ಆಧಾರ್, ಕ್ರೆಡಿಟ್ ಕಾರ್ಡ್, ಎಫ್‌ಡಿ: ಸೆಪ್ಟೆಂಬರ್ನಲ್ಲಿ ಡೆಡ್ಲೈನ್ ಹೊಂದಿರುವ ಈ ಹಣಕಾಸು ವಿಚಾರಗಳನ್ನು ಮರೆತರೆ ನಿಮಗೆ ನಷ್ಟ
September Deadlines: ಆಧಾರ್ ಕಾರ್ಡ್ ಅಪ್ಡೇಟ್, ಕ್ರೆಡಿಟ್ ಕಾರ್ಡ್, ಎಫ್‌ಡಿ ಸೇರಿದಂತೆ ಹಲವು ಹಣಕಾಸಿನ ವಿಚಾರಗಳಿಗೆ ಸೆಪ್ಟೆಂಬರ್ನಲ್ಲಿ ಡೆಡ್ಲೈನ್ ನೀಡಲಾಗಿದೆ. ಅವುಗಳನ್ನು ಪರಿಶೀಲಿಸಿ.
September Deadlines: ಸೆಪ್ಟೆಂಬರ್ ಸಮೀಪಿಸುತ್ತಿದೆ. ಅದರೊಂದಿಗೆ ಕೆಲವು ಹಣಕಾಸಿನ ಡೆಡ್ಲೈನ್ಗಳೂ ಹತ್ತಿರಕ್ಕೆ ಬರ್ತಿವೆ. ಯಾವುದೇ ಕಾರಣಕ್ಕೂ ಇವುಗಳನ್ನು ಮರೆಯಬೇಡಿ. ಒಂದು ವೇಳೆ ಮರೆತರೋ ನಿಮ್ಮ ಕಿಸೆಗೆ ಕತ್ತರಿ ಬೀಳುವುದು ಖಚಿತ. ಕ್ರೆಡಿಟ್ ಕಾರ್ಡ್ ನಿಯಮಗಳ ಬದಲಾವಣೆಗಳಿಂದ ಹಿಡಿದು ಆಧಾರ್ ಮತ್ತು ಬ್ಯಾಂಕ್ ಎಫ್‌ಡಿ ಸ್ಕೀಮ್ಗಳಲ್ಲಿ ಅಪ್ಡೇಟ್ಗಳವರೆಗೆ ಡೆಡ್ಲೈನ್ ಮುಗಿಯುವುದಕ್ಕೂ ಮುನ್ನವೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಎಚ್ಚರ ವಹಿಸಿ.
ಆಧಾರ್ ಉಚಿತ ಅಪ್ಡೇಟ್ಗೆ ಗಡುವು
ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿಗೆ ಸೆಪ್ಟೆಂಬರ್ 14 ಕೊನೆಯ ದಿನವಾಗಿದೆ. ಅಪ್ಡೇಟ್ಗಾಗಿ ಸೆಪ್ಟೆಂಬರ್ 14ರವರೆಗೂ ಗಡುವು ವಿಸ್ತರಿಸಲಾಗಿದ್ದು, ಅದರ ನಂತರ ಅಪ್ಡೇಟ್ಗೆ ಶುಲ್ಕ ಪಾವತಿಸಬೇಕು. ಆಧಾರ್ ಕಾರ್ಡನ್ನು ನಿಯಮಿತವಾಗಿ ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಯುಐಡಿಎಐ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆಧಾರ್ ಅಪ್ಡೇಟ್ಗಾಗಿ ಗುರುತಿನ ಪುರಾವೆ, ವಿಳಾಸದ ದಾಖಲೆ ಸಲ್ಲಿಸಿ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬದಲಾವಣೆ
ಐಡಿಎಫ್ಸಿ ಫಸ್ಟ್ ಬ್ಯಾಂಕ್ ಸೆಪ್ಟೆಂಬರ್ 1ರಿಂದ ಕ್ರೆಡಿಟ್ ಕಾರ್ಡ್ ಪಾವತಿ ನಿಯಮಗಳನ್ನು ಅಪ್ಡೇಟ್ ಮಾಡಿದೆ. ಈ ಪೈಕಿ ಕನಿಷ್ಠ ಮೊತ್ತದಲ್ಲಿನ ಬದಲಾವಣೆ, ಪಾವತಿಯ ದಿನಾಂಕದ ಬದಲಾವಣೆ ಇತ್ಯಾದಿಗಳು ಸೇರಿವೆ. ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಈ ಬದಲಾವಣೆಗಳು ಎಲ್ಲಾ ಕಾರ್ಡ್‌ದಾರರ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಗ್ರಾಹಕರು ಈ ಬಗ್ಗೆ ತಿಳಿಯುವುದು ಸೂಕ್ತ.
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಲಾಯಲ್ಟಿ ಪ್ರೋಗ್ರಾಂ
ಹೆಚ್ಡಿಎಫ್ಸಿ ಬ್ಯಾಂಕ್ ಕೂಡ ಕ್ರೆಡಿಟ್ ಕಾರ್ಡ್ನಲ್ಲಿ ಬದಲಾವಣೆ ಮಾಡಿದೆ. ಸೆಪ್ಟೆಂಬರ್ 1 ರಿಂದ ಕೆಲವು ಕ್ರೆಡಿಟ್ ಕಾರ್ಡ್‌ಗಳಿಗೆ ತನ್ನ ಲಾಯಲ್ಟಿ ಪ್ರೋಗ್ರಾಂ ಅನ್ನು ಪರಿಷ್ಕರಣೆ ಮಾಡಿದೆ. ಈ ಬದಲಾವಣೆ ಕುರಿತು ಬ್ಯಾಂಕ್, ಈಗಾಗಲೇ ಸಂಬಂಧಪಟ್ಟ ಗ್ರಾಹಕರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದೆ.
IDBI ಬ್ಯಾಂಕ್ ವಿಶೇಷ ಎಫ್‌ಡಿ ಗಡುವು
ಐಡಿಬಿಐ ಬ್ಯಾಂಕ್ ಎಫ್‌ಡಿ ಅವಧಿಯನ್ನು ವಿಸ್ತರಣೆ ಮಾಡಿದೆ. ತನ್ನ ಉತ್ಸವ್ ಫಿಕ್ಸೆಡ್ ಡೆಪಾಸಿಟ್ ಡೆಡ್ಲೈನ್ ಅನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಿದೆ. 300, 375, 444 ಮತ್ತು ಹೊಸದಾಗಿ ಸೇರಿಸಲಾದ 700 ದಿನಗಳ ವಿಶೇಷ ಅವಧಿಯ ಆಯ್ಕೆಗೆ ಅವಕಾಶ ನೀಡಿದೆ. ಈ ಎಫ್ಡಿಗಳ ಮೇಲಿನ ಬಡ್ಡಿ ದರಗಳು ಬದಲಾಗುತ್ತಿರುತ್ತವೆ. ಸಾಮಾನ್ಯ ಜನರು 7.15% ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾರೆ, ಆದರೆ ಹಿರಿಯ ನಾಗರಿಕರು 7.65% ವಾರ್ಷಿಕ ಬಡ್ಡಿ ನಿಗದಿತ ಅವಧಿಗೆ ಪಡೆಯುತ್ತಾರೆ.
ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿ ಡೆಡ್ಲೈನ್
ಇಂಡಿಯನ್ ಬ್ಯಾಂಕ್ ಎಫ್‌ಡಿ ಯೋಜನೆಯ ಗಡುವನ್ನೂ ವಿಸ್ತರಿಸಿದೆ. ತನ್ನ ಇಂಡ್ ಸೂಪರ್ 300-ದಿನಗಳ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅವಧಿಯನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿದೆ. ಇಲ್ಲಿ ಸಾಮಾನ್ಯ ಜನರಿಗೆ 7.05%, ಹಿರಿಯ ನಾಗರಿಕರಿಗೆ 7.55% ಮತ್ತು ಸೂಪರ್ ಹಿರಿಯ ನಾಗರಿಕರಿಗೆ 7.80% ಬಡ್ಡಿ ದರ ಇದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ವಿಶೇಷ ಎಫ್‌ಡಿ ಗಡುವು
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ವಿಶೇಷ ಫಿಕ್ಸೆಡ್ ಡೆಪಾಸಿಟ್ ಡೆಡ್ಲೈನ್ ಸೆಪ್ಟೆಂಬರ್ 30ಕ್ಕೆ. ಈ ಎಫ್‌ಡಿ ಕೊಡುಗೆಗಳು 333 ದಿನಗಳವರೆಗೆ 7.15% ವರೆಗಿನ ಬಡ್ಡಿದರ ಹೊಂದಿರಲಿದೆ.
ಎಸ್‌ಬಿಐ ಅಮೃತ್ ಕಲಶ ಯೋಜನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರು ಅಮೃತ್ ಕಲಶ ಯೋಜನೆಯಲ್ಲಿ ಸೆಪ್ಟೆಂಬರ್ 30 ರವರೆಗೆ ಹೂಡಿಕೆ ಮಾಡಬಹುದು. ಈ ವಿಶೇಷ 400 ದಿನಗಳ ಠೇವಣಿಗೆ 7.10% ಬಡ್ಡಿದರ ಇರಲಿದೆ. ಹಿರಿಯ ನಾಗರಿಕರು 7.60% ಬಡ್ಡಿ ಪಡೆಯಲಿದ್ದಾರೆ. ಹಿರಿಯ ನಾಗರಿಕರಿಗೆ ಕಾರ್ಡ್ ದರದ ಮೇಲೆ ಹೆಚ್ಚುವರಿ 50 ಬೇಸಿಸ್ ಪಾಯಿಂಟ್ಸ್ ನೀಡುವ SBI VCare ಸ್ಕೀಮ್ ಅನ್ನು ಸಹ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
ರುಪೇ ಕಾರ್ಡ್ ರಿವಾರ್ಡ್ ಪಾಯಿಂಟ್ಸ್
ಸೆಪ್ಟೆಂಬರ್ 1ರಿಂದ ರುಪೇ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅಥವಾ ಇತರ ನಿರ್ದಿಷ್ಟ ಪ್ರಯೋಜನಗಳಿಂದ ಯುಪಿಐ ವಹಿವಾಟು ಶುಲ್ಕ ಕಡಿತಗೊಳಿಸದಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿರ್ದೇಶಿಸಿದೆ.
RBI ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ
ಸೆಪ್ಟೆಂಬರ್ 6ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕ್ರೆಡಿಟ್ ಕಾರ್ಡ್ ವಿತರಕರು ಇತರ ನೆಟ್‌ವರ್ಕ್‌ಗಳ ಬಳಕೆಗೆ ನಿರ್ಬಂಧ ವಿಧಿಸುವ ನೆಟ್‌ವರ್ಕ್‌ಗಳೊಂದಿಗೆ ವಿಶೇಷ ಒಪ್ಪಂದಗಳನ್ನು ಮಾಡಿಕೊಳ್ಳದಂತೆ ನಿಷೇಧಿಸುವ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ. ಕಾರ್ಡ್ ವಿತರಕರು ಮತ್ತು ನೆಟ್‌ವರ್ಕ್‌ಗಳ ನಡುವೆ ಅಸ್ತಿತ್ವದಲ್ಲಿರುವ ಒಪ್ಪಂದ ಪರಿಶೀಲಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ