Relationship Tips: ಪತಿ-ಪತ್ನಿ ನಡುವಿನ ಸಂಬಂಧ ಹಳಸುತ್ತಿದೆಯಾ: ಮನಸ್ತಾಪ-ಜಗಳವಾದಾಗ ಏನು ಮಾಡಬೇಕು, ಇಲ್ಲಿದೆ ಸಲಹೆ-relationship tips how to resolve relationship conflicts tips for fixing relationship problems prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Relationship Tips: ಪತಿ-ಪತ್ನಿ ನಡುವಿನ ಸಂಬಂಧ ಹಳಸುತ್ತಿದೆಯಾ: ಮನಸ್ತಾಪ-ಜಗಳವಾದಾಗ ಏನು ಮಾಡಬೇಕು, ಇಲ್ಲಿದೆ ಸಲಹೆ

Relationship Tips: ಪತಿ-ಪತ್ನಿ ನಡುವಿನ ಸಂಬಂಧ ಹಳಸುತ್ತಿದೆಯಾ: ಮನಸ್ತಾಪ-ಜಗಳವಾದಾಗ ಏನು ಮಾಡಬೇಕು, ಇಲ್ಲಿದೆ ಸಲಹೆ

ದಂಪತಿ ಮಧ್ಯೆ ಆಗಾಗ ಜಗಳವಾಗುವುದು ಸಾಮಾನ್ಯ. ಆದರೆ, ಈ ಜಗಳ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಜಗಳವಾದಾಗ ಮಾತು ಬಿಟ್ಟು, ತಾನೊಂದು ತೀರ ನೀನೋಂದು ತೀರಾ ಅಂತಾ ಇದ್ದುಬಿಟ್ಟರೆ ಆ ದಾಂಪತ್ಯಕ್ಕೆ ಅರ್ಥ ಇರುವುದಿಲ್ಲ. ಜಗಳವಾದಾಗ ಅದನ್ನು ಪರಿಹರಿಸುವುದು ಮುಖ್ಯ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಪತಿ-ಪತ್ನಿ ನಡುವೆ ಜಗಳವಾದಾಗ ಅದನ್ನು ಪರಿಹರಿಸುವುದು ಮುಖ್ಯ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಪತಿ-ಪತ್ನಿ ನಡುವೆ ಜಗಳವಾದಾಗ ಅದನ್ನು ಪರಿಹರಿಸುವುದು ಮುಖ್ಯ. ಈ ಬಗ್ಗೆ ಇಲ್ಲಿದೆ ಮಾಹಿತಿ. (unsplash)

ಹೊಸದಾಗಿ ಮದುವೆಯಾದ ನವಜೋಡಿ ಸಂಬಂಧ ಬಹುತೇಕ ತುಂಬಾ ಚೆನ್ನಾಗಿರುತ್ತದೆ. ಆದರೆ, ಬರುಬರುತ್ತಾ ಮನಸ್ತಾಪ, ಸಿಟ್ಟು, ಜಗಳ ಇತ್ಯಾದಿ ನಡೆಯುವುದು ಸಾಮಾನ್ಯ. ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿನಂತೆ, ಎಷ್ಟೇ ಜಗಳವಾಡಿದ್ರೂ ಕ್ಷಣಮಾತ್ರದಲ್ಲಿ ಸರಿಯಾಗುವ ಸಂಬಂಧವಿದು. ಆದರೆ, ಈ ಜಗಳ ಮುಂದುವರಿದು ದೊಡ್ಡದಾಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಯ ಸಂಬಂಧ ಹಳಸುತ್ತಿದೆ. ಇದಕ್ಕಾಗಿ ಜಗಳವನ್ನು ಆದಷ್ಟು ಪರಿಹರಿಸಲು ಪ್ರಯತ್ನಿಸಬೇಕು. ಸಂಗಾತಿಯೊಂದಿಗೆ ಜಗಳವನ್ನು ಹೇಗೆ ಪರಿಹರಿಸಬಹುದು ಎಂಬ ಬಗ್ಗೆ ಇಲ್ಲಿ 5 ಸಲಹೆಗಳನ್ನು ನೀಡಲಾಗಿದೆ.

ಸಂಗಾತಿಯೊಂದಿಗೆ ಜಗಳವನ್ನು ಹೀಗೆ ಪರಿಹರಿಸಿ

ಮುಕ್ತವಾಗಿ, ಪ್ರಾಮಾಣಿಕವಾಗಿ ಮಾತನಾಡಿ: ಸಂಬಂಧದಲ್ಲಿ ಮಾತು ಅಥವಾ ಸಂವಹನ ಬಹಳ ಮುಖ್ಯ. ಜಗಳವಾದಾಗ ಮಾತು ಬಿಡುವುದು ಸರಿಯಲ್ಲ. ಜಗಳ, ಮನಸ್ತಾಪ ಉಂಟಾದಾಗ ನಿಮ್ಮ ಭಾವನೆಗಳ ಬಗ್ಗೆ ಸಂಗಾತಿಯೊಂದಿಗೆ ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡುವುದು ಅತ್ಯಗತ್ಯ. ಪರಸ್ಪರ ದೂಷಿಸುವುದು, ಆರೋಪ ಮಾಡುವುದನ್ನು ನಿಲ್ಲಿಸಿ. ಬದಲಾಗಿ ಈ ರೀತಿ ಹೇಳಿದರೆ ತನಗೆ ನೋವುಂಟಾಗುತ್ತದೆ ಎಂದು ಮನದಟ್ಟಾಗುವಂತೆ ತಿಳಿಸಿ.

ಸಕ್ರಿಯವಾಗಿ ಆಲಿಸಿ: ಮಾತನಾಡುವಷ್ಟೇ ಮುಖ್ಯವಾದುದು ಆಲಿಸುವುದು. ನಿಮ್ಮ ಸಂಗಾತಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿರುವಾಗ, ಅವರತ್ತ ನಿಮ್ಮ ಸಂಪೂರ್ಣ ಗಮನ ನೀಡಿ. ಸಂಗಾತಿ ಮಾತನಾಡುವಾಗ ಮಧ್ಯೆ ಮಾತನಾಡಿ ಅಡ್ಡಿಪಡಿಸದಿರಿ. ಸಂಗಾತಿಯ ಭಾವನೆಗಳನ್ನು ಗೌರವಿಸಿ. ಬಳಿಕ ಸಮಾಧಾನವಾಗಿ ಇಬ್ಬರು ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ತಾಳ್ಮೆಯಿಂದಿರಿ: ಜಗಳ ಹೆಚ್ಚಾದಾಗ ಏನೇನೋ ಮಾತು ಬರುತ್ತದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿನಂತೆ ಕೋಪದಲ್ಲಿ ಆಡಿದ ಮಾತು ಎದೆಗೆ ಚೂರಿ ಇರಿದಂತಾಗಬಹುದು. ಹೀಗಾಗಿ ಜಗಳವಾಡುವ ಸಮಯದಲ್ಲಿ ಮಾತಿನ ಮೇಲೆ ಹಿಡಿತ ಇರಲಿ. ಆದಷ್ಟು ತಾಳ್ಮೆಯಿಂದ ವರ್ತಿಸಬೇಕು. ಕೆಟ್ಟ ಕೆಟ್ಟದಾಗಿ ಬೈಯುವುದು, ನಿಂದಿಸುವುದು ಇತ್ಯಾದಿ ಮಾಡುವುದರಿಂದ ಗಂಡ-ಹೆಂಡತಿಯ ಸಂಬಂಧ ಮತ್ತಷ್ಟು ದೂರವಾಗಬಹುದು. ಹೀಗಾಗಿ ತಾಳ್ಮೆ ತೆಗೆದುಕೊಳ್ಳುವುದು ಅಗತ್ಯ.

ರಾಜಿ ಸಂಧಾನ ಮತ್ತು ಪರಿಹಾರಗಳನ್ನು ಹುಡುಕಿ: ಹೆಚ್ಚಿನ ದಂಪತಿ ಜಗಳವಾದಾಗ ಬಳಿಕ ಮಾತು ಬಿಡುತ್ತಾರೆ. ಸಣ್ಣ-ಪುಟ್ಟ ಜಗಳವಾದಾಗ ಮಾತು ಬಿಡದಿರಿ. ಸಂಗಾತಿ ಮಾತು ಬಿಟ್ಟರೂ ನೀವು ರಾಜಿ ಮಾಡಿಕೊಳ್ಳಲು ಸಿದ್ಧರಾಗಿ. ಅವರು ರಾಜಿ ಮಾಡಿಕೊಳ್ಳಲು ಸಿದ್ಧವಿರದಿದ್ದರೆ ಸಂಗಾತಿ ಇಷ್ಟ ಪಡುವ ಖಾದ್ಯ ಮಾಡುವತ್ತ ಇತ್ಯಾದಿಗಳತ್ತ ಗಮನ ಕೊಡಿ.

ಅಗತ್ಯವಿದ್ದರೆ ವೃತ್ತಿಪರರ ಸಹಾಯವನ್ನು ಪಡೆಯಿರಿ: ಕೆಲವೊಮ್ಮೆ, ಜಗಳಗಳು ತೀವ್ರ ಹೆಚ್ಚಾಗಿ ವಿಕೋಪಕ್ಕೆ ತೆರಳಬಹುದು. ಪರಿಹಾರ ಕೈಗೊಂಡರೂ ಏನೂ ಪ್ರತಿಫಲ ಸಿಗದಿದ್ದರೆ ಕೌನ್ಸಿಲಿಂಗ್ ತೆಗೆದುಕೊಳ್ಳಬಹುದು.

ಜಗಳಗಳು ಯಾವುದೇ ಸಂಬಂಧದಲ್ಲಿ ಸಾಮಾನ್ಯವಾಗಿದೆ. ಆದರೆ, ನೀವು ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಮುಖ್ಯ. ಮುಕ್ತವಾಗಿ ಸಂವಹನ ಮಾಡುವ ಮೂಲಕ, ಸಕ್ರಿಯವಾಗಿ ಆಲಿಸುವ ಮೂಲಕ, ತಾಳ್ಮೆ ತೆಗೆದುಕೊಳ್ಳುವುದು, ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ಅಗತ್ಯವಿದ್ದಾಗ ವೃತ್ತಿಪರರ ಸಹಾಯವನ್ನು ಪಡೆಯುವ ಮೂಲಕ ದಾಂಪತ್ಯ ಜೀವನವನ್ನು ಸರಿಯಾದ ಮಾರ್ಗದಲ್ಲಿ ನಡೆಯಬಹುದು. ದಂಪತಿಯ ಮಧ್ಯೆ ಪ್ರತಿಸಲ ಜಗಳವಾದಾಗ ಪರಸ್ಪರ ಹತ್ತಿರ ಬೆಸೆಯಲು ಮತ್ತು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದು.