ಡಿಜಿಟಲ್ ಜಾಗೃತಿ: ಈ ಲಿಂಕ್‌ನಲ್ಲಿ ಏನೋ ಇದೆ! ಲಿಂಕ್ ಕ್ಲಿಕ್ಕಿಸಿ ಹಣ ಕಳೆದುಕೊಳ್ಳಬೇಡಿ, ಅನುಮಾನಾಸ್ಪದ ಲಿಂಕ್‌ಗಳನ್ನು ಹೀಗೆ ಗುರುತಿಸಿ
Digital Scam Awareness: ವಾಟ್ಸ್ಆ್ಯಪ್, ಫೇಸ್‌ಬುಕ್, ಟೆಲಿಗ್ರಾಂ ಇತ್ಯಾದಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಸಾಕಷ್ಟು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಅನುಮಾನಾಸ್ಪದ ಲಿಂಕ್‌ಗಳನ್ನು ಗುರುತಿಸುವುದು ಹೇಗೆ? ಎಂಬ ವಿವರವನ್ನು ಎಚ್‌ಟಿ ಕನ್ನಡ ಡಿಜಿಟಲ್ ಜಾಗೃತಿ ಮಾಲಿಕೆಯ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
Digital Scam Awareness: ಪ್ರತಿನಿತ್ಯ ಹಲವು ಜನರು ಡಿಜಿಟಲ್ ವಂಚಕರಿಂದ ಹಣ ಕಳೆದುಕೊಂಡ ಸುದ್ದಿಗಳು ಹೆಚ್ಚುತ್ತಿದೆ. ಹೆಚ್ಚಿನ ವಂಚನೆಗಳಲ್ಲಿ "ಯಾವುದೋ ಲಿಂಕ್ ಕ್ಲಿಕ್ ಮಾಡಿದೆ. ಹಣ ಕಳೆದುಕೊಂಡೆ" ಎಂದು ಹಣ ಕಳೆದುಕೊಂಡವರು ಹೇಳುವುದು ಸಾಮಾನ್ಯ. ಇದೇ ಕಾರಣಕ್ಕೆ ವಾಟ್ಸ್ಆ್ಯಪ್, ಟೆಲಿಗ್ರಾಂ, ಇಮೇಲ್, ಫೇಸ್‌ಬುಕ್ ಸೇರಿದಂತೆ ಯಾವುದೇ ಕಡೆಗಳಲ್ಲಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಾಟ್ಸ್ಆ್ಯಪ್ ಇತ್ಯಾದಿಗಳಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು "ಅನುಮಾನದಿಂದ" ನೋಡುವ ಅಭ್ಯಾಸ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಯಾವುದೋ ಸಮಯದಲ್ಲಿ ಮೈಮರೆತು ಮಾಡುವ ಒಂದು ಕ್ಲಿಕ್ ನಮಗೆ ದೊಡ್ಡ ಏಟು ನೀಡಬಹುದು. ಆನ್‌ಲೈನ್ ವಂಚಕರು ನಾನಾ ಬಗೆಯಲ್ಲಿ ಜನರಿಗೆ ತಿಳಿಯದಂತೆ ಇಂತಹ ಲಿಂಕ್‌ಗಳ ಮೂಲಕ ಮಾಲ್‌ವೇರ್‌ಗಳನ್ನು ಕಳುಹಿಸುತ್ತಾರೆ. ಎಚ್‌ಟಿ ಕನ್ನಡದ ಡಿಜಿಟಲ್ ಜಾಗೃತಿ ಮಾಲಿಕೆಯಲ್ಲಿ ಇಂದು "ಡಿಜಿಟಲ್ ವಂಚಕರು ಕಳುಹಿಸುವ ಲಿಂಕ್"ಗಳ ಕುರಿತು ಮತ್ತು ಅಂತಹ ಲಿಂಕ್‌ಗಳನ್ನು ಹೇಗೆ ಗುರುತಿಸಬಹುದು ಎಂದು ತಿಳಿದುಕೊಳ್ಳೋಣ.
ಲಿಂಕ್ ಕ್ಲಿಕ್ಕಿಸಿ ಹಣ ಕಳೆದುಕೊಂಡವರ ಕಥೆಗಳು
- ತಾಳಿಕೋಟೆಯ ಶಿಕ್ಷಕರೊಬ್ಬರು ತಮಗೆ ಬಂದ ನಕಲಿ ಬ್ಯಾಂಕ್ ಸಂದೇಶವನ್ನು ನಿಜವೆಂದು ತಿಳಿದು ಅದನ್ನು ಕ್ಲಿಕ್ಕಿಸಿದರು. ಈ ರೀತಿ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ಮಾಹಿತಿ ಅಪ್‌ಡೇಟ್‌ಗಾಗಿ ಪಾನ್‌ಕಾರ್ಡ್ ಮತ್ತು ಆಧಾರ್ ಸಂಖ್ಯೆ ನಮೂದಿಸಲು ತಿಳಿಸಲಾಗಿದೆ. ಈಗಿನ ಕೆವೈಸಿ ಕಾಲದಲ್ಲಿ ಇದು ಅಂತಹದ್ದೇ ಉದ್ದೇಶಕ್ಕೆ ಇರಬಹುದೆಂದು ಆ ಶಿಕ್ಷಕರು ನಮೂದಿಸಿದ್ದಾರೆ. ಕೆಲವೇ ಕ್ಷಣದಲ್ಲಿ ಹಂತಹಂತವಾಗಿ ಅವರ ಖಾತೆಯಿಂದ 39 ಸಾವಿರ ರೂಪಾಯಿ ಕಡಿತವಾಗಿದೆ.
- ಉಡುಪಿಯ ವ್ಯಕ್ತಿಯೊಬ್ಬರಿಗೆ ಆಗುಂತಕನೊಬ್ಬ ಲಿಂಕ್ ಕಳುಹಿಸಿ ಪಾನ್ ಕಾರ್ಡ್ ಅಪ್‌ಡೇಟ್ ಮಾಡಲು ತಿಳಿಸಿದ. ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಬಂದ ಲಿಂಕ್ ಎಂದು ತಿಳಿದು ಸುಧಾಕರ್ ಕಾಂಚನ್ ಎಂಬವರು ಪ್ಯಾನ್ ಕಾರ್ಡ್ ಮಾಹಿತಿ ಅಪ್‌ಡೇಟ್ ಮಾಡಿದ್ದಾರೆ. ಇವರ ಖಾತೆಯಿಂದ ಹಂತಹಂತವಾಗಿ 1 ಲಕ್ಷ ರೂಪಾಯಿ ಕಡಿತವಾಗಿದೆ.
- ಷೇರುಪೇಟೆಯಲ್ಲಿ ಹಣ ಗಳಿಸಲು ಸಲಹೆ ನೀಡುವ ಗ್ರೂಪ್‌ವೊಂದಕ್ಕೆ ನವೀನ್ ಎಂಬವರನ್ನು ಆಗುಂತಕರು ಸೇರಿದ್ದರು. ಆ ಗ್ರೂಪ್‌ನಲ್ಲಿ ಪ್ರತಿದಿನ ಷೇರುಪೇಟೆಯ ಕುರಿತು ಮಾಹಿತಿ ದೊರಕುತ್ತಿತ್ತು. ಕೆಲವು ದಿನಗಳ ಬಳಿಕ "ಇನ್ನಷ್ಟು ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್‌ಗೆ ಸೇರಿ" ಎಂದು ಇವರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದರು. ಟೆಲಿಗ್ರಾಂ ಗ್ರೂಪ್‌ನಲ್ಲಿ ಅವರು ನೀಡಿರುವ ಲಿಂಕ್ ಕ್ಲಿಕ್ಕಿಸಿ ಹಲವು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಇವು ಕೆಲವು ಸ್ಯಾಂಪಲ್ ಅಷ್ಟೇ, ಕೆಲವು ಸಾವಿರ ರೂಪಾಯಿಯಿಂದ ಹಲವು ಕೋಟಿ ರೂಪಾಯಿಗಳವರೆಗೆ ಲಿಂಕ್ ಕ್ಲಿಕ್ಕಿಸಿ ಕಳೆದುಕೊಂಡವರ ಕಥೆಗಳು ನಿತ್ಯ ಸುದ್ದಿಯಾಗುತ್ತವೆ. ಈ ರೀತಿ ಹಣ ಕಳೆದುಕೊಂಡವರಲ್ಲಿ ಕೆಲವರಷ್ಟೇ ತಮ್ಮ ಹಣವನ್ನು ವಾಪಸ್ ಪಡೆಯಲು ಶಕ್ತರಾಗುತ್ತಾರೆ. ಹೆಚ್ಚಿನವರ ಹಣ ವಾಪಸ್ ಬರುವುದೇ ಇಲ್ಲ. ಆನ್‌ಲೈನ್ ವಂಚಕರು ಅಷ್ಟೊಂದು ವ್ಯವಸ್ಥಿತವಾಗಿ, ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಕಾರಣ.
ಲಿಂಕ್‌ಗಳನ್ನು ಅನುಮಾನದಿಂದ ನೋಡಿ
ಮೊದಲು ಸ್ಪಿನ್ ಆಂಡ್ ವಿನ್ ಹೆಸರಿನಲ್ಲಿ ವಾಟ್ಸ್ಆ್ಯಪ್‌ನಲ್ಲಿ ಲಿಂಕ್‌ಗಳು ಬರುತ್ತಿದ್ದವು. ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್ ಲಿಂಕ್‌ನಂತೆ ಕಾಣಿಸುವ ಲಿಂಕ್‌ನಿಂದ ಆಪಲ್ ಐಫೋನ್ ಗೆಲ್ಲಿ ಎಂಬ ಲಿಂಕ್ ಬರುತ್ತಿದ್ದವು. ಈಗ ನಾನಾ ಬಗೆಯಲ್ಲಿ ಜನರಿಗೆ ಲಿಂಕ್ ಕಳುಹಿಸಲಾಗುತ್ತದೆ. "ಮದುವೆ ಆಮಂತ್ರಣ ಪತ್ರವನ್ನು ವಾಟ್ಸಪ್ ಮೂಲಕ ಕಳುಹಿಸುವ ಹೊಸ ಬಗೆಯ ಆನ್‌ಲೈನ್ ವಂಚನೆ ಕುರಿತು ಬೆಂಗಳೂರು ನಗರ ಪೊಲೀಸರು ಇತ್ತೀಚೆಗೆ ಎಚ್ಚರಿಸಿದ್ದರು. ಈ ಕುರಿತು ಮಾರತ್ತಹಳ್ಳಿಯ ಎಸಿಪಿ ಡಾ. ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ ಉಪಯುಕ್ತ ಮಾಹಿತಿ ನೀಡಿದ್ದರು. ಮದುವೆ ಆಮಂತ್ರಣ ಪತ್ರ ಕಳುಹಿಸುವ ಮೂಲಕ ಹೇಗೆ ವಂಚನೆ ಮಾಡಲಾಗುತ್ತದೆ? ಎಂಬ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
ಅನುಮಾನಸ್ಪದ ಲಿಂಕ್‌ಗಳನ್ನು ಗುರುತಿಸುವುದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು.
- ವಂಚಕರು ಕಳುಹಿಸುವ ಸಂದೇಶಗಳಲ್ಲಿ ಕಾಗುಣಿತ ಅಥವಾ ವ್ಯಾಕರಣ ದೋಷ ಇರಬಹುದು.
- ಈ ಲಿಂಕ್ ಟ್ಯಾಪ್ ಮಾಡಿ, ಇದರಿಂದ ನಿಮಗೆ ಹೊಸ ಫೀಚರ್ ದೊರಕಲಿದೆ ಅಥವಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಪುಸಲಾಯಿಸುವ ಸಂದೇಶ ಬರಬಹುದು.
- ಯೂಟ್ಯೂಬ್ ಎಡಿಟಿಂಗ್ ಸಾಫ್ಟ್‌ವೇರ್, ಬರ್ತ್‌ಡೇ ವಿಡಿಯೋ ಮೇಕರ್, ಫೋಟೋ ಎಡಿಟರ್ ಸಾಫ್ಟ್‌ವೇರ್ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ ಎಂಬ ಲಿಂಕ್ ಬರಬಹುದು.
- ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ, ಜನ್ಮಾದಿನಾಂಕ ಅಥವಾ ಪಾಸ್‌ವರ್ಡ್ ನಮೂದಿಸಿ ಎಂದು ಈ ಲಿಂಕ್‌ಗಳಲ್ಲಿ ಕೇಳಬಹುದು. ದಯವಿಟ್ಟು ನೀಡಬೇಡಿ.
- ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಒಟಿಪಿ ಬರಬಹುದು. ಒಟಿಪಿ ನಮೂದಿಸುವಂತೆ ತಿಳಿಸಬಹುದು. ನಮೂದಿಸಬೇಡಿ.
- ಈ ಸಂದೇಶವನ್ನು ಹತ್ತು ಜನರಿಗೆ ಶೇರ್ ಮಾಡಿದರೆ ಗಿಫ್ಟ್ ದೊರಕುತ್ತದೆ ಎಂಬ ಸಂದೇಶ ಮತ್ತು ಲಿಂಕ್ ಬರಬಹುದು.
- ಜಾಹೀರಾತು ನೋಡುತ್ತ, ವಿಡಿಯೋ ನೋಡುತ್ತ ಹಣ ಗಳಿಸಿ ಎಂಬ ಲಿಂಕ್ ಬರಬಹುದು.
- ನಿಮ್ಮ ಪರಿಚಿತರು ಎಂದು ಬಿಂಬಿಸುವಂತೆ ಅಪರಿಚಿತರು ಸಂದೇಶ ಕಳುಹಿಸಬಹುದು.
- ಲಾಟರಿ, ಗ್ಯಾಂಬ್ಲಿಂಗ್, ಜಾಬ್, ವರ್ಕ್ ಫ್ರಮ್ ಹೋಮ್, ಹೂಡಿಕೆ, ಸಾಲಕ್ಕೆ ಸಂಬಂಧಪಟ್ಟ ಸಂದೇಶಗಳು ಬರಬಹುದು.
- ಚಂದದ ಹುಡುಗಿಯ ಪ್ರೊಫೈಲ್ ಫೋಟೋ ಇರುವ ಅಪರಿಚಿತ ನಂಬರ್‌ನಿಂದ ಹಾಯ್ ಹಾಯ್ ಎಂದು ಸಂದೇಶ ಬರಲು ಆರಂಭವಾಗಬಹುದು.
- ಅಪರಿಚಿತ ವ್ಯಕ್ತಿಯಿಂದ ಅಶ್ಲೀಲ ವಿಡಿಯೋದಂತೆ ಕಾಣಿಸುವ ಲಿಂಕ್ ಅಥವಾ ಫೈಲ್ ಬರಬಹುದು.
- ಅಪರಿಚಿತ ವ್ಯಕ್ತಿಗಳು ಆನ್‌ಲೈನ್‌ನಲ್ಲಿ ನಿಮ್ಮ ನಂಬಿಕೆ ಗಳಿಸಲು ಸಾಕಷ್ಟು ಪ್ರಯತ್ನಿಸಿ ಬಳಿಕ ವಂಚನೆ ಮಾಡಬಹುದು. ಒಂದಿಷ್ಟು ದಿನ ಒಳ್ಳೆಯವರಂತೆ ನಟಿಸಬಹುದು.
- ನಿಮ್ಮ ಕಾಂಟ್ಯಾಕ್ಟ್‌ನಲ್ಲಿ ಇಲ್ಲದ ವ್ಯಕ್ತಿಯಿಂದ ಸಂದೇಶ ಬಂದರೆ ತಕ್ಷಣ ಅಲರ್ಟ್ ಆಗಿ.
- ಬೇರೆ ದೇಶಗಳ ಕೋಡ್ ಇರುವ ಮೊಬೈಲ್ ಸಂಖ್ಯೆಗಳನ್ನು ನಂಬಲೇಬೇಡಿ.
- ಯಾವುದಾದರೂ ಎಪಿಕೆಯಂತಹ ಫೈಲ್‌ಗಳು ಬಂದರೆ ಡೌನ್‌ಲೋಡ್ ಮಾಡಬೇಡಿ. ಇವೆಲ್ಲವನ್ನೂ ಅನುಮಾನಸ್ಪದ ಲಿಂಕ್‌ಗಳೆಂದು ತಿಳಿಯಿರಿ.
- ಅಪರಿಚಿತ ಸಂಖ್ಯೆಯಿಂದ ಬಂದ ಯಾವುದೇ ಸಂದೇಶ ಅನುಮಾನಾಸ್ಪದವೆಂದು ಕಂಡರೆ ಅದನ್ನು ಕ್ಲಿಕ್ ಮಾಡಬೇಡಿ. ಅದನ್ನು ಯಾರಿಗೂ ಫಾರ್ವರ್ಡ್ ಮಾಡಬೇಡಿ.
- ನಿಮಗೆ ಬರುವ ಲಿಂಕ್ ಅಥವಾ ಫೈಲ್‌ಗಳನ್ನು ಎಚ್ಚರಿಕೆಯಿಂದ ಗಮನಿಸಿ.
- ಯಾರೂ ಕೂಡ ನಿಮಗೆ ಲಾಭವಿಲ್ಲದೆ ಹಣ, ಗಿಫ್ಟ್ ನೀಡುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಡಿ. ಆನ್‌ಲೈನ್‌ನಲ್ಲಿ ಈ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಸಂಪಾದನೆ ಮಾಡಬಹುದು ಎಂದುಕೊಳ್ಳಬೇಡಿ.
ಇದನ್ನೂ ಓದಿ: ಆನ್‌ಲೈನ್ ವಂಚಕರಿಗೆ ಹಣ ಕಳುಹಿಸಿದ್ದೀರಾ, ಕಳೆದುಕೊಂಡ ಹಣ ರಿಕವರಿ ಮಾಡುವುದು ಹೇಗೆ, ಈ 5 ಕ್ರಮ ಅನುಸರಿಸಿ
ಲಿಂಕ್‌ಗಳು ಎಲ್ಲಿಂದ ಬೇಕಾದರೂ ಬರಬಹುದು. ವಾಟ್ಸ್ಆ್ಯಪ್‌ನಲ್ಲಿ, ಮೆಸೆಂಜರ್‌ನಲ್ಲಿ, ಎಸ್‌ಎಂಎಸ್‌ನಲ್ಲಿ, ಫೇಸ್‌ಬುಕ್‌ನಲ್ಲಿ, ಇಮೇಲ್‌ನಲ್ಲಿ ಎಲ್ಲಿ ಬೇಕಾದರೂ ಬರಬಹುದು. ತಿಳಿಯದೆ ನಿಮ್ಮ ಪರಿಚಿತರೇ ಇಂತಹ ಲಿಂಕ್‌ಗಳನ್ನು ಫಾರ್ವರ್ಡ್ ಮಾಡಿರಬಹುದು. ಇಂತಹ ಯಾವುದೇ ಲಿಂಕ್‌ಗಳನ್ನು ಅನುಮಾನದಿಂದ ನೋಡಿ ಮುಂದುವರೆಯುವುದು ಉತ್ತಮ. ನಿಮ್ಮ ವೈಯಕ್ತಿಕ ಮತ್ತು ಹಣಕಾಸು ಮಾಹಿತಿ ಕದಿಯುವ ಉದ್ದೇಶದಿಂದ ಈ ರೀತಿ ಲಿಂಕ್ ಕಳುಹಿಸಲಾಗುತ್ತದೆ. ಆನ್‌ಲೈನ್ ವಂಚನೆ ಯಾರಿಗೆ ಬೇಕಾದರೂ ಯಾವ ರೀತಿಯಲ್ಲೂ ಆಗಬಹುದು. ಆನ್‌ಲೈನ್‌ನಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿರುವುದೇ ಸದ್ಯ ನಮ್ಮ ಮುಂದಿರುವ ದಾರಿ.
- ಲೇಖನ: ಪ್ರವೀಣ್ ಚಂದ್ರ ಪುತ್ತೂರು