ಟಾಟಾದಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ; ಟಾಟಾ ಪಂಚ್ ಇವಿ ಕಾರಿನ ಬೆಲೆ, ವೈಶಿಷ್ಟ್ಯಗಳನ್ನ ತಿಳಿಯಿರಿ
ಟಾಟಾ ಪಂಚ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು 4 ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಸ್ಮಾರ್ಟ್, ಅಡ್ವೆಂಚರ್, ಎಂಪವರ್ಡ್ ಹಾಗೂ ಎಂಪವರ್ಡ್+ ಮಾರುಕಟ್ಟೆಗೆ ಬಂದಿದೆ. ಬೆಲೆ ಹಾಗೂ ವೈಶಿಷ್ಟ್ಯಗಳು ಹೀಗಿವೆ.
ಬೆಂಗಳೂರು: ಕಡಿಮೆ ಬೆಲೆಗೆ ಒಂದೊಳ್ಳೆ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾರುಕಟ್ಟೆಗೆ ಬರಲಿ ಅಂತ ಕಾಯುತ್ತಿದ್ದ ಗ್ರಾಹಕರಿಗೆ ಟಾಟಾ ಸಿಹಿ ಸುದ್ದಿ ನೀಡಿದೆ. ದೇಶದ ಪ್ರಮುಖ ಆಟೋಮೊಬೈಲ್ ಸಂಸ್ಥೆಯಾಗಿ ಟಾಟಾ ಮೋಟಾರ್ಸ್ ಬುಧವಾರ (ಜನವರಿ 17) ಅಗ್ಗದ ದರದ ಎಲೆಕ್ಟ್ರಿಕ್ ಕಾರನ್ನು ಅನಾವರಣ ಮಾಡಿದೆ.
ಟಾಟಾ ಪಂಚ್ ಇವಿ (Tata Punch EV) ಎಸ್‌ಯುವಿ ಹೊಸ ಕಾರಿನ ಎಕ್ಸ್‌ಶೋರೂಂ ಬೆಲೆ 10.99 ಲಕ್ಷ ರೂಪಾಯಿ ಆಗಿದೆ. ಟಾಟಾ ಕಂಪನಿಯ 4ನೇ ಎಲೆಕ್ಟ್ರಿಕ್ ಕಾರು ಇದಾಗಿದೆ. ಅಷ್ಟೇ ಅಲ್ಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು 4 ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಸ್ಮಾರ್ಟ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ +. ಟಾಪ್ ವೇರಿಯಂಟ್ ಪಂಚ್ ಇವಿ ಕಾರಿನ ಎಕ್ಸ್ ಶೋರಂ ಬೆಲೆ 14.99 ಲಕ್ಷ ರೂಪಾಯಿ ವರೆಗೆ ಇದೆ.
ಈಗಾಗಲೇ ಇ-ಎಸ್‌ಯುವಿ ಬುಕಿಂಗ್ ಆರಂಭವಾಗಿದೆ. ಗ್ರಾಹಕರು ಪಂಚ್ ಇವಿಯನ್ನು ಟಾಟಾ ಕಂಪನಿಯ ಡೀಲರ್‌ಶಿಪ್ ಮೂಲಕ ಅಥವಾ ಟಾಟಾ ಮೋಟಾರ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ 21,000 ರೂಪಾಯಿ ಮೊತ್ತವನ್ನು ನೀಡಿ ಬುಕ್ ಮಾಡಿಕೊಳ್ಳಬಹುದು. 2024ರ ಫೆಬ್ರವರಿಯಿಂದಲೇ ಟಾಟಾ ಪಂಚ್ ಇವಿ ಗ್ರಾಹಕರ ಕೈಸೇರಲಿದೆ.
ಟಾಟಾ ಪಂಚ್ ಇವಿ ವೈಶಿಷ್ಟ್ಯಗಳು
ಕಂಪನಿ ಹೇಳುವ ಪ್ರಕಾರ, ಆಕ್ಟಿ.ಇವಿ ಎಂಬ ಜೆನ್ 2 ಪ್ಯೂರ್ ಇವಿ ಪ್ಲಾಟ್‌ಫಾರ್ಮ್ ಹೊಂದಿರುವ ಟಾಟಾ ಮೋಟಾರ್ಸ್ ಮೊದಲ ಕಾರು ಪಂಚ್ ಇವಿ ಆಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಾಮರ್ಥ್ಯದ ವಸ್ತುಗಳನ್ನ ಬಳಸಿ ತಯಾರಿಸಲಾಗಿದೆ.
ಬ್ಯಾಟರಿಯ ಬಗ್ಗೆ ಮಾತನಾಡುವುದಾದರೆ ಟಾಟಾ ಪಂಚ್ ಇವಿ ಮಧ್ಯಮ ಮತ್ತು ದೀರ್ಘ-ಶ್ರೇಣಿಯ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತಿದೆ. ಚಿಕ್ಕ ಪ್ಯಾಕ್ 25kWH ಬ್ಯಾಟರಿ ಘಟಕವಾಗಿದ್ದರೆ ದೊಡ್ಡ ಘಟಕವು 35kWh ಸಾಮರ್ಥ್ಯ ಹೊಂದಿದೆ. ಹೆಚ್‌ಟಿ ಆಟೋ ವರದಿಯ ಪ್ರಕಾರ, ಈ ಎರಡು ಬ್ಯಾಟರಿ ಪ್ಯಾಕ್‌ಗಳು ಹೆಚ್ಚಿನ ಸಾಂದ್ರತೆಯ ಕೋಶಗಳನ್ನು ಹೊಂದಿವೆ.
ಮಧ್ಯಮ ಶ್ರೇಣಿಯ ಮಾದರಿಯು ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 315 ಕಿಮೀ ವರೆಗೆ ಚಲಿಸುತ್ತದೆ. ಟಾಪ್ ಎಂಡ್ ಇವಿ 421 ಕಿಮೀ ದೂರವನ್ನು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಪಂಚ್ EV 7.2kW ವೇಗದ ಹೋಮ್ ಚಾರ್ಜರ್ ಅನ್ನು ಒಳಗೊಂಡಿರುವ ಎರಡು ಚಾರ್ಜಿಂಗ್ ಆಯ್ಕೆಗಳಲ್ಲಿ ಬರುತ್ತಿದೆ. 50kW DC ಫಾಸ್ಟ್ ಚಾರ್ಜರ್‌ಗಳನ್ನು ಬಳಸಿಕೊಂಡು ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಬಹುದು ಎಂದು ಟಾಟಾ ಸಂಸ್ಥೆ ಹೇಳಿಕೊಂಡಿದೆ.
ಟಾಟಾ ಪಂಚ್ EV ಯ ಮಧ್ಯಮ ಶ್ರೇಣಿಯ ಆವೃತ್ತಿಯು 80bhp ವರೆಗೆ ಶಕ್ತಿ ಮತ್ತು 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ದೀರ್ಘ ಆವೃತ್ತಿಯು 120 bhp ಪವರ್ ಮತ್ತು 190 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟಾಟಾ ಪಂಚ್ ಇವಿ ಲೆಥೆರೆಟ್ ಸೀಟ್‌ಗಳು, ಮುಂಭಾಗದ ಸಾಲಿನ ಸೀಟ್‌ಗಳಿಗೆ ವೆಂಟಿಲೇಶನ್, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳನ್ನು ಹೊಂದಿದೆ. ವೈರ್‌ಲೆಸ್ ಚಾರ್ಜಿಂಗ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಒಂದು ವೇಳೆ ಈ ಕಾರು ನಿಮಗೆ ಇಷ್ಟವಾದರೆ ನಿಮ್ಮ ಸಮೀಪದ ಟಾಟಾ ಡೀಲರ್‌ಗಳು ಅಥವಾ ಟಾಟಾ ಮೋಟಾರ್ಸ್ ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದು.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in