Late Marriage Benefits: ತಡವಾಗಿ ಮದುವೆಯಾದ್ರೆ ಸಮಸ್ಯೆ ಮಾತ್ರವಲ್ಲ; ಇಷ್ಟು ಅನುಕೂಲಗಳೂ ಇವೆ
ಕನ್ನಡ ಸುದ್ದಿ  /  ಜೀವನಶೈಲಿ  /  Late Marriage Benefits: ತಡವಾಗಿ ಮದುವೆಯಾದ್ರೆ ಸಮಸ್ಯೆ ಮಾತ್ರವಲ್ಲ; ಇಷ್ಟು ಅನುಕೂಲಗಳೂ ಇವೆ

Late Marriage Benefits: ತಡವಾಗಿ ಮದುವೆಯಾದ್ರೆ ಸಮಸ್ಯೆ ಮಾತ್ರವಲ್ಲ; ಇಷ್ಟು ಅನುಕೂಲಗಳೂ ಇವೆ

ಆಧುನಿಕ ಜೀವನಶೈಲಿಯಲ್ಲಿ ಮದುವೆಯಾಗುವ ಯುವಕ-ಯುವತಿಯರು ವಯಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ವೃತ್ತಿಬದುಕಿನಲ್ಲಿ ಸ್ಥಿರವಾಗಿ ನೆಲೆ ಕಂಡುಕೊಂಡ ನಂತರವೇ ಮದುವೆಯ ಯೋಚನೆ ಮಾಡುತ್ತಾರೆ. ಆಗ ವಯಸ್ಸು 30 ಆಗಿರುತ್ತದೆ. ಇದರಿಂದ ಲಾಭಗಳೂ ಇವೆ. ತಡವಾಗಿ ಮದುವೆಯಾಗುವ ಪ್ರಯೋಜನಗಳು ಹೀಗಿವೆ ನೋಡಿ.

ತಡವಾಗಿ ಮದುವೆಯಾದರೆ ಇಷ್ಟು ಅನುಕೂಲಗಳೂ ಇವೆ
ತಡವಾಗಿ ಮದುವೆಯಾದರೆ ಇಷ್ಟು ಅನುಕೂಲಗಳೂ ಇವೆ (Pixabay)

ವಯಸ್ಸು 18 ದಾಟುತ್ತಿದ್ದಂತೆಯೇ 'ಮದುವೆ ಯಾವಾಗ' ಎಂಬ ಪ್ರಶ್ನೆ ಸಾಮಾನ್ಯ. ಭಾರತದಲ್ಲಿ ವಿವಾಹಕ್ಕೆ ಕಾನೂನುಬದ್ಧ ವಯಸ್ಸು ಹುಡುಗರಿಗೆ 21 ವರ್ಷಗಳಾದರೆ, ಹುಡುಗಿಯರಿಗೆ 18 ವರ್ಷಗಳು. ದೈಹಿಕ ಬದಲಾವಣೆಯೊಂದಿಗೆ ಮಾನಸಿಕ ಪ್ರಬುದ್ಧತೆ ಒಂದು ಹಂತಕ್ಕೆ ಬರುವ ವಯಸ್ಸಿದು. ಆಧುನಿಕ ಜಗತ್ತಿನಲ್ಲಿ ಬದಲಾಗುತ್ತಿರುವ ಜೀವನಶೈಲಿಯ ನಡುವೆ ಈಗಿನ ಯುವಕ ಯುವತಿಯರು ಈ ವಯಸ್ಸಿನಲ್ಲಿ ಮದುವೆಯಾಗಲು ಮನಸ್ಸು ಮಾಡುತ್ತಿಲ್ಲ. ಹಿಂದೆಲ್ಲಾ ಮದುವೆ ವಯಸ್ಸಿಗೆ ಬಂದ ತಕ್ಷಣ ಮದುವೆ ಮಾಡುತ್ತಿದ್ದರು. ಈಗೀಗ ಇಂಥಾ ಸಂಪ್ರದಾಯವಾದಿಗಳ ಸಂಖ್ಯೆ ಕಡಿಮೆ. ಅಲ್ಲದೆ ಜನರ ಸುಶಿಕ್ಷಿತರಾಗಿದ್ದು, ಶಿಕ್ಷಣ ಹಾಗೂ ವೃತ್ತಿಬದುಕಿಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಹೀಗಾಗಿ ಅನೇಕರು ಮದುವೆಯನ್ನು ಮುಂದೂಡುತ್ತಿದ್ದಾರೆ.

ಹೆಚ್ಚಿನ ಯುವಕರು, ಜೀವನದಲ್ಲಿ ಸೆಟಲ್ (ಒಂದು ಹಂತವನ್ನು ತಲುಪುವುದು) ಆದ ನಂತರವೇ ಮದುವೆಯ ಬಗ್ಗೆ ಯೋಚಿಸುತ್ತಾರೆ. ಆರ್ಥಿಕವಾಗಿ ಸದೃಢರಾಗುವವರೆಗೂ ಮದುವೆ ಬೇಡ ಎನ್ನುವವರು ಹೆಚ್ಚು. ಅನೇಕ ಯುವಕರು ವರ್ಷ 30 ದಾಟಿದರೂ ಮದುವೆಯ ಮನಸ್ಸು ಮಾಡುವುದಿಲ್ಲ. ಹಿಂದೆ ಬಾಲ್ಯ ವಿವಾಹಗಳು ನಡೆಯುತ್ತಿದ್ದ ಸಮಯದಲ್ಲಿ ದಂಪತಿಗಳ ನಡುವೆ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇತ್ತು. ಸಂಬಂಧದಲ್ಲಿ ಬೇಗನೆ ಪ್ರಬುದ್ಧತೆ ಬರುತ್ತದೆ ಎಂದು ಜನರು ನಂಬಿದ್ದರು. ಆದರೆ ಈಗ ಯುವಕರ ಮನಸ್ಥಿತಿ ಬದಲಾಗುತ್ತಿದ್ದು, ಅಂಥಾ ನಂಬಿಕೆ ಯೋಚನೆಗಳೇ ಇಲ್ಲ. 30ನೇ ವಯಸ್ಸಿನಲ್ಲಿ ಮದುವೆಯಾಗುವುದೇ ಸರಿ ಎಂಬುದು ಹೆಚ್ಚಿನವರ ಅಭಿಪ್ರಾಯ.

ತಡವಾಗಿ ಮದುವೆಯಾಗುವುದು ಫಲವತ್ತತೆಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅನೇಕ ಅಧ್ಯಯನಗಳು ಹೇಳಿವೆ. ಫಲವತ್ತತೆ ಸಮಸ್ಯೆಯಿಂದ ಆರೋಗ್ಯವಂತ ಮಗುವನ್ನು ಪಡೆಯುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ. ಇದು ತಡವಾದ ಮದುವೆಯ ಒಂದು ಭಾಗ.

30 ವರ್ಷದವರೆಗೆ ಮದುವೆಯಾಗದಿದ್ದರೆ ಕೆಲವೊಂದು ಪ್ರಯೋಜನಗಳು ಕೂಡಾ ಇವೆ. ಅವು ಏನೆಂದು ನೋಡೋಣ.

ಆರ್ಥಿಕವಾಗಿ ಸದೃಢ

30 ವರ್ಷ ವಯಸ್ಸಿಗೆ ಆರ್ಥಿಕವಾಗಿ ಬಹುತೇಕ ಸ್ಥಿರವಾಗಿರಬಹುದು. ಜೀವನದಲ್ಲಿ ಯಶಸ್ಸು ಮತ್ತು ಸ್ಥಿರತೆಯನ್ನು ಸಾಧಿಸಲು ಸಮಯ ಬೇಕು. ಆರ್ಥಿಕವಾಗಿ ದುರ್ಬಲರಾಗಿರುವಾಗ ಮದುವೆಯಾದರೆ, ಕುಟುಂಬದ ಜವಾಬ್ದಾರಿ ನಿಭಾಯಿಸಲು ಹೆಣಗಾಡಬಹುದು. ಹೀಗಾಗಿ ಹೆಚ್ಚಿನವರು ಜೀವನ ಮತ್ತು ವೃತ್ತಿಜೀವನದಲ್ಲಿ ಸ್ಥಿರವಾಗಿ ನೆಲೆಯೂರಿದ ನಂತರವೇ ಮದುವೆಯಾಗಲು ಪ್ರಯತ್ನಿಸುತ್ತಾರೆ. 30ನೇ ವಯಸ್ಸು ತಲುಪುವ ಹೊತ್ತಿಗೆ, ಬಹುತೇಕ ಎಲ್ಲರೂ ತಮ್ಮ ವೃತ್ತಿಜೀವನದಲ್ಲಿ ಸ್ಥಿರವಾಗಿರುತ್ತಾರೆ. ಆಗ ಹಣಕಾಸಿನ ಪರಿಸ್ಥಿತಿಯು ಬಲಗೊಳ್ಳುತ್ತದೆ.

ಹಣದ ಸರಿಯಾದ ಬಳಕೆ

ಸಾಮಾನ್ಯವಾಗಿ ಶೈಕ್ಷಣಿಕ ಜೀವನ ಮುಗಿಸಿ ಮೊದಲ ಕೆಲಸ ಪಡೆಯಲು 23ರಿಂದ 24 ವರ್ಷ ವಯಸ್ಸಾಗುತ್ತದೆ. ಪ್ರತಿ ವ್ಯಕ್ತಿಯು ತನ್ನ ಆಸೆಗಳನ್ನು ಪೂರೈಸಲು ಆರಂಭಿಕ ವರ್ಷಗಳ ಸಂಬಳವನ್ನು ವಿನಿಯೋಗಿಸುತ್ತಾನೆ. ಆದರೆ, 30 ವರ್ಷ ವಯಸ್ಸಿನ ನಂತರ, ವ್ಯಕ್ತಿಯು ಹಣವನ್ನು ಉಳಿಸುವ, ಖರ್ಚುಮಾಡುವ ವಿಧಾನ ಕಲಿಯುತ್ತಾನೆ. ಹೀಗಾಗಿ ವ್ಯರ್ಥ ಖರ್ಚುಗಳನ್ನು ತಪ್ಪಿಸಿ ಹಣಕಾಸಿನ ನಿರ್ವಹಣೆ ಸಮರ್ಪಕವಾಗಿ ಆಗುತ್ತದೆ.

ಹೆಚ್ಚು ಪ್ರಬುದ್ಧತೆ

ಪ್ರತಿಯೊಬ್ಬ ವ್ಯಕ್ತಿಯ ಆಲೋಚನೆಗಳು ವಯಸ್ಸಿಗೆ ತಕ್ಕಂತೆ ಬದಲಾಗುತ್ತವೆ. 30 ವರ್ಷದ ಯುವಕ 20 ವರ್ಷದ ಹುಡುಗನಿಗಿಂತ ಮಾನಸಿಕವಾಗಿ ಹೆಚ್ಚು ಪ್ರಬುದ್ಧನಾಗಿರುತ್ತಾನೆ. ಆಗ ತನ್ನ ಜೀವನ ಸಂಗಾತಿಯ ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ. ಇದು ಆ ಸಂಬಂಧವನ್ನು ಬಲಪಡಿಸುತ್ತದೆ.

ಕೌಟುಂಬಿಕ ಒತ್ತಡ ನಿಭಾಯಿಸುವ ಸವಾಲು

ಹೆಚ್ಚಿನ ಸಂದರ್ಭಗಳಲ್ಲಿ, ನೀವು ಎಷ್ಟು ಬೇಗ ಮದುವೆಯಾಗುತ್ತೀರೋ ಅಷ್ಟು ಬೇಗ ಮಕ್ಕಳನ್ನು ಪಡೆಯುತ್ತೀರಿ. ಇದು ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಒತ್ತಡವನ್ನು ಹೆಚ್ಚಿಸುತ್ತದೆ. ಏಕೆಂದರೆ ಸಣ್ಣ ವಯಸ್ಸಿನಲ್ಲಿ ಜೀವನ ನಿರ್ವಹಣೆಗೆ ಕಷ್ಟಪಡಬೇಕಾಗುತ್ತದೆ. ಆದರೆ 30 ವರ್ಷ ಮೇಲ್ಪಟ್ಟವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಮಕ್ಕಳು ಜನಿಸಿದಾಗ ಅದರ ಲಾಲನೆ ಪಾಲನೆ ಸುಲಭ.

Whats_app_banner