ತಿತ್ವದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಒಂದು ಕುಟುಂಬದ ರಚನೆಯಲ್ಲಿ ಹಿರಿಯ, ಮಧ್ಯಮ, ಕಿರಿಯ ಮತ್ತು ಏಕೈಕ ಮಗು ತಮ್ಮ ಸ್ಥಾನ ಹಾಗೂ ಗುಣಲಕ್ಷಣಗಳನ್ನು ವಿಭಿನ್ನವಾಗಿ ನಿರ್ವಹಿಸುತ್ತಾರೆ. ಮಕ್ಕಳ ಜನ್ಮ ಕ್ರಮವು ಅವರ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. (ಬರಹ: ಪ್ರಿಯಾಂಕ ಗೌಡ)

ದೊಡ್ಡ ಮಗು, ಚಿಕ್ಕ ಮಗು; ಮಕ್ಕಳು ಜನಿಸಿದ ಕ್ರಮದ ಆಧಾರದಲ್ಲಿ ವ್ಯಕ್ತಿತ್ವ ಹೇಗಿರುತ್ತೆ?
ದೊಡ್ಡ ಮಗು, ಚಿಕ್ಕ ಮಗು; ಮಕ್ಕಳು ಜನಿಸಿದ ಕ್ರಮದ ಆಧಾರದಲ್ಲಿ ವ್ಯಕ್ತಿತ್ವ ಹೇಗಿರುತ್ತೆ?

ಮಕ್ಕಳಿರುವ ಮನೆಯಲ್ಲಿ ಗಲಾಟೆ, ಗದ್ದಲ ಹೆಚ್ಚು. ಹಿಂದೆಲ್ಲಾ 10-12 ಮಕ್ಕಳನ್ನು ಹೆರುತ್ತಿದ್ದರು. ಕಾಲ ಬದಲಾದಂತೆ ಮೂರು ಮಕ್ಕಳಿಗೆ ಇಳಿದ ಸಂಖ್ಯೆಯು ಈಗ ಬಹುತೇಕ ಮಂದಿ ಒಂದು ಮಗುವಿಗೆ ಸೀಮಿತವಾಗಿದ್ದಾರೆ. ಒಂದು ಕುಟುಂಬದಲ್ಲಿ ಮಕ್ಕಳು ಜನಿಸುವ ಕ್ರಮವು ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಒಂದು ಕುಟುಂಬದಲ್ಲಿ ಮೂರು ಮಂದಿ ಮಕ್ಕಳಿದ್ದರೆ, ಆ ಮೂರೂ ಮಕ್ಕಳು ತಂದೆ-ತಾಯಿಗೆ ಅತ್ಯಾಪ್ತರಾಗಿರುತ್ತಾರೆ. ಆದರೆ, ತಂದೆಗೆ ಯಾರಾದರೂ ಒಬ್ಬರು ಅಥವಾ ತಾಯಿಗೆ ಯಾರಾದರೂ ಒಬ್ಬರು ಅತ್ಯಂತ ಪ್ರಿಯರಾಗಿರುತ್ತಾರೆ. ಇದು ಸಹಜ. ಬಹುತೇಕ ಎಲ್ಲರ ಮನೆಯ ಕಥೆಯೂ ಇದೇ ಆಗಿರಬಹುದು.

ಮಗು ಚೊಚ್ಚಲ ಅಥವಾ ಮಧ್ಯಮ, ಕಿರಿಯ ಅಥವಾ ಏಕೈಕ ಮಗು ಎಂಬುದರ ಆಧಾರದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ವಿಭಿನ್ನವಾಗಿ ಪರಿಗಣಿಸುತ್ತಾರೆ. ತಂದೆಗೆ ಮೊದಲ ಮಗುವಿನ ಮೇಲೆ ಜಾಸ್ತಿ ಪ್ರೀತಿ ಇರಬಹುದು. ತಾಯಿಗೆ ಕೊನೆ ಮಗುವಿನ ಮೇಲೆ ಹೆಚ್ಚು ಪ್ರೀತಿ ಇರಬಹುದು. ಹೀಗೆ ಅವರ ಕುಟುಂಬವು ಜನನ ಕ್ರಮದ ಆಧಾರದಲ್ಲಿ ಮಗುವನ್ನು ಹೇಗೆ ನಡೆಸಿಕೊಳ್ಳುತ್ತದೆ? ಅವರು ಎಷ್ಟು ಗಮನವನ್ನು ಪಡೆಯುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರಬಹುದು. ಮಗುವಿನ ವ್ಯಕ್ತಿತ್ವದ ಮೇಲೆ ಜನ್ಮ ಕ್ರಮದ ಪ್ರಭಾವವು ಸಾಕಷ್ಟು ಆಸಕ್ತಿದಾಯಕ ಅಧ್ಯಯನ ಕ್ಷೇತ್ರವಾಗಿದೆ. ಜನನ ಕ್ರಮವು ಮಗುವಿನ ವ್ಯಕ್ತಿತ್ವದ ಗುಣಲಕ್ಷಣಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಮಕ್ಕಳು ಜನಿಸುವ ಕ್ರಮವು ಅವರ ಪಾತ್ರ ಮತ್ತು ನಡವಳಿಕೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಇಲ್ಲಿ ನೋಡೋಣ...

ಟ್ರೆಂಡಿಂಗ್​ ಸುದ್ದಿ

ಹಿರಿಯ ಮಗು

ಹಿರಿಯ ಮಗು ಸಾಮಾನ್ಯವಾಗಿ ಕುಟುಂಬದೊಳಗೆ ಜವಾಬ್ದಾರಿ ಮತ್ತು ನಾಯಕತ್ವದ ಸ್ಥಾನದಲ್ಲಿ ತಮ್ಮನ್ನು ಕಂಡುಕೊಳ್ಳುತ್ತದೆ. ಮೊದಲು ಬಂದವರಾಗಿ, ಅವರು ತಮ್ಮ ಪೋಷಕರಿಂದ ಹೆಚ್ಚು ಗಮನ ಮತ್ತು ಸಂಪನ್ಮೂಲಗಳನ್ನು ಪಡೆಯುತ್ತಾರೆ.

ಚೊಚ್ಚಲ ಮಕ್ಕಳು ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಇದು ಅವರ ಮೇಲೆ ಇರಿಸಲಾಗಿರುವ ಹೆಚ್ಚಿನ ನಿರೀಕ್ಷೆಗಳ ಕಾರಣದಿಂದಾಗಿರಬಹುದು. ಏಕೆಂದರೆ ಅವರು ತಮ್ಮ ಕಿರಿಯ ಸಹೋದರರಿಗೆ ಮಾದರಿಯಾಗಿ ಕಾಣುತ್ತಾರೆ. ಅಧ್ಯಯನವೊಂದರಲ್ಲಿ ಕುಟುಂಬದ ರಚನೆಯಲ್ಲಿ ಹಿರಿ ಮಕ್ಕಳು ವಹಿಸುವ ಮಹತ್ವದ ಪಾತ್ರವು, ಅವರ ನಾಯಕತ್ವದ ಗುಣಗಳು ಮತ್ತು ಬಲವಾದ ಕರ್ತವ್ಯ ಪ್ರಜ್ಞೆಯನ್ನು ಪ್ರದರ್ಶಿಸುವ ಸಾಧ್ಯತೆ ಹೆಚ್ಚು ಎಂದು ಎತ್ತಿ ತೋರಿಸುತ್ತದೆ.

ಮಧ್ಯಮ ಮಗು

ಮಧ್ಯಮ ಮಕ್ಕಳು ಸಾಮಾನ್ಯವಾಗಿ ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅವರ ಹಿರಿಯ ಮತ್ತು ಕಿರಿಯ ಒಡಹುಟ್ಟಿದವರ ಗಮನ ಮತ್ತು ಸಾಧನೆಗಳನ್ನು ಸಮತೋಲನಗೊಳಿಸುತ್ತಾರೆ. ಕುಟುಂಬದೊಳಗೆ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳಲು ಅವರು ಶ್ರಮಿಸುವುದರಿಂದ ಇದು ಅವರ ಕೌಶಲ ಮತ್ತು ರಾಜತಾಂತ್ರಿಕತೆಯ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಲು ಕಾರಣವಾಗಬಹುದು.

ಮಧ್ಯಮ ಮಕ್ಕಳು ಸಾಮಾನ್ಯವಾಗಿ ಹೆಚ್ಚು ಹೊಂದಿಕೊಳ್ಳುವ, ಬೆರೆಯುವ ಮತ್ತು ಕುಟುಂಬಕ್ಕೆ ಸಹಕಾರಿಯಾಗಿರುತ್ತಾರೆ. ಕುಟುಂಬದಲ್ಲಿ ಅವರ ಸ್ಥಾನವು ಆಗಾಗ್ಗೆ ಜಗಳಗಳನ್ನು ಮಧ್ಯಸ್ಥಿಕೆ ವಹಿಸಲು ಮತ್ತು ಕುಟುಂಬದ ನಡುವೆ ಸೇತುವೆ (ಬಂಧ) ನಿರ್ಮಿಸಲು ಪ್ರಯತ್ನಿಸುತ್ತಾರೆ. ಇದು ಮಧ್ಯಮ ಮಕ್ಕಳು ತಮ್ಮ ಒಡಹುಟ್ಟಿದವರಿಗೆ ಹೋಲಿಸಿದರೆ ಹೆಚ್ಚು ಹೊಂದಿಕೊಳ್ಳುವ ಮತ್ತು ಎಲ್ಲರೊಂದಿಗೂ ಬೆರೆಯುವವರಾಗಿದ್ದಾರೆ ಎಂದು ಸೂಚಿಸುತ್ತದೆ.

ಕಿರಿಯ ಮಗು

ಕಿರಿಯ ಮಕ್ಕಳು ಸಾಮಾನ್ಯವಾಗಿ ಹೆಚ್ಚು ಶಾಂತವಾದ ಪಾಲನೆಯನ್ನು ಆನಂದಿಸುತ್ತಾರೆ. ಏಕೆಂದರೆ, ಪೋಷಕರಿಗೆ ತಮ್ಮ ಕೊನೆಯ ಮಗು ಜನಿಸುವ ಸಮಯದಲ್ಲಿ ಅವರು ಹೆಚ್ಚು ಅನುಭವಿ ಮತ್ತು ಕಡಿಮೆ ಆಸಕ್ತಿ ಹೊಂದಲು ಕಾರಣವಾಗಿರಬಹುದು. ಇದು ಕಿರಿಯರಿಗೆ ತಮ್ಮ ಸೃಜನಶೀಲತೆಯನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.

ಕಿರಿಯ ಮಕ್ಕಳ ಮಕ್ಕಳು ಆಗಾಗ್ಗೆ ಹೊರಹೋಗುವ, ಆಕರ್ಷಕ ಮತ್ತು ಬೇರೆ ಏನಾದರೂ ಆಸಕ್ತಿ ವಿಚಾರದತ್ತ ಒಲವು ತೋರುತ್ತಾರೆ. ಕಿರಿಯರು ಹೆಚ್ಚು ಸಾಹಸಮಯವಾಗಿರುತ್ತಾರೆ ಮತ್ತು ಹೊಸ ಅನುಭವಗಳಿಗೆ ತೆರೆದುಕೊಳ್ಳುತ್ತಾರೆ. ಪೋಷಕರು ಕಿರಿ ಮಕ್ಕಳ ಮೇಲೆ ಕೋಪ-ತಾಪ ಹೆಚ್ಚಾಗಿ ತೋರಿಸುವುದಿಲ್ಲವಾದರಿಂದ ಮತ್ತು ಅವರ ಮೇಲೆ ಇರಿಸಲಾಗಿರುವ ಕಡಿಮೆ ನಿರೀಕ್ಷೆಗಳಿಂದಾಗಿ ಸಾಹಸಮಯ (ಅಪಾಯಕ್ಕೊಡ್ಡಿಕ್ಕೊಳ್ಳುವುದು) ಹಾಗೂ ಸೃಜನಶೀಲತೆಗೆ ಹೆಚ್ಚು ಒಳಗಾಗುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಅಲ್ಲದೆ ಅವರು ಕುಟುಂಬದಲ್ಲಿ ತಮ್ಮ ಪಾತ್ರವನ್ನು ಮುಕ್ತವಾಗಿ ಆನಂದಿಸುತ್ತಾರೆ.

ಒಂದೇ ಮಗು

ಕುಟುಂಬಕ್ಕೆ ಒಂದೇ ಮಗುವಿರುವವರು ತಮಗೆ ಒಡಹುಟ್ಟಿದವರಿಲ್ಲದೆ ಬೆಳೆಯುತ್ತಾರೆ. ಇದು ವಿಶಿಷ್ಟ ಗುಣಲಕ್ಷಣಗಳಿಗೆ ಕಾರಣವಾಗಬಹುದು. ಅವರು ಸಾಮಾನ್ಯವಾಗಿ ತಮ್ಮ ಪೋಷಕರಿಂದ ವಿಶೇಷ ಗಮನವನ್ನು ಪಡೆಯುತ್ತಾರೆ. ಇದು ಹೆಚ್ಚಿನ ಮಟ್ಟದ ಸ್ವಾಭಿಮಾನ ಮತ್ತು ಪ್ರಬುದ್ಧತೆಗೆ ಕೊಡುಗೆ ನೀಡುತ್ತದೆ. ಸ್ಪರ್ಧಿಸಲು ಒಡಹುಟ್ಟಿದವರು ಇಲ್ಲದೇ ಇರುವುದರಿಂದ ಅವರು ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಬಲವಾದ ಅರ್ಥವನ್ನು ಬೆಳೆಸಿಕೊಳ್ಳಬಹುದು.

ಪೋಷಕರಿಗೆ ಒಂದೇ ಮಗುವಾಗಿ ಬೆಳೆದವರು ಹೆಚ್ಚು ಪ್ರಬುದ್ಧರಾಗಿರುತ್ತಾರೆ ಹಾಗೂ ಸಾಧನೆ ಮಾಡಲು ಹಾತೊರೆಯುತ್ತಾರಂತೆ. ಒಂದೇ ಮಗು ಆಗಿರುವವರು ಸಾಮಾನ್ಯವಾಗಿ ಮೌಖಿಕ ಕೌಶಲ ಮತ್ತು ಉನ್ನತ ಮಟ್ಟದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಸಹೋದರ ಸಹೋದರಿಯರೊಂದಿಗೆ ಹೋಲಿಸಿದರೆ ಪೋಷಕರಿಗೆ ಒಂದೇ ಮಗು ಆಗಿರುವಂತಹ ಮಕ್ಕಳ ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ಕೌಶಲ ಹೆಚ್ಚಿರುತ್ತದೆ ಎಂದು ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ.

ವಿಭಾಗ