Papaya: ಪರಂಗಿ ಹಣ್ಣು ತಿಂದರೆ ಗರ್ಭಪಾತ ಆಗುವುದು ನಿಜವೇ? ಗರ್ಭಿಣಿಯರು ಎಷ್ಟು ಪ್ರಮಾಣದಲ್ಲಿ ಪಪ್ಪಾಯಿ ತಿನ್ನಬೇಕು?
ಸಾಮಾನ್ಯವಾಗಿ ಗರ್ಭಿಣಿಯರು ಎಲ್ಲಾ ಹಣ್ಣುಗಳನ್ನು ತಿನ್ನಬೇಕು ಎಂದು ಹಲವರು ಹೇಳುತ್ತಾರೆ. ಆದರೆ, ಹಿರಿಯರು ಮಾತ್ರ ಪಪ್ಪಾಯಿ ತಿನ್ನಬೇಡಿ ಎನ್ನುತ್ತಾರೆ. ಇದನ್ನು ತಿನ್ನುವುದರಿಂದ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪಪ್ಪಾಯಿ ತಿನ್ನುವುದರಿಂದ ಗರ್ಭಪಾತವಾಗುತ್ತದೆಯೇ? ಈ ಬಗ್ಗೆ ವೈದ್ಯಕೀಯ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ಪರಂಗಿ ಹಣ್ಣು ಅಥವಾ ಪಪ್ಪಾಯಿ ಎಲ್ಲಾ ಸೀಸನ್‌ಗಳಲ್ಲೂ ಯಥೇಚ್ಛವಾಗಿ ಸಿಗುವ ಹಣ್ಣು. ಇದರಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳಿವೆ. ಪ್ರತಿಯೊಬ್ಬರ ದೇಹಕ್ಕೂ ಪೋಷಕಾಂಶಗಳು ತುಂಬಾ ಮುಖ್ಯ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಯುತ ಆಹಾರ ಸೇವನೆ ತುಂಬಾ ಅಗತ್ಯ. ಅಂತಹ ಸಮಯದಲ್ಲಿ ಯಾವ ರೀತಿಯ ಆಹಾರವನ್ನು ತೆಗೆದುಕೊಳ್ಳಬೇಕು? ಏನು ತಿನ್ನಬೇಕು ಮತ್ತು ಯಾವುದು ತಿನ್ನಬಾರದು ಎಂಬುದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ಬಗ್ಗೆ ನಿಮ್ಮ ಗೊಂದಲಗಳಿಗೆ ಇಲ್ಲಿ ಉತ್ತರ ಕೊಡುತ್ತೇವೆ ನೋಡಿ.
ಸಾಮಾನ್ಯವಾಗಿ ಗರ್ಭಿಣಿಯರು ಎಲ್ಲಾ ಹಣ್ಣುಗಳನ್ನು ತಿನ್ನಬೇಕು ಎಂದು ಹಲವರು ಹೇಳುತ್ತಾರೆ. ಆದರೆ, ಹಿರಿಯರು ಮಾತ್ರ ಪಪ್ಪಾಯಿ ತಿನ್ನಬೇಡಿ ಎನ್ನುತ್ತಾರೆ. ಇದನ್ನು ತಿನ್ನುವುದರಿಂದ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪಪ್ಪಾಯಿ ತಿನ್ನುವುದರಿಂದ ಗರ್ಭಪಾತವಾಗುತ್ತದೆಯೇ? ಈ ಬಗ್ಗೆ ವೈದ್ಯಕೀಯ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ಪರಂಗಿ ಕಾಯಿಯಲ್ಲ ಪರಂಗಿ ಹಣ್ಣು ತಿನ್ನಿ
ಪರಂಗಿ ಹಣ್ಣಿನಲ್ಲಿ ಪೋಷಕಾಂಶಗಳು, ಖನಿಜಗಳು, ಜೀವಸತ್ವಗಳು ಮತ್ತು ನೀರು ಹೇರಳವಾಗಿವೆ. ಆದರೆ ಪರಂಗಿ ಹಣ್ಣಿಗಿಂತ ಪರಂಗಿ ಕಾಯಿ ಅಥವಾ ಹಣ್ಣಾಗದ ಪರಂಗಿಯಲ್ಲಿ ಪ್ಯಾಪೈನ್ ಎಂಬ ರಾಸಾಯನಿಕ ಅಂಶ ಇದೆ. ಹೀಗಾಗಿ ಗರ್ಭಿಣಿಯರು ಇದನ್ನು ಸೇವಿಸಿದರೆ, ಗರ್ಭಕೋಶದಲ್ಲಿ ಮಗುವಿನ ಸುತ್ತಲಿನ ಪೊರೆಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಗರ್ಭಪಾತ ಮತ್ತು ಅಕಾಲಿಕ ಹೆರಿಗೆಯ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಪರಂಗಿ ಕಾಯಿಯನ್ನು ತಿನ್ನದಿರುವುದು ಉತ್ತಮ.
ಇದರಲ್ಲಿರುವ ರಾಸಾಯನಿಕ ಅಂಶದಿಂದ ಅಲರ್ಜಿಯಾಗುವ ಸಾಧ್ಯತೆಯೂ ಹೆಚ್ಚು. ಸಾಂದರ್ಭಿಕ ಉಸಿರಾಟದ ತೊಂದರೆಗಳ ಅಪಾಯವಿದೆ ಎಂದು ಪೌಷ್ಟಿಕತಜ್ಞರು ಎಚ್ಚರಿಸುತ್ತಾರೆ. ಇನ್ನೊಂದೆಡೆ ಮಾಗಿದ ಅಥವಾ ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಗರ್ಭಾವಸ್ಥೆಯಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಪರಂಗಿ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಗರ್ಭಾಶಯದ ಮೇಲೆ ಒತ್ತಡ ಉಂಟಾಗಿ ಗರ್ಭಪಾತವಾಗುವ ಸಂಭವವಿದೆ. ಆದರೆ ಹಣ್ಣಾದ ಪಪ್ಪಾಯಿಯಲ್ಲಿ ಫೋಲೇಟ್, ಫೈಬರ್, ಕೋಲೀನ್, ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದರಲ್ಲಿ ಬೀಟಾ ಕ್ಯಾರೋಟಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಗರ್ಭಿಣಿಯರಿಗೆ ಅಗತ್ಯವಾದ ವಿಟಮಿನ್‌ಗಳಿವೆ. ಆದರೆ ಮುಂಜಾಗ್ರತಾ ಕ್ರಮವಾಗಿ ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಮಾಗಿದ ಪಪ್ಪಾಯಿಯನ್ನು ತೆಗೆದುಕೊಳ್ಳದಿರುವುದೇ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಪರಂಗಿ ಹಣ್ಣಿನ ಪ್ರಯೋಜನಗಳು
ಮಾಗಿದ ಪಪ್ಪಾಯಿಯಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ಮಗುವಿನ ನರಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವುದರೊಂದಿಗೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀವಸತ್ವಗಳು ಸಮೃದ್ಧವಾಗಿರುವ ಕಾರಣ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಗರ್ಭಾವಸ್ಥೆಯಲ್ಲಿ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಈ ಹಣ್ಣು ಉತ್ತಮ ಆಹಾರ. ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಣಂತಿಯರು ಇದನ್ನು ಸೇವಿಸುವುದರಿಂದ ತಾಯಿಯ ಹಾಲಿನ ಉತ್ಪಾದನೆ ಹೆಚ್ಚುತ್ತದೆ.
ಎಷ್ಟು ತಿನ್ನಬೇಕು?
ಗರ್ಭಿಣಿಯರು ವಾರಕ್ಕೆ ಎರಡು ಅಥವಾ ಮೂರು ಬಾರಿ ಒಂದು ಕಪ್ ಅಥವಾ 100 ಗ್ರಾಂನಷ್ಟು ಪರಂಗಿ ಹಣ್ಣನ್ನು ತಿನ್ನಬಹುದು. ಆದರೆ ಮಲಗುವ ಮುನ್ನ ಇದನ್ನು ತೆಗೆದುಕೊಳ್ಳಬಾರದು. ಇದರಿಂದ ಅಜೀರ್ಣವಾಗುವ ಸಾಧ್ಯತೆ ಇದೆ. ಮಾಗಿದ ಪಪ್ಪಾಯಿಯನ್ನು ಹೆರಿಗೆಯ ನಂತರವೂ ಸೇವಿಸಬಹುದು. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು, ಹಾಲಿನ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಮೊದಲೇ ಹೇಳಿದಂತೆ ಸೂಕ್ತ ಪ್ರಮಾಣದಲ್ಲಿ ಪರಂಗಿ ಹಣ್ಣನ್ನು ಗರ್ಭಿಣಿಯರು ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಇದನ್ನು ತಿನ್ನದಿರುವುದೇ ಒಳ್ಳೆಯದು. ಒಂದು ವೇಳೆ ಈ ಹಣ್ಣನ್ನು ತಿನ್ನುವ ಬಗ್ಗೆ ನಿಮಗೆ ಇನ್ನೂ ಗೊಂದಲವಿದ್ದರೆ, ನಿಮ್ಮ ವೈದ್ಯರ ಸಲಹೆಯ ಮೇರೆಗೆ ಸೇವಿಸಿ.