ಸಾದಾ ದೋಸೆ ರೆಸಿಪಿ; ಈ ಸರಳ ಹಂತ ಫಾಲೊ ಮಾಡಿದ್ರೆ ಮನೆಯಲ್ಲೇ ಹೋಟೆಲ್ ಶೈಲಿಯ ಪ್ಲೇನ್ ದೋಸೆ ರೆಡಿಯಾಗುತ್ತೆ
ನೂರಾರು ವಿಧದ ದೋಸೆಗಳಲ್ಲಿ ಸಾದಾ ದೋಸೆ ಅತ್ಯಂತ ಸರಳವಾಗಿ ಮಾಡಬಹುದಾದ ದೋಸೆ. ಪ್ಲೇನ್ ದೋಸೆ ಎಂದೇ ಜನಪ್ರಿಯವಾಗಿರುವ ಈ ದೋಸೆ ದಕ್ಷಿಣ ಭಾರತೀಯರ ಫೇವರೆಟ್. ಹುದುಗಿಸಿದ ಅಕ್ಕಿ ಹಾಗೂ ಉದ್ದಿನ ಬೇಳೆ ಹಿಟ್ಟಿನಿಂದ ಮಾಡುವ ಗರಿಗರಿ ಸಾದಾ ದೋಸೆ ರೆಸಿಪಿ ಇಲ್ಲಿದೆ ನೋಡಿ.
ಹೋಟೆಲ್‌ಗೆ ಹೋದಾಗ ಹೆಚ್ಚಾಗಿ ಮಸಾಲ ದೋಸೆ, ತುಪ್ಪ ದೋಸೆ, ಸಾದಾ ದೋಸೆ ಆರ್ಡರ್ ಮಾಡುತ್ತೇವೆ. ದಕ್ಷಿಣ ಭಾರತದಲ್ಲಂತೂ ದೋಸೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಬಹುತೇಕ ಮನೆಗಳಲ್ಲಿಯೂ ಪ್ರತಿನಿತ್ಯ ಭಿನ್ನ ವಿಭಿನ್ನ ದೋಸೆ ತಯಾರಿಸಲಾಗುತ್ತದೆ. ಇದರಲ್ಲಿ ಸುಲಭವಾಗಿ ಮಾಡಿ ರುಚಿಕರವಾಗಿ ಸವಿಯಬಹುದಾದ ಖಾದ್ಯವೇ ಸಾದಾ ದೋಸೆ. ಕೆಲವರು ಇಂಥಾ ದೋಸೆಗಳನ್ನು ಹೊರಗಡೆ ಹೋಟೆಲ್‌ನಲ್ಲಿ ಮಾತ್ರ ಸವಿದಿರುತ್ತಾರೆ. ಅದನ್ನು ಮನೆಯಲ್ಲೇ ಸರಳ ವಿಧಾನದಲ್ಲಿ ಮಾಡಿ ಸವಿಯಬಹುದು ಎಂಬ ಮಾಹಿತಿ ಅವರಲ್ಲಿ ಇರುವುದಿಲ್ಲ. ನೀವು ಕೂಡಾ ದೋಸೆ ಪ್ರಿಯರಾಗಿದ್ದರೆ, ಈ ಸಾದಾ ದೋಸೆ ರೆಸಿಪಿ ನಿಮಗಾಗಿ.
ನೂರಾರು ಬಗೆಯ ದೋಸೆಗಳನ್ನು ಮಾಡಬಹುದು. ಅವುಗಳಲ್ಲಿ ಸಾದಾ ದೋಸೆ ಅಥವಾ ಪ್ಲೇನ್ ದೋಸೆ ಅತ್ಯಂತ ಸರಳವಾದ ಹಾಗೂ ಬಹಳ ರುಚಿಕರವಾದ ದೋಸೆಯಾಗಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ ತಮಿಳುನಾಡಿನಲ್ಲಿ ದೋಸೆ ಹೆಚ್ಚು ಜನಪ್ರಿಯ. ಈ ದೋಸೆ ಹಿಟ್ಟು ತಯಾರಿಸಲು ಕೂಡಾ ಹೆಚ್ಚು ಸಮಯ ಹಾಗೂ ಪದಾರ್ಥಗಳು ಬೇಕಿಲ್ಲ. ಮನೆಯಲ್ಲಿರುವ ಪದಾರ್ಥಗಳಿಂದಲೂ ಮಾಡಿ ಸವಿಯಬಹುದು.
ಸಾದಾ ದೋಸೆ ಅಥವಾ ಪ್ಲೇನ್ ದೋಸೆ ನೋಡಲು ತೀರಾ ತೆಳುವಾಗಿರುತ್ತದೆ. ಕೈಯಿಂದ ತೆಗೆದು ಬಾಯಿಗಿಟ್ಟಾಗ ಗರಿಗರಿ ಅನುಭವ ಸಿಗುತ್ತದೆ. ಬಾಯಿಗಿಡುತ್ತಿದ್ದಂತೆ ಕರಗುತ್ತದೆ. ಇದನ್ನು ಹುದುಗಿಸಿದ ಅಕ್ಕಿ ಮತ್ತು ಉದ್ದಿನ ಬೇಳೆ ರುಬ್ಬಿ ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಂಬಾರ್ ಅತ್ಯುತ್ತಮ ಕಾಂಬಿನೇಶನ್.
ಸಾದಾ ದೋಸೆಗೆ ಬೇಕಾಗುವ ಪದಾರ್ಥಗಳು
- ಅಕ್ಕಿ -1 ಕಪ್
- ಉದ್ದಿನ ಬೇಳೆ -1/4 ಕಪ್
- ದಪ್ಪ ಅವಲಕ್ಕಿ - 2 ಚಮಚ
- ಎಣ್ಣೆ ಅಥವಾ ತುಪ್ಪ
- ಉಪ್ಪು
ಹಿಟ್ಟಿನ ಸಿದ್ಧತೆ ಮತ್ತು ಹುದುಗಿಸುವಿಕೆ
ಅಕ್ಕಿ, ಉದ್ದಿನಬೇಳೆ ಮತ್ತು ದಪ್ಪ ಅವಲಕ್ಕಿಯನ್ನು ಚೆನ್ನಾಗಿ ತೊಳೆದು, ಅವುಗಳನ್ನು ಸುಮಾರು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಆ ಬಳಿಕ ಈ ಮೂರೂ ಪದಾರ್ಥಗಳನ್ನು ರುಬ್ಬಿಕೊಳ್ಳಿ. ಈ ಹಿಟ್ಟು ತೆಳುವಾಗಬಾರದು. ಹಿಟ್ಟು ಸಾಮಾನ್ಯವಾಗಿ ಪ್ಯಾನ್‌ಕೇಕ್ ಮಾಡುವ ಹಿಟ್ಟಿನಂತೆ ಇರಬೇಕು. ರುಬ್ಬುವ ಸಮಯದಲ್ಲಿ ಉಪ್ಪು ಸೇರಿಸುವುದು ಬೇಡ.
ಸಾದಾ ದೋಸೆಗೆ ಹಿಟ್ಟನ್ನು ಹುದುಗಿಸುವ ಪ್ರಕ್ರಿಯೆ ತುಂಬಾ ಮುಖ್ಯ. ಹಿಟ್ಟನ್ನು ಪಾತ್ರೆಯೊಂದರಲ್ಲಿ ಹಾಕಿ ಅದನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ. ಕನಿಷ್ಠ 8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಲು ಬೆಚ್ಚಗಿನ ಸ್ಥಳದಲ್ಲಿ ಬಿಡಿ. ಫ್ರಿಡ್ಜ್‌ನಲ್ಲಿ ಹಿಟ್ಟನ್ನು ಇಡುವುದು ಬೇಡ. ಈ ಹುದುಗುವಿಕೆಯ ಪ್ರಕ್ರಿಯೆಯು ದೋಸೆಗೆ ವಿಶಿಷ್ಟ ರುಚಿ ತಂದುಕೊಡುತ್ತದೆ.
ಸಾದಾ ದೋಸೆ ಮಾಡುವ ವಿಧಾನ
ಬೆಳಗ್ಗೆ ಹಿಟ್ಟನ್ನು ತೆಗೆದುಕೊಂಡು ಒಮ್ಮೆ ಕಲಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಾನ್-ಸ್ಟಿಕ್ ತವಾ ಅಥವಾ ದೋಸೆ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಅಥವಾ ತುಪ್ಪವನ್ನು ಕಾವಲಿಗೆ ಹರಡಿ. ತವಾ ಮಧ್ಯಭಾಗಕ್ಕೆ ಹಿಟ್ಟನ್ನು ಒಂದು ಚಮಚದಷ್ಟು ಸುರಿಯಿರಿ. ಮಧ್ಯದಿಂದ ಬದಿಯವರೆಗೂ ವೃತ್ತಾಕಾರದಲ್ಲಿ ಹಿಟ್ಟನ್ನು ತೆಳುವಾಗಿ ಹರಡಿ. ದೋಸೆಯ ಅಂಚುಗಳ ಸುತ್ತಲೂ ತುಪ್ಪವನ್ನು ಸವರಿ. ದೋಸೆ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ದೋಸೆಯ ಮತ್ತೊಂದು ಬದಿಯನ್ನು ಕೂಡಾ ಕೆಲಕಾಲ ಬೇಯಿಸಿ. ಈಗ ನಿಮ್ಮ ಇಷ್ಟದ ಸಾದಾ ದೋಸೆ ಸವಿಯಲು ಸಿದ್ದ. ಇದನ್ನು ಚಟ್ನಿ ಜೊತೆಗೆ ಸವಿಯಲು ತುಂಬಾ ರುಚಿಕರ.
ಇನ್ನಷ್ಟು ರೆಸಿಪಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ | ಉಪ್ಪಿಟ್ಟಿನಿಂದ ಕಟ್ಲೆಟ್ವರೆಗೆ; ಜೋಳದಿಂದ ತಯಾರಿಸುವ ರುಚಿಕರ ಖಾದ್ಯಗಳಿವು; ಡಯೆಟ್ ಮಾಡುವವರಿಗೂ ಹೇಳಿ ಮಾಡಿಸಿದ ತಿನಿಸುಗಳು
ವಿಭಾಗ