ಬ್ರೇಕಪ್ ಆಗಿ ಅಳುತ್ತಾ ಕುಳಿತಿದ್ದೀರಾ: ನೆನಪು ಮರುಕಳಿಸಿ ಬಿಕ್ಕಳಿಸುತ್ತಿದ್ದೀರಾ, ಮಾಜಿ ಸಂಗಾತಿಯನ್ನು ಮರೆಯಲು ಇಲ್ಲಿದೆ ಸಲಹೆ
ಬ್ರೇಕಪ್ ಅಥವಾ ಸಂಗಾತಿಯಿಂದ ದೂರವಾದ ಬಳಿಕವೂ ಅವರ ನೆನಪು ಮರುಕಳಿಸಿ ಅಳುತ್ತಾ ಕೂರುವುದು, ಖಿನ್ನತೆಗೆ ಜಾರುವುದು ಇತ್ಯಾದಿ ಸಮಸ್ಯೆಗಳಿಗೆ ಕೆಲವರು ಒಳಗಾಗುತ್ತಾರೆ. ಇದೊಂದು ಅತ್ಯಂತ ಸವಾಲಿನ ಮತ್ತು ಭಾವನಾತ್ಮಕ ಅನುಭವವಾಗಿರಬಹುದು. ಬ್ರೇಕಪ್‍ನಿಂದ ಹೊರಬರಲು ಕಷ್ಟವಾಗುತ್ತಿದ್ದರೆ, ನಿಮಗಾಗಿ ಇಲ್ಲಿದೆ ಸಲಹೆ.
ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಝಾರು ಎಂಬ ಹಾಡು ನಿಮಗೆ ಗೊತ್ತಿರಬಹುದು. ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತಾ ಉಪೇಂದ್ರ ಹೇಳಿದ್ದ ಡೈಲಾಗ್ ಕೂಡ ಗೊತ್ತಿರಬಹುದು. ಆದರೂ ಅದೆಷ್ಟೋ ಜನ ಪ್ರೀತಿಯೆಂಬ ಮಾಯೆಯಲ್ಲಿ ಬೀಳುತ್ತಾರೆ. ಈ ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಸ್ಕೂಲ್ ಮಕ್ಕಳಿಂದ ಹಿಡಿದು ವಯಸ್ಸಾದವರೂ ಪ್ರೀತಿಯಲ್ಲಿ ತೇಲುತ್ತಾರೆ. ಒಂದು ಹುಡುಗ, ಹುಡುಗೆ ಇಷ್ಟವಾಗಿ ಪ್ರೀತಿಯಲ್ಲಿ ಬೀಳಲು ಅಷ್ಟು ಸಮಯ ಬೇಕಿಲ್ಲ. ಈ ಪ್ರೀತಿ ಯಾವಾಗ, ಯಾರಿಗೆ ಶುರುವಾಗುತ್ತದೆ ಅಂತನೂ ಹೇಳಲಾಗುವುದಿಲ್ಲ. ಇಬ್ಬರೂ ಪರಸ್ಪರ ಇಷ್ಟಪಟ್ಟು ಪ್ರೀತಿಸತೊಡಗಿದಾಗ ಪ್ರೇಮಿಗಳಿಗೆ ಈ ಜಗತ್ತೇ ಕಾಣುವುದಿಲ್ಲ. ಪ್ರೇಮದ ಅಲೆಯಲ್ಲಿ ತೇಲುತ್ತಿರುತ್ತಾರೆ. ಆದರೆ, ಒಂದಷ್ಟು ದಿನಗಳಾದ ಬಳಿಕ ಪ್ರೇಮಿಗಳು ಜಗಳವಾಡಬಹುದು, ಪರಸ್ಪರ ನಿಂದನೆ, ದೋಷಾರೋಪಣೆ, ಸಂಶಯ ಇತ್ಯಾದಿಗಳಿಂದಾಗಿ ಬ್ರೇಕಪ್ ಆಗಬಹುದು.
ಪ್ರೀತಿಸಿದವರೆಲ್ಲರೂ ಮದುವೆಯಾಗುತ್ತಾರೆ ಎಂದು ಹೇಳಲಿಕ್ಕಾಗುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಮನೆಯವರು ಈ ಪ್ರೀತಿಯನ್ನು ಮುರಿದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಹುಡುಗ-ಹುಡುಗಿನೇ ಯಾವುದೋ ಕಾರಣಕ್ಕೋ ಬೇಸತ್ತು ದೂರವಾಗುತ್ತಾರೆ. ಆದರೆ, ತುಂಬಾ ಪ್ರೀತಿಸುತ್ತಿದ್ದ ಹುಡುಗ ಅಥವಾ ಹುಡುಗಿಯನ್ನು ದೂರ ಮಾಡಿ ಜೀವನ ಮಾಡುವುದು ಅಂದ್ರೆ ಅದು ಸುಲಭದ ವಿಷಯವಲ್ಲ. ಇದರಿಂದ ಹೊರಬರಲು ತುಂಬಾ ಕಷ್ಟಪಡುತ್ತಾರೆ. ಕೆಲವರು ದಿನಪೂರ್ತಿ ಅಳುತ್ತಲೇ ಕಾಲಕಳೆಯುವುದು, ಊಟ ಸೇರದೆ ಇರುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗುವವರಿದ್ದಾರೆ. ಆದರೆ, ಈ ರೀತಿ ಮಾಡುವುದು ಸರಿಯಲ್ಲ. ಕೇವಲ ಪ್ರೇಮದ ಪ್ರಕರಣ ಮಾತ್ರವಲ್ಲ ಪತಿ-ಪತ್ನಿ ದೂರವಾಗಿ ವಿಚ್ಛೇದನ ಪಡೆದುಕೊಂಡ ಮೇಲೂ ಅನೇಕರು ಖಿನ್ನತೆಗೆ ಜಾರುವವರಿದ್ದಾರೆ.
ಬ್ರೇಕಪ್ ನಂತರ, ಪತಿ-ಪತ್ನಿ ದೂರವಾದ ನಂತರ ಮನಸ್ಸಿಗೆ ಬೇಸರವೆನಿಸುತ್ತದೆ ಹೌದು. ಹಾಗಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ನಮಗೂ ಜೀವನವಿದೆ ಅನ್ನೋದನ್ನು ತಿಳಿದುಕೊಳ್ಳಬೇಕು. ಹಳೆಯ ನೆನಪುಗಳನ್ನು ಮರೆಯುವುದು ಕಷ್ಟವೆನಿಸಬಹುದು. ಆದರೆ, ನಮ್ಮ ಮನಸ್ಸನ್ನು ನಾವು ಹತೋಟಿಗೆ ತಂದುಕೊಂಡರೆ ಯಾವುದೂ ಅಸಾಧ್ಯವಲ್ಲ. ನಿಮಗೂ ಬ್ರೇಕಪ್ ಆಗಿದ್ದು, ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ, ಹೇಗೆ ನಿಭಾಯಿಸುವುದು ಎಂದು ತಿಳಿಯುತ್ತಿಲ್ಲವೆ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಸಲಹೆ:
ಧನಾತ್ಮಕವಾಗಿರುವುದು ಮುಖ್ಯ: ನಿಮ್ಮ ಸಂಬಂಧವು ಮುರಿದುಹೋದಾಗ, ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳೇ ಮೂಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಧನಾತ್ಮಕವಾಗಿರಲು ಪ್ರಯತ್ನಿಸಬೇಕು. ಬ್ರೇಕಪ್ ಅಥವಾ ಪತಿ-ಪತ್ನಿ ದೂರವಾದ ನೋವಿನಿಂದ ಹೊರಬರಲು ನೀವು ಧ್ಯಾನದ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಪ್ರತಿದಿನ ಧ್ಯಾನ ಮಾಡುವುದರಿಂದ ನಿಮ್ಮ ದುಃಖವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.
ಗಮನ ಬದಲಾಯಿಸುವುದು: ಪರಸ್ಪರ ದೂರವಾದ ನಂತರ ನಿಮ್ಮ ಗಮನವನ್ನು ಬದಲಾಯಿಸಬೇಕು. ಮಾಜಿ ಗೆಳೆಯ/ಗೆಳತಿ/ಪತಿ/ಪತ್ನಿಯ ಬಗ್ಗೆ ಚಿಂತಿಸುತ್ತಾ ಕಾಲ ಕಳೆಯದೆ ವೃತ್ತಿಜೀವನದತ್ತ ಗಮನ ಹರಿಸಬೇಕು. ದೂರವಾದ ಬೇಸರದಲ್ಲಿ ಕೋಣೆಯೊಳಗೆ ಒಬ್ಬರೇ ಚಿಂತಿಸುತ್ತಾ ಕುಳಿತರೆ ಖಿನ್ನತೆಯಂತಹ ಸಮಸ್ಯೆಗಳಿಗೆ ಬಲಿಯಾಗಬಹುದು. ಹೀಗಾಗಿ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಿರಬೇಕು.
ಸತ್ಯವನ್ನು ಒಪ್ಪಿಕೊಳ್ಳಲು ಪ್ರಯತ್ನಿಸಿ: ಸಾಮಾನ್ಯವಾಗಿ ಕೆಲವರು ಸಂಗಾತಿ ದೂರವಾದ ನಂತರವೂ ಅವರ ಬಗ್ಗೆಯೇ ಯೋಚನೆಯಲ್ಲಿ ಮುಳುಗಿರುತ್ತಾರೆ. ಆಕೆ ಅಥವಾ ಆತನನ್ನು ಮತ್ತೆ ಮತ್ತೆ ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಅಥವಾ ಅವರ ಫೋಟೋಗಳನ್ನು ನೋಡುತ್ತಾ ಹಳೆಯ ದಿನಗಳತ್ತ ನೆನಪಿಗೆ ಜಾರುತ್ತಾರೆ. ಈ ರೀತಿ ಮಾಡುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದಿತು. ತಮ್ಮ ಸಂಬಂಧವು ಕೊನೆಗೊಂಡಿದೆ ಎಂಬ ಸತ್ಯವನ್ನು ಒಪ್ಪಿಕೊಂಡು ನೀವು ಮುಂದುವರಿದು, ಬದುಕಲು ಕಲಿಯಬೇಕು.
ನಿಮಗೆ ನೀವೆ ಸಮಯ ನೀಡಬೇಕು: ಬ್ರೇಕಪ್‍ನಿಂದ ಹೊರಬರಲು ನಿಮಗೆ ನೀವೇ ಸಮಯವನ್ನು ನೀಡಬೇಕು. ನಿಮ್ಮ ನೆಚ್ಚಿನ ಚಟುವಟಿಕೆಗಳನ್ನು ಮಾಡುವ ಮೂಲಕ ನಿಮ್ಮನ್ನು ಸಂತೋಷವಾಗಿರಿಸಿಕೊಳ್ಳಲು ಪ್ರಯತ್ನಿಸಿ. ಮೊದಲು ನಮ್ಮ ಸಂತೋಷ ಮುಖ್ಯ. ಹೀಗಾಗಿ ನಿಮಗೆ ನೀವೇ ಸಮಯ ನೀಡಿಕೊಂಡು ಉತ್ತಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಹೀಗೆ ಮಾಡುವುದರಿಂದ ಸಂಗಾತಿಯ ನೆನಪು ಹತ್ತಿರವೂ ಸುಳಿಯುವುದಿಲ್ಲ.
ಉಡುಗೊರೆಗಳನ್ನು ಎಸೆಯಿರಿ: ಪ್ರೇಮಿ ಅಥವಾ ಸಂಗಾತಿ ನೀಡಿದ್ದ ಉಡುಗೊರೆಯನ್ನು ದೂರ ಎಸೆಯಿರಿ. ಅದು ನಿಮ್ಮ ಬಳಿ ಇದ್ದಷ್ಟೂ ಅವರ ನೆನಪು ನಿಮ್ಮ ಮನದಲ್ಲಿರುತ್ತದೆ. ಅದನ್ನು ನೋಡಿದಾಗಲೆಲ್ಲಾ ಅವರ ನೆನಪಾಗಿ, ಮತ್ತೆ ಚಿಂತೆಗೆ ಜಾರಬಹುದು. ಹೀಗಾಗಿ ಸಂಗಾತಿ ಕೊಟ್ಟಂತಹ ಉಡುಗೊರೆಗಳನ್ನು ದೂರ ಎಸೆಯಿರಿ. ಅವರ ನೆನಪಿಗೆ ಒಂಚೂರು ಜಾಗ ನೀಡದಿರಿ.
ವಿಭಾಗ