Exter vs Punch: ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಎಸ್‌ಯುವಿಗಳಲ್ಲಿ ಖರೀದಿಗೆ ಯಾವುದು ಬೆಸ್ಟ್, ಇಲ್ಲಿದೆ ದರ, ಪವರ್ ಹೋಲಿಕೆ
Hyundai Exter vs Tata Punch comparison: ಇತ್ತೀಚೆಗೆ ಹ್ಯುಂಡೈ ಕಂಪನಿಯು ಎಕ್ಸ್‌ಟರ್ ಎಂಬ ಸಣ್ಣ ಎಸ್‌ಯುವಿ ಪರಿಚಯಿಸಿತ್ತು. ಇದು ಈಗಾಗಲೇ ರಸ್ತೆಯಲ್ಲಿರುವ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿ. ಈ ಎರಡು ಎಸ್‌ಯುವಿಗಳ ನಡುವೆ ದರ ಮತ್ತು ಸ್ಪೆಸಿಫಿಕೇಷನ್ ವ್ಯತ್ಯಾಸಗಳೇನಿದೆ ಎಂದು ತಿಳಿಯೋಣ.
ಹ್ಯುಂಡೈ ಕಂಪನಿಯು ಎಕ್ಸ್‌ಟರ್ ಎಂಬ ಎಸ್‌ಯುವಿ ಪರಿಚಯಿಸಿದ ಬಳಿಕ ಕಡಿಮೆ ದರದ ಎಸ್‌ಯುವಿ ಖರೀದಿಸಲು ಬಯಸುವವರಿಗೆ ಟಾಟಾ ಪಂಚ್ ಮತ್ತು ಎಕ್ಸ್‌ಟರ್‌ಗಳಲ್ಲಿ ಯಾವುದನ್ನು ಖರೀದಿಸಬಹುದು ಎಂಬ ಸಂದೇಹ ಉಂಟಾಗಿರಬಹುದು. ಹ್ಯುಂಡೈ ಕಂಪನಿಯು ಇತ್ತೀಚೆಗೆ ಬಹುನಿರೀಕ್ಷಿತ ಎಕ್ಸ್‌ಟರ್ ಎಸ್‌ಯುವಿ ಪರಿಚಯಿಸಿತ್ತು. ಇದರ ಆರಂಭಿಕ ದರ 5.99 ಲಕ್ಷ ರೂಪಾಯಿ. ಆವೃತ್ತಿಗಳಿಗೆ ತಕ್ಕಂತೆ ಇದರ ದರ 10 ಲಕ್ಷ ರೂಪಾಯಿವರೆಗಿದೆ. ಈ ಎಸ್‌ಯುವಿಯು ನೇರವಾಗಿ ಟಾಟಾ ಪಂಚ್ ಜತೆ ಸ್ಪರ್ಧೆಗೆ ಬಂದಿದೆ. ಈಗಾಗಲೇ ಗ್ರಾಹಕರಿಂದ ಟಾಟಾ ಪಂಚ್ ಸಾಕಷ್ಟು ಮೆಚ್ಚುಗೆ ಪಡೆದಿದೆ. ಪಂಚ್‌ಗೆ ಹೋಲಿಸಿದರೆ ನೂತನ ಎಕ್ಸ್‌ಟರ್ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಇದರ ಆನ್‌ಬೋರ್ಡ್‌ನಲ್ಲಿರುವ ಫೀಚರ್‌ಗಳೂ ಗ್ರಾಹಕರನ್ನು ಸೆಳೆಯಬಹುದು.
ದರ ವಿಷಯದಲ್ಲಿ ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಸ್ಪರ್ಧಾತ್ಮಕವಾಗಿದೆ. ಇವೆರಡೂ ಕಾರುಗಳು 1.2 ಲೀಟರ್‌ನ ಪೆಟ್ರೋಲ್ ಎಂಜಿನ್ ಹೊಂದಿದೆ. ಹೀಗಾಗಿ, ಇವೆರಡರ ಎಂಜಿನ್‌ಗಳ ನಡುವೆ ವ್ಯತ್ಯಾಸವಿಲ್ಲ. ಮೊದಲಿಗೆ ಈ ಎರಡು ಎಸ್‌ಯುವಿಗಳ ನಡುವೆ ದರ ವ್ಯತ್ಯಾಸ ಎಷ್ಟಿದೆ ಎಂದು ತಿಳಿಯೋಣ.
ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್: ದರ
ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯ ದರವು 5.99 ಲಕ್ಷ ರೂ.ನಿಂದ 9.31 ಲಕ್ಷ ರೂ. ನಡುವೆ ಇದೆ. ಇದು ಎಕ್ಸ್‌ಶೋರೂಂ ದರ. ಮತ್ತೊಂದು ಕಡೆಯಲ್ಲಿ, ಟಾಟಾ ಪಂಚ್ ದರ 5.99 ಲಕ್ಷ ರೂಪಾಯಿಯಿಂದ 9.51 ಲಕ್ಷ ರೂಪಾಯಿವರೆಗೆ ಇದೆ. ಇವೆರಡೂ ಎಸ್‌ಯುವಿಗಳು ಒಂದೇ ರೀತಿಯ ದರ ಸ್ಪರ್ಧೆ ನೀಡಿರುವುದನ್ನು ಇಲ್ಲಿ ಗಮನಿಸಬಹುದು.
ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಎಂಜಿನ್
ಹ್ಯುಂಡೈ ಎಕ್ಸ್‌ಟರ್ 1.2 ಲೀಟರ್‌ನ ಕಪ್ಪಾ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಂಪನಿಯು ಬೈ ಫ್ಯೂಯೆಲ್ ಆವೃತ್ತಿಯನ್ನೂ ಪರಿಚಯಿಸಿದೆ. ಅಂದರೆ, ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಪವರ್‌ಟ್ರೇನ್ ಇರುವ ಆವೃತ್ತಿಯನ್ನೂ ಹ್ಯುಂಡೈ ಪರಿಚಯಿಸಿದೆ. ಹ್ಯುಂಡೈ ಎಕ್ಸ್‌ಟರ್ 81.86 ಬಿಎಚ್‌ಪಿ ಪವರ್ ಮತ್ತು 113.8 ಎನ್‌ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಎಕ್ಸ್‌ಟರ್‌ನ ಎಂಜಿನ್ 81.86 ಬಿಎಚ್‌ಪಿ ಮತ್ತು 113.8 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಆಟೋಮ್ಯಾಟಿಕ್ ಮತ್ತು ಎಎಂಟಿ ಆವೃತ್ತಿಯಲ್ಲೂ ಇದೇ ಪವರ್ ದೊರಕುತ್ತದೆ. ಸಿಎನ್‌ಜಿ ಆವೃತ್ತಿಯಲ್ಲಿ 68 ಬಿಎಚ್‌ಪಿ ಮತ್ತು 95.2 ಎನ್‌ಎಂ ಟಾರ್ಕ್ ದೊರಕುತ್ತದೆ. ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯು ಮ್ಯಾನುಯಲ್ ಗಿಯರ್‌ನಲ್ಲಿ ಪ್ರತಿಲೀಟರ್‌ನಲ್ಲಿ 19.4 ಕಿ.ಮೀ. ಮತ್ತು ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಪ್ರತಿಲೀಟರ್‌ಗೆ 19.2 ಕಿ.ಮೀ. ಮೈಲೇಜ್ ನೀಡುತ್ತದೆ. ಸಿಎನ್‌ಜಿ ಆಯ್ಕೆಯಲ್ಲಿ ಇದು ಪ್ರತಿ ಕಿಲೋಗೆ 27.1 ಕಿ.ಮೀ. ಮೈಲೇಜ್ ನೀಡುತ್ತದೆ.
ಟಾಟಾ ಪಂಚ್ ಪೆಟ್ರೋಲ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಸಿಎನ್‌ಜಿ ಆಯ್ಕೆಯಲ್ಲಿ ಲಭ್ಯವಿಲ್ಲ. ಟಾಟಾ ಪಂಚ್‌ನಲ್ಲಿ 1.2 ಲೀಟರ್‌ನ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಇದೆ. ಇದು 86.5 ಬಿಎಚ್‌ಪಿ ಮತ್ತು 115 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಇದರಲ್ಲಿ 5 ಸ್ಪೀಡ್‌ನ ಮ್ಯಾನುಯಲ್ ಮತ್ತು ಐದು ಸ್ಪೀಡ್‌ನ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಇದೆ.