ಕನ್ನಡ ಸುದ್ದಿ  /  ಜೀವನಶೈಲಿ  /  Fuel Dumping: ಏನಿದು ಫ್ಯುಯಲ್‌ ಡಂಪಿಂಗ್‌, ಪೈಲೆಟ್‌ಗಳು ವಿಮಾನ ಲ್ಯಾಂಡ್‌ ಮಾಡುವ ಮುನ್ನ ಇಂಧನ ಹೊರಹಾಕುವ ಹಿಂದಿನ ಉದ್ದೇಶವಿದು

Fuel Dumping: ಏನಿದು ಫ್ಯುಯಲ್‌ ಡಂಪಿಂಗ್‌, ಪೈಲೆಟ್‌ಗಳು ವಿಮಾನ ಲ್ಯಾಂಡ್‌ ಮಾಡುವ ಮುನ್ನ ಇಂಧನ ಹೊರಹಾಕುವ ಹಿಂದಿನ ಉದ್ದೇಶವಿದು

ಪೈಲೆಟ್‌ಗಳು ವಿಮಾನ ಲ್ಯಾಂಡ್‌ ಮಾಡುವ ಮೊದಲು ಅದರಲ್ಲಿನ ಹೆಚ್ಚುವರಿ ಇಂಧನವನ್ನು ಆಕಾಶದಲ್ಲಿಯೇ ಹೊರಹಾಕುತ್ತಾರೆ. ಇದಕ್ಕೆ ಫ್ಯುಯಲ್‌ ಜಟ್ಟಿಂಗ್‌ ಅಥವಾ ಫ್ಯುಯಲ್‌ ಡಂಪಿಂಗ್‌ ಎಂದು ಕರೆಯುತ್ತಾರೆ. ಇದು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವ ವಿಧಾನವಾಗಿದೆ. ಈ ಫ್ಯುಯಲ್‌ ಡಂಪಿಂಗ್‌ ಹಿಂದಿನ ಕುತೂಹಲಕಾರಿ ವಿಚಾರ ಇಲ್ಲಿದೆ. (ಬರಹ: ಅರ್ಚನಾ ವಿ. ಭಟ್‌)

ವಿಮಾನ ಲ್ಯಾಂಡ್‌ ಮಾಡುವ ಮುನ್ನ ಪೈಲೆಟ್‌ಗಳು ಇಂಧನ ಹೊರಹಾಕುವ ಹಿಂದಿನ ಉದ್ದೇಶವಿದು
ವಿಮಾನ ಲ್ಯಾಂಡ್‌ ಮಾಡುವ ಮುನ್ನ ಪೈಲೆಟ್‌ಗಳು ಇಂಧನ ಹೊರಹಾಕುವ ಹಿಂದಿನ ಉದ್ದೇಶವಿದು (PC: Quora)

ಇತ್ತೀಚಿನ ದಿನಗಳಲ್ಲಿ ನವೀಕರಿಸಲಾಗದ ಇಂಧನಗಳ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ತೈಲಗಳ ಬೆಲೆ ದುಬಾರಿಯಾಗಿರುವುದರಿಂದ ಅದರ ಬಗ್ಗೆಯೂ ಚಿಂತಿಸುವಂತಾಗಿದೆ. ಕಾರಣ ದ್ವಿಚಕ್ರ ವಾಹನಗಳಿಂದ ಹಿಡಿದು ಆಗಸದಲ್ಲಿ ಹಾರಾಡುವ ವಿಮಾನಗಳವರೆಗೆ ಇದೇ ಇಂಧನಗಳನ್ನು ಬಳಸಲಾಗುತ್ತಿದೆ. ಇಂಧನಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಯಾರಾದರೂ ಉದ್ದೇಶಪೂರ್ವಕವಾಗಿ ಇಂಧನವನ್ನು ನಷ್ಟ ಮಾಡಿದರೆ ಹೇಗೆನಿಸುತ್ತದೆ? ಹಾಗೆ ಮಾಡಲು ಕಾರಣವೇನು ಎಂಬ ಕುತೂಹಲ ಹೆಚ್ಚುತ್ತದೆ ಅಲ್ಲವೇ?.

ವಿಮಾನದಲ್ಲಿ ಹೆಚ್ಚುವರಿ ಇಂಧನವನ್ನು ಹೊರ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಪೈಲಟ್‌ಗಳು ಉದ್ದೇಶಪೂರ್ವಕವಾಗಿ ಲ್ಯಾಂಡ್‌ ಆಗುವ ಮೊದಲು ವಿಮಾನದಿಂದ ಇಂಧನವನ್ನು ಹೊರ ಹಾಕುತ್ತಾರೆ. ಈ ರೀತಿ ಗಾಳಿಯಲ್ಲಿಯೇ ಇಂಧನ ಹೊರಹಾಕಲು ಕಾರಣವೇನು? ಬಾಹ್ಯಾಕಾಶ ವಿಜ್ಞಾನದಲ್ಲಿ ಇಂಧನದ ಕಾಳಜಿಯಿಲ್ಲವೇ? ಇದರಲ್ಲಿ ಮೇಲ್ನೋಟಕ್ಕೆ ಇಂಧನಗಳನ್ನು ಅನಗತ್ಯವಾಗಿ ನಾಶಮಾಡಲಾಗುತ್ತಿದೆ ಎನ್ನಿಸಿದರೂ, ಈ ರೀತಿ ಮಾಡುವುದು ಸುರಕ್ಷಿತ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನು ನೋಡಿ.

ಏನಿದು ಫ್ಯುಯಲ್‌ ಡಂಪಿಂಗ್‌?

ವಿಮಾನ ಚಾಲಕರು ವಿಮಾನವನ್ನು ಲ್ಯಾಂಡ್‌ ಮಾಡುವ ಮೊದಲು ಅದರಲ್ಲಿರುವ ಹೆಚ್ಚುವರಿ ಇಂಧನಗಳನ್ನು ಆಕಾಶದಲ್ಲಿಯೇ ಹೊರಹಾಕುತ್ತಾರೆ. ಇದಕ್ಕೆ ಫ್ಯುಯಲ್‌ ಜಟ್ಟಿಂಗ್‌ ಎಂದು ಕರೆಯುತ್ತಾರೆ. ಇದೊಂದು ಸುರಕ್ಷಿತ ವಿಧಾನ ಮತ್ತು ಇದನ್ನು ಒಳ್ಳೆಯ ಉದ್ದೇಶದಿಂದಲೇ ಮಾಡಲಾಗುತ್ತದೆ. ಇದು ಮೇಲ್ನೋಟಕ್ಕೆ ಕಾಣಿಸಿದಂತೆ ಇಂಧನದ ದುರ್ಬಳಕೆಯಲ್ಲ. ಫೆಡರೆಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ನ ವಕ್ತಾರರಾದ ಅಲಿಸನ್ ಡುಕ್ವೆಟ್‌ ಅವರು ಈ ರೀತಿಯ ಸನ್ನಿವೇಶಗಳು ಆಗಾಗ ಸಂಭವಿಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೀಗೆ ಮಾಡಲು ಮುಖ್ಯ ಕಾರಣವೆಂದರೆ, ಕೆಲವು ವಿಮಾನಗಳು ಟೇಕಾಫ್ ಆಗುವುದಕ್ಕಿಂತ ಇಳಿಯುವಾಗ ಗಮನಾರ್ಹವಾಗಿ ಹಗುರವಾಗಿರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.

ವಿಮಾನವು ಹೆಚ್ಚಿನ ತೂಕ ಹೊಂದಿದ್ದರೆ ಆಗ ಟೇಕಾಫ್‌ ಆಗುವುದು ಕಷ್ಟ ಎಂದು ಬಹಳಷ್ಟು ಜನರು ಭಾವಿಸಿರುತ್ತಾರೆ. ಆದರೆ ಹೆಚ್ಚಿನ ತೂಕದೊಂದಿಗೆ ಲ್ಯಾಂಡ್‌ ಆಗುವುದು ಅದಕ್ಕಿಂತಲೂ ಕಷ್ಟಕರವಾಗಿದೆ. ಅದೇ ತೂಕದಿಂದ ವಿಮಾನ ಲ್ಯಾಂಡ್‌ ಆದರೆ ಅಲ್ಲಿ ಒತ್ತಡ ಹೆಚ್ಚುತ್ತದೆ. ವಿಮಾನವು ಭಾರವಿದ್ದಾಗ ಲ್ಯಾಂಡ್‌ ಆದರೆ ಅದು ನೆಲಕ್ಕೆ ಬಲವಾಗಿ ಅಪ್ಪಳಿಸುತ್ತದೆ. ಅದರಿಂದ ವಿಮಾನಕ್ಕೆ ಹಾನಿಯುಂಟಾಗುತ್ತದೆ. ಇದೊಂದು ಸಮಸ್ಯೆಯಾಗಿರುವುದರಿಂದಲೇ ವಿಮಾನದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಸುದೀರ್ಘ ಪ್ರಯಾಣದ ವಿಮಾನಗಳು ಬಹಳ ಹೊತ್ತಿನವರೆಗೆ ಹಾರಾಟ ನಡೆಸುವ ಸಲುವಾಗಿ ಟೇಕ್‌ಆಫ್ ಸಮಯದಲ್ಲಿ, ಹತ್ತಾರು ಸಾವಿರ ಗ್ಯಾಲನ್‌ಗಳಷ್ಟು ಇಂಧನವನ್ನು ತಮ್ಮ ಜೊತೆ ಹೊತ್ತೊಯ್ಯುತ್ತವೆ. ಒಂದು ಗ್ಯಾಲನ್‌ ಅಂದರೆ ಸುಮಾರು 6.7 ಫೌಂಡ್‌ಗಳು. ಸುದೀರ್ಘ ಹಾರಾಟದ ಸಮಯದಲ್ಲಿ, ವಿಮಾನವು ನೈಸರ್ಗಿಕವಾಗಿ ಇಂಧನವನ್ನು ಸುಡುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಪೌಂಡ್‌ಗಳಷ್ಟನ್ನು ಹೊರಹಾಕುತ್ತದೆ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಅದು ಹಗುರವಾಗಿರಬೇಕು. ವಿಮಾನವು ಸರಿಯಾಗಿ ಅದರ ಅಂತಿಮ ಸ್ಥಳ ತಲುಪಿದಾಗ ವಿಮಾನವು ಲ್ಯಾಂಡ್‌ ಆಗಲು ಬೇಕಾಗುವಷ್ಟೇ ಇಂಧನ ಅದರಲ್ಲಿರುವಂತೆ ವಿಮಾನ ತಯಾರಕರು ಅದನ್ನು ವಿನ್ಯಾಸಗೊಳಿಸುವಾಗಲೇ ಗಣನೆಗೆ ತೆಗೆದುಕೊಂಡಿರುತ್ತಾರೆ.

ಆದರೂ ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿ ನಿರೀಕ್ಷೆಗಿಂತ ಮುಂಚಿತವಾಗಿ ವಿಮಾನವನ್ನು ಲ್ಯಾಂಡ್‌ ಮಾಡಬೇಕಾಗುತ್ತದೆ. ಆಗ ಅಲ್ಲಿ ಫ್ಯುಯಲ್‌ ಜಟ್ಟಿಂಗ್‌ ಅಥವಾ ಫ್ಯುಯಲ್‌ ಡಂಪಿಂಗ್‌ ಮಾಡಬೇಕಾಗುತ್ತದೆ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಇದೊಂದೇ ಪರಿಹಾರವಾಗಿದೆ. ಇದು ಕಾಕ್‌ಪಿಟ್‌ನಲ್ಲಿ ಸ್ವಿಚ್‌ ಆನ್‌ ಆಂಡ್‌ ಆಫ್‌ ಮಾಡುವಷ್ಟು ಸರಳವಾಗಿರುತ್ತದೆ. ಈ ವ್ಯವಸ್ಥೆಯಲ್ಲಿ ಪಂಪ್‌ ಮತ್ತು ವಾಲ್ವ್‌ಗಳಿರುತ್ತವೆ. ಅದು ವಿಮಾನದ ರೆಕ್ಕೆಗಳ ಮೇಲಿರುವ ನಳಿಕೆಗಳಿಂದ ಇಂಧನವನ್ನು ಹೊರಹಾಕುತ್ತದೆ. ಈ ಸಂದರ್ಭದಲ್ಲಿ ಪ್ರತಿ ನಿಮಿಷಕ್ಕೆ ಸಾವಿರಾರು ಫೌಂಡ್‌ಗಳಷ್ಟು ಇಂಧನವನ್ನು ಹೊರಹಾಕಲಾಗುತ್ತದೆ. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡುವ ಸಲುವಾಗಿ ಈ ರೀತಿ ಮಾಡಲಾಗುತ್ತದೆ.

ನೋಡಿದ್ರಲ್ವಾ ವಿಮಾನದಲ್ಲಿ ಓಡಾಡುವಾಗ ನೀವು ಈ ಫ್ಯುಯಲ್‌ ಜಟ್ಟಿಂಗ್‌ ಅನ್ನು ಗಮನಿಸಿರಬಹುದು. ಆದರೆ ಇದನ್ನು ಯಾವ ಕಾರಣಕ್ಕೆ ಮಾಡುತ್ತಾರೆ ಎಂಬ ಕುತೂಹಲ ನಿಮ್ಮನ್ನು ಕಾಡಿರಬಹುದು. ಅದಕ್ಕೆ ಈಗ ಉತ್ತರ ಸಿಕ್ಕಿತು ಅಲ್ವಾ?