ಅಕ್ಟೋಬರ್ 31 ಅಥವಾ ನವೆಂಬರ್ 1? ಈ ಬಾರಿ ದೀಪಾವಳಿ ಆಚರಣೆಯ ದಿನಾಂಕ ಘೋಷಿಸಿದ ಅಯೋಧ್ಯೆ ರಾಮಮಂದಿರ
ಈ ವರ್ಷದ ದೀಪಾವಳಿ ಹಬ್ಬವು ಅಮವಾಸ್ಯೆಯೊಂದಿಗೆ ಸೇರಿಕೊಳ್ಳುತ್ತದೆ. ಹೀಗಾಗಿ ದೀಪಾವಳಿ ಹಬ್ಬದ ಆಚರಣೆಯು ಅಕ್ಟೋಬರ್ 31ರ ರಾತ್ರಿ ಆರಂಭವಾಗುತ್ತದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದೆ.
ದೀಪಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಈ ಬಾರಿ ದೀಪಾವಳಿ ಹಬ್ಬದ ಆಚರಣೆಯ ದಿನಾಂಕದ ಬಗ್ಗೆ ಹಲವರಿಗೆ ಗೊಂದಲಗಳಿದ್ದವು. ದಿನಾಂಕಕ್ಕೆ ಸಂಬಂಧಿಸಿದಂತೆ ಈಗ ಸ್ಪಷ್ಟ ಮಾಹಿತಿ ಸಿಕ್ಕಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಯೂ ಈ ಬಾರಿ ದೀಪಾವಳಿ ಸಂಭ್ರಮ ಕಳೆಗಟ್ಟಲಿದೆ. ಹಾಗಿದ್ದರೆ ರಾಮಮಂದಿರದಲ್ಲಿ ದೀಪಾವಳಿ ಆಚರಣೆ ಯಾವಾಗ? ಮನೆಗಳಲ್ಲಿ ಅಕ್ಟೋಬರ್ 31 ಅಥವಾ ನವೆಂಬರ್ 1, ಈ ಎರಡು ದಿನಗಳಲ್ಲಿ ಆಚರಣೆ ಯಾವಾಗ ಎಂಬುದನ್ನು ತಿಳಿಯೋಣ. ವಿಶ್ವ ಹಿಂದೂ ಪರಿಷತ್ (VHP) ಈ ವರ್ಷ ಯಾವಾಗ ದೀಪಾವಳಿ ಆಚರಿಸಲಾಗುತ್ತದೆ ಎಂಬ ಕುರಿತು ಸ್ಪಷ್ಟ ದಿನಾಂಕವನ್ನು ಬಹಿರಂಗಪಡಿಸಿದೆ.
ವಿಶ್ವ ಹಿಂದೂ ಪರಿಷತ್ತಿನ ವಕ್ತಾರ ಶರದ್ ಶರ್ಮಾ ಅವರು ಸುದ್ದಿಸಂಸ್ಥೆ ಇಂಡಿಯಾ ಟುಡೇ ಟಿವಿ ಜೊತೆಗೆ ಈ ಕುರಿತು ಮಾತನಾಡಿದ್ದಾರೆ. ಈ ವರ್ಷದ ದೀಪಾವಳಿ ಹಬ್ಬವು ಅಮವಾಸ್ಯೆಯೊಂದಿಗೆ ಸೇರಿಕೊಳ್ಳುತ್ತದೆ. ಅಂದರೆ ಅಮಾವಾಸ್ಯೆಯಂದು ಮಧ್ಯಾಹ್ನ ಪ್ರಾರಂಭವಾಗುತ್ತದೆ. ಹೀಗಾಗಿ ದೀಪಾವಳಿ ಹಬ್ಬ ಕೂಡಾ ಅಕ್ಟೋಬರ್ 31ರ ರಾತ್ರಿ ಆರಂಭವಾಗುತ್ತದೆ. ಹಬ್ಬದ ಆಚರಣೆಗೆ ಇದು ಸೂಕ್ತ ಸಮಯವಾಗಿದೆ.
ದೀಪೋತ್ಸವ ಮತ್ತು ಹನುಮ ಜಯಂತಿ
ದೀಪಾವಳಿ ಹಬ್ಬವು ಅಕ್ಟೋಬರ್ 31ರಂದು ಆರಂಭವಾಗುತ್ತದೆ. ಹೀಗಾಗಿ ದೀಪಾವಳಿಯ ಹಿಂದಿನ ದಿನ, ಅಂದರೆ ಅಕ್ಟೋಬರ್ 30 ರಂದು ದೀಪೋತ್ಸವ ಆಚರಿಸಲಾಗುತ್ತದೆ. ಅಂದರೆ, ಮನೆಯಲ್ಲಿ ಹಣತೆಗಳನ್ನು ಹಚ್ಚಿಡುವ ಶುಭಕಾಲವಿದು. ದೀಪಗಳನ್ನು ಬೆಳಗಿಸುವ ಮತ್ತು ಮನೆಗಳನ್ನು ಅಲಂಕರಿಸುವ ಈ ಹಬ್ಬವು ದೀಪಾವಳಿಯ ಸುಂದರ ದಿನಕ್ಕೆ ದಾರಿ ಮಾಡಿಕೊಡುತ್ತದೆ. ಈ ಬಾರಿ ದೀಪೋತ್ಸವ ಮತ್ತು ಹನುಮ ಜಯಂತಿ ಒಂದೇ ದಿನ. ಇದೇ ಕಾರಣದಿಂದಾಗಿ ರಾಮಜನ್ಮಭೂಮಿಯಲ್ಲಿ ಹನುಮಂತನ ಜಯಂತಿ ಆಚರಿಸಲಾಗುತ್ತದೆ.
ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದು ಆಚರಿಸುವುದು ಸ್ಪಷ್ಟವಾಗಿದೆ. ಈ ದಿನ ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಿ ನೆಲೆಸಿರುವವರು ಮನೆಗೆ ಬಂದು ಹಬ್ಬದ ಸಂಭ್ರಮದಲ್ಲಿ ಬೆರೆಯುತ್ತಾರೆ. ಕುಟುಂಬಗಳು ಮತ್ತು ಸ್ನೇಹಿತರು ಒಟ್ಟಾಗಿ ಸೀಪಗಳ ಹಬ್ಬವನ್ನು ಸಂಭ್ರಮಿಸುತ್ತಾರೆ.
ದೀಪಗಳ ಹಬ್ಬ ದೀಪಾವಳಿಯನ್ನು ದೀಪಗಳನ್ನು ಹಚ್ಚಿಟ್ಟು ಆಚರಿಸಲಾಗುತ್ತದೆ. ಮಂಗಳಕರ ದಿನವನ್ನು ದೀಪಗಳನ್ನು ಬೆಳಗಿಸುವುದು ಮಾತ್ರವಲ್ಲದೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ದೀಪಾವಳಿಯ ದೀಪಗಳಂತೆ ಬದುಕು ಬೆಳಗಲಿ ಎಂಬುವುದು ಹಬ್ಬದ ಆಶಯ.