ಕನ್ನಡ ಸುದ್ದಿ  /  ಜೀವನಶೈಲಿ  /  ನೋ ಕಿಡ್ಸ್‌ ಪ್ಲೀಸ್‌, ವಿ ಆರ್ ಪೆಟ್ ಪೇರೆಂಟ್ಸ್; ಮಕ್ಕಳು ಬೇಡ ಎನ್ನುವ ಮಿಲೇನಿಯಲ್‌ ಮಂದಿ ನಾಯಿ, ಬೆಕ್ಕುಗಳೇ ಸಾಕು ಎನ್ನಲು ಇವು ಕಾರಣವಂತೆ

ನೋ ಕಿಡ್ಸ್‌ ಪ್ಲೀಸ್‌, ವಿ ಆರ್ ಪೆಟ್ ಪೇರೆಂಟ್ಸ್; ಮಕ್ಕಳು ಬೇಡ ಎನ್ನುವ ಮಿಲೇನಿಯಲ್‌ ಮಂದಿ ನಾಯಿ, ಬೆಕ್ಕುಗಳೇ ಸಾಕು ಎನ್ನಲು ಇವು ಕಾರಣವಂತೆ

ಹಿಂದೆ ಮಕ್ಕಳಿರಲವ್ವಾ ಮನೆ ತುಂಬಾ ಎನ್ನುವ ಕಾಲವಿತ್ತು. ಆಮೇಲೆ ಎರಡು ಮಕ್ಕಳು, ನಂತರ ಒಂದೇ ಮಗು ಸಾಕು ಎನ್ನುವ ಹಂತ ತಲುಪಿತು. ಆದರೆ ಇದೀಗ ಇಂದಿನ ಮಿಲೇನಿಯಲ್‌ ಮಂದಿ ಮಕ್ಕಳೇ ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ನಾಯಿ, ಬೆಕ್ಕುಗಳನ್ನೇ ತಮ್ಮ ಮಗು ಎಂದು ಸಾಕುತ್ತಿದ್ದಾರೆ. ಇವರ ಈ ಮನೋಭಾವದ ಹಿಂದಿರುವ ಕಾರಣ ಹೀಗಿದೆ.

ಮಿಲೇನಿಯಲ್‌ ಮಂದಿ ಮಕ್ಕಳು ಬೇಡ ಎಂದು ನಾಯಿ, ಬೆಕ್ಕನ್ನೇ ಮಗುವಿನಂತೆ ಕಾಣಲು ಕಾರಣವಿದು
ಮಿಲೇನಿಯಲ್‌ ಮಂದಿ ಮಕ್ಕಳು ಬೇಡ ಎಂದು ನಾಯಿ, ಬೆಕ್ಕನ್ನೇ ಮಗುವಿನಂತೆ ಕಾಣಲು ಕಾರಣವಿದು

ಇತ್ತೀಚೆಗಷ್ಟೇ ಕನ್ನಡದ ನಟಿ ಹಿತಾ ಚಂದ್ರಶೇಖರ್‌ ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ‘ನಮಗೆಂದಿಗೂ ಮಕ್ಕಳೇ ಬೇಡ, ಮಕ್ಕಳ ಬದಲು ನಾಯಿ ಸಾಕುತ್ತೇವೆ, ಅದೇ ನಮಗೆ ಮಗುʼ ಎನ್ನುವ ಮೂಲಕ ಸುದ್ದಿಯಾಗಿದ್ದರು. ಇದು ಹಿತ ಒಬ್ಬರ ಕಥೆಯಲ್ಲ, ಭಾರತದಲ್ಲಿ ಅವರಂತೆ ಹಲವರು ಮಕ್ಕಳು ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಮಿಲೇನಿಯಲ್‌ ಮಂದಿ ನಮಗೆ ಮಕ್ಕಳು ಬೇಡ, ನಾಯಿ ಅಥವಾ ಬೆಕ್ಕನ್ನೇ ಮಗುವಿನಂತೆ ಸಾಕುವಂತೆ ಎಂದು ನಿರ್ಧಾರ ಮಾಡುತ್ತಿದ್ದಾರೆ. ಭಾರತದಲ್ಲಿ 'ನೋ ಕಿಡ್ಸ್‌ ಪ್ಲೀಸ್‌, ವಿ ಆರ್‌ ಪೆಟ್‌ ಪೇರೆಂಟ್ಸ್‌ʼ ಎನ್ನುವ ಅಭಿಯಾನವೇ ಶುರುವಾದಂತಿದೆ. ಇಂದಿನ ಯುವಜನರು ತಮ್ಮ ಪೀಳಿಗೆ ಮುಂದುವರಿಯುವ ವಿಚಾರದಲ್ಲಿ ಯಾಕೆ ನಿರಾಸಕ್ತಿ ತೋರುತ್ತಿದ್ದಾರೆ, ಮಕ್ಕಳು ಬೇಡ ಸಾಕುಪ್ರಾಣಿಯೇ ನಮಗೆ ಸರ್ವಸ್ವ ಎನ್ನಲು ಕಾರಣವಾದರೂ ಏನು ಎಂಬ ಕುರಿತು ಚರ್ಚೆ ಶುರುವಾಗಿದೆ.

ಸಾಕುಪ್ರಾಣಿಗಳನ್ನು ದತ್ತು ಪಡೆದು ಮಗುವಿನಂತೆ ಸಾಕುವ ಮನೋಭಾವ ಇರುವ ಜನರಲ್ಲಿ ಹೆಚ್ಚಿನವರು ಡಬ್ಬಲ್‌ ಇನ್‌ಕಮ್‌ ಇರುವ ಪಟ್ಟಣದಲ್ಲಿ ವಾಸಿಸುವವರು ಎಂಬ ವಿಚಾರವೂ ಸಮೀಕ್ಷೆಯೊಂದರಲ್ಲಿ ಹೊರಬಿದ್ದಿದೆ. ಮುಂಬೈ ಮೂಲದ ಸಾಕುಪ್ರಾಣಿ ತರಬೇತುದಾರ ನಿಶಾಂತ್‌ ಅವರ ಪ್ರಕಾರ 'ಹಲವು ಯುವ ಜೋಡಿಗಳು ಮದುವೆಯಾದ ಕೂಡಲೇ ಅಂದರೆ ಮೊದಲ ವರ್ಷದ ಒಳಗೆ ಸಾಕುಪ್ರಾಣಿಗಳನ್ನು ದತ್ತು ಪಡೆಯುತ್ತಾರೆ. ಆ ನಂತರ ನಾಯಿ ಅಥವಾ ಬೆಕ್ಕನ್ನು ಸಾಕಿ, ಸಲಹುವ ವಿಚಾರದಲ್ಲಿ ತರಬೇತಿಯನ್ನು ಕೂಡ ಪಡೆಯತ್ತಿದ್ದಾರೆʼ.

ಹಾಗಾದರೆ ಝಡ್‌ ಜನರೇಷನ್‌ ಮಂದಿಯ ಸಾಕುಪ್ರಾಣಿಗಳನ್ನೇ ತಮ್ಮ ಮಗುವನ್ನಾಗಿ ಸ್ವೀಕರಿಸಲು ಕಾರಣವೇನು, ಮಕ್ಕಳು ಬೇಡ ಎನ್ನುವ ಮನೋಭಾವಕ್ಕೆ ಕಾರಣವೇನು? ಇಲ್ಲಿದೆ ವಿವರ.

ಟ್ರೆಂಡಿಂಗ್​ ಸುದ್ದಿ

ಮಕ್ಕಳು ಬೇಡ ಎನ್ನಲು ಕಾರಣ

ಝಡ್‌ ಜನರೇಷನ್‌ ಮಂದಿ ಮಕ್ಕಳು ಬೇಡ ಎನ್ನಲು ಪ್ರಮುಖ ಕಾರಣ ಬದ್ಧತೆಗೆ (ಕಮೀಟ್‌ಮೆಂಟ್‌) ಇಷ್ಟವಿಲ್ಲದೇ ಇರುವುದು. ಇಂದಿನ ಜನರೇಷನ್‌ನವರು ಆಗಾಗ ನಮ್ಮ ಉದ್ಯೋಗ, ಕಂಪನಿ ಬದಲಿಸುತ್ತಿರುತ್ತಾರೆ. ಮದುವೆ ಇತ್ಯಾದಿ ಚೌಕಟ್ಟಿನ ಹೊರಗಿನ (ಅಸಂಪ್ರದಾಯಿಕ) ಸಂಬಂಧಗಳಲ್ಲಿ ತೊಡಗಿಕೊಳ್ಳುವುದು ಸಹಜವಾಗಿದೆ. ಡಿಜಿಟಲ್‌ ಅಲೆಮಾರಿಗಳು ಎಂದೇ ಕರೆಸಿಕೊಳ್ಳುವ ಇವರು ಬೇರೆ ಬೇರೆ ದೇಶಗಳನ್ನು ಸುತ್ತುತ್ತಿರುತ್ತಾರೆ. ಕೆಲಸದ ಕಾರಣಗಳಿಂದ ಆಗಾಗ ದೇಶ, ವಿದೇಶ ಸುತ್ತುವ ಇವರು ನಮ್ಮ ಬಿಡುವಿನ ಸಮಯ ತಮಗಾಗಿ ಮಾತ್ರ, ಅದನ್ನು ಚೆನ್ನಾಗಿ ಎಂಜಾಯ್‌ ಮಾಡಬೇಕು. ಮಕ್ಕಳು-ಮರಿ ಇದ್ದರೆ ಎಂಜಾಯ್‌ಮೆಂಟ್‌ಗೆ ಅಡ್ಡಿಯಾಗುತ್ತದೆ ಎನ್ನುವ ಮನೋಭಾವ ಹೊಂದಿದ್ದಾರೆ. ಇದರೊಂದಿಗೆ ಮಕ್ಕಳನ್ನು ಬೆಳೆಸುವ ಖರ್ಚು, ಮಾನಸಿಕ ಹೊರೆ, ದೀರ್ಘಾವಧಿಯ ಬದ್ಧತೆಗಳ ಕಾರಣದಿಂದಾಗಿ ಮಕ್ಕಳನ್ನು ಹೆತ್ತು ಸಾಕುವುದಕ್ಕಿಂತ ಸಾಕುಪ್ರಾಣಿಗಳನ್ನು ಸಲುಹುವುದು ಉತ್ತಮ ಎಂಬ ಆಯ್ಕೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ.

ಭಾರತದಲ್ಲಿ ಮದುವೆ ಬೇಕು, ಮಕ್ಕಳು ಬೇಡ ಎನ್ನುವ ಮನೋಭಾವವಿದ್ದರೆ, ಕೆನಡಾ, ಅಮೆರಿಕದಂತಹ ದೇಶಗಳಲ್ಲಿ ಮದುವೆಯೂ ಬೇಡ, ಮಕ್ಕಳೂ ಬೇಡ ಎನ್ನುವ ಜನರು ಸಾಕುಪ್ರಾಣಿಗಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಝೆಡ್‌ ಜನರೇಷನ್‌ ಮಂದಿ ಸಾಕಷ್ಟು ಹಣದುಬ್ಬರ ಪರಿಸ್ಥಿತಿಯನ್ನು ಎದುರಿಸಿರುವುದು ಇಂತಹ ಮನೋಭಾವ ತಳೆಯಲು ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಹಣದುಬ್ಬರವು ಮಕ್ಕಳನ್ನು ಸಲಹುವ ವಿಚಾರದಲ್ಲಿ ಝೆಡ್‌ ಜನರೇಷನ್‌ ಮಂದಿ ಹಿಂದೇಟು ಹಾಕುವ ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ.

ಸಾಕುಪ್ರಾಣಿಗಳನ್ನು ಸಾಕಿ, ಸಲಹುವ ಸಂದರ್ಭ ಅದರ ಜವಾಬ್ದಾರಿಗಳನ್ನು ಇಬ್ಬರೂ ಹಂಚಿಕೊಳ್ಳುತ್ತಾರೆ. ಒಬ್ಬರು ಇಲ್ಲದಿದ್ದಾಗ ಇನ್ನೊಬ್ಬರು ನಾಯಿ ಅಥವಾ ಬೆಕ್ಕನ್ನು ಸಲಹುತ್ತಾರೆ. ಮಕ್ಕಳಿಗೆ ಹೋಲಿಸಿದರೆ ಸಾಕುಪ್ರಾಣಿಗಳು ಹೆಚ್ಚು ಸಮಯ, ಬದ್ಧತೆ ಕೇಳುವುದಿಲ್ಲ. ಹೀಗಾಗಿ ತಮ್ಮ ಪ್ರಯಾಣ, ಹವ್ಯಾಸಗಳು ಮತ್ತು ಸರಳ ಜೀವನಶೈಲಿಯೊಂದಿಗೆ ಅವು ಉತ್ತಮವಾಗಿ ಹೊಂದಿಕೊಳ್ಳುತ್ತವೆ ಎಂಬುದು ಮಿಲೇನಿಯಲ್‌ ಮಂದಿಯ ಮಾತು.

ಆರ್ಥಿಕ ಹೊರೆ

ಮಕ್ಕಳು ಬೇಡ ಎನ್ನುವ ಕೆಲವು ದಂಪತಿಗಳು ಹೆಚ್ಚುತ್ತಿರುವ ಮಕ್ಕಳನ್ನು ಸಾಕುವುದು ಆರ್ಥಿಕ ಹೊರೆ ಎಂದೇ ಭಾವಿಸುತ್ತಿದ್ದಾರೆ. ಮಗು ಹುಟ್ಟಿದಾಗಿನಿಂದ ಅದನ್ನು ಸಾಕಿ, ಬೆಳೆಸಿ ಓದಿಸುವವರೆಗೆ ತಾವು ದುಡಿದ ಹಣವನ್ನೆಲ್ಲಾ ಅದಕ್ಕೆ ಖರ್ಚು ಮಾಡಬೇಕಾಗುತ್ತದೆ, ಇದರಿಂದ ತಮ್ಮ ಬದುಕು ದುಸ್ತರವಾಗುತ್ತದೆ ಎನ್ನುವ ಮನಸ್ಥಿತಿ ಹಲವರಲ್ಲಿದೆ. ಜೀವನ ವೆಚ್ಚಗಳು, ಮಕ್ಕಳನ್ನು ಬೆಳೆಸುವ ದೀರ್ಘಾವಧಿಯ ಬದ್ಧತೆಯು ಪ್ರಾಣಿಗಳನ್ನು ಸಾಕುವ ಕಡೆಗೆ ತಮ್ಮ ಒಲವು ತೋರಲು ಕಾರಣವಾಗುತ್ತಿದೆ. ಮಕ್ಕಳು ಮತ್ತು ನಾಯಿ-ಬೆಕ್ಕುಗಳ ನಡುವಣ ಹೋಲಿಕೆಯಲ್ಲಿ ನಾಯಿ-ಬೆಕ್ಕುಗಳೇ ಇವರಿಗೆ ಆಪ್ತವಾಗುತ್ತಿವೆ.

ಮಕ್ಕಳನ್ನು ಪೋಷಿಸುವುದು ಭಾವನಾತ್ಮಕವಾಗಿಯೂ ಸವಾಲು, ಅಷ್ಟೆಲ್ಲಾ ಬದ್ಧತೆ ನಮಗಿಲ್ಲ ಎನ್ನುವುದು ಹೊಸ ತಲೆಮಾರಿನ ಮಾತು. ಮಕ್ಕಳ ಬೇಡಿಕೆಗಳನ್ನು ಪೂರೈಸುವುದರಲ್ಲೇ ನಮ್ಮ ಜೀವನ ಮುಗಿದು ಹೋಗುತ್ತದೆ ಎಂಬ ಮಾತನ್ನೂ ಹೇಳುತ್ತಾರೆ. ಆದರೆ ನಾಯಿ ಹಾಗೂ ಬೆಕ್ಕು ಸಾಕುವುದರಿಂದ ಅವುಗಳೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ಏನೋ ಖುಷಿ ಸಿಗುತ್ತದೆ. ಅವು ನಮ್ಮೊಂದಿಗೆ ಮಕ್ಕಳಂತೆ ಭಾವನಾತ್ಮಕವಾಗಿ ಕನೆಕ್ಟ್‌ ಆಗಿರುತ್ತವೆ ಇದು ಬಹಳ ಮುಖ್ಯ. ಮಕ್ಕಳು ಇಲ್ಲ ಎನ್ನುವ ಕೊರತೆಯನ್ನು ಈ ಪ್ರಾಣಿಗಳು ದೂರ ಮಾಡುತ್ತವೆ ಎನ್ನುತ್ತಾರೆ. ಇದರೊಂದಿಗೆ ಸಾಕುಪ್ರಾಣಿಗಳಿಗೆ ಆಶ್ರಯ ನೀಡುವುದು ಜಗತ್ತಿನ ಅತಿ ಅದ್ಭುತ ಕೆಲಸಗಳಲ್ಲಿ ಒಂದು, ಇದರಿಂದ ನಮಗೆ ಮಾತ್ರವಲ್ಲ, ಪ್ರಾಣಿಗಳಿಗೂ ಆಶ್ರಯ ಸಿಕ್ಕಂತಾಗುತ್ತದೆ ಎಂಬ ಅಭಿಪ್ರಾಯವೂ ಇಂದಿನ ಯುವಜನರಿಗಿದೆ.

ಅದೇನೇ ಇರಲಿ ಮಕ್ಕಳು ಬೇಕು ಅಥವಾ ಬೇಡ ಎನ್ನುವುದು ದಂಪತಿಗಳ ವೈಯಕ್ತಿಕ ವಿಚಾರ. ಸಾಕುಪ್ರಾಣಿಗಳನ್ನು ಸಾಕುವುದು ಇತ್ತೀಚಿನ ಟ್ರೆಂಡ್‌ ಆದರೂ ಮಕ್ಕಳಿಗೆ ಸಾಕುಪ್ರಾಣಿಗಳು ಪರ್ಯಾಯವಾಗಲು ಸಾಧ್ಯವೇ ಎಂಬ ಬಗ್ಗೆಯೂ ಯೋಚಿಸಬೇಕು. ಇದರೊಂದಿಗೆ ಮಕ್ಕಳ ತಮ್ಮನ್ನ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳುತ್ತಾರೆ ಎಂಬ ಮನೋಭಾವ ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿರುತ್ತದೆ. ಹಾಗಾದರೆ ಈ ಮಕ್ಕಳು ಬೇಡ ಎನ್ನುವ ದಂಪತಿಗಳು ತಮ್ಮ ಇಳಿ ವಯಸ್ಸಿನ ಬಗ್ಗೆಯೂ ಯೋಚಿಸಬೇಕು.

ಮಗನೆಂಬ ಬ್ಯಾಡ್ ಇನ್ವೆಸ್ಟ್‌ಮೆಂಟ್

ಹೂಡಿಕೆದಾರರ ವಲಯದಲ್ಲಿ ಜನಪ್ರಿಯರಾಗಿರುವ ಬೆಂಗಳೂರಿನ ಗೃಹಸ್ಥರೊಬ್ಬರು ವರ್ಷಕ್ಕೊಮ್ಮೆ ತಮ್ಮ ಹೂಡಿಕೆಗಳ ಜೊತೆಗೆ ಸೆಲ್ಫಿ ಪೋಸ್ಟ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಒಮ್ಮೆ ಇವರು ತಮ್ಮ ಮಗನೊಂದಿಗೆ ಸೆಲ್ಫಿ ತೆಗೆದು, ‘ನನ್ನ ಬ್ಯಾಡ್ ಇನ್ವೆಸ್ಟ್‌ಮೆಂಟ್‌’ ಎಂಬ ಒಕ್ಕಣೆ ಬರೆದುಕೊಂಡಿದ್ದರು. ಈ ಫೋಟೊಗೆ ಹಲವರು ಆಕ್ಷೇಪಿಸಿದ್ದರು. ‘ಮಕ್ಕಳನ್ನು ಬೆಳೆಸಲು ಆಗುವ ಖರ್ಚು ಮತ್ತು ಅವರಿಂದ ನಮಗೆ ಸಿಗುವ ಪ್ರತಿಫಲ ಲೆಕ್ಕ ಹಾಕಿದರೆ ಮಕ್ಕಳು ಬ್ಯಾಡ್ ಇನ್ವೆಸ್ಟ್‌ಮೆಂಟ್’ ಎನ್ನುವುದು ಆ ಹೂಡಿಕೆದಾರರ ವಿಚಾರವಾಗಿತ್ತು. ‘ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದಾಗ ಮಕ್ಕಳು ಓಡಿ ಬಂದು ತಬ್ಬಿಕೊಳ್ಳುವುದರ ಸುಖವನ್ನು ಕೋಟಿ ರೂಪಾಯಿ ಸಹ ಕೊಡಲಾರದು’ ಎಂದು ಮತ್ತೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಬರೆದಿದ್ದರು.

ಗಮನಿಸಿ: ಸಮಾಜದಲ್ಲಿ ಇದೀಗ ಚಾಲ್ತಿಗೆ ಬರುತ್ತಿರುವ ‘ಟ್ರೆಂಡ್’ ಒಂದನ್ನು ಓದುಗರ ಗಮನಕ್ಕೆ ತರುವ ಉದ್ದೇಶದಿಂದ ಮಾತ್ರ ಬರಹವನ್ನು ಪ್ರಕಟಿಸಲಾಗಿದೆ. ಎಚ್‌ಟಿ ಕನ್ನಡ ಈ ಪ್ರವೃತ್ತಿಯನ್ನು ಬೆಂಬಲಿಸುತ್ತಿಲ್ಲ. ನಮಗೆ ಪ್ರತಿಕ್ರಿಯೆ ನೀಡಿದವರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದವರ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಯಾರ ಹೆಸರನ್ನೂ ಪ್ರಕಟಿಸಿಲ್ಲ.