ಕಾಂಚನಜುಂಗಾದಿಂದ ತ್ರಿಶೂಲ್‍ವರೆಗೆ: ಭಾರತದ ಅತಿ ಎತ್ತರದ 10 ಪರ್ವತ ಶಿಖರಗಳಿವು-travel top 10 highest mountain peaks in india highest mountain range in india kanchenjunga mountain peak ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಂಚನಜುಂಗಾದಿಂದ ತ್ರಿಶೂಲ್‍ವರೆಗೆ: ಭಾರತದ ಅತಿ ಎತ್ತರದ 10 ಪರ್ವತ ಶಿಖರಗಳಿವು

ಕಾಂಚನಜುಂಗಾದಿಂದ ತ್ರಿಶೂಲ್‍ವರೆಗೆ: ಭಾರತದ ಅತಿ ಎತ್ತರದ 10 ಪರ್ವತ ಶಿಖರಗಳಿವು

ಭಾರತದಲ್ಲಿ ಹಲವಾರು ಪ್ರಮುಖ ಪರ್ವತ ಶ್ರೇಣಿಗಳು ದೇಶದ ಉದ್ದ ಮತ್ತು ಅಗಲವನ್ನು ವ್ಯಾಪಿಸಿದೆ. ಇದರಲ್ಲಿ ಹಲವು ಅತ್ಯುನ್ನತ ಶ್ರೇಣಿಯ ಪರ್ವತ ಶಿಖರಗಳಿವೆ. ಭಾರತದ ಅತಿ ಎತ್ತರದ ಪರ್ವತ ಶಿಖರಗಳ ಬಗ್ಗೆ ಇಲ್ಲಿದೆ ಮಾಹಿತಿ (ಬರಹ: ಪ್ರಿಯಾಂಕ)

ಭಾರತದ ಟಾಪ್ 10 ಅತಿ ಎತ್ತರದ ಪರ್ವತ ಶಿಖರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತದ ಟಾಪ್ 10 ಅತಿ ಎತ್ತರದ ಪರ್ವತ ಶಿಖರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತವು ಅಪಾರ ವೈವಿಧ್ಯತೆಗಳಿಂದ ಕೂಡಿರುವ ಭೂ ಖಂಡ. ಪರ್ವತಗಳು, ಕಣಿವೆಗಳು, ನದಿ-ಸರೋವರಗಳು, ಸಸ್ಯವರ್ಗ, ವನ್ಯಜೀವಿ ಸೇರಿದಂತೆ ವಿವಿಧ ಭೌಗೋಳಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಭಾರತದ ಅತಿ ಎತ್ತರದ ಶಿಖರಗಳನ್ನು ಪರ್ವತಗಳ ಮೊನಚಾದ ಶಿಖರಗಳು ಎಂದು ವ್ಯಾಖ್ಯಾನಿಸಲಾಗಿದೆ. ಪರ್ವತಗಳು ಹಾಗೂ ಬೆಟ್ಟಗಳ ಸರಣಿಯನ್ನು ಪರ್ವತ ಶ್ರೇಣಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಹಲವಾರು ಪ್ರಮುಖ ಪರ್ವತ ಶ್ರೇಣಿಗಳು ದೇಶದ ಉದ್ದ ಮತ್ತು ಅಗಲವನ್ನು ವ್ಯಾಪಿಸಿದೆ. ಇದರಲ್ಲಿ ಹಲವು ಅತ್ಯುನ್ನತ ಶ್ರೇಣಿಯ ಪರ್ವತ ಶಿಖರಗಳಿವೆ. ಭಾರತದ ಅತಿ ಎತ್ತರದ ಪರ್ವತ ಶಿಖರಗಳ ಬಗ್ಗೆ ಇಲ್ಲಿದೆ ಮಾಹಿತಿ..

ಭಾರತದ ಅತಿ ಎತ್ತರದ ಪರ್ವತ ಶಿಖರಗಳು

ಕಾಂಚನಜುಂಗಾ: ಭಾರತದ ಅತ್ಯಂತ ಎತ್ತರದ ಪರ್ವತ ಶಿಖರ ಮತ್ತು ಮೂರನೇ ಅತಿ ಎತ್ತರದ ಶಿಖರ ಎಂದು ಕಾಂಚನಜುಂಗಾ ಗುರುತಿಸಲ್ಪಟ್ಟಿದೆ. ಇದು 8,586 ಮೀಟರ್ (28,169 ಅಡಿ) ಎತ್ತರ ಹೊಂದಿದೆ. ವಿಶ್ವದ ಮೂರನೇ ಅತಿ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಚನಜುಂಗಾ, ಪೂರ್ವ ಹಿಮಾಲಯದಲ್ಲಿ ಸಿಕ್ಕಿಂ ರಾಜ್ಯ, ಈಶಾನ್ಯ ಭಾರತ ಮತ್ತು ಪೂರ್ವ ನೇಪಾಳದ ನಡುವಿನ ಗಡಿಯಲ್ಲಿದೆ. ಈ ಪರ್ವತವು ಗ್ರೇಟ್ ಹಿಮಾಲಯ ಶ್ರೇಣಿಯ ಭಾಗವಾಗಿದೆ.

ನಂದಾದೇವಿ ಶಿಖರ: ನಂದಾದೇವಿ ಭಾರತದ ಎರಡನೆಯ ಅತಿ ಎತ್ತರದ ಪರ್ವತಶಿಖರ. ವಿಶ್ವದ 23ನೇ ಅತಿ ಎತ್ತರದ ಶಿಖರವಾಗಿದೆ. ನಂದಾದೇವಿ ಎರಡು ಶಿಖರಗಳುಳ್ಳ ಪರ್ವತವಾಗಿದ್ದು, ಇದು ಉತ್ತರಾಖಂಡ ರಾಜ್ಯದ ಗಢ್ವಾಲ್ ಹಿಮಾಲಯದಲ್ಲಿ ರಿಷಿಗಂಗಾ ಮತ್ತು ಗೋರಿಗಂಗಾ ಕಣಿವೆಗಳ ಮಧ್ಯೆ ಇದೆ.

ಕಾಮೆಟ್ ಶಿಖರ: ಭಾರತದ ಮೂರನೇ ಅತಿ ಎತ್ತರದ ಶಿಖರವಾಗಿದೆ. ಇದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಗರ್ವಾಲ್ ಪ್ರದೇಶದ ಜಸ್ಕರ್ ಪರ್ವತ ಶ್ರೇಣಿಯಲ್ಲಿ ಅತಿ ಎತ್ತರದ ಶಿಖರವಾಗಿದೆ. ಮೂರು ಇತರ ಎತ್ತರದ ಶಿಖರಗಳಿಂದ ಸುತ್ತುವರೆದಿರುವ ಕಾಮೆಟ್ ಟಿಬೆಟ್ ಗಡಿಯ ಸಮೀಪದಲ್ಲಿದೆ. ಪ್ರವೇಶ ಮತ್ತು ಟ್ರೆಕ್ಕಿಂಗ್‍ನಂತಹ ಚಟುವಟಿಕೆಗೆ ಸವಾಲಾಗಿದೆ,

ಸಾಲ್ಟೊರೊ ಕಾಂಗ್ರಿ ಶಿಖರ: ಇದು ಭಾರತದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಕಾರಕೋರಂನ ಉಪ-ಶ್ರೀಣಿಯಾಗಿರುವ ಸಾಲ್ಟೊರೊ ಜಮ್ಮು-ಕಾಶ್ಮೀರದಲ್ಲಿದೆ. ಸಿಯಾಚಿನ್ ಗ್ಲೇಸಿಯರ್ ನಂತಹ ವಿಶ್ವದ ಅತಿ ಉದ್ದದ ಹಿಮನದಿಗಳನ್ನು ಒಳಗೊಂಡಿದೆ. ವಿಶ್ವದಲ್ಲಿ ಇದು 31ನೇ ಅತಿ ಎತ್ತರದ ಸ್ವತಂತ್ರ ಪರ್ವತ ಶಿಖರ ಎಂಬ ಹೆಗ್ಗಳಿಕೆ ಪಡೆದಿದೆ.

ಸಾಸರ್ ಕಾಂಗ್ರಿ ಶಿಖರ: ಇದು ಭಾರತದ ಐದನೇ ಅತಿ ಎತ್ತರದ ಶಿಖರವಾಗಿದ್ದು, ವಿಶ್ವದ 35ನೇ ಅತಿ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಮ್ಮು-ಕಾಶ್ಮೀರದಲ್ಲಿರುವ ಈ ಶಿಖರ, ಮುಖ್ಯ ಕಾರಕೋರಂನ ಶ್ರೇಣಿಯ ಆಗ್ನೇಯಕ್ಕೆ ನೆಲೆಗೊಂಡಿದೆ.

ಮಮೊಸ್ಟಾಂಗ್ ಕಾಂಗ್ರಿ ಶಿಖರ: ಇದು ಭಾರತದ ಆರನೇ ಅತಿ ಎತ್ತರದ ಶಿಖರವಾಗಿರುವ ಮಮೊಸ್ಟಾಂಗ್ ಕಾಂಗ್ರಿ ಶಿಖರವು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿದೆ. ವಿಶ್ವದ 48ನೇ ಅತಿ ಎತ್ತರದ ಶಿಖರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಗ್ರೇಟ್ ಕಾರಕೋರಂ ಶ್ರೇಣಿಯ ರಿಮೋ ಮುಸ್ತಾಗ್ ಉಪ ಶ್ರೇಣಿಯಲ್ಲಿ ಇದು ಅತಿ ಎತ್ತರದ ಶಿಖರವಾಗಿದೆ.

ರಿಮೋ ಪೀಕ್: ಜಮ್ಮು-ಕಾಶ್ಮೀರದಲ್ಲಿರುವ ಈ ಶಿಖರ ಗ್ರೇಟ್ ಕಾರಕೋರಂ ಶ್ರೇಣಿಯ ಒಂದು ಭಾಗವಾಗಿದೆ. ರಿಮೋ ಪರ್ವತ ಸರಣಿಯು ನಾಲ್ಕು ಶಿಖರಗಳನ್ನು ಒಳಗೊಂಡಿದೆ. ಸಿಯಾಚಿನ್ ಹಿಮನದಿಯ ಭಾಗವಾಗಿರುವ ರಿಮೋ, 7385 ಮೀಟರ್ (24,229 ಅಡಿ) ಎತ್ತರದಲ್ಲಿದೆ.

ಹಾರ್ಡಿಯೋಲ್ ಶಿಖರ: ಭಾರತದ ಎಂಟನೇ ಅತಿ ಎತ್ತರದ ಶಿಖರವಾಗಿರುವ ಹಾರ್ಡಿಯೋಲ್, ಹಿಮಾಲಯದ ಅತ್ಯಂತ ಪ್ರಮುಖ ಶಿಖರಗಳಲ್ಲಿ ಒಂದಾಗಿದೆ. ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ಮಿಲಾಮ್ ಕಣಿವೆಯ ಮೇಲಿರುವ ಈ ಶಿಖರ, ಕುಮಾವೂನ್ ಅಭಯಾರಣ್ಯದ ಉತ್ತರ ಭಾಗದ ನಂದಾ ದೇವಿ ಬಳಿ ಇದೆ.

ಚೌಖಂಬಾ ಶಿಖರ: ಚೌಖಂಬವು ಉತ್ತರಾಖಂಡದ ಗರ್ವಾಲ್ ಹಿಮಾಲಯದ ಗಂಗೋತ್ರಿ ಗುಂಪಿನಲ್ಲಿರುವ ಒಂದು ಪರ್ವತ ಸಮೂಹವಾಗಿದೆ. ಭಾರತದ ಅತ್ಯುನ್ನತ ಶಿಖರಗಳ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನವನ್ನು ಹೊಂದಿದೆ. ಇದು ಗಂಗೋತ್ರಿ ಗುಂಪಿನಲ್ಲಿ ಅತಿ ಎತ್ತರದ ಪರ್ವತವಾಗಿದೆ. ನಾಲ್ಕು ಶಿಖರಗಳು ಹತ್ತಿರವಿರುವುದರಿಂದ ಈ ಹೆಸರು ಬಂದಿದೆ.

ತ್ರಿಶೂಲ್ ಶಿಖರ: ಉತ್ತರಾಖಂಡದ ಕುಮಾನ್ ಪ್ರದೇಶದಲ್ಲಿರುವ ತ್ರಿಶೂಲ್ ಶಿಖರ 7,120 ಮೀಟರ್ ಎತ್ತರದಲ್ಲಿದೆ. ಶಿವನ ಆಯುಧ ತ್ರಿಶೂಲದ ಹೆಸರನ್ನು ಈ ಶಿಖರಕ್ಕಿಡಲಾಗಿದೆ. ತ್ರಿಶೂಲದ ಆಕಾರವನ್ನು ರೂಪಿಸುವ ಮೂರು ಶಿಖರಗಳನ್ನು ಒಳಗೊಂಡಿರುವುದರಿಂದ ಈ ಹೆಸರು ಬಂದಿದೆ. ನಂದಾ ದೇವಿ ಅಭಯಾರಣ್ಯದ ಬಳಿ ಈ ಶಿಖರವಿದೆ. ಪರ್ವತಾರೋಹಿಗಳಿಗೆ ಮತ್ತು ಚಾರಣಿಗರಿಗೆ ಉಲ್ಲಾಸದಾಯಕ ಅನುಭವವನ್ನು ನೀಡುತ್ತದೆ.