Pre School: ನಿಮ್ಮ ಮಗುವನ್ನು ಮೊದಲ ಬಾರಿ ಸ್ಕೂಲ್‌ಗೆ ಕಳಿಸ್ತಿದ್ದೀರಾ;ಈ ಎಲ್ಲಾ ಅಂಶಗಳು ನಿಮ್ಮ ಗಮನದಲ್ಲಿರಲಿ, ಬಹಳ ಉಪಯುಕ್ತ ಮಾಹಿತಿಗಳು ಇವು
ಮಕ್ಕಳ ಕ್ಲಾಸ್ ಟೀಚರ್ ಜೊತೆ ನಿರಂತರ ಸಂಪರ್ಕದಲ್ಲಿ ಇರಿ. ಸಾಧ್ಯವಾದರೆ ಸ್ಕೂಲ್‌ನಲ್ಲಿ ಮಕ್ಕಳ ಚಟುವಟಿಕೆ ಹೇಗಿರುತ್ತದೆ ಎಂಬುದನ್ನು ವಿಡಿಯೋ ರೆಕಾರ್ಡ್ ಮಾಡಿ ಕಳಿಸುವಂತೆ ಮನವಿ ಮಾಡಿ. ಟೀಚರ್‌ಗಳು, ಆಯಾಗಳ ಜೊತೆ ನಿಮ್ಮ ಸಂಬಂಧ ಚೆನ್ನಾಗಿರಲಿ.
ಶಾಲೆಗಳು ಪುನಾರಂಭವಾಗಿದೆ. 2 ತಿಂಗಳಿನಿಂದ ಅಜ್ಜಿ-ತಾತನ ಮನೆ, ಅಪ್ಪ-ಅಮ್ಮನೊಂದಿಗೆ ಟ್ರಿಪ್ ಎಂಜಾಯ್ ಮಾಡಿದ್ದ ಮಕ್ಕಳು ಮತ್ತೆ ಬ್ಯಾಗ್ ಹೊತ್ತು ಸ್ಕೂಲ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇದರ ಜೊತೆಗೆ ಕೆಲವು ಪೋಷಕರು 2 ವರ್ಷ ತುಂಬಿದ ತಮ್ಮ ಮಕ್ಕಳನ್ನು ಪ್ರಿ ಸ್ಕೂಲ್, ಮಾಟೆಸ್ಸರಿಗೆ ಸೇರಿಸುತ್ತಿದ್ದಾರೆ.
ಹುಟ್ಟಿದಾಗಿನಿಂದ ಒಮ್ಮೆಯೂ ಮನೆಯವರನ್ನು ಬಿಟ್ಟು ಹೊರಗೆ ಹೋಗದ ಮಗು, ಮೊದಲ ಬಾರಿಗೆ ಸ್ಕೂಲ್‌ಗೆ ಹೋಗಲಿದೆ ಎಂದರೆ ಮಗುವನ್ನು ಕಳಿಸಲು ಪೋಷಕರಿಗೂ ಬೇಸರ. ಹಾಗೇ ಮಗುವಿಗೆ ಕೂಡಾ ಅಪ್ಪ- ಅಮ್ಮ ನನ್ನನ್ನು ಬಿಟ್ಟು ಎಲ್ಲೋ ಹೊರಟು ಹೋದರು ಎಂಬ ಭಯ ಕಾಡುತ್ತದೆ. ತಾನು ಯಾವ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂಬ ಅರಿವು ಕೂಡಾ ಆ ಮಗುವಿಗೆ ಇರುವುದಿಲ್ಲ. ಮೊದಲ ಬಾರಿಗೆ ಮಗುವನ್ನು ಸ್ಕೂಲ್‌ಗೆ ಕಳಿಸುವಾಗ ಪೋಷಕರು ಕೆಲವೊಂದು ವಿಚಾರಗಳನ್ನು ಗಮನದಲ್ಲಿಡಬೇಕು. ಅಂಥಹ ಪೋಷಕರಿಗೆ ಕೆಲವೊಂದು ಟಿಪ್ಸ್ ಇಲ್ಲಿವೆ.
- ಮಕ್ಕಳು ಒಳ್ಳೆಯ ಸ್ಕೂಲ್‌ನಲ್ಲಿ ಓದಬೇಕು, ಮಗುವಿನ ಭವಿಷ್ಯ ಚೆನ್ನಾಗಿರಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆ ಕಾರಣಕ್ಕೆ ಏಕಾಏಕಿ ನಿಮ್ಮ ಮಕ್ಕಳನ್ನು ದೊಡ್ಡ ಸ್ಕೂಲ್‌ಗೆ ಸೇರಿಸುವ ಯೋಚನೆ ಮಾಡಬೇಡಿ.
- ನಿಮ್ಮ ಮನೆಗೆ ಸಮೀಪವಿರುವ ಅಂಗನವಾಡಿ, ಪ್ರಿ ಸ್ಕೂಲ್ ಅಥವಾ ಮಾಂಟೆಸ್ಸರಿಗೆ ಮಗುವನ್ನು ಸೇರಿಸಿ.
- ಮಗುವನ್ನು ಸ್ಕೂಲ್‌ಗೆ ಕಳಿಸುವಾಗ ಅದು ಅಳುತ್ತದೆ ಎಂಬ ಕಾರಣಕ್ಕೆ ಹೊಡೆಯುವುದು, ಹೆದರಿಸುವುದು ಮಾಡಬೇಡಿ. ಮಕ್ಕಳನ್ನು ಮುದ್ದು ಮಾಡುತ್ತಾ, ಕಥೆಗಳನ್ನು ಹೇಳುತ್ತಾ, ಸ್ಕೂಲ್‌ನಲ್ಲಿ ಇತರ ಮಕ್ಕಳ ಬಗ್ಗೆ ಹೇಳುತ್ತಾ ಸ್ಕೂಲ್‌ಗೆ ಕಳಿಸಿಕೊಡಿ.
- ಯಾವುದೇ ಕಾರಣಕ್ಕೂ ಪುಟ್ಟ ಮಕ್ಕಳನ್ನು ಆಟೋ, ಕ್ಯಾಬ್‌ಗಳಲ್ಲಿ ಕಳಿಸಬೇಡಿ, ಸಾಧ್ಯವಾದರೆ ಮಕ್ಕಳನ್ನು ನೀವೇ ಸ್ಕೂಲ್‌ಗೆ ಕರೆದೊಯ್ದು, ನೀವೇ ಕರೆತನ್ನಿ. ಹಾಗೇ ಸ್ಕೂಟರ್‌ನಲ್ಲಿ ಹೋಗುವಾಗ ಮಗುವನ್ನು ಹಿಂಬದಿ ಕೂರಿಸಿಕೊಳ್ಳಬೇಡಿ.
- ಆರಂಭದಲ್ಲಿ ನಿಮ್ಮ ಮಗು ಯಾವ ತಿಂಡಿಯನ್ನು ಇಷ್ಟ ಪಡುತ್ತದೋ ಅದೇ ತಿಂಡಿ (ನಾನ್ ವೆಜ್ ಹೊರತುಪಡಿಸಿ) ಯನ್ನು ಬಾಕ್ಸ್‌ಗೆ ಹಾಕಿ ಕಳಿಸಿ. ನಂತರ ಟೀಚರ್‌ಗಳು ಹೇಳಿದ್ದನ್ನು ಫಾಲೋ ಮಾಡಿ.
- ಕೆಲವೊಂದು ಸ್ಕೂಲ್‌ಗಳಲ್ಲಿ ಮಧ್ಯಾಹ್ನ 12 ಅಥವಾ 1 ಗಂಟೆವರೆಗೆ ಕ್ಲಾಸ್ ಇದ್ದರೆ ಕೆಲವೆಡೆ 4 ಗಂಟೆವರೆಗೂ ಇರುತ್ತದೆ. ಸ್ಕೂಲ್ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ ಮಗುವನ್ನು ಸ್ಕೂಲ್‌ನಿಂದ ಬೇಗನೆ ಮನೆಗೆ ಕರೆ ತನ್ನಿ.
- ನೀವು ಎಷ್ಟೇ ಬ್ಯುಸಿ ಇದ್ದರೂ ಸಮಯ ಹೊಂದಿಸಿಕೊಂಡು ಆ ದಿನ ಸ್ಕೂಲ್‌ನಲ್ಲಿ ನಡೆದ ವಿಚಾರಗಳನ್ನು ಕೇಳಿ, ಮಗುವಿನೊಂದಿಗೆ ಸಂಭಾಷಣೆ ನಡೆಸಿ.
- ಪ್ರತಿದಿನ ಮಗು ಸ್ಕೂಲ್‌ಗೆ ಹೋಗುವ ಮುನ್ನ, ಸ್ಕೂಲ್‌ನಿಂದ ಬಂದ ನಂತರ ಮಕ್ಕಳ ಬುಕ್ಸ್ ಬ್ಯಾಗ್, ಲಂಚ್ ಬ್ಯಾಗ್ ಚೆಕ್ ಮಾಡಿ, ಏಕೆಂದರೆ ಸ್ಕೂಲ್‌ನಲ್ಲಿ ಮಗು, ಅರಿವಿಲ್ಲದೆ ಬೇರೆ ಮಕ್ಕಳ ಸಾಮಗ್ರಿಗಳನ್ನು ತನ್ನ ಬ್ಯಾಗ್‌ಗೆ ಹಾಕಿಕೊಂಡು ತರಬಹುದು. ಆ ರೀತಿ ಇದ್ದಲ್ಲಿ ಕೂಡಲೇ ಸಂಬಂಧಿಸಿದ್ದ ಟೀಚರ್ ಗಮನಕ್ಕೆ ತನ್ನಿ. ಹಾಗೇ ಮನೆಯಿಂದ ಮೊಬೈಲ್, ವಾಚ್‌ನಂತಹ ಬೆಲೆ ಬಾಳುವ ವಸ್ತುಗಳನ್ನು ಮಗು ಬ್ಯಾಗ್‌ಗೆ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚು.
- ಪುಟ್ಟ ಮಕ್ಕಳಿಗೆ ಮೂತ್ರ, ಮಲ ವಿಸರ್ಜನೆ ಮಾಡುವ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಸ್ಕೂಲ್‌ನಲ್ಲಿ ಟೀಚರ್ ಅಥವಾ ಆಯಾ ಬಳಿ ಹೇಗೆ ಕೇಳಬೇಕು ಎಂಬುದನ್ನು ಹೇಳಿಕೊಡಿ, ಹಾಗೇ ಮಕ್ಕಳ ಬ್ಯಾಗ್‌ನಲ್ಲಿ ಕರ್ಚೀಫ್, ಒಂದು ಜೊತೆ ಬಟ್ಟೆಯನ್ನು ಯಾವಾಗಲೂ ಇಡುವುದನ್ನು ಮರೆಯಬೇಡಿ.
- ಮಕ್ಕಳಿಗೆ ಬುಕ್, ಪೆನ್ಸಿಲ್, ಬಳಪಗಳನ್ನು ಕೊಡಬೇಡಿ. ನೀವು ಅದನ್ನು ಟೀಚರ್‌ಗಳಿಗೆ ಕೊಟ್ಟು ಬಂದರೆ ಅವರೇ ಮಕ್ಕಳಿಗೆ ವರ್ಕ್ ಮುಗಿಸಿ ತಮ್ಮ ಬಳಿ ಇರಿಸಿಕೊಳ್ಳುತ್ತಾರೆ.
- ಮಕ್ಕಳ ಪುಸ್ತಕಗಳಲ್ಲಿ ನಿಮ್ಮ ಫೋನ್ ನಂಬರ್ ಹಾಗೂ ಅಡ್ರೆಸ್ ಬರೆಯಿರಿ. ಹಾಗೇ ಸ್ಕೂಲ್ ಬ್ಯಾಗ್, ಲಂಚ್ ಬ್ಯಾಗ್ ಮೇಲೆ ಮಗುವಿನ ಹೆಸರು ಬರೆಯಿರಿ. ಆಯಾ ಬಾಕ್ಸ್‌ಗಳ ಮೇಲೆ ಲಂಚ್ ಹಾಗೂ ಸ್ನಾಕ್ಸ್ ಎಂದು ಬರೆಯಿರಿ. ಇದರಿಂದ ಟೀಚರ್‌ಗಳಿಗೆ ಯಾವುದು ಲಂಚ್ ಯಾವುದು ಸ್ನಾಕ್ಸ್ ಎಂಬ ಗೊಂದಲ ಇರುವುದಿಲ್ಲ. ಯಾವುದಕ್ಕೂ ಮನೆಯವರ ಎಲ್ಲರ ನಂಬರನ್ನು ಟೀಚರ್‌ಗಳಿಗೆ ಕೊಡಿ.
- ಸ್ಕೂಲ್‌ನಿಂದ ಬಂದ ನಂತರ ಮಕ್ಕಳಿಗೆ ಸ್ನಾನ ಮಾಡಿಸಿ, ಸಾಧ್ಯವಾಗದಿದ್ದರೆ ಒಳ್ಳೆ ಸಾಬೂನು ಅಥವಾ ಹ್ಯಾಂಡ್‌ವಾಷ್‌ನಿಂದ ನೀಟಾಗಿ ಕೈ ಕಾಲು ತೊಳೆಸಿ.
- ಚಿಕ್ಕ ಮಕ್ಕಳು ಅತಿ ಬೇಗ ಸೋಂಕಿಗೆ ಒಳಗಾಗುತ್ತಾರೆ. ಆದ್ದರಿಂದ ಚಳಿ, ಮಳೆಗಾಲದಲ್ಲಿ ಮಕ್ಕಳಿಗೆ ಕ್ಯಾಪ್, ಸ್ವೆಟರ್ ಹಾಕಿ ಕಳಿಸಿ. ಬೇಸಿಗೆಯಲ್ಲಿ ತೆಳು ಬಟ್ಟೆಗಳನ್ನು ಹಾಕಿ.
- ಪಂಕ್ಷನ್, ಪಾರ್ಟಿ ಎಂಬ ಕಾರಣಕ್ಕೆ ಮಗುವನ್ನು ಆಗ್ಗಾಗ್ಗೆ ಸ್ಕೂಲ್‌ಗೆ ಕಳಿಸದೆ ಇರುವುದನ್ನು ತಪ್ಪಿಸಿ, ನಿಮ್ಮೊಂದಿಗೆ ಅಗತ್ಯ ಇದ್ದಾಗ ಮಾತ್ರ ಮಗುವನ್ನು ಕರೆದೊಯ್ಯಿರಿ. ಮಗುವಿನ ಆರೋಗ್ಯ ಸರಿ ಇಲ್ಲದಿದ್ದಾಗ ಟೀಚರ್‌ಗಳಿಗೆ ತಿಳಿಸಿ ರಜೆ ಹಾಕಿಸಿ.
- ಮಕ್ಕಳ ಕ್ಲಾಸ್ ಟೀಚರ್ ಜೊತೆ ನಿರಂತರ ಸಂಪರ್ಕದಲ್ಲಿ ಇರಿ. ಸಾಧ್ಯವಾದರೆ ಸ್ಕೂಲ್‌ನಲ್ಲಿ ಮಕ್ಕಳ ಚಟುವಟಿಕೆ ಹೇಗಿರುತ್ತದೆ ಎಂಬುದನ್ನು ವಿಡಿಯೋ ರೆಕಾರ್ಡ್ ಮಾಡಿ ಕಳಿಸುವಂತೆ ಮನವಿ ಮಾಡಿ. ಟೀಚರ್‌ಗಳು, ಆಯಾಗಳ ಜೊತೆ ನಿಮ್ಮ ಸಂಬಂಧ ಚೆನ್ನಾಗಿರಲಿ.
- ಮಕ್ಕಳಿಗೆ ಪಾಠದ ಜೊತೆಗೆ ಆಟವೂ ಬೇಕು, ಆದ್ದರಿಂದ ಪಠ್ಯೇಚರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿ.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಬೆಳೆಯುವ ಸಿರಿ ಮೊಳಕೆಯಲ್ಲಿ, ಹಿರಿಯರು ಆಡಿರುವ ಈ ಮಾತುಗಳನ್ನು ಎಂದಿಗೂ ನೆನಪಿನಲ್ಲಿಡಿ.
ವಿಭಾಗ