Bihar Mid-Day Meal: ಶಾಲಾ ಬಿಸಿಯೂಟದಲ್ಲಿ ಸತ್ತು ಬಿದ್ದಿತ್ತು ಹಾವು; 100ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥ
Snake in Mid Day Meal: "ಮಧ್ಯಾಹ್ನದ ಊಟ ಬಡಿಸುವಾಗ ವಿದ್ಯಾರ್ಥಿಯೊಬ್ಬ ಸತ್ತ ಹಾವನ್ನು ನೋಡಿ ಕಿರುಚಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಸುಮಾರು 100 ಮಕ್ಕಳು ಊಟವನ್ನು ಸೇವಿಸಿದ್ದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಾರಿಯಾ (ಬಿಹಾರ): ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿದ ಬಳಿಕ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ. ಗಾಬರಿಪಡುವ ವಿಷಯವೇನೆಂದರೆ ಬಿಸಿಯೂಟದಲ್ಲಿ ಹಾವು ಸತ್ತು ಬಿದ್ದಿತ್ತು.
ಅರಾರಿಯಾ ಜಿಲ್ಲೆಯ ಜೋಗಬಾನಿ ನಗರ ಪರಿಷತ್ನ ಅಮೌನಾ ಮಿಡ್ಲ್ ಸ್ಕೂಲ್ ವಾರ್ಡ್ ನಂ. 21 ರಲ್ಲಿ ಇಂದು ( ಮೇ 27, ಶನಿವಾರ) ಘಟನೆ ನಡೆದಿದೆ. ಘಟನೆಯ ಕುರಿತು ಮಾತನಾಡಿದ ಅಧಿಕಾರಿಗಳು, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
"ಮಧ್ಯಾಹ್ನದ ಊಟವನ್ನು ಸೇವಿಸಿದ ಶಾಲೆಯ ಎಲ್ಲಾ ಮಕ್ಕಳನ್ನು ಫೋರ್ಬ್ಸ್‌ಗಂಜ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅದೃಷ್ಟವಶಾತ್ ಎಲ್ಲರೂ ಸುರಕ್ಷಿತವಾಗಿದ್ದಾರೆ" ಎಂದು ಅರಾರಿಯಾ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ರಾಜ್‌ಕುಮಾರ್ ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದ್ದಾರೆ.
ಶಾಲೆಗೆ ಎನ್‌ಜಿಒ ಒಂದು ಮಧ್ಯಾಹ್ನದ ಊಟವನ್ನು ಪೂರೈಸುತ್ತಿತ್ತು. ಅವರು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ಅವರ ತಪ್ಪು ಕಂಡುಬಂದಲ್ಲಿ ಎನ್‌ಜಿಒಪರವಾನಗಿಯನ್ನು ರದ್ದುಗೊಳಿಸಲಾಗುವುದು. ಎನ್‌ಜಿಒದ ಪ್ರಾಥಮಿಕ ನಿರ್ಲಕ್ಷ್ಯವು ಸ್ಪಷ್ಟವಾಗಿದೆ ಎಂದು ಡಿಇಒ ಹೇಳಿದ್ದಾರೆ.
"ಮಧ್ಯಾಹ್ನದ ಊಟ ಬಡಿಸುವಾಗ ವಿದ್ಯಾರ್ಥಿಯೊಬ್ಬ ಸತ್ತ ಹಾವನ್ನು ನೋಡಿ ಕಿರುಚಿದ್ದಾನೆ. ಆದರೆ, ಅಷ್ಟರಲ್ಲಾಗಲೇ ಸುಮಾರು 100 ಮಕ್ಕಳು ಊಟವನ್ನು ಸೇವಿಸಿದ್ದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಡಿಇಒ ಆಸ್ಪತ್ರೆಗೆ ಆಗಮಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಶಾಲೆಗೆ ಭೇಟಿ ನೀಡಿ ಶಿಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಚರ್ಚೆ ಮಾಡಿದ್ದಾರೆ.
"ಮಧ್ಯಾಹ್ನದ ಊಟದ ಗುಣಮಟ್ಟದ ಬಗ್ಗೆ ಎನ್‌ಜಿಒಗೆ ಹಲವು ಬಾರಿ ದೂರು ನೀಡಿದ್ದರೂ ಅವರು ಗಮನ ಹರಿಸಿಲ್ಲ" ಎಂದು ಶಾಲಾ ಶಿಕ್ಷಕರು ಆರೋಪಿಸಿದ್ದಾರೆ. "ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಹೇಗೆ ಕಂಡುಬಂದಿದೆ ಎಂಬುದು ನಮಗೆ ತಿಳಿದಿಲ್ಲ" ಎಂದು ಹೆಸರು ಹೇಳಲು ಇಚ್ಛಿಸದ ಎನ್‌ಜಿಒ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶಿಕ್ಷಕರೊಬ್ಬರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿರುವ (teacher chops students hair) ಘಟನೆ ಅಸ್ಸಾಂನ ಮಜುಲಿ ಜಿಲ್ಲೆಯ ಶಾಲೆಯೊಂದರಲ್ಲಿ ಗುರುವಾರ (ಮೇ 25) ಬೆಳಗ್ಗೆ ಪ್ರಾರ್ಥನೆ ಸಮಯದಲ್ಲಿ ನಡೆದಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ