ಸುಮ್ನಿರು, ಕಾಮಿಡಿಯಲ್ಲಿ ಹಣ ಬರ್ತಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಬೇಡ; ಓಲಾ ಸ್ಕೂಟರ್‌ ಸಿಇಒ ಭವಿಶ್‌ ಅಗರ್‌ವಾಲ್‌ ಸಿಡಿಮಿಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸುಮ್ನಿರು, ಕಾಮಿಡಿಯಲ್ಲಿ ಹಣ ಬರ್ತಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಬೇಡ; ಓಲಾ ಸ್ಕೂಟರ್‌ ಸಿಇಒ ಭವಿಶ್‌ ಅಗರ್‌ವಾಲ್‌ ಸಿಡಿಮಿಡಿ

ಸುಮ್ನಿರು, ಕಾಮಿಡಿಯಲ್ಲಿ ಹಣ ಬರ್ತಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಬೇಡ; ಓಲಾ ಸ್ಕೂಟರ್‌ ಸಿಇಒ ಭವಿಶ್‌ ಅಗರ್‌ವಾಲ್‌ ಸಿಡಿಮಿಡಿ

ಓಲಾ ಎಲೆಕ್ಟ್ರಿಕ್‌ ಸರ್ವೀಸ್‌ ಸೆಂಟರ್‌ಗಳ ಗುಣಮಟ್ಟವಿಲ್ಲದ ಸೇವೆಗಳ ಕುರಿತು ಸ್ಟಾಂಡಪ್‌ ಕಾಮಿಡಿಯನ್‌ ಕುನಾಲ್‌ ಕಮ್ರಾ ಟೀಕಿಸಿರುವುದು ಓಲಾ ಎಲೆಕ್ಟ್ರಿಕ್‌ ಸಿಇಒ ಭವಿಶ್‌ ಅಗರ್‌ವಾಲ್‌ಗೆ ಕೋಪ ತರಿಸಿದೆ. ಸುಮ್ನಿರು, ಈ ರೀತಿ ಪೇಯ್ಡ್‌ ಕಾಮೆಂಟ್‌ಗಳನ್ನು ಹಾಕಬೇಡ ಎಂದು ಭವಿಶ್‌ ಟ್ವೀಟ್‌ ಮಾಡಿದ್ದಾರೆ.

ಓಲಾ ಸ್ಕೂಟರ್‌ ಸಿಇಒ ಭವಿಶ್‌ ಅಗರ್‌ವಾಲ್‌
ಓಲಾ ಸ್ಕೂಟರ್‌ ಸಿಇಒ ಭವಿಶ್‌ ಅಗರ್‌ವಾಲ್‌

ಬೆಂಗಳೂರು: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಕಂಪನಿಯ ಹಣೆಬರಹ ಯಾಕೋ ಸರಿ ಇರುವಂತೆ ಕಾಣಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಕುರಿತು ಕಂಪ್ಲೆಂಟ್‌ಗಳು ಹೆಚ್ಚುತ್ತಿವೆ. ವಿಶೇಷವಾಗಿ ಓಲಾ ಸರ್ವೀಸ್‌ ಸೆಂಟರ್‌ಗಳ ಕುರಿತು ದೂರು ಹೆಚ್ಚಾಗುತ್ತಿದೆ. ಇದೀಗ ಮತ್ತೆ ಓಲಾ ಎಲೆಕ್ಟ್ರಿಕ್‌ ವಿಷಯ ಚರ್ಚೆಯಲ್ಲಿದೆ. ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಕುನಾಲ್‌ ಕಮ್ರಾ ಅವರು ಎಕ್ಸ್‌ನಲ್ಲಿ "ಓಲಾ ಎಲೆಕ್ಟ್ರಿಕ್‌ ಸರ್ವೀಸ್‌ ಕೇಂದ್ರಗಳ ಈಗಿನ ಪರಿಸ್ಥಿತಿ ಮತ್ತು ಸೇವೆಯ ಗುಣಮಟ್ಟ"ದ ಕುರಿತು ಟ್ವೀಟ್‌ ಮಾಡಿದ್ದರು. ಇದಕ್ಕೆ ಓಲಾ ಸಿಇಒ ಭವಿಶ್‌ ಅಗ್‌ವಾಲ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ಟಾಂಡಪ್‌ ಕಾಮಿಡಿಯನ್‌ ಕುನಾಲ್‌ ಅಗರ್‌ವಾಲ್‌ ಟೀಕೆ

"ಭಾರತೀಯ ಗ್ರಾಹಕರಿಗೆ ಧ್ವನಿ ಇರುವುದೇ? ಇವುಗಳಿಗೆ ಇವರು ಅರ್ಹರಾಗಿದ್ದಾರೆಯೇ? ದ್ವಿಚಕ್ರವಾಹನಗಳು ಸಾಕಷ್ಟು ಜನರ ಪ್ರತಿದಿನದ ಬದುಕಿಗೆ ಅತ್ಯಂತ ಅವಶ್ಯವಾದದ್ದು. ನಿತಿನ್‌ ಗಡ್ಕರಿಯವರೇ ಭಾರತೀಯರು ಈ ಇವಿಗಳನ್ನು ಬಳಸುವುದು ಹೇಗೆ? ಓಲಾ ಬಳಕೆದಾರರೇ ನಿಮ್ಮ ಸಮಸ್ಯೆಗಳನ್ನು ಇಲ್ಲಿ ಹೇಳಿಕೊಳ್ಳಿ" ಎಂದು ಕುನಾಲ್‌ ಟ್ವೀಟ್‌ ಮಾಡಿದ್ದರು. ಜತೆಗೆ ಸರ್ವೀಸ್‌ ಸೆಂಟರ್‌ಗಳ ಮುಂದೆ ರಿಪೇರಿಯಾಗಿದೆ ನಿಂತಿರುವ ಓಲಾ ಸ್ಕೂಟರ್‌ಗಳ ಫೋಟೋ ಹಂಚಿಕೊಂಡಿದ್ದರು.

ಹಣ ಪಡೆದು ಟ್ವೀಟ್‌ ಮಾಡಬೇಡ ಎಂದ ಭವಿಶ್‌

ಟೀಕೆಗಳ ಕುರಿತು ಅಗರ್‌ವಾಲ್‌ ಎಂದಿನಂತೆ ಪ್ರತಿಕ್ರಿಯೆ ನೀಡಿದ್ದಾರೆ. "ಕುನಾಲ್‌ ನಿಮಗೆ ಸಹಾಯ ಮಾಡಬೇಕಿದ್ದರೆ ಬಂದು ನಮಗೆ ಸಹಾಯ ಮಾಡು! ಈ ರೀತಿ ಹಣ ಪಡೆದು ಟ್ವೀಟ್‌ ಮಾಡುವಾಗ ದೊರಕುವ ಹಣಕ್ಕಿಂತ ಹೆಚ್ಚು ಹಣವನ್ನು ನಿನಗೆ ನಾನು ನೀಡುವೆ. ಕಾಮಿಡಿ ಕರಿಯರ್‌ನಲ್ಲಿ ವಿಫಲವಾದ ಬಳಿಕ ನೀನು ಹೀಗೆ ಹಣ ಗಳಿಸಲು ಆರಂಭಿಸಿರುವೆ. ಸುಮ್ಮನೆ ಕುಳಿತುಕೋ, ನಾವು ನಮ್ಮ ನಿಜವಾದ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಾವು ನಮ್ಮ ಸೇವಾ ನೆಟ್‌ವರ್ಕ್‌ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ. ಬಾಕಿ ಉಳಿದಿರುವ ವಾಹನಗಳ ಸರ್ವೀಸ್‌ ಶೀಘ್ರದಲ್ಲಿ ಕ್ಲಿಯರ್‌ ಆಗಲಿದೆ" ಎಂದು ಭವಿಶ್‌ ಅಗರ್‌ವಾಲ್‌ ಮಾರುತ್ತರ ನೀಡಿದ್ದಾರೆ.

ಸಿಇಒ ಹೀಗೆ ಮಾತನಾಡಬಹುದೇ?

ಭವಿಶ್‌ರ ಈ ಆಕ್ರೋಶದ ಪ್ರತಿಕ್ರಿಯೆ ನಿಜವಾದ ಓಲಾ ಗ್ರಾಹಕರಿಗೆ ಬೇಸರ ತರಿಸಿದೆ. ಸಿಇಒ ಅವರ ಇಂತಹ ವರ್ತನೆಯನ್ನು ಸಾಕಷ್ಟು ಜನರು ಸಹಿಸಲಿಲ್ಲ. ನಿಮಗೆ ಗ್ರಾಹಕರ ಕುರಿತು ನಿಜವಾದ ಬದ್ಧತೆ ಇರುವುದೇ ಎಂದು ಓಲಾ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. "ನಾನು ಓಲಾ ಸ್ಕೂಟರ್‌ ಗ್ರಾಹಕ. ಶೀಘ್ರದಲ್ಲಿ ನಿಮ್ಮ ಓಲಾ ವೆಬ್‌ ಸರಣಿ ಆರಂಭವಾಗಬಹುದು. ಇದು ಸ್ಕ್ಯಾಮ್ 2025 ಅಥವಾ 2027 ಆಗಬಹುದು. ಆದರೆ, ಖಂಡಿತಾ ಏನೋ ಒಂದು ಆಗಿಯೇ ಆಗುತ್ತದೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಗ್ರಾಹಕರಿಗೆ ಸರ್ವೀಸ್‌ ವಿಳಂಬವಾಗುತ್ತಿರುವುದನ್ನು ಕಂಪನಿ ಒಪ್ಪಿಕೊಂಡಿದೆ. ಈ ರೀತಿ ಡಿಲೇ ಆಗುವುದನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಕೈಗೊಂಡಿರುವುದಾಗಿ ಓಲಾ ತಿಳಿಸಿದೆ.

ಓಲಾ ಸರ್ವೀಸ್‌ ಗುಣಮಟ್ಟದ ಕುರಿತು ಪ್ರಶ್ನೆ ಎದ್ದಿರುವುದು ಇದೇ ಮೊದಲಲ್ಲ. ಕಲಬುರಗಿಯಲ್ಲಿ ಗ್ರಾಹಕರೊಬ್ಬರು ಕೋಪಗೊಂಡು ಶೋರೂಂಗೆ ಬೆಂಕಿ ಹಚ್ಚಿದ್ದರು. ಆತ ಖರೀದಿಸಿದ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಸಮಸ್ಯೆ ಕಂಡುಬಂದಿತ್ತು. ಆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶೋರೂಂನವರು ವಿಫಲರಾದ ಬಳಿಕ ಕೋಪಗೊಂಡ ಗ್ರಾಹಕ ಆ ಶೋರೂಂಗೆ ಬೆಂಕಿ ಹಚ್ಚಿದ್ದ.

ಬೆಂಗಳೂರಿನ ಮಹಿಳೆಯೊಬ್ಬರು "ದಯವಿಟ್ಟು ಯಾರೂ ಓಲಾ ಸ್ಕೂಟರ್‌ ಖರೀದಿಸಬೇಡಿ, ಇದು ಡಬ್ಬಾ ಗಾಡಿ" ಎಂಬ ಫಲಕವನ್ನು ತನ್ನ ಸ್ಕೂಟರ್‌ಗೆ ಹಾಕಿ ಟ್ವೀಟ್‌ ಮಾಡಿದ್ದರು.

ಓಲಾ ಎಲೆಕ್ಟ್ರಿಕ್‌ನ ಮಾರುಕಟ್ಟೆ ಪಾಲು ಕಡಿಮೆಯಾಗುತ್ತಿದೆ. ಕಳೆದ ಹಲವು ತಿಂಗಳನಿಂದ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಕಡಿಮೆಯಾಗುತ್ತಿದೆ. ಇತರೆ ಕಂಪನಿಗಳ ಎಲೆಕ್ಟ್ರಿಕ್‌ ವಾಹನಗಳೂ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿವೆ.

Whats_app_banner