Empty Nest Syndrome: ಬೆಳೆದ ಮಕ್ಕಳು ದೂರವಾದಾಗ ಅಮ್ಮನ ಮನಸ್ಸು ಖಾಲಿ, ಉತ್ಸಾಹ ಮಾಯ: ಇದನ್ನೇ ‘ಖಾಲಿ ಗೂಡು ಮನಸ್ಥಿತಿ’ ಅನ್ನೋದು -ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  Empty Nest Syndrome: ಬೆಳೆದ ಮಕ್ಕಳು ದೂರವಾದಾಗ ಅಮ್ಮನ ಮನಸ್ಸು ಖಾಲಿ, ಉತ್ಸಾಹ ಮಾಯ: ಇದನ್ನೇ ‘ಖಾಲಿ ಗೂಡು ಮನಸ್ಥಿತಿ’ ಅನ್ನೋದು -ಮನದ ಮಾತು

Empty Nest Syndrome: ಬೆಳೆದ ಮಕ್ಕಳು ದೂರವಾದಾಗ ಅಮ್ಮನ ಮನಸ್ಸು ಖಾಲಿ, ಉತ್ಸಾಹ ಮಾಯ: ಇದನ್ನೇ ‘ಖಾಲಿ ಗೂಡು ಮನಸ್ಥಿತಿ’ ಅನ್ನೋದು -ಮನದ ಮಾತು

ಭವ್ಯಾ ವಿಶ್ವನಾಥ್: ತಾಯಿ ಹಕ್ಕಿಯು ಗೂಡು ಕಟ್ಟಿ ಮರಿಗಳನ್ನು ಪಾಲಿಸಿ, ಪೋಷಿಸುತ್ತದೆ. ಮರಿಗಳು ಬೆಳೆದ ನಂತರ ಹೊರಗೆ ಹಾರಿಹೋಗುತ್ತವೆ. ಇಂಥ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತಾಯಿ ಹಕ್ಕಿಯ ಮನಸ್ಸು ಮಂಕಾಗಬಹುದು. ಆದರೆ ಮನುಷ್ಯರಲ್ಲಿ ಇದು ಬಹುಕಾಲ ಕಾಡುವ ನೋವಾಗಿ ಉಳಿಯುತ್ತದೆ. ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಇದೊಂದು ಮಾನಸಿಕ ಸಮಸ್ಯೆಯೂ ಆಗುತ್ತದೆ.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ

ಪ್ರಶ್ನೆ: ನನಗೆ ಇಬ್ಬರು ಮಕ್ಕಳು. ಇಬ್ಬರೂ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇಬ್ಬರೂ ಅಲ್ಲಿಯೇ ಸೆಟ್ಲ್ ಆಗಬಹುದು. ಈಗ ಮನೆಯಲ್ಲಿ ನಾನು ಮತ್ತು ನನ್ನ ಗಂಡ ಇಬ್ಬರೇ. ನಮಗೆ ಆರೋಗ್ಯ ಅಥವಾ ಆರ್ಥಿಕ ಸಮಸ್ಯೆಯಿಲ್ಲ. ಆದರೆ ನನಗೆ ಒಂಟಿತನ ಕಾಡುತ್ತಿದೆ. ಮಕ್ಕಳು ಹುಟ್ಟುವ ಮುಂಚೆ ಟೀಚರ್ ಆಗಿ ಕೆಲಸ ಮಾಡುತ್ತಿದ್ದೆ, ನಂತರ ಬಿಟ್ಟುಬಿಟ್ಟೆ. ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬಹಳ ಬ್ಯುಸಿ ಇರುತ್ತಿದ್ದೆ. ಆದರೆ ಈಗ ಯಾವಾಗಲೂ ಖಾಲಿ ಇರುತ್ತೇನೆ. ಮಕ್ಕಳಿಗೆ ನನ್ನ ಅಗತ್ಯವೇ ಇಲ್ಲವೆಂದು ಬೇಸರವಾಗುತ್ತದೆ. ರಾತ್ರಿ ನಿದ್ರೆ ಬರುವುದಿಲ್ಲ, ಊಟ ಸೇರುವುದಿಲ್ಲ. ಏನು ಮಾಡಬೇಕು?

ಉತ್ತರ: ತಾಯಿಯಾದ ನಿಮ್ಮ ಸಂಕಟ ಅರ್ಥವಾಗುತ್ತದೆ. ಮಕ್ಕಳು ನಿಮ್ಮನ್ನು ಬಿಟ್ಟು ದೂರವಾದ ನಂತರ ನಿಮಗೆ ಅತೀವ ಹತಾಶೆ ಮತ್ತು ಬೇಸರ ಉಂಟಾಗಿದೆ. ನಿಮ್ಮ ನೋವು ಸಹಜ. ಇದೇ ಕಾರಣದಿಂದ ನೀವು ಒಂಟಿತನದಿಂದ ಬಳಲುತ್ತಿರಬಹುದು. ಮಕ್ಕಳನ್ನು ನೋಡಿಕೊಳ್ಳಬೇಕೆಂದು ನಿಮ್ಮ ವೃತ್ತಿಯನ್ನು ಬಿಟ್ಟು ತಾಯಿಯಾಗಿ ಬಹಳಷ್ಟು ಕಾಲ ಮಕ್ಕಳ ಜವಾಬ್ಧಾರಿಯನ್ನು ಚೆನ್ನಾಗಿ ನಿಭಾಯಿಸಿದಂತೆ ಕಾಡುತ್ತದೆ. ಇದರಲ್ಲೇ ಬಹಳ ಬ್ಯುಸಿಯಾಗಿದ್ದ ನೀವು ಮಕ್ಕಳು ಸ್ವತಂತ್ರವಾದ ನಂತರ ಬಿಡುವಾಗಿದ್ದೀರಿ. ಆದರೆ, ಈಗ ನಿಮಗೆ ಬದಲಾಗಿರುವ ವಾತಾವರಣವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಬಿಡುವಿನ ಸಮಯವನ್ನು ನಿಭಾಯಿಸಲು ಆಗದೆ ಮತ್ತು ಮಕ್ಕಳೇ ಎಲ್ಲವೆಂದು ನಿಷ್ಠೆಯಿಂದ ದುಡಿದು, ಈಗ ಅವರು ನಿಮ್ಮಿಂದ ದೂರವಾಗಿದ್ದು ನಿಮಗೆ ಅತೀವ ಬೇಸರ ತಂದಿದೆ. ನಿಮ್ಮ ಈ ಸ್ಥಿತಿಯನ್ನು 'ಎಮ್ಟಿ ನೆಸ್ಟ್ ಸಿಂಡ್ರೋಮ್” (Empty Nest Syndrome - ಖಾಲಿಗೂಡಿನ ಮನಃಸ್ಥಿತಿ) ಎಂದು ಕರೆಯಲಾಗುವುದು. ಪ್ರಯತ್ನಪಟ್ಟರೆ ಖಂಡಿತವಾಗಿಯೂ ನೀವು ಇದರಿಂದ ಬರಬಹುದು.

ಏನಿದು ಎಮ್ಟಿ ನೆಸ್ಟ್ ಸಿಂಡ್ರೋಮ್?

ಪೋಷಕರು ಮಕ್ಕಳನ್ನು ಹುಟ್ಟಿನಿಂದ ಪೋಷಿಸಿ, ಪ್ರೀತಿಸಿ, ಸದಾ ಅವರ ಜೊತೆಯಲ್ಲಿ ಕಾಲ ಕಳೆದು, ಜವಾಬ್ಧಾರಿಗಳನ್ನು ಹೊತ್ತು ಸ್ವತಂತ್ರವಾಗಿ ಬದುಕುವಂತೆ ಮಾಡಲು ತುಂಬಾ ಕಷ್ಟಪಟ್ಟಿದ್ದೀರಿ. ಮಕ್ಕಳು ಒಂದು ಹಂತಕ್ಕೆ ಬಂದರು ಎಂದು ಸಂತೋಷವನ್ನು ಅನುಭವಿಸುವುದರಲ್ಲೇ, ಮಕ್ಕಳು ಕಾರಣಂತರದಿಂದ ದೂರ ಹೋದಾಗ, ಪೋಷಕರಿಗೆ ಬದಲಾದ ಪರಿಸ್ಥಿಯನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಮನಸ್ಸು 'ಖಾಲಿ ಗೂಡು' ಆದಂತೆ ಭಾಸವಾಗುತ್ತದೆ. ಅದರಲ್ಲೂ ತಾಯಿಗೆ ಬೇಸರ ಅನ್ನಿಸುವುದು ಹೆಚ್ಚು.

ಇದನ್ನು ಮನಃಶಾಸ್ತ್ರದಲ್ಲಿ ‘Empty Nest Syndrome' (ಎಮ್ಟಿ ನೆಸ್ಟ್ ಸಿಂಡ್ರೋಮ್) ಎಂದು ಕರೆಯಲಾಗುತ್ತದೆ. ಇದರ ಅರ್ಥ 'ಖಾಲಿ ಗೂಡು' ಎಂದು. ಮಕ್ಕಳು ಮನೆಯಿಂದ ಹೊರಗೆ ಹೋದಾಗ ಅನೇಕ ಪೋಷಕರು ಅನುಭವಿಸುವ ದುಃಖವನ್ನು ಈ ಸಿಂಡ್ರೋಮ್ ಸೂಚಿಸುತ್ತದೆ. ವಿಷೇಷವಾಗಿ ಮಹಿಳೆಯರಲ್ಲಿ(ತಾಯಿ) ಈ ಸ್ಥಿತಿಯು ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ. ಪ್ರೀತಿಪಾತ್ರರು ಸತ್ತಾಗ ಅನುಭವಿಸುವ ದುಃಖವನ್ನು ಗುರುತಿಸಲಾಗುತ್ತದೆ. ಆದರೆ 'ಖಾಲಿ ಗೂಡು' ಸಿಂಡ್ರೋಮ್‌ನ ದುಃಖವನ್ನು ಸಾಮಾನ್ಯವಾಗಿ ಗುರುತಿಸಲಾಗುವುದಿಲ್ಲ. ಏಕೆಂದರೆ ವಯಸ್ಸಿಗೆ ಬಂದ ಮಕ್ಕಳು ಮನೆಯಿಂದ ಹೊರಗೆ ಹೋಗುವುದನ್ನು ಸ್ವಾಭಾವಿಕ ಮತ್ತು ಸಾಮಾನ್ಯವೆಂದೂ ಹಾಗೂ ಆರೋಗ್ಯಕರ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ಎಂಥ ಪೋಷಕರಿಗೆ 'ಖಾಲಿಗೂಡಿನ' ಬಾಧೆ ಹೆಚ್ಚು?

1) ಉದ್ಯೋಗ ಮಾಡದೇ ಇರುವ ತಾಯಂದಿರು. ⁠ಮಕ್ಕಳನ್ನು ಅತಿಯಾಗಿ ಪಾಲಿಸಿ, ಪೋಷಿಸಿದ ಪೋಷಕರಿಗೆ 'ಖಾಲಿಗೂಡಿನ' ಬಾಧೆ ಹೆಚ್ಚು.

2) ⁠ತಮ್ಮ ಅಸ್ತಿತ್ವವನ್ನು ಮಕ್ಕಳಿಂದ ಗುರುತಿಸಿಕೆೊಳ್ಳುವವರು. ⁠ಮಕ್ಕಳ ಮೇಲೆ ಮಾನಸಿಕವಾಗಿ ಹೆಚ್ಚು ಅವಲಂಬನೆ ಹೊಂದಿದವರು. ⁠

3) ಮಕ್ಕಳು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳಬಲ್ಲರು ಎಂಬ ವಿಶ್ವಾಸ ಕಡಿಮೆ ಇದ್ದ ಪೋಷಕರು ಮಕ್ಕಳು ದೂರವಾದಾಗ ಹೆಚ್ಚು ನೋವು ಅನುಭವಿಸುತ್ತಾರೆ.

3) ⁠ಮಕ್ಕಳು ನಮ್ಮ ಸ್ವತ್ತು, ನಮ್ಮ ಬಳಿಯೇ ಸದಾ ಇರಬೇಕು, ನಾವು ಹೇಳಿದ ಹಾಗೆ ಕೇಳಬೇಕೆನ್ನುವ ಪೋಷಕರು

4) ⁠ಅನೇಕ ಸಂದರ್ಭಗಳಲ್ಲಿ, ಖಾಲಿ ಗೂಡು ಸಿಂಡ್ರೋಮ್ ಇತರ ಕಷ್ಟಕರವಾದ ಘಟನೆಗಳ ಸಮಯದಲ್ಲಿ ಸಂಭವಿಸಿದರೆ ವ್ಯಕ್ತಿಯಲ್ಲಿ ಇನಷ್ಟು ದುಃಖ ಮತ್ತು ನಿರಾಸೆ ಬೇರುರುತ್ತದೆ.

ಉದಾ - ನಿವೃತ್ತಿ, ಋತುಬಂಧ, ಸಂಗಾತಿಯ ಸಾವು (Death of a spouse) ಇತ್ಯಾದಿ

ಇಂಥ ಸಂಧರ್ಭಗಳಲ್ಲಿ ಪೋಷಕರ ಮಾನಸಿಕ ಖಿನ್ನತೆ, ಒತ್ತಡ, ಬೇಸರ, ಕಿರಿಕಿರಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಈಗಾಗಲೇ ಸೂಕ್ಷ್ಮವಾಗಿರುವ ಮನಃಸ್ಥಿತಿಯಲ್ಲಿ ಮತ್ತಷ್ಟು ನೋವು , ದುಃಖವನ್ನು ಈ ಸಿಂಡ್ರೋಮ್ ಉಂಟುಮಾಡುತ್ತದೆ.

ಸುಧಾರಿಸಿಕೊಳ್ಳಲು ಹೀಗೆ ಮಾಡಿ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ

ತಾಯಿ ಹಕ್ಕಿಯು ಗೂಡು ಕಟ್ಟಿ ಮರಿಗಳನ್ನು ಪಾಲಿಸಿ, ಪೋಷಿಸುತ್ತದೆ. ಮರಿಗಳು ಬೆಳೆದ ನಂತರ ತಮ್ಮ ಬದುಕು ರೂಪಿಸಿಕೊಳ್ಳಲು ಹೊರಗೆ ಹಾರಿಹೋಗುತ್ತವೆ. ಆದರೆ ಇದು ಮರಿಗಳ ತಪ್ಪಲ್ಲ, ಪ್ರಕೃತಿಯ ನಿಯಮ. ಹಾಗೆಯೇ, ತಾಯಿ ಹಕ್ಕಿಯು ಮರಿಗಳನ್ನು ಪೋಷಣೆ ಮಾಡುವುದು ಸಹ ಪ್ರಕೃತಿಯ ಸಹಜ ನಿಯಮ. ಹಾಗಾದರೆ, ಮರಿ ಹಕ್ಕಿಗಳು ಹಾರಿ ಹೋದಾಗ ತಾಯಿ ಹಕ್ಕಿಗೆ ಬೇಸರವಾಗುವುದಿಲ್ಲವೇ? ಖಂಡಿತವಾಗಿಯೂ ಆಗುತ್ತದೆ. ಆದರೆ, ತನ್ನ ಕರ್ತವ್ಯ, ಪಾಲನೆ ಹಾಗೂ ಪ್ರಕೃತಿಯ ನಿಯಮವನ್ನು ಅರಿತು ತಾಯಿಯೂ ಮುಂದೆ ಸಾಗುತ್ತದೆ.

ಆದರೆ, ಮನುಷ್ಯರಿಗೆ ಇದು ಸುಲಭವಲ್ಲ. ಅಸಾಧ್ಯವೂ ಅಲ್ಲ. ಪೋಷಕರು ತಮ್ಮ ಮಕ್ಕಳಿಗೆ ಪೋಷಣೆ ಮತ್ತು ಪ್ರೀತಿ ತೋರಿಸುವುದು ಅಗತ್ಯವೂ ಹೌದು, ಕರ್ತವ್ಯವೂ ಹೌದು, ಸ್ವಾಭಾವಿಕವೂ ಹೌದು. ಆದರೆ, ಇವೆಲ್ಲಾ ಶಾಶ್ವತವೂ ಅಲ್ಲ. ಪೋಷಕರ ಪಾತ್ರವೂ ಸಹ ಮಕ್ಕಳ ಬೆಳವಣಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಮಕ್ಕಳ ಅಗತ್ಯಗಳು, ಆದ್ಯತೆಗಳು ಪ್ರತಿಯೊಂದು ಬದುಕಿನ ಹಂತದಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ.

ಹಾಗೆಂದು ಅವರು ಸ್ವಾರ್ಥಿಗಳು ಅಥವಾ ಪೋಷಕರನ್ನು ಪ್ರೀತಿಸುವುದಿಲ್ಲ ಎಂದು ಅರ್ಥವಲ್ಲ. ಪೋಷಕರು ಮೊದಲಿನಿಂದಲೂ ಈ ಅಂಶವನ್ನು ಮನದಟ್ಟು ಮಾಡಿಕೊಂಡರೆ, ಬಹುತೇಕರ ನಿರಾಸೆ ಮತ್ತು ದುಃಖ ಕಡಿಮೆಯಾಗುತ್ತದೆ.

ಮಕ್ಕಳು ದೂರವಾದ ನೋವಿನಿಂದ ಹೊರಬರುವುದು ಹೇಗೆ?

1) ಬದಲಾದ ಪರಿಸ್ಥಿಯನ್ನು ಒಪ್ಪಿಕೊಳ್ಳುವುದಕ್ಕೆ ಪ್ರಯತ್ನಿಸಿ

2) ⁠ಶಿಸ್ತಿನ ದಿನಚರಿಯನ್ನು ಪಾಲಿಸಿ

3) ⁠ಆರೋಗ್ಯದ ಕಡೆ ಹೆಚ್ಚು ಗಮನವಹಿಸಿ

4) ⁠ಹವ್ಯಾಸ - ಅರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

5) ಸಾಮಾಜಿಕ ಜೀವನವನ್ನು ಬೆಳೆಸಿಕೊಳ್ಳಿ

6) ⁠ಸಂಗಾತಿಯೊಡನೆ ಹೆಚ್ಚು ಮುಕ್ತವಾಗಿ ಕಾಲ ಕಳೆಯಿರಿ

7) ⁠ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ಭವಿಷ್ಯದ ಯೋಜನೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ.

8) ⁠ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳುವ ಸ್ನೇಹಿತರ ಬಳಿ ಹಂಚಿಕೊಳ್ಳಿ. ಅವರಲ್ಲಿ ಕೆಲವರು ಎಮ್ಟಿ ನೆಸ್ಟ್ ಸಿಂಡ್ರೋಮ್ ಅನ್ನು ಸಹ ಅನುಭವಿಸಿರಬಹುದು.

9) ಅಗತ್ಯ ಎನಿಸಿದಾಗ ಆಪ್ತಸಮಾಲೋಚಕರ ಸಲಹೆ ಮತ್ತು ಬೆಂಬಲವನ್ನು ಪಡೆದುಕೊಳ್ಳಿ

10) ⁠ಬದಲಾವಣೆಗಳಿಗೆ ಹೊಂದಿಕೊಳ್ಳಲು ನಿಮಗೆ ನೀವೇ ಕಾಲಾವಕಾಶ ಕೊಡಿ. ನಿಮ್ಮ ಬಗ್ಗೆ ಹೆಚ್ಚು ನಿರೀಕ್ಷಿಸಬೇಡಿ, ಇದೇ ಒತ್ತಡವಾಗಿ ಪರಿವರ್ತನೆಯಾಗುತ್ತದೆ.

11) ⁠ಸಾಧ್ಯವಾದರೆ, ಅನಾಥಾಶ್ರಮಗಳು ಅಥವಾ ವೃದ್ಧಾಶ್ರಮಗಳಿಗೆ ಭೇಟಿ ನೀಡಿ. ಅಲ್ಲಿಯೇ ತುಸು ಸಮಯ ಕಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮನಸ್ಸು ಹಗುರವಾಗಿ, ಮನಸ್ಸಿಗೆ ಉಲ್ಲಾಸ ಮತ್ತು ಬದುಕಿನಲ್ಲಿ ಪುನಃ ಭರವಸೆ ಉಂಟಾಗುತ್ತದೆ.

ಭವ್ಯಾ ವಿಶ್ವನಾಥ್ ಪರಿಚಯ

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

Whats_app_banner