Flying cars: ಕಾರು ಹಾರಿದರೆ ಅಚ್ಚರಿ ಪಡಬೇಡಿ, ಹಾರುವ ಕಾರುಗಳ ಕುರಿತು ಪ್ರಮುಖ ಮಾಹಿತಿ ನೀಡಿದ ಹ್ಯುಂಡೈ
Flying cars: ರಸ್ತೆಯಲ್ಲಿ ರೊಂಯ್ಯನೆ ಸಾಗುವ ಕಾರು ರೆಕ್ಕೆ ಬೆಚ್ಚಿ ಆಕಾಶಕ್ಕೆ ಹಾರಿದರೆ ಅಚ್ಚರಿ ಪಡಬೇಡಿ. ಹಾರುವ ಕಾರುಗಳ ಕಲ್ಪನೆಯು ಭವಿಷ್ಯದಲ್ಲಿ ನಿಜವಾಗಲಿದೆ. ಹಾರುವ ಕಾರುಗಳ ಕುರಿತು ಹ್ಯುಂಡೈನ ಇಂಗ್ಲೆಂಡ್‌ನ ಬಾಸ್ ಒಂದಿಷ್ಟು ವಿವರ ನೀಡಿದ್ದಾರೆ.
ಈಗ ರಸ್ತೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ವಿಶ್ವವೇ ಇ-ವಾಹನಗಳತ್ತ ತೆರೆದುಕೊಳ್ಳುತ್ತಿದೆ. ಒಂದಾನೊಂದು ಕಾಲದಲ್ಲಿ ಎಲೆಕ್ಟ್ರಿಕ್ ಕಾರುಗಳು ರಸ್ತೆಯಲ್ಲಿ ಕಷ್ಟ ಎನ್ನುತ್ತಿದ್ದವರೂ ಈಗಿನ ಬದಲಾವಣೆಯನ್ನು ನೋಡಿ ಅಚ್ಚರಿ ಪಡುತ್ತಿದ್ದಾರೆ. ಇದೇ ರೀತಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕುರಿತು ಅಣಕವಾಡುತ್ತಿದ್ದವರೂ ಈಗಿನ ಚಾಟ್‌ಜಿಪಿಟಿ ಬುದ್ಧಿವಂತಿಕೆಗೆ ಬೆರಗಾಗುತ್ತಿದ್ದಾರೆ. ಇದೇ ರೀತಿ ಹತ್ತು ವರ್ಷದ ಹಿಂದೆ ಹಾರುವ ಕಾರುಗಳ ಕುರಿತು ಅಚ್ಚರಿ ತೋರಿದವರು ಮುಂದೆ ಕೆಲವು ವರ್ಷಗಳಲ್ಲಿ ಕಾರುಗಳು ನಿಜಕ್ಕೂ ಹಾರಿದಾಗ ಅಚ್ಚರಿ ಪಡದಿರಲಾರರು.
ಹಾರುವ ಕಾರುಗಳು ಈ ದಶಕದ ಅಂತ್ಯದಲ್ಲಿ ಆಕಾಶದಲ್ಲಿ ಹಾರಾಟ ನಡೆಸುವ ಸಾಧ್ಯತೆಯಿದೆ ಎಂದು ಹ್ಯುಂಡೈ ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ. ಹ್ಯುಂಡೈನ ಇಂಗ್ಲೆಂಡ್‌ನ ಬಾಸ್ ಮೈಕೆಲ್ ಕೋಲ್ ಅವರು ಇತ್ತೀಚೆಗೆ ಟಾಪ್‌ಗಿಯರ್‌ಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಮುಂದಿನ ಒಂದು ದಶಕದೊಳಗೆ ಎಲೆಕ್ಟ್ರಿಕ್ ಕಾರುಗಳು ನಿಜವಾಗಿಯೂ ಆಗಮಿಸಲಿವೆ ಎಂದು ಅವರು ಹೇಳಿದ್ದಾರೆ. "ಆರಂಭದಲ್ಲಿ ನಗರದೊಳಗೆ ಕಾರ್ಗೊ ಸಾಗಾಟಕ್ಕಾಗಿ ಇಂತಹ ವಾಹನಗಳು ಆಗಮಿಸಬಹುದು. ಆದರೆ, ಬಳಿಕ ಪ್ರಯಾಣಿಕರಿಗೂ ಇಂತಹ ಹಾರುವ ಕಾರುಗಳು ಆಗಮಿಸಬಹುದು" ಎಂದು ಅವರು ಹೇಳಿದ್ದಾರೆ.
ಹಾರುವ ಕಾರುಗಳ ಕುರಿತು ಜಗತ್ತಿನಾದ್ಯಂತ ಸಾಕಷ್ಟು ಸಂಶೋಧನೆಗಳು, ಅನ್ವೇಷಣೆಗಳು ನಡೆಯುತ್ತಿವೆ. eVOTLನ ಹಾರುವ ಕಾರುಗಳು ಈಗಾಗಲೇ ಸುದ್ದಿಯಲ್ಲಿದ್ದು, ಇನ್ನು ಹಲವು ವರ್ಷಗಳಲ್ಲಿ ಗ್ರಾಹಕರಿಗೆ ದೊರಕಲಿದೆ ಎಂದು ಹೇಳಿದೆ. ಇವು ರಸ್ತೆಯಲ್ಲಿ ಸಾಮಾನ್ಯ ಕಾರುಗಳಂತೆ ಸಂಚರಿಸಲಿದೆ, ಇವುಗಳಿಗೆ ವಿಮಾನದಂತೆ ಟೇಕಾಫ್ ಆಗುವ ಸಾಮರ್ಥ್ಯವಿದ್ದು, ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರಲಿವೆ. ಈಗಾಗಲೇ ಹಾರುವ ಕಾರುಗಳ ಕುರಿತು ಸಾಕಷ್ಟು ಪ್ರಯೋಗಗಳು ನಡೆದೆವೆ. ಹಲವು ಕಂಪನಿಗಳು ಯಶಸ್ವಿಯಾಗಿ ಹಾರುವ ಕಾರುಗಳನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸಿವೆ. ಆದರೆ, ಇವುಗಳನ್ನು ಆಕಾಶದಲ್ಲಿ ನಿಯಂತ್ರಿಸುವುದು ಮತ್ತು ಮೋಡಗಳಿಗೆ ತಕ್ಕಂತೆ ಚಾಲನೆ ಮಾಡುವುದು ಸುಲಭವಲ್ಲ. ಹೀಗಾಗಿ, ಇನ್ನಷ್ಟು ಪ್ರಯೋಗಗಳು ನಡೆಯುತ್ತಿವೆ.
ಹಾರುವ ಕಾರುಗಳು ಸಾಕಷ್ಟು ಸವಾಲುಗಳನ್ನು ಸದ್ಯ ಹೊಂದಿವೆ. ವ್ಯಕ್ತಿಗಳ ಪ್ರಯಾಣಕ್ಕೆ ಆರಂಭದಲ್ಲಿ ಸಿಂಗಲ್ ಅಥವಾ ಡಬಲ್ ಸೀಟ್‌ನ ಕಾರುಗಳು ಆಗಮಿಸಬಹುದು. ಆದರೆ, ಸರಕುಗಳನ್ನು ಸಾಗಿಸಲು ಇನ್ನಷ್ಟು ದೊಡ್ಡ ಕಾರುಗಳ ಅಗತ್ಯವಿದೆ. ಆರಂಭದಲ್ಲಿ ಹಾರುವ ಕಾರುಗಳ ದರ ದುಬಾರಿಯಾಗಿರಬಹುದು. ಇದರೊಂದಿಗೆ ಹಾರುವ ಕಾರುಗಳನ್ನು ಆಕಾಶದಲ್ಲಿ ನಿಯಂತ್ರಿಸಲು ಹೊಸ ಟ್ರಾಫಿಕ್ ವ್ಯವಸ್ಥೆಯೂ ಬರಬೇಕಿದೆ.
ಅಮೆರಿಕದಲ್ಲಿ ಹಾರುವ ಕಾರುಗಳಿಗೆ ತಕ್ಕಂತೆ ಹಲವು ಕಾನೂನು ಬದಲಾವಣೆಗಳು, ನಿಯಂತ್ರಣಗಳನ್ನು ಮಾಡಲಾಗುತ್ತಿದೆ. ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಟ್ರಾನ್ಸ್ಪೋರ್ಟೇಶನ್ ಅಡಿಯಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹಾರುವ ಕಾರುಗಳ ಕಾರಿಡಾರ್ ಅನ್ನು ಮೇಲ್ವಿಚಾರಣೆ ಮಾಡಲಿದೆ.