ವೈರಲ್ ಆಯ್ತು ಮಾಡೆಲ್ ಚಾಯ್ ವಾಲಿಯ ಮಸಲಾ ಟೀ ವಿಡಿಯೋ; ಮೊದಲು ಕೂದಲು ಕಟ್ಟಮ್ಮ ಅಂದ್ರು ನೆಟ್ಟಿಗರು -Video
ಲಕ್ನೋದಲ್ಲಿ ಮಾಡೆಲ್ ಒಬ್ಬರ ಟೀ ಸ್ಟಾಲ್ ವೈರಲ್ ಆಗಿದೆ. ಕೂದಲನ್ನು ಬಿಟ್ಟು ಟ್ರೆಂಡಿ ಉಡುಗೆ ಧರಿಸಿದ ಮಾಡೆಲ್, ತಮ್ಮ ಗ್ರಾಹಕರಿಗೆ ಮಸಾಲಾ ಟೀ ಮಾಡಿ ಕೊಡುತ್ತಾರೆ. ಈ ಮಾಡೆಲ್ ಚಾಯ್ ವಾಲಿ ಅಲಿಯಾಸ್ ಸಿಮ್ರಾನ್ ಗುಪ್ತಾ ಅವರ ಬಗ್ಗೆ ತಿಳಿಯೋಣ ಬನ್ನಿ.
ಈಗೀಗ ತಮ್ಮದೇ ಆದ ಉದ್ಯಮ ಆರಂಭಿಸುವ ಹಲವು ಯುವಕರನ್ನು ನೋಡಬಹುದು. ಇವರಲ್ಲಿ ಹೆಚ್ಚಿನವರ ಆಕರ್ಷಣೆ ಆಹಾರ ಕ್ಷೇತ್ರದತ್ತ ಇರುತ್ತದೆ. ಭಾರತದಾದ್ಯಂತ ಹಲವು ಯುವಕ-ಯುವತಿಯರು ಸಣ್ಣ ಸಣ್ಣ ಉದ್ಯಮ ಆರಂಭಿಸಿ ಜನಪ್ರಿಯರಾಗಿದ್ದಾರೆ. ಅವರ ಪಟ್ಟಿಗೆ ಹೊಸ ಸೇರ್ಪಡೆಯೇ ಸಿಮ್ರಾನ್ ಗುಪ್ತಾ ಅಲಿಯಾಸ್ 'ಮಾಡೆಲ್ ಚಾಯ್ ವಾಲಿ'. ನೋಡಲು ಸುಂದರವಾಗಿರುವ ಯುವತಿಯ ಟೀ ಸ್ಟಾಲ್ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಯುವತಿಯ ಉದ್ಯಮ ಯೋಜನೆಗೆ ಹಲವರು ಭೇಷ್ ಅಂದಿದ್ದಾರೆ. ಇದೇ ವೇಳೆ ಕಲವೊಬ್ಬರು ಟೀಕಿಸಿದ್ದಾರೆ ಕೂಡಾ. ಈಗಾಗಲೇ ದೇಶದಲ್ಲಿ ಚಹಾ ಮಾರಾಟ ಮಾಡುವುದನ್ನು ಟ್ರೆಂಡ್ ಆಗಿಸಿ ಫೇಮಸ್ ಆದ ಹಲವು ಸಣ್ಣ ಉದ್ಯಮಿಗಳಿದ್ದಾರೆ. ಈ ಪಟ್ಟಿಯಲ್ಲಿ ಗುಪ್ತಾ ಕೂಡ ಒಬ್ಬರು.
ಮಾಡೆಲ್ ಚಾಯ್ ವಾಲಿ ಟೀ ಮಾಡುತ್ತಿರುವ ವಿಡಿಯೋ ದೇಶದಾದ್ಯಂತ ಜನರ ಆಕರ್ಷಣೆಗೆ ಕಾರಣವಾಗಿದೆ. ನಾಲ್ಕೈದು ದಿನಗಳ ಅವಧಿಯಲ್ಲಿ ಈ ವಿಡಿಯೋ 12 ಮಿಲಿಯನ್‌ಗೂ (ಒಂದು ಕೋಟಿ 20 ಲಕ್ಷ) ಹೆಚ್ಚು ವೀಕ್ಷಣೆ ಗಳಿಸಿದೆ. ಫುಡ್ ಬ್ಲಾಗಿಂಗ್ ಚಾನೆಲ್ ದಿ ಹಂಗ್ರಿ ಪಂಜಾಬಿ ಈ ವಿಡಿಯೋ ಹಂಚಿಕೊಂಡಿದೆ.
ಸೌಂದರ್ಯ ಸ್ಪರ್ಧೆಯೊಂದರ ವಿಜೇತೆಯಾಗಿರುವ ಸಿಮ್ರಾನ್ ಗುಪ್ತಾ, ಈಗ ಉದ್ಯಮಿಯಾಗಿ ಬದಲಾಗಿದ್ದಾರೆ. ಇವರನ್ನು ನೋಡುವಾಗಲೇ ಮಾಡೆಲ್ ಎಂಬಂತೆ ಕಾಣುತ್ತಾರೆ. ಇವರು ತಮ್ಮದೇ ತಮ್ಮದೇ ಟೀಸ್ಟಾಲ್‌ನಲ್ಲಿ ಚಹಾ ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಸಿಮ್ರಾನ್ ಗುಪ್ತಾ ಅವರು 2018ರಲ್ಲಿ ನಡೆದ ಮಿಸ್ ಗೊರಖ್‌ಪುರ ಸೌಂದರ್ಯ ಸ್ಪರ್ಧೆ ಗೆದ್ದವರು. ಆನಂತರ ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದವು. ಈ ಬಗ್ಗೆ ಮಾತನಾಡಿದ ಅವರು, “ಮಿಸ್ ಗೊರಖ್‌ಪುರ ಗೆದ್ದ ನಂತರ, ನನ್ನ ನೈತಿಕ ಸ್ಥೈರ್ಯ ತುಂಬಾ ಹೆಚ್ಚಾಗಿದೆ. ಆ ನಂತರ ನಾನು ದೆಹಲಿಗೆ ಹೋದೆ. ಮಾಡೆಲಿಂಗ್‌ನಲ್ಲಿ ಸಾಕಷ್ಟು ಅವಕಾಶಗಳು ಬರಲಾರಂಭಿಸಿದವು. ನಾನು ಕೆಲವು ಜಾಹೀರಾತುಗಳಲ್ಲಿಯೂ ಕೆಲಸ ಮಾಡಿದ್ದೇನೆ. ಆ ಹಂತದಲ್ಲಿ ನನ್ನ ವೃತ್ತಿಜೀವನವು ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಆದರೆ ದಿಢೀರನೆ ಕೋವಿಡ್ ಸಾಂಕ್ರಾಮಿಕ ಬಂದಿತು. ಲಾಕ್‌ಡೌನ್ ಸಮಯದಲ್ಲಿ ಪ್ರತಿಯೊಂದು ಕ್ಷೇತ್ರದ ಜನರು ಕೂಡಾ ತೊಂದರೆಗೊಳಗಾದಾಗ, ನನ್ನ ಕೆಲಸವೂ ಸ್ಥಗಿತಗೊಂಡಿತು. ನಾನು ನನ್ನ ಊರು ಗೊರಖ್‌ಪುರಕ್ಕೆ ಮತ್ತೆ ಮರಳಬೇಕಾಯಿತು” ಎಂದು ಸಿಮ್ರಾನ್ ದಿ ಬೆಟರ್ ಇಂಡಿಯಾಗೆ ತಿಳಿಸಿದ್ದಾರೆ.
ವಿಡಿಯೋ ನೋಡಿ
ಸಂಪಾದನೆ ಮಾಡಿ ಕುಟುಂಬವನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಗುಪ್ತಾ ಅವರ ಮೇಲೆ ಬಿತ್ತು. ಹೀಗಾಗಿ ಹಣ ಸಂಪಾದನೆಗಾಗಿ ಉದ್ಯಮ ಆರಂಭಿಸುವ ಚಿಂತನೆ ಮಾಡಿದರು. ಎಂಬಿಎ ಚಾಯ್ ವಾಲಾ ಪ್ರಫುಲ್ ಬಿಲ್ಲೋರ್ ಮತ್ತು ಪಾಟ್ನಾದ ಚಹಾ ಮಾರಾಟಗಾರ್ತಿ ಪ್ರಿಯಾಂಕಾ ಗುಪ್ತಾ ಅವರಿಂದ ಗುಪ್ತಾ ಸ್ಫೂರ್ತಿ ಪಡೆದರು. ಕೊನೆಗೆ ಲಕ್ನೋದಲ್ಲಿ ಚಹಾ ಅಂಗಡಿಯನ್ನು ತೆರೆದೇ ಬಿಟ್ಟರು.
ಕೂದಲು ಬಿಟ್ಟು ಚಹಾ ತಯಾರಿ
ಇದೀಗ ಮಾಡೆಲ್ ಚಾಯ್ ವಾಲಿ ಚಹಾ ತಯಾರಿಸುವ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಗುಪ್ಪಾ ಅವರು ಟ್ರೆಂಡಿಯಾಗಿ ಗುಲಾಬಿ ಟಾಪ್ ಮತ್ತು ಪ್ಯಾಂಟ್ ಧರಿಸಿ, ತಮ್ಮ ಗ್ರಾಹಕರಿಗೆ ಮಸಾಲಾ ಚಹಾವನ್ನು ತಯಾರಿಸುವುದನ್ನು ನೋಡಬಹುದು. ಕೂದಲನ್ನು ಫ್ರೀಯಾಗಿ ಬಿಟ್ಟು ಚಹಾ ತಯಾರಿಸಿದ್ದಾರೆ. ವಿಡಿಯೋ ನೋಡಿ ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಸಂಪಾದನೆ ಮಾಡುತ್ತಿರುವುಕ್ಕಾಗಿ ಹಲವರು ಸಿಮ್ರಾನ್ ಅವರನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ, ಕೂದಲನ್ನು ತೆರೆದಿಟ್ಟಿದ್ದಕ್ಕಾಗಿ ಮತ್ತು ಗ್ಲೌಸ್ ಧರಿಸದೆ ಪದಾರ್ಥಗಳನ್ನು ಮುಟ್ಟಿದ್ದಕ್ಕಾಗಿ ಹಲವರು ಟೀಕಿಸಿದ್ದಾರೆ.
“ಕೂದಲು ಬಿಟ್ಟಿರುವುದು ಮತ್ತು ಕೈಗೆ ಗ್ಲೌಸ್ ಧರಿಸದೆ ಇರುವುದು ನನಗೆ ಸರಿ ಕಾಣುತ್ತಿಲ್ಲ. ಅವರು ನಿರಂತರವಾಗಿ ತನ್ನ ಕೂದಲನ್ನು ಸ್ಪರ್ಶಿಸುತ್ತಾರೆ. ಮತ್ತೆ ಅದೇ ಕೈಯಿಂದ ಪದಾರ್ಥಗಳನ್ನು ಮುಟ್ಟುತ್ತಾರೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಚಹಾ ಜೊತೆಗೆ ಕೂದಲು ಉಚಿತ” ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಸಭ್ಯ ಭಾಷೆಯಲ್ಲಿ ಸಲಹೆ ನೀಡಿದ್ದು, ಭವಿಷ್ಯದಲ್ಲಿ ಕೂದಲನ್ನು ಕಟ್ಟಿ ಟೀ ಮಾಡುವಂತೆ ವಿನಂತಿಸಿದ್ದಾರೆ.