ಸುಪ್ರೀಂ ಕೋರ್ಟ್‌ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ತನಿಖೆ ತಾತ್ಕಾಲಿಕವಾಗಿ ನಿಲ್ಲಿಸಿದ ಎಸ್‌ಐಟಿ-andhra pradesh news andhra dgp says sit probe temporarily stalled on tirupati laddus adulteration case jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸುಪ್ರೀಂ ಕೋರ್ಟ್‌ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ತನಿಖೆ ತಾತ್ಕಾಲಿಕವಾಗಿ ನಿಲ್ಲಿಸಿದ ಎಸ್‌ಐಟಿ

ಸುಪ್ರೀಂ ಕೋರ್ಟ್‌ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ತನಿಖೆ ತಾತ್ಕಾಲಿಕವಾಗಿ ನಿಲ್ಲಿಸಿದ ಎಸ್‌ಐಟಿ

Tirupati Laddu Adulteration Case: ತಿರುಪತಿಯಲ್ಲಿ ಲಡ್ಡು ಕಲಬೆರಕೆ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ಸದ್ಯಕ್ಕೆ ಕೇಸ್‌ ಕುರಿತು ತನಿಖೆ ನಿಲ್ಲಿಸುವುದಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಹೇಳಿದೆ. ಸೋಮವಾರವಷ್ಟೇ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ತನಿಖೆ ನಿಲ್ಲಿಸಿದ ಎಸ್‌ಐಟಿ
ಸುಪ್ರೀಂ ಕೋರ್ಟ್‌ನಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣ; ತನಿಖೆ ನಿಲ್ಲಿಸಿದ ಎಸ್‌ಐಟಿ

ಪವಿತ್ರ ಧಾರ್ಮಿಕ ಕ್ಷೇತ್ರ ತಿರುಪತಿಯ ಲಡ್ಡು ಕಲಬೆರಕೆ ವಿವಾದ (Tirupati Laddu adulteration) ಪ್ರಕರಣದ ತನಿಖೆಗಿಳಿದ್ದ ಎಸ್‌ಐಟಿ ಸದ್ಯ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಲಡ್ಡು ಕಲಬೆರಕೆ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಹೀಗಾಗಿ ವಿಶೇಷ ತನಿಖಾ ತಂಡ (SIT)ವು ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಆಂಧ್ರಪ್ರದೇಶ ಡಿಜಿಪಿ ತಿಳಿಸಿದ್ದಾರೆ.

“ಪ್ರಕರಣ ಸಂಬಂದ ಎಸ್ಐಟಿ ಅಧಿಕಾರಿಗಳು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು. ಆ ಬಳಿಕ ಅಧ್ಯಯನ ಮಾಡಿ ಎಲ್ಲಾ ಮಾಹಿತಿಯನ್ನು ಕಲೆಹಾಕಬೇಕು. ಈ ನಡುವೆ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ನಿಂದ ಆದೇಶ ಬಂದಿದೆ. ಅದಕ್ಕೆ ಅನುಗುಣವಾಗಿ ನಾವು ತನಿಖೆಯನ್ನು ನಿಲ್ಲಿಸಿದ್ದೇವೆ” ಎಂದು ಆಂಧ್ರಪ್ರದೇಶದ ಪೊಲೀಸ್‌ ಮಹಾನಿರ್ದೇಶಕರಾದ ದ್ವಾರಕಾ ತಿರುಮಲ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಸೆಪ್ಟೆಂಬರ್‌ 30ರ ಸೋಮವಾರವಷ್ಟೇ ಎಸ್ಐಟಿ ಅಧಿಕಾರಿಗಳು ತಿರುಮಲದ ಹಿಟ್ಟಿನ ಗಿರಣಿಯನ್ನು ಪರಿಶೀಲಿಸಿದ್ದರು. ಇದೇ ಗಿರಣಿಯಲ್ಲಿ ಲಡ್ಡು ತಯಾರಿಸಲು ಬಳಸಲಾಗುವ ತುಪ್ಪವನ್ನು ಸಂಗ್ರಹಿಸಲಾಗುತ್ತಿತ್ತು. ಲಡ್ಡುಗಳನ್ನು ತಯಾರಿಸಲು ತುಪ್ಪವನ್ನು ಬಳಸುವ ಮೊದಲು ತುಪ್ಪವನ್ನು ಇಲ್ಲಿಂದಲೇ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿತ್ತು.

ದೇವರನ್ನು ರಾಜಕೀಯದಿಂದ ದೂರವಿಡಿ ಎಂದ ಸುಪ್ರೀಂ ಕೋರ್ಟ್

ಈ ಹಿಂದೆ ಆಂಧ್ರ ಪ್ರದೇಶದ ಸಿಎಂ ಆಗಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಾರ್ವಜನಿಕ ಹೇಳಿಕೆ ನೀಡಿದ್ದರು. ಸಿಎಂ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. “ಲಡ್ಡು ತಯಾರಿಸಲು ಈ ತುಪ್ಪವನ್ನು ಬಳಸಲಾಗಿಲ್ಲ ಎಂದು ವರದಿಯಿಂದ ಸ್ಪಷ್ಟವಾಗಿದೆ. ನಿಮಗೆ ಖಚಿತವಿಲ್ಲದ ಮೇಲೇ ನೀವು ಅದನ್ನು ಸಾರ್ವಜನಿಕವಾಗಿ ಹೇಗೆ ಬಹಿರಂಗಪಡಿಸಿದ್ದೀರಿ? ದೇವರ ವಿಚಾರದಲ್ಲಿ ರಾಜಕೀಯ ಸಲ್ಲದು” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ದ್ವಿಸದಸ್ಯ ಪೀಠ ಪ್ರಶ್ನಿಸಿದೆ. “ನೀವೇ ತನಿಖೆಗೆ ಆದೇಶಿಸಿದ್ದರೆ, ಮಾಧ್ಯಮಗಳ ಮುಂದೆ ಹೋಗುವ ಅಗತ್ಯವೇನಿದೆ?” ಎಂದು ನ್ಯಾಯಪೀಠವು ಆಂಧ್ರಪ್ರದೇಶದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಪ್ರಶ್ನಿಸಿತು.

ಕೇಂದ್ರೀಯ ತನಿಖೆ ಅಗತ್ಯವಿದೆಯೇ ಎಂಬುದರ ಕುರಿತು ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯ ಸೂಚಿಸುವ ಜತೆಗೆ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಇದು ಪ್ರಸಾದದ ವಿಷಯ ಮಾತ್ರವಲ್ಲ: ಪವನ್‌ ಕಲ್ಯಾಣ್

“ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇದು ಕಲಬೆರಕೆಯಲ್ಲ ಎಂದು ಎಲ್ಲೂ ಹೇಳಿಲ್ಲ. ದಿನಾಂಕದ ಬಗ್ಗೆ ಗೊಂದಲವಿದೆ, ಅದನ್ನೂ ಬೇಗನೆ ಸ್ಪಷ್ಟಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ನಮ್ಮ ಸರ್ಕಾರ ಇದನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಕಳೆದ 5 ವರ್ಷಗಳಲ್ಲಿ ಯಾವೆಲ್ಲಾ ರೀತಿಯ ಉಲ್ಲಂಘನೆಗಳು ನಡೆದಿವೆ ಎಂಬುದನ್ನು ತಿಳಿಯಬೇಕು. ಇದು ಕೇವಲ ಪ್ರಸಾದದ ವಿಷಯ ಮಾತ್ರವಲ್ಲ” ಎಂದು ಪವನ್‌ ಕಲ್ಯಾಣ್‌ ಹೇಳಿದ್ದಾರೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.