Tech Tips: ನಿಮ್ಮ ಆಂಡ್ರಾಯ್ಡ್ ಫೋನ್ ಪದೇ ಪದೇ ಸ್ಲೋ ಆಗ್ತಾ ಇದೆಯಾ? ಈ ಟಿಪ್ಸ್ ಪಾಲಿಸಿದ್ರೆ ನಿಮ್ಮ ಫೋನ್ ಸ್ಪೀಡ್ ಹೆಚ್ಚೋದು ಪಕ್ಕಾ
ಆಂಡ್ರಾಯ್ಡ್ ಫೋನ್ ಬಳಕೆದಾರರು ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕುವ ಪ್ರಶ್ನೆ ಎಂದರೆ ಫೋನ್‌ನ ವೇಗ ಹೆಚ್ಚಿಸುವುದು ಹೇಗೆ ಎಂದ. ನಿಮ್ಮದೂ ಆಂಡ್ರಾಯ್ಡ್ ಫೋನ್ ಆಗಿದ್ದರೆ ಮತ್ತು ನೀವೂ ಈ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿ ಹೇಳಿರುವ ಸಲಹೆಗಳು ನಿಮ್ಮ ಫೋನ್ ಸ್ಪೀಡ್ ಹೆಚ್ಚಿಸಬಲ್ಲದು.
ಆಂಡ್ರಾಯ್ಡ್ ಓಎಸ್ ಇರುವ ಸ್ಮಾರ್ಟ್‌ಫೋನ್‌ಗಳ ಸಾಮಾನ್ಯ ಸಮಸ್ಯೆಯೆಂದರೆ ಒಂದೆರಡು ತಿಂಗಳು ಬಳಸಿದ ನಂತರ ಓಎಸ್ ನಿಧಾನವಾಗುವುದು. ಈ ಕಾರಣದಿಂದಲೇ ಆಂಡ್ರಾಯ್ಡ್ ಬಳಕೆದಾರರು ಇಂಟರ್‌ನೆಟ್‌ನಲ್ಲಿ ಹೆಚ್ಚು ಹುಡುಕಿದ ಪ್ರಶ್ನೆಯೆಂದರೆ ಆಂಡ್ರಾಯ್ಡ್ ಫೋನ್‌ಗಳನ್ನು ವೇಗವಾಗಿಸುವುದು ಹೇಗೆ? ಎಂದು. ಹೆಚ್ಚಿನ ವೈಶಿಷ್ಟ್ಯ ಮತ್ತು ಕಾರ್ಯಕ್ಷಮತೆ ಹೊಂದಿರುವ ಹೈ–ಎಂಡ್ ಸ್ಮಾರ್ಟ್‌ಫೋನ್ ಖರೀದಿಸಿದರೂ ಈ ಸಮಸ್ಯೆಯಿಂದಾಗಿ ಅದು ಸಂತೋಷವನ್ನೇ ನೀಡುವುದಿಲ್ಲ. ನೀವು ನಿರೀಕ್ಷಿಸುವ ಮಟ್ಟಿಗೆ ಅದರಿಂದ ವೇಗದ ಕಾರ್ಯಕ್ಷಮತೆ ಪಡೆಯಲು ಆಗದಿರುವುದು ನಿಮ್ಮನ್ನು ನಿರಾಶೆಗೊಳಿಸಬಹುದು. ಇನ್ನು ಕಡಿಮೆ ವೈಶಿಷ್ಟ್ಯಗಳಿರುವ ಫೋನ್‌ಗಳ ಕಾರ್ಯಕ್ಷಮತೆಯಂತೂ ಕೇಳುವುದೇ ಬೇಡ. ಪದೇ ಪದೇ ಫ್ರೀಜ್ ಆಗುವ ಅಥವಾ ಸ್ಲೋ ಆಗುವ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ? ಆಂಡ್ರಾಯ್ಡ್ ಓಎಸ್ ಹೊಂದಿರುವ ಫೋನ್‌ಗಳನ್ನು ವೇಗವಾಗಿಸಲಿ ಇರುವ ಕೆಲವು ಟಿಪ್ಸ್‌ಗಳನ್ನು ನಾವು ಇಲ್ಲಿ ನೀಡಿದ್ದೇವೆ. ಈ ಸರಳ ಟಿಪ್‌ಗಳು ನಿಮ್ಮ ಫೋನ್ ಅನ್ನು ವೇಗಗೊಳಿಸಬಲ್ಲದು.
ಆಂಡ್ರಾಯ್ಡ್ ಓಎಸ್ ಹೊಂದಿರುವ ಫೋನ್‌ಗಳನ್ನು ವೇಗವಾಗಿಸುವುದು ಹೇಗೆ
ಸರಳವಾಗಿ ರಿಸ್ಟಾರ್ಟ್ ಮಾಡಿಬಿಡಿ
ಆಂಡ್ರಾಯ್ಡ ಫೋನ್‌ಗಳ ವೇಗ ಹೆಚ್ಚಿಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಸರಳ ಉಪಾಯ ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡುವುದು. ಕಂಪ್ಯೂಟರ್‌ನಂತೆ ಸ್ಮಾರ್ಟ್‌ಫೋನ್ ಅನ್ನು ರಿಸ್ಟಾರ್ಟ್ ಮಾಡುವುದು ಫೋನ್ ಹ್ಯಾಂಗ್ ಅಥವಾ ಫ್ರೀಜ್ ಆದಂತಹ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಅದು ಹೇಗೆಂದರೆ ನೀವು ರೀಬೂಟ್ ಮಾಡಿದಾಗ ತೆರೆದಿರುವ ಎಲ್ಲಾ ತಾತ್ಕಾಲಿಕ ಫೈಲ್‌ಗಳನ್ನು ಅದು ಡಿಲೀಟ್ ಮಾಡುತ್ತದೆ. RAM ಅನ್ನು ಸ್ವಚ್ಛಗೊಳಿಸುತ್ತದೆ. ಹೀಗೆ ಮಾಡುವುದು ನಿಮ್ಮ ಫೋನ್‌ನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.
ನಿಯಮಿತವಾಗಿ ಅಪ್ಡೇಟ್ ಮಾಡುತ್ತಿರಿ
ಆಂಡ್ರಾಯ್ಡ್‌ನ ಪ್ರತಿ ಹೊಸ ಆವೃತ್ತಿಯು (ವರ್ಷನ್) ಮೊದಲಿನ ಆವೃತ್ತಿಯಲ್ಲಿರುವ ದೋಷಗಳನ್ನು ಪರಿಹಾರ ಮಾಡಿರುತ್ತದೆ ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ನಿಮ್ಮ ಫೋನ್ ಅನ್ನು ನಿಯಮಿತವಾಗಿ ಅಂದರೆ ಹೊಸ ಆವೃತ್ತಿ ಬಂದಾಗ ನವೀಕರಿಸುವುದು ಅತ್ಯಗತ್ಯ. ನವೀಕರಣಗೊಳಿಸಲು ಹೀಗೆ ಮಾಡಿ: ಮೊದಲು ಸೆಟ್ಟಿಂಗ್ಸ್‌ಗೆ ಹೋಗಿ, ಅದರಲ್ಲಿ ಅಬೌಂಟ್ ಡಿವೈಸ್‌ಗೆ ಹೋಗಿ ಅಲ್ಲಿ ಸಾಫ್ಟ್‌ವೇರ್‌ಅಪ್ಡೇಟ್‌ಗೆ ಹೋಗಿ. ಅಲ್ಲಿ ಹೊಸ ಆವೃತ್ತಿಯ ನವೀಕರಣಗಳು ಇದೆಯೇ ಎಂದು ಪರೀಕ್ಷಿಸಿ. ಹಾಗೆಯೇ ಪ್ಲೇಸ್ಟೋರ್‌ಗೆ ಹೋಗಿ ಅಲ್ಲಿ ನೀವು ಬಳಸುವ ಉಳಿದ ಅಪ್ಲಿಕೇಶನ್‌ಗಳು ನವೀಕರಿಸಲ್ಪಟ್ಟಿವಿಯೇ ಎಂದು ಖಚಿತಪಡಿಸಿಕೊಳ್ಳಿ.
ಬಳಸದ ಆಪ್‌ಗಳನ್ನು ಅನ್‌ಇನ್ಸ್ಟಾಲ್ ಅಥವಾ ಡಿಸೇಬಲ್ ಮಾಡಿ
ಆಂಡ್ರಾಯ್ಡ್ ಸಾಧನದಲ್ಲಿರುವ ಪ್ರತಿಯೊಂದು ಅಪ್ಲಿಕೇಶನ್‌ಗಳು ಒಂದಿಷ್ಟು ಪ್ರಮಾಣದ ಮೆಮೊರಿಯನ್ನು ಬಳಸುತ್ತದೆ. ಪ್ರತಿ ಫೋನು ಸೀಮಿತ ಮೊಮೊರಿ ಹೊಂದಿರುತ್ತದೆ. ಹಾಗಾಗಿ ನೀವು ಬಳಸುವ ಅಪ್ಲಿಕೇಶನ್‌ಗಳನ್ನು ಮಾತ್ರ ನಿಮ್ಮ ಮೊಬೈಲ್‌ನಲ್ಲಿ ಇರಿಸಿಕೊಳ್ಳಿ ಎಂದು ಸಲಹೆ ನೀಡಲಾಗುತ್ತದೆ. ನೀವು ಒಮ್ಮೆಯೂ ಬಳಸದ ಮತ್ತು ನಿಮ್ಮ ಫೋನ್‌ನಲ್ಲಿ ಹಾಗೆಯೇ ಇರುವ ಅಪ್ಲಿಕೇಶನ್‌ಗಳು ಮೆಮೊರಿಯ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆಯೇ ವಿನ: ಮತ್ತೇನನ್ನೂ ಮಾಡುವುದಿಲ್ಲ. ನಿಮ್ಮ ಫೋನ್‌ನಲ್ಲಿರುವ ಅನುಪಯುಕ್ತ ಅಪ್ಲಿಕೇಶನ್ ತೆರವುಗೊಳಿಸಲು ಹೀಗೆ ಮಾಡಿ: ಸೆಟ್ಟಿಂಗ್ಸ್ ಹೋಗಿ, ಅಲ್ಲಿ ಆಪ್ ಆಯ್ದುಕೊಳ್ಳಿ. ಅಲ್ಲಿ ಎಲ್ಲಾ ಟಾಬ್ ಮೇಲೆ ಸ್ವೈಪ್ ಮಾಡಿ. ಅಲ್ಲಿರುವ ಅಪ್ಲಿಕೇಶನ್ ಪಟ್ಟಿಗಳಲ್ಲಿ ನಿಮ್ಮ ಅಗತ್ಯವಿಲ್ಲದ ಅಪ್ಲಿಕೇಶನ್ ಗುರುತಿಸಿ. ನಂತರ ಅವುಗಳನ್ನು ಅನ್‌ಇನ್ಸ್ಟಾಲ್ ಮಾಡಿ. ಅನ್‌ಇನ್ಸ್ಟಾಲ್ ಆಯ್ಕೆ ಇಲ್ಲದಿದ್ದರೆ ಅವುಗಳನ್ನು ಡಿಸೇಬಲ್ ಮಾಡಿ. ಹೀಗೆ ಮಾಡುವುದರಿಂದ ಆಂಡ್ರಾಯ್ಡ್ ಪೋನ್‌ಗಳು ವೇಗವಾಗಿ ಕಾರ್ಯನಿರ್ವಹಿಸಬಲ್ಲದು.
ಕ್ಯಾಶ್‌ನ ಡಾಟಾ ಕ್ಲಿಯರ್ ಮಾಡಿ
ಕ್ಯಾಶ್‌ನಿಂದ ಡಾಟಾ ಎಳೆದುಕೊಂಡು ಅಪ್ಲಿಕೇಶನ್ ಅನ್ನು ವೇಗವಾಗಿ ಲೋಡ್ ಮಾಡುತ್ತದೆ. ಅಪ್ಲಿಕೇಶನ್‌ಗಳಿಗಾಗಿ ಸಂಗ್ರಹಿಸಲಾದ ಡಾಟಾವು ಅವುಗಳನ್ನು ಹೆಚ್ಚು ವೇಗವಾಗಿ ಲೋಡ್ ಮಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಬಳಸದ ಕೆಲವು ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದು ಸರಳ ಮಾರ್ಗವಾಗಿದೆ. ಇದು ಹಳೆಯ ಡಾಟಾವನ್ನು ತೆಗೆದುಹಾಕುವ ಮೂಲಕ ಜಾಗ ಹೆಚ್ಚಿಸುವುದು.
ಇಂಟರ್ನಲ್ ಮೆಮೊರಿಯನ್ನು ಫ್ರೀ ಮಾಡಿ
ಆಂಡ್ರಾಯ್ಡ್ ಫೋನ್‌ಗಳನ್ನು ವೇಗವಾಗಿ ಮಾಡಲು ಸರಳವಾದ ಉತ್ತರವೆಂದರೆ ನಿಮ್ಮ ಎಲ್ಲಾ ಡೇಟಾವನ್ನು ನೀವು ಕ್ಲೌಡ್‌ನಲ್ಲಿ ಸಂಗ್ರಹಿಸಿಡುವುದು. ಹೀಗೆ ಮಾಡುವುದರಿಂದ ಇಂಟರ್ನಲ್ ಮೆಮೊರಿಯನ್ನು ಉಳಿಸುತ್ತದೆ. ಆಗ ನಿಮ್ಮ ಫೋನ್‌ನಲ್ಲಿ ಇತರ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಇದು ಪೋನ್‌ನ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಅಪ್ಲಿಕೇಶನ್‌ಗಳ ಲೈಟ್ ಆವೃತ್ತಿಗಳನ್ನು ಬಳಸಿ
ಫೇಸ್‌ಬುಕ್, ಟ್ವೀಟರ್ ನಂತಹ ಅನೇಕ ಜನಪ್ರಿಯ ಅಪ್ಲಿಕೇಶನ್‌ಗಳು ತಮ್ಮ ಅಪ್ಲಿಕೇಶನ್‌ಗಳಿಗೆ ಲೈಟ್ ಆವೃತ್ತಿಯನ್ನು ನೀಡುತ್ತದೆ. ಲೈಟ್ ಆವೃತ್ತಿ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ಫೋನಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಡೇಟಾ ಬಳಕೆಯನ್ನು ಕಡಿಮೆ ಮಾಡಿ, ಆಂಡ್ರಾಯ್ಡ್ ಫೋನ್‌ನ ವೇಗ ಹೆಚ್ಚಿಸಬಹುದು.
ತಿಳಿದಿರುವ ಮೂಲಗಳಿಂದಲೇ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ
ಅನೇಕ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್‌ಗೆ ಸಹಾಯಕವಾಗಿರುವಂತೆ ಕಾಣುತ್ತವೆ. ಆದರೆ ವಾಸ್ತವದಲ್ಲಿ, ಅವು ನಕಲಿ ಮತ್ತು ನಿಮ್ಮ ಫೋನ್ ನಿಯಂತ್ರಿಸುತ್ತವೆ ಮತ್ತು ಮೌಲ್ಯಯುತ ಡೇಟಾವನ್ನು ಕದಿಯಲು ಬಯಸುತ್ತವೆ. ಆದ್ದರಿಂದ, ಗೂಗಲ್ ಪ್ಲೇ ಸ್ಟೋರ್ ನಂತಹ ತಿಳಿದಿರುವ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವುದು ಯಾವಾಗಲೂ ಉತ್ತಮ.
ಅನಿಮೇಷನ್‌ಗಳ ಬಳಕೆ ಕಡಿಮೆ ಮಾಡಿ ಇಲ್ಲವೇ ಆಫ್ ಮಾಡಿ
ನಿಮ್ಮ ಆಂಡ್ರಾಯ್ಡ್ ಫೋನ್ ವೇಗವಾಗಿ ಮಾಡಲು ಇನ್ನೊಂದು ಮಾರ್ಗವೆಂದರೆ ಅನಿಮೇಷನ್‌ಗಳನ್ನು ಕಡಿಮೆ ಮಾಡುವುದು. ಹೀಗೆ ಮಾಡಲು ಡೆವಲಪರ್ ಆಯ್ಕೆಗಳನ್ನು ನೀವು ಸಕ್ರಿಯಗೊಳಿಸಬೇಕು. ಹಾಗೆ ಮಾಡಲು ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಅಬೌಟ್ ಫೋನ್ ಹೋಗಿ ಅಲ್ಲಿ ಬಿಲ್ಡ್ ಸಂಖ್ಯೆಯನ್ನು ಏಳು ಬಾರಿ ಟ್ಯಾಪ್ ಮಾಡಿ. ಹೀಗೆ ಮಾಡುವುದರಿಂದ ಡೆವಲಪರ್ ಆಯ್ಕೆಯನ್ನು ಸಕ್ರಿಯಗೊಳಿಸುತ್ತದೆ. ಅಲ್ಲಿ ವಿಂಡೋ ಅನಿಮೇಷನ್ ಸ್ಕೇಲ್, ಟ್ರಾನ್ಸಿಶನ್ ಅನಿಮೇಷನ್ ಸ್ಕೇಲ್ ಮತ್ತು ಆನಿಮೇಟರ್ ಅವಧಿಯ ಪ್ರಮಾಣವನ್ನು ಸರಿಹೊಂದಿಸಬಹುದು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ನ ವೇಗ ಹೆಚ್ಚಿಸಿಕೊಳ್ಳಬಹುದು.
(ಬರಹ: ಅರ್ಚನಾ ವಿ. ಭಟ್)