Valentines Day: ಈ 10 ರೊಮ್ಯಾಂಟಿಕ್ ಸಲಹೆಗಳನ್ನು ಪಾಲಿಸಿ, ಈ ವರ್ಷದ ಪ್ರೇಮಿಗಳ ದಿನವನ್ನು ಅವಿಸ್ಮರಣೀಯವಾಗಿಸಿ
ಪ್ರೇಮಿಗಳ ದಿನ ಎಂದರೆ ಪ್ರೇಮ ಪಯಣದಲ್ಲಿ ಸಾಗುವವರ ಮನದಲ್ಲಿ ಏನೋ ಪುಳಕ. ಪ್ರತಿದಿನ ಭರಪೂರ ಪ್ರೀತಿಯಲ್ಲಿ ಮಿಂದೆದ್ದರೂ ಪ್ರೇಮಿಗಳ ದಿನದಂದು ಪ್ರೇಮ ನಿವೇದನೆ ಮಾಡುವುದು, ಉಡುಗೊರೆ ನೀಡುವುದು ಎಂದರೆ ಏನೋ ವಿಶೇಷ. ಈ ಬಾರಿಯ ನಿಮ್ಮ ಪ್ರೇಮಿಗಳ ದಿನ ಅವಿಸ್ಮರಣೀಯವಾಗಬೇಕು ಅಂದ್ರೆ ಈ 10 ಕೆಲಸ ಮಾಡಿ.
ಪ್ರೀತಿ, ಪ್ರೇಮದ ಪಯಣದಲ್ಲಿ ಸಾಗುವವರಿಗೆ ಜಗತ್ತಿನಲ್ಲಿ ಎಲ್ಲವೂ ಹೊಸತರಂತೆ ಕಾಣುವುದು ಸಹಜ. ಪ್ರೇಮದ ಸೆಳೆತವೇ ಅಂಥದ್ದು. ಇದು ಪ್ರತಿದಿನ ಹೊಸ ಅನುಭೂತಿಯನ್ನು ನೀಡುವಂಥದ್ದು. ದಿನ ಸಾಗಿದಂತೆ ಪ್ರೇಮದ ಆಳ ವಿಸ್ತಾರವಾಗುತ್ತಾ ಹೋಗುತ್ತದೆ. ಪ್ರತಿನಿತ್ಯ ಪ್ರೇಮಪೂಜೆಯಲ್ಲಿ ತೊಡಗುವವರಿಗೂ ಪ್ರೇಮಿಗಳ ದಿನ ಬಂತೆಂದರೆ ಮನದಲ್ಲೇನೋ ಹೇಳಿಕೊಳ್ಳಲಾಗದ ಪುಳಕ.
ಇನ್ನು ಹೊಸತಾಗಿ ಪ್ರೇಮ ನಿವೇದನೆ ಮಾಡಬೇಕು ಎಂದುಕೊಂಡವರಿಗಂತೂ ಈ ದಿನ ಬಹಳ ವಿಶೇಷ. ಈ ದಿನಕ್ಕಾಗಿ ತಪಸ್ಸಿನಂತೆ ಕಾಯುತ್ತಾರೆ. ಒಟ್ಟಾರೆ ಈಗಾಗಲೇ ಪ್ರೀತಿಯಲ್ಲಿ ಬಿದ್ದವರಿಗೆ, ಪ್ರೇಮಿಗಳ ದಿನದಂದು ಪ್ರೇಮ ನಿವೇದನೆ ಮಾಡಬೇಕು ಎಂದುಕೊಂಡವರು ಈ ದಿನವನ್ನು ಅವಿಸ್ಮರಣೀಯವಾಗಿಸಬೇಕು ಎಂದುಕೊಳ್ಳುವುದು ಮಾತ್ರ ಸುಳ್ಳಲ್ಲ. ಈ ವರ್ಷ ನಿಮ್ಮದು ಮರೆಯಲಾಗದ ಪ್ರೇಮಿಗಳ ದಿನವಾಗಬೇಕು ಅಂದ್ರೆ ಈ ರೊಮ್ಯಾಂಟಿಕ್ ಸಲಹೆ ಪಾಲಿಸಿ.
ಜೊತೆಯಾಗಿ ಸೂರ್ಯೋದಯ ನೋಡಲು ಪ್ಲಾನ್ ಮಾಡಿ
ಈ ಪ್ರೇಮಿಗಳ ದಿನ ವಿಶೇಷವಾಗಿರಬೇಕು ಅಂದ್ರೆ ನಿಮ್ಮ ಮನದರಸಿ ಅಥವಾ ಮನೆದೊಡೆಯ ಜೊತೆಯಾಗಿ ಸೂರ್ಯೋದಯವನ್ನು ಸ್ವಾಗತಿಸಿ. ಒಬ್ಬರು ಒಟ್ಟಾಗಿ ಸೂರ್ಯೋದಯವನ್ನು ನೋಡುವ ಮೂಲಕ ನಿಮ್ಮ ಮುಂದಿನ ಬದುಕಿಗೆ ಹೊಸ ಹೆಜ್ಜೆ ಇಡಿ. ಅದಕ್ಕಾಗಿ ನೀವು ಬೀಚ್‌ನಂತಹ ಸ್ಥಳಗಳಿಗೆ ಟ್ರಿಪ್ ಪ್ಲಾನ್ ಮಾಡಬಹುದು. ಬೆಳಗಿನ ಎಳೆ ಬಿಸಿಲಿನಲ್ಲಿ ಕೈ ಕೈ ಹಿಡಿದು ಸಮುದ್ರ ತೀರದಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರೇಮ ನಿವೇದನೆ ಮಾಡಬಹುದು.
ನೈಟ್ ಔಟ್ ಪ್ಲಾನ್ ಮಾಡಿ
ಇತ್ತೀಚಿನ ಒತ್ತಡ ದಿನಗಳಲ್ಲಿ ಹಗಲಿನ ವೇಳೆ ನಿಮಗೆ ಸಮಯ ಸಿಗದೇ ಇರಬಹುದು. ರಾತ್ರಿ ವೇಳೆ ಪ್ರಶಾಂತವಾಗಿ ಬೀಸುವ ಗಾಳಿಯ ಅಲೆಯಲ್ಲಿ ಇಬ್ಬರೂ ಜೊತೆಯಾಗಿ ಸಮಯ ಕಳೆಯುವಂತೆ ಪ್ಲಾನ್ ಮಾಡಿ. ಬೈಕ್ ಅಥವಾ ಕಾರಿನಲ್ಲಿ ಲಾಂಗ್ ರೈಡ್ ಹೋಗುವುದು ಕೂಡ ನಿಮ್ಮಿಬ್ಬರಿಗೂ ಖುಷಿ ನೀಡಬಹುದು. ಏಕಾಂತಕ್ಕೆ ಅನುವು ಮಾಡಿಕೊಡುವ ರೆಸ್ಟೋರೆಂಟ್‌ಗಳಲ್ಲಿ ಡಿನ್ನರ್ ಕೂಡ ಆಯೋಜಿಸಬಹುದು. ಅಪರೂಪ ಎನ್ನಿಸುವ ಸ್ಥಳದಲ್ಲಿ ನಿಮ್ಮ ಮನದ ಭಾವನೆಯನ್ನು ನೀವು ಇಷ್ಟಪಟ್ಟವರ ಮುಂದೆ ಹೇಳಿಕೊಳ್ಳಬಹುದು.
ಮೂವಿ ನೈಟ್
ಸಿನಿಮಾ ಇತ್ತೀಚಿನ ಮಂದಿಯ ಸ್ಟ್ರೆಸ್ ಬಸ್ಟರ್ ಅಂತಲೇ ಹೇಳಬಹುದು. ನೀವಿಬ್ಬರೂ ಜೊತೆಯಾಗಿ ಸಿನಿಮಾ ನೋಡಲು ಹೋಗಬಹುದು ಅಥವಾ ಮನೆಯಲ್ಲೇ ಒಟ್ಟಿಗೆ ಕೂತು ನಿಮಿಷ್ಟದ ಸಿನಿಮಾ ನೋಡಬಹುದು. ಸಿನಿಮಾ ನೋಡುತ್ತಾ ಒಟ್ಟಿಗೆ ಕುಳಿತು ಸಮಯ ಕಳೆಯುವುದು ಕೂಡ ರೊಮ್ಯಾಂಟಿಕ್ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.
ಮನಸ್ಸು ಬಿಚ್ಚಿ ಮಾತನಾಡಿ
ಪ್ರೇಮ ಸಂಬಂಧದಲ್ಲಿ ಬಾಂಧವ್ಯ ವೃದ್ಧಿಯಾಗಲು ಮನಸ್ಸು ಬಿಚ್ಚಿ ಮಾತನಾಡುವುದು ಬಹಳ ಮುಖ್ಯವಾಗುತ್ತದೆ. ಏಕಾಂತದಲ್ಲಿ ಮುಕ್ತವಾಗಿ ಮಾತನಾಡುವುದು ನಿಮ್ಮಿಬ್ಬರಿಗೂ ಖುಷಿ ಕೊಡಬಹುದು. ಕೈ ಹಿಡಿದು ಒಂದು ಲಾಂಗ್ ವಾಕ್ ಹೋಗುವ ಮೂಲಕ ಕೂಡ ಮನಸ್ಸಿಗೆ ಭಾವನೆಗಳನ್ನು ಎಕ್ಸ್‌ಚೆಂಜ್ ಮಾಡಿಕೊಳ್ಳಬಹುದು.
ಕಾಫಿ ಡೇಟ್
ಸಾಮಾನ್ಯವಾಗಿ ಪ್ರೇಮಿಗಳ ಮೊದಲ ಭೇಟಿ ಪಾರ್ಕ್ ಅಥವಾ ಕಾಫಿ ಡೇನಲ್ಲಿ ಆಗುವುದು ಸಹಜ. ನೀವು ನಿಮ್ಮ ಪ್ರೇಮಿ ಅಥವಾ ಪ್ರೇಮ ನಿವೇದನೆ ಮಾಡಿಕೊಳ್ಳಬೇಕು ಎಂದು ಬಯಸುತ್ತಿರುವ ವ್ಯಕ್ತಿಯೊಂದಿಗೆ ಕಾಫಿ ಡೇಟ್‌ಗೆ ತೆರಳಬಹುದು. ಬಿಸಿ ಕಾಫಿ ಹೀರುತ್ತಾ ಮನದೊಳಗೆ ತಣ್ಣಗೆ ಕೊರೆಯುತ್ತಿರುವ ಭಾವನೆಗಳನ್ನು ವ್ಯಕ್ತಪಡಿಸಬಹುದು.
ಔಟ್‌ಡೋರ್ ಫೋಟೊಶೂಟ್
ಪ್ರೇಮಿಗಳ ದಿನ ಅವಿಸ್ಮರಣೀಯವಾಗಿರಬೇಕು ಅಂದ್ರೆ ಹೊಸ ಟ್ರೆಂಡ್ ಅನ್ನು ಫಾಲೋ ಮಾಡುವುದು ಕೂಡ ಮುಖ್ಯವಾಗುತ್ತದೆ. ಫೋಟೊಶೂಟ್ ಮಾಡಿಸುವುದು ಇತ್ತೀಚೆಗೆ ಹಲವರಿಗೆ ಅಚ್ಚುಮೆಚ್ಚು. ನೀವು ನಿಮ್ಮ ಸಂಗಾತಿಯೊಂದಿಗೆ ಫೋಟೊಶೂಟ್ ಮಾಡಿಸುವ ಮೂಲಕವೂ ದಿನ ಕಳೆಯಬಹುದು. ಇದು ಪ್ರೇಮ ನಿವೇದನೆಗೂ ಉತ್ತಮ ಹಾದಿ. ಪ್ರೇಮಿಗಳ ದಿನ ನಿಮ್ಮ ಫೋಟೊಗಳನ್ನು ಸಂಗ್ರಹಿಸಿ ವಾಲ್ ಆಫ್ ಫ್ರೇಮ್ ರಚಿಸಿ.
ಸಂಗೀತಕ್ಕೆ ಕಿವಿಯಾಲಿಸಿ
ಪ್ರೇಮಿಗಳ ದಿನದಂದು ಜೊತೆಯಾಗಿ ರೊಮ್ಯಾಂಟಿಕ್ ಕ್ಷಣಗಳಿಗೆ ಸಾಕ್ಷಿಯಾಗಬೇಕು ಎಂದರೆ ಸಂಗೀತಕ್ಕೆ ಕಿವಿಯಾಲಿಸಬಹುದು. ಇಬ್ಬರಿಗೂ ಇಷ್ಟವಾಗುವ ಹಾಡು ಕೇಳುವ ಮೂಲಕ ನಿಮ್ಮ ಏಕಾಂತ ಅನುಭೂತಿಯನ್ನು ಅನುಭವಿಸಬಹುದು. ಇದು ನಿಮ್ಮನ್ನು ಅದ್ಭುತ ಲೋಕಕ್ಕೆ ಕೊಂಡ್ಯೊಯುವುದರಲ್ಲಿ ಎರಡು ಮಾತಿಲ್ಲ.
ಸ್ವಯಂಸೇವಕರಾಗಿ
ಇದು ಇತ್ತೀಚಿನ ಟ್ರೆಂಡ್. ಮದುವೆ, ಎಂಗೇಜ್‌ಮೆಂಟ್‌ನಂತಹ ಸಮಯದಲ್ಲಿ ಗಂಡ-ಹೆಂಡತಿ ಅಥವಾ ಸಂಗಾತಿಗಳು ಸ್ವಯಂಸೇವೆ ಮಾಡುವ ಮೂಲಕ ಸುದ್ದಿಯಾಗುತ್ತಾರೆ. ನೀವು ಅಂತಹದ್ದನ್ನು ಮಾಡಬಹುದು. ಸಮುದ್ರ ತೀರವನ್ನ ಸ್ವಚ್ಛಗೊಳಿಸುವುದು, ರಸ್ತೆ ಬದಿ ಕಸ ಸ್ವಚ್ಛ ಮಾಡುವುದು, ಅನಾಥಶ್ರಮದಲ್ಲಿ ಒಂದು ದಿನ ಸಮಯ ಕಳೆಯುವುದು ಇಂತಹ ಹೊಸ ಅನುಭವಗಳಿಗೆ ಜೊತೆಯಾಗುವ ಮೂಲಕ ಕೂಡ ರೊಮ್ಯಾಂಟಿಕ್ ಕ್ಷಣವನ್ನು ಅನುಭವಿಸಬಹುದು.
ಪ್ರವಾಸ
ಪ್ರೇಮಿಗಳ ದಿನದಂದು ನಿಮ್ಮ ಸಮೀಪದಲ್ಲೇ ಇರುವ ಅದ್ಭುತ ತಾಣಕ್ಕೆ ಪ್ರವಾಸ ಆಯೋಜಿಸುವ ಮೂಲಕ ಸಂಗಾತಿಯೊಂದಿಗೆ ಕ್ವಾಲಿಟಿ ಟೈಮ್ ಕಳೆಯಬಹುದು. ಆ ಸುಂದರ ತಾಣದಲ್ಲಿ ಇಳಿಸಂಜೆಯ ಹೊತ್ತಿಗೆ ನಿಮ್ಮ ಸಂಗಾತಿಯ ಮುಂದೆ ನಿಮ್ಮ ಮನದ ಭಾವನೆಗಳನ್ನು ಹೇಳಿಕೊಳ್ಳಬಹುದು.
ಜೊತೆಯಾಗಿ ಅಡುಗೆ ಮಾಡಿ
ಜೊತೆಯಾಗಿ ಸಮಯ ಕಳೆಯಲು ಅಡುಗೆಮನೆಯಲ್ಲಿ ಜೊತೆ ಇರುವುದು ಕೂಡ ಮನಸ್ಸಿಗೆ ಖುಷಿ ನೀಡಬಹುದು. ನಿಮಗೆ ಕೆಲಸ ಒತ್ತಡದ ನಡುವೆ ಹೊರಗಡೆ ಹೋಗಲು ಸಮಯವಿಲ್ಲ ಎಂದಾದರೆ ಅಡುಗೆ ಮನೆಯೇ ನಿಮಗೆ ತಾಜ್‌ಮಹಲ್ ಆಗಬಹುದು. ಅಡುಗೆಮನೆಯಲ್ಲಿ ಇಬ್ಬರೂ ಜೊತೆಯಾಗಿ ನಿಮ್ಮಷ್ಟದ ಅಡುಗೆ ತಯಾರಿಸಿ. ನಂತರ ಜೊತೆಯಾಗಿ ಕುಳಿತು ಊಟ ಮಾಡಿ. ಪ್ರೇಮಿಗಳ ದಿನವನ್ನು ಅವಿಸ್ಮರಣೀಯವಾಗಿಸುವ ಮಾರ್ಗವಾಗಿದೆ.
ಈ ಬಾರಿ ಪ್ರೇಮಿಗಳ ದಿನ ಸೋಮವಾರ ಇರುವ ಕಾರಣ ಬಹುತೇಕರಿಗೆ ಹೊರಗಡೆ ಹೋಗಲು ಪ್ಲಾನ್ ಮಾಡುವುದು ಕಷ್ಟವಾಗಬಹುದು. ಆ ಕಾರಣಕ್ಕೆ ಸಾಧ್ಯವಾದಷ್ಟು ಮನೆ ಅಥವಾ ಕಚೇರಿ ಸಮೀಪದ ಸ್ಥಳಗಳಿಗೆ ಭೇಟಿ ನೀಡುವುದು, ಸಮೀಪದ ರೆಸ್ಟೋರೆಂಟ್ ಅಥವಾ ಥಿಯೇಟರ್‌ಗಳಿಗೆ ಭೇಟಿ ನೀಡುವ ಮೂಲಕ ಪ್ರೇಮಿಗಳ ದಿನದಂದು ಸಂಗಾತಿಯ ಜೊತೆ ರೊಮ್ಯಾಂಟಿಕ್ ಆಗಿ ಇರುವ ಜೊತೆಗೆ, ಆ ದಿನವನ್ನು ಅವಿಸ್ಮರಣೀಯವಾಗಿಸಿಕೊಳ್ಳಬಹುದು.
(This copy first appeared in Hindustan Times Kannada website. To read more like this please logon to kannada.hindustantime.com )
ವಿಭಾಗ